ಕತೆ-ಕವನಗಳು

ಕವನ: || ಬಡತನದ ಸಿರಿ ||  

 

ತವರಿನ ಬಂಧವ ಹೊಗಳುವುದೇತಕೆ

ಬೆವರಿನ ಹನಿಗೂ ಮಿಗಿಲಹುದು|

ನವಸುಮವರಳಿದ ಸುಂದರ ವನವದು

ಭವದಲಿ ದುಃಖವ ನೀಗುವುದು||

 

ಹೆಣ್ಣಿನ ಜನ್ಮಕೆ ಮನೆಯೊಳು ಸಡಗರ

ಅಣ್ಣನ ಮಮತೆಗೆ ಬೆಲೆಯಿರಲು|

ತಿಣ್ಣನೆಯೊಲವನು ಬೆಳೆಸುತ ಸಲಹಲು

ಬಣ್ಣಿಸಲಸದಳ ಮಾತಿನಲು||

 

ನಾನೂ ಹಾಡುವೆ ನೀನೂ ಮಾಡುವೆ

ಅನುದಿನ ಹೆಣ್ಣಿನ ಗುಣಗಾನ|

ಮನದೊಳು ಗೌರವ ಜೀವನ ಸುಖಕರ

ತನುವನು ಪೋಷಿಸೆ ಸವಿಬೋನ||

 

ಹೆಣ್ಣಿಗು ಮಣ್ಣಿಗು ಹೊನ್ನಿನ ಮೌಲ್ಯವೆ

ಕಣ್ಣಿಗೆ ತಿಳಿಯದೆ ನಿಜಗುಣವು|

ನುಣ್ಣನೆ ಮಾತಲಿ ಪೇಳುವೆ ಕೇಳಿರಿ

ತಣ್ಣನೆ ಪರಿಸರ ಹಿರಿತನವು||

 

ಮಡದಿಯ ಜತೆಯಲಿ ಮಕ್ಕಳ ಕರೆಯುತ

ಪೊಡವಿಯನೆಲ್ಲೆಡೆ ಸುತ್ತುವೆನು|

ಮೃಡನನು ಭಜಿಸುತ ಅಡವಿಯನಲೆಯುತ

ಬಡತನ ದುಗುಡವ ಮರೆಯುವೆನು||

ಛಂದಸ್ಸು:-

೪+೪+೪+೪

೪+೪+೫

೪+೪+೪+೪

೪+೪+೫  —–  ಈ ರೀತಿಯ ಮಾತ್ರಾಗಣವುಳ್ಳ ಸುಲಭ ಚೌಪದಿಯಲ್ಲಿ ರಚಿಸಿದ ಭಾವಗೀತೆ ಆದಿಪ್ರಾಸ ಮತ್ತು ಅಂತ್ಯ ಪ್ರಾಸಗಳೂ ಇವೆ.

ವಿ.ಬಿ.ಕುಳಮರ್ವ, ಕುಂಬ್ಳೆ ✍

Related posts

ಹನಿಗವನ: ವಾಸ್ತವ

Upayuktha

ಜೀವನಸಂದೇಶವನ್ನು ಸಾರುವ ಮುಕ್ತಕಗಳು

Upayuktha

*ಬೇಸಾಯದವ ಬೇಗ ಸಾಯ*

Harshitha Harish

Leave a Comment