ಕತೆ-ಕವನಗಳು

ಆಶುಕವನ: ಮಾತೆ ಮಮತೆ

ಅಮ್ಮ ನಿನ್ನ ತೋಳು ನನ್ನ
ನಿದ್ದೆ ಹೂವಿಗಾಸರೆ |
ಬದುಕಿನಲ್ಲಿ ಕಣ್ಣತೆರೆವ
ಮುದ್ದಿನೆಳೆಯ ಕೇಸರ ||

ನಿನ್ನ ಕೈಯ ಹಿಡಿದು ನಾನು
ಮೈಯ ಪೂರ್ತಿ ಮರೆಯುವೆ |
ನನ್ನ ತುಟಿಯ ಹೂವ ಮುತ್ತ
ನಿನಗೆ ಧಾರೆಯೆರೆಯುವೆ ||

ಕಣ್ಣಮುಚ್ಚಿ ಮನವ ತೆರೆವೆ
ಮಮತೆ ಭಾವ ಬಂಧದಿ |
ಹಿಡಿತ ಸಡಿಲಗೊಳಿಸದಿರುವೆ
ಜಾರಿ ಬೀಳದಂದದಿ ||

ಪುಟ್ಟ ಕೋತಿಮರಿಯು ತನ್ನ
ತಾಯನಪ್ಪುವಂತಿದೆ |
ನನ್ನ ಹಿಡಿತ ನಿನ್ನ ಕೈಗೆ
ಭದ್ರವಾಗಿ ಬೆಸೆದಿದೆ ||

ನೀನು ಮಾತೆ ನಾನು ಮಮತೆ
ಒಲವೆ ಬಂಧ ಸೇತುವೆ |
ನಾನು ಮಾಯೆ ನೀನು ಕಾಯೆ
ದೇವರೆನುವ ಭಾವವೆ ||

ನಿನಗೆ ನನ್ನ ನಮನವನ್ನು
ಬಿಡದೆ ನಾನು ಸಲಿಸುವೆ |
ನನ್ನ ನಿನ್ನ ಬಂಧ ಬೆಸುಗೆ
ನೂರುಕಾಲವುಳಿಸುವೆ ||

(ಭಾವನೆಗಳ ಸೇತುವೆಯಾಗಿ ಅಂತ್ಯಪ್ರಾಸವಿರುವ ಎಳೆಯರ ಚಿತ್ರ ಕವನ)

ಛಂದಸ್ಸು:-
೩+೩+೩+೩
೩+೩+೪
೩+೩+೩+೩
೩+೩+೪
ಈ ರೀತಿಯ ಮಾತ್ರಾ ಗಣಗಳಿಂದ ಕೂಡಿದ ಅಂತ್ಯ ಪ್ರಾಸವಿರುವ ಸುಲಭ ಚೌಪದಿ.

ಆಶುಕವನ ರಚನೆ
– ವಿ.ಬಿ. ಕುಳಮರ್ವ ,ಕುಂಬ್ಳೆ

Related posts

ದೇವತೆ

Harshitha Harish

ಭೂ ತಾಯಿ

Harshitha Harish

ಕವನ: ಕಾಲ ಕೆಟ್ಟಿಲ್ಲ

Upayuktha