ಗ್ರಾಮಾಂತರ ಸ್ಥಳೀಯ

ಪೆರಡಾಲ ನವಜೀವನ ಶಾಲೆಯಲ್ಲಿ 2 ದಿನಗಳ ಸ್ಕೌಟ್ಸ್, ಗೈಡ್ಸ್ ಶಿಬಿರ

ಬದಿಯಡ್ಕ: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಜೀವನ ಮೌಲ್ಯವನ್ನು ವೃದ್ಧಿಸುತ್ತದೆ. ಶಾಲೆಯಲ್ಲಿ ಲಭಿಸುವ ಸ್ಕೌಟಿಂಗ್ ಹಾಗೂ ಗೈಡಿಂಗ್ ತರಬೇತಿಯು ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಹಾಗೂ ಪೆರಡಾಲ ಶೈಕ್ಷಣಿಕ ಸಂಸ್ಥೆಗಳ ಕೋಶಾಧಿಕಾರಿ ಪಿ. ವೆಂಕಟ್ರಮಣ ಭಟ್ ಹೇಳಿದರು.

ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ ಎರಡು ದಿನಗಳ ವಾರ್ಷಿಕ ತರಬೇತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕೌಶಲ್ಯಗಳ ಕಲಿಕೆ, ನಾಯಕತ್ವ ಗುಣ, ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಇಂತಹ ಶಿಬಿರಗಳಿಂದ ಮೈಗೂಡಿಸಿಕೊಳ್ಳಲು ಸಾಧ್ಯವಿದೆ. ದೈವ ಭಕ್ತಿ, ದೇಶ ಭಕ್ತಿ, ಸಹ ಜೀವನ, ಪ್ರಕೃತಿ ಸಂರಕ್ಷಣೆ, ಶಿಬಿರ ವಾಸ, ದೈಹಿಕ ದೃಢತೆಗೆ ಶಿಬಿರವು ಸಹಕಾರಿಯಾಗಿದೆ. 1907ರಲ್ಲಿ ಬೇಡನ್ ಪವೆಲ್ ಅವರಿಂದ ಆರಂಭಗೊಂಡ ಸ್ಕೌಟಿಂಗ್ ಇಂದು ವಿಶ್ವದಾದ್ಯಂತವಿದೆ ಎಂದರು.

ಕುಂಬಳೆ ಉಪಜಿಲ್ಲಾ ಶಿಕ್ಷಣಾಕಾರಿ ಯತೀಶ್‍ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಕೆಲವೇ ಶಾಲೆಗಳಲ್ಲಿ ಅಸ್ತಿತ್ವದಲ್ಲಿರುವ ಸ್ಕೌಟಿಂಗ್ ಹಾಗೂ ಗೈಡಿಂಗಿನ ಚಟುವಟಿಕೆಗಳನ್ನು ಈ ಶಾಲೆಯಲ್ಲಿ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದರ ಚಟುವಟಿಕೆಗಳು ಹೆಚ್ಚಿನ ಶಾಲೆಗಳಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು.

ಸ್ಕೌಟ್ ಜಿಲ್ಲಾ ಆಯುಕ್ತ ಗುರುಮೂರ್ತಿ ನಾಯ್ಕಾಪು, ಜಿಲ್ಲಾ ಸಂಘಟನಾ ಆಯುಕ್ತ ವಿಜಯಕುಮಾರ್, ಗೈಡ್ಸ್‌ನ ಜಿಲ್ಲಾ ತರಬೇತಿ ಆಯುಕ್ತೆ ಆಶಾಲತಾ ಪಾಲ್ಗೊಂಡು ಸೂಕ್ತ ಸಲಹೆಗಳನ್ನು ನೀಡಿದರು. ಕಾಸರಗೋಡು ಜಿಲ್ಲೆ ಏಕೈಕ ರೋವರ್ಸ್ ದಳದ ಸಕ್ರಿಯ ಕಾರ್ಯಕರ್ತ ಶ್ರೀನಾಥ್ ಮೇಲೋತ್ ಮತ್ತು ನಿಕುನ್ ಕೊಪ್ಪಲ್ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ತರಗತಿ ಹಾಗೂ ಜಾನಪದ ಗೀತೆಗಳನ್ನು ಹಾಡಿಸುವುದರ ಮೂಲಕ ಮಕ್ಕಳಲ್ಲಿ ಚೈತನ್ಯವನ್ನು ತುಂಬಿದರು.

ರಾತ್ರಿ ನಡೆದ ಶಿಬಿರಾಗ್ನಿಯನ್ನು ಪೆರಡಾಲ ಶೈಕ್ಷಣಿಕ ಸಂಸ್ಥೆಗಳ ಪದಾಧಿಕಾರಿ ಕೃಷ್ಣಪ್ರಸಾದ ರೈ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ತಂಗಮಣಿ, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಲತಾ ಬಾಯಿ

ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಶುಭ ಹಾರೈಸಿದರು. ಅಧ್ಯಾಪಕ ವೃಂದದ ಕವಿತ, ವಿದ್ಯಾ, ಶಿವ ಪ್ರಸಾದ್, ಹರೀಶ್ ಇಕ್ಕೇರಿ, ವೆಂಕಟಕೃಷ್ಣ ಭಟ್ ಹಾಗೂ ಇತರ ಬೋಧಕೇತರ ಸಿಬ್ಬಂದಿಗಳು ಶಿಬಿರದ ಯಶಸ್ಸಿನಲ್ಲಿ ಕೈಜೋಡಿಸಿದರು.

ಶಿಬಿರದ ಭಾಗವಾಗಿ ನಡೆದ ಹೊರಸಂಚಾರ ಅಥವಾ ಹೈಕಿಂಗ್ ಕಾರ್ಯಕ್ರಮವನ್ನು ಧಾರ್ಮಿಕ ಸಾಮಾಜಿಕ ಮುಂದಾಳು ಪಂಜಿತ್ತಡ್ಕ ನಾರಾಯಣ ಭಟ್ ಅವರ ನಿವಾಸಕ್ಕೆ ನಡೆಸಲಾಯಿತು. ಪ್ರಥಮ ಚಿಕಿತ್ಸೆಯ ಕುರಿತಾದ ತರಗತಿಯನ್ನು ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟ ನವಜೀವನ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ, ಮಂಗಳೂರು ಏನಪೋಯ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ.ಬಿ. ರಾಮಚಂದ್ರ ಭಟ್ ಅವರನ್ನು ಶಾಲು ಹೊದೆಸಿ, ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸ್ಕೌಟ್ ಅಧ್ಯಾಪಕ ಈಶ್ವರ ಕೆ., ಗೈಡ್ ಅಧ್ಯಾಪಿಕೆಯರಾದ ಕಾರ್ತಿಕ, ಸುಶೀಲ ಮತ್ತು ದಿವ್ಯಾ ಶಿಬಿರದ ನೇತೃತ್ವವನ್ನು ವಹಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಸುರಕ್ಷಾ ದಂತ ಚಿಕಿತ್ಸಾಲಯ: ಮಾ.19ರಿಂದ 31ರ ವರೆಗೆ ಚಿಕಿತ್ಸೆ ಲಭ್ಯವಿಲ್ಲ

Upayuktha

ವಿವೇಕಾನಂದ ಪಿಯು ಕಾಲೇಜಿನ ಹಲವು ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆ

Upayuktha

ಹಿರಿಯ ಸಮಾಜ ಸೇವಕ ಉಂಡೆಮನೆ ನಾರಾಯಣ ಭಟ್ ನಿಧನ

Upayuktha

Leave a Comment

error: Copying Content is Prohibited !!