ನಗರ ಪ್ರಮುಖ ಸ್ಥಳೀಯ

ನಾಳೆಯಿಂದ ಮೂರು ದಿನ ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಫುಲ್‌ ಡೋಮ್ ಚಿತ್ರೋತ್ಸವ, ತಾರಾಲಯ ಸಮ್ಮೇಳನ

ಮಂಗಳೂರು: ನಗರದ ಪಿಲಿಕುಳ ನಿರ್ಗಧಾಮದಲ್ಲಿರುವ ಪಿಲಿಕುಳ ವಿಜ್ಞಾನ ಕೇಂದ್ರದ ಆಡಿಟೋರಿಯಂನಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಫುಲ್‌ ಡೋಮ್‌ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ ನವೆಂಬರ್ 6ರಿಂದ 8ರ ತನಕ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ನಾಳೆ ಬೆಳಗ್ಗೆ (ನ.6) ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್‌ ಕಿರಣ್ ಕುಮಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದ ತಾಂತ್ರಿಕ ಅಧಿವೇಶನಗಳಲ್ಲಿ ದೇಶ-ವಿದೇಶಗಳ ತಜ್ಞರು ಭಾಗವಹಿಸಲಿದ್ದಾರೆ. ಚಿತ್ರೋತ್ಸವದಲ್ಲಿ 2ಡಿ ಮತ್ತು 3ಡಿ ಚಿತ್ರಗಳ ಪ್ರದರ್ಶನವಿದೆ. ಇವೆರಡೂ ಬಗೆಯ ಚಿತ್ರಗಳು ಒಟ್ಟಿಗೇ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು.ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿಗಳನ್ನು ನೀಡುವ ಖಗೋಳಶಾಸ್ತ್ರ ಸಂಬಂಧಿ ಕಾರ್ಯಕ್ರಮಗಳು ಮತ್ತು ಚಿತ್ರಗಳ ಪ್ರದರ್ಶನಕ್ಕಾಗಿ ಎರಡು ಸಂಚಾರಿ ತಾರಾಲಯಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ವಿವರಿಸಿದರು.

ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವಸ್ತು ಪ್ರದರ್ಶನ
ಇದೇ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳಿಂದ ಶೈಕ್ಷಣಿಕ ವಸ್ತುಪ್ರದರ್ಶನವನ್ನೂ ಆಯೋಜಿಸಲಾಗಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂನ ಸಹಕಾರದಿಂದ ಬಾಹ್ಯಾಕಾಶ ವಿಜ್ಞಾನದ ಸಂಚರಿ ಮ್ಯೂಸಿಯಂ ಅನ್ನು ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ ವಿಜ್ಞಾನ ಪರಿಷತ್ ವತಿಯಿಂದ ರಾಜ್ಯದ ಶಿಕ್ಷಕರಿಗೆ ಕಂಕಣ ಸೂರ್ಯಗ್ರಹಣದ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿದೆ.

ನ.7ರಂದು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ಚಿತ್ರೋತ್ಸವ ಏರ್ಪಡಿಸಲಾಗಿದೆ. ನ.8 ಮತ್ತು 9ರಂದು ಸಾರ್ವಜನಿಕರಿಗೆ ಚಿತ್ರಗಳ ಪ್ರದರ್ಶನ ಮುಂದುವರಿಯಲಿದೆ. ಇವುಗಳಿಗೆ ಸೀಟುಗಳನ್ನು ‘ಬುಕ್‌ ಮೈ ಶೋ’ ಆಪ್‌ನಲ್ಲಿ ಕಾಯ್ದಿರಿಸಲು ಅವಕಾಶವಿದೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇನ್ಫೋವಿಷನ್ ಟೆಕ್ನಾಲಜೀಸ್ ಮುಂಬಯಿ, ಅಮೆರಿಕದ ಇವಾನ್ಸ್‌ ಮತ್ತು ಸದರ್‌ಲ್ಯಾಂಡ್‌ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ ರಾವ್ ಉಪಸ್ಥಿತರಿದ್ದರು.

Related posts

ದ.ಕ. ಜಿಲ್ಲೆಯಲ್ಲಿ ನಾಳೆಯೂ ಪೂರ್ಣ ಲಾಕ್ ಡೌನ್; ಉಡುಪಿಯಲ್ಲಿ ಮತ್ತೆರಡು ಕೊರೊನಾ ಪ್ರಕರಣ ದೃಢ

Upayuktha

ಉಪರಾಷ್ಟ್ರಪತಿಗಳ ಮೆಚ್ಚುಗೆ ಪಡೆದ ಉಡುಪಿಯ ಆಶಾ ಕಾರ್ಯಕರ್ತೆ

Upayuktha

ಕೊರೊನಾಗೆ ಆಯುರ್ವೇದ ಔಷಧ: ಡಾ. ಗಿರಿಧರ ಕಜೆ ಪ್ರಸ್ತಾವ ಐಸಿಎಂಆರ್‌ಗೆ ರವಾನೆ

Upayuktha