ಕಲೆ-ಸಾಹಿತ್ಯ

ಜನಮೆಚ್ಚುಗೆ ಪಡೆದ ಮೂರು ಹೊಸ ಕೃತಿಗಳು, ಭರವಸೆಯ ಲೇಖಕ ರಮೇಶ್ ಶೆಟ್ಟಿಗಾರ್ ಮಂಜೇಶ್ವರ

ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ಇವರು ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೈಶಿಷ್ಟ್ಯಪೂರ್ಣವಾದ ನಿರೂಪಣಾ ಶೈಲಿಯ ಕಥೆಗಾರರಾದ ಇವರು 2016ರಲ್ಲಿ ಅಪೂರ್ಣಸತ್ಯ ಎಂಬ ಬಹುಮಾನಿತ ಕಥಾ ಸಂಕಲನವನ್ನೂ 2019ರಲ್ಲಿ ಮದನಿಕೆ, ದಿ ಲಾಸ್ಟ್ ಸೀನ್ ಎಂಬ ಕೌತುಕಮಯ ಕಾದಂಬರಿಯನ್ನೂ ಬರೆದಿದ್ದಾರೆ. 2020ರಲ್ಲಿ ಹಾಂಟೆಡ್‌ ಹೊಸಮನೆ ಎಂಬ ಸಸ್ಪೆನ್ಸ್‌ ಥ್ರಿಲ್ಲರ್‌ ಹಾಗೂ ಹಾರರ್‌ ಇರುವ ಕಾದಂಬರಿಯನ್ನು ಬರೆದಿದ್ದಾರೆ. ಇವರ ಈ ಎರಡೂ ಕೃತಿಗಳಿಗೆ ಸಾಹಿತ್ಯಪ್ರಿಯರಿಂದ ಅಮೋಘವಾದ ಮೆಚ್ಚುಗೆಗಳು ಬಂದಿವೆ.

ಇದಲ್ಲದೆ ಇವರ ಕಥೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ಯುಗಪುರುಷ ಇತ್ಯಾದಿ ಪತ್ರಿಕೆಗಳಲ್ಲಿ ಬಂದಿವೆ. ಇವರ ಫೇಸ್ಬುಕ್ ಮತ್ತು ಪ್ರತಿಲಿಪಿಯಲ್ಲಿ ಹಲವು ರಚನೆಗಳು ಬಂದಿದ್ದು ಅದಕ್ಕೆಲ್ಲಾ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿವೆ.

ಮದನಿಕೆ- ಗಣ್ಯರ ಮೆಚ್ಚುಗೆ

“ಮದನಿಕೆ, ದಿ ಲಾಸ್ಟ್‌ ಸೀನ್” ಕಾದಂಬರಿಯು ಕಳೆದ ಕೆಲವು ದಶಕಗಳಿಂದ ಜಗತ್ತಿನಾದ್ಯಂತ ಕಾದಂಬರಿ ಲೋಕದಲ್ಲಿ ವಿಕಾಶಗೊಳ್ಳುತ್ತಿರುವ ಒಂದು ಹೊಸನಾಂದಿಗೆ ಸಾಕ್ಷಿಯಾಗಿದೆ, ಎನ್ನಬಹುದು. ಚರಿತ್ರೆಯನ್ನು ವರ್ತಮಾನದೊಂದಿಗೆ ಬೆರೆಸಿ ಓದುಗರಿಗೆ ಸುಂದರ ಕಥಾಹಂದರವನ್ನು ಕಟ್ಟಿಕೊಡುವ ಈ ಹೊಸಮಾದರಿಯು ಪ್ರಪಂಚದಾದ್ಯಂತ ಹಲವಾರು ಭಾಷೆಗಳಲ್ಲಿ ಬೇರೂರಿವೆ. ಮೊದಲ ಪುಟದಿಂದ ಹಿಡಿದಿಡುವ ಈ ಕಥಾಹಂದರ ಓದುಗರ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಅನುಮಾನವಿಲ್ಲ…. (ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ)
ಕೆ.ಎನ್. ಗಣೇಶಯ್ಯ
– ಖ್ಯಾತ ಕಾದಂಬರಿಕಾರರು ಹಾಗೂ ಕೃಷಿ ವಿಜ್ಞಾನಿ

ನೀವು ಬರೆದ ಮದನಿಕೆ, ದಿ ಲಾಸ್ಟ್ ಸೀನ್ ಕಾದಂಬರಿ ಓದಿದೆ. ಮೆಚ್ಚುಗೆಯಾಯಿತು. ಈ ಶೈಲಿಯ ಕತೆಗಳು ನನಗಿಷ್ಟ. ಚರಿತ್ರೆಯ ಒಂದು ಪುಟವನ್ನು ವರ್ತಮಾನಕ್ಕೆ ಬೆಸೆಯುವ ಕತೆಗಳಲ್ಲಿ ಒಂಥರ ಮಜವಿರುತ್ತದೆ. ನಮ್ಮ ಕಲ್ಪನೆಯನ್ನು ಅಂಥ ಕತೆಗಳು ಹೆಚ್ಚು ವಿಸ್ತರಿಸುತ್ತವೆ. ಡಾನ್ ಬ್ರೌನ್ ಬರೆಯುವ ಕತೆಗಳ ಐತಿಹಾಸಿಕ ಹಿನ್ನೆಲೆ ನಮಗೆ ಗೊತ್ತಿರುವುದಿಲ್ಲ. ನಮ್ಮದು ಗೊತ್ತಿರುತ್ತದೆ. ಅಂಥ ವಿವರಗಳನ್ನು ಇಟ್ಟುಕೊಂಡು ಕತೆ ಕಟ್ಟುವ ನಿಮ್ಮ ಕೌಶಲ ಇಷ್ಟವಾಯಿತು.‌ ನಿಮ್ಮ ಕಥಾರಚನೆ ಯಶಸ್ವಿಯಾಗಿ ಮುಂದುವರಿಯಲಿ.
ಜೋಗಿ (ಗಿರೀಶ್‌ ರಾವ್, ಹತ್ವಾರ್)
– ಖ್ಯಾತ ಬರಹಗಾರರು ಹಾಗೂ ಸಂಪಾದಕರು

ಮದನಿಕೆ ಕಾದಂಬರಿಯನ್ನು ಓದಲು ಪ್ರಾರಂಭಿಸಿದಾಗ ಇದೊಂದು ವಿಷ್ಣುವರ್ಧನ ಮತ್ತು ಶಾಂತಲೆಯ ಚರಿತ್ರಿಕ ವಿಷಯವೆಂದುಕೊಂಡೆ. ಆದರೆ ಇವೆಲ್ಲಾ ನಿರೀಕ್ಷೆಯನ್ನು ಮೀರಿದ ಇದು ಸಾಮಾಜಿಕ ಕಾದಂಬರಿಯಾಗಿದ್ದು, ಬಹಳ ಅರ್ಥಗರ್ಭಿತವಾಗಿದೆ. ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದ್ದು ಓದುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿ ಬೇರೆ ಲೋಕಕ್ಕೆ ಕರೆದೊಯ್ಯುವ ಸಾಮರ್ಥ್ಯವಿದ್ದು ಓದುಗರಿಗೆ ಸಂತಸವನ್ನುಂಟು ಮಾಡುತ್ತದೆ.
ವಿ. ಶ್ರೀಧರ ಮೂರ್ತಿ
– ನಿವೃತ್ತ ಅಧೀನ ಕಾರ್ಯದರ್ಶಿ, ಕರ್ನಾಟಕ ಸರ್ಕಾರ

ವಿಷ್ಣುವರ್ಧನ-ಶಾಂತಲಾ-ಬೇಲೂರು-ಶಿವಗಂಗೆ ಹೀಗೆ ಇತಿಹಾಸದ ಈ ನಾಲ್ಕು ವಿಷಯಗಳನ್ನು ವರ್ತಮಾನದ ಕಥೆಯಲ್ಲಿ ಸುಂದರವಾಗಿ ಹಣೆದು ಮೊದಲ ಪುಟದಿಂದ ಕೊನೆಯ ಪುಟದ ವರೆಗೆ ತಿರುವುತ್ತಾ, ತಿರುವುತ್ತಾ ಒಂದೇ ಗುಕ್ಕಿನಲ್ಲಿ ನನ್ನನ್ನು ಓದಿಸಿದ ಕೆಲವೇ ಪುಸ್ತಕಗಳಲ್ಲಿ ಇದು ಒಂದು. ಕಥೆಯಲ್ಲಿ ಚರಿತ್ರೆಗೆ ಸಾಮ್ಯವಾಗಿ ಕಥಾ ನಾಯಕಿಯ ಜೀವನದ ಘಟನೆಗಳು, ಹಳ್ಳಿಗಳ ಚಿತ್ರಣ, ಅಲ್ಲಲ್ಲಿ ತಿಳಿ ಹಾಸ್ಯ, ಕೆಲವು ಕಡೆ ರಾಜಕೀಯ ಟೀಕೆಗಳು ಎಲ್ಲವೂ ಇವೆ. ಇತಿಹಾಸದ ಜೊತೆಗೆ ಮನರಂಜನೆ ಇಷ್ಟಪಡುವವರಿಗೆ ಮೆಚ್ಚುಗೆಯಾಗಬಹುದು.
ವಿಠಲ್ ಶೆಣೈ
– ಕಾದಂಬರಿಕಾರರು‌ ಹಾಗೂ ಸಾಫ್ಟ್‌ವೇರ್‌ ಉದ್ಯೋಗಿ

ಮದನಿಕೆ, ದಿ ಲಾಸ್ಟ್‌ ಸೀನ್‌ ಓದಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ನಿಜಕ್ಕೂ ತನ್ನ ಹಿಡಿತ ಸಾಧಿಸಿದೆ. ಮದನಿಕೆ ರೋಚಕ ಕಥನವುಳ್ಳ ಅದ್ಭುತ ಕಾದಂಬರಿ. ಪುಸ್ತಕ ಒಂದೇ ಓದಿಗೆ ಸಂಪೂರ್ಣವಾಗಿ ಮುಗಿಯುವ ತನಕ ಕೈಬಿಡದು. ಮೊದಲ ಪುಟದಿಂದ ಮೊದಲಾಗುವ ಕುತೂಹಲ ಕೊನೆಯ ವರೆಗೂ ಕಾದಿರಿಸಿದೆ.
ರೂಪಾ ಸತೀಶ್
– ಸಾಹಿತ್ಯಾಸ್ತಕರು ಹಾಗೂ 3ಕೆ ಬಳಗದ ಮುಖ್ಯಸ್ಥೆ

ಇವರ ಅದ್ಭುತ ಕಾದಂಬರಿ ಮದನಿಕೆಯ ಲೋಕಾರ್ಪಣೆಯಾದಂತೇ ಕೊಂಡು ಸಂಜೆ-ರಾತ್ರಿಯೇ ಕುಳಿತು ಓದಲಾರಂಬಿಸಿದರೆ ಅದು ಮುಗಿಸುವವರೆಗೆ ಬಿಡಲೇ ಇಲ್ಲ. ಸ್ವಾರಸ್ಯಕರ ವಿಷಯದ ಮೇಲೆ ಹೆಣೆದಿರುವಂತ ಕಾದಂಬರಿ ಓದುಗರನ್ನು ಓದಿಸಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.
ವಿದ್ಯಾಧರ್‌ ದುರ್ಗೇಕರ್
– ಕಾದಂಬರಿಕಾರ ಹಾಗೂ ಬರಹಗಾರರು

ಅಪೂರ್ಣ ಸತ್ಯ (ಕಥಾ ಸಂಕಲನ)

ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಇವರ ‘ಅಪೂರ್ಣಸತ್ಯ’ ಎಂಬ ಖ್ಯಾತಿಯ ಈ ಕಥಾಸಂಕಲನದಲ್ಲಿ ತಮ್ಮ ಉತ್ತಮ ನಿರೂಪಣಾ ಶೈಲಿಯಿಂದಾಗಿ ಓದುಗರೆಲ್ಲರಿಂದ ಅತ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ.

ಅವುಗಳಲ್ಲಿ ‘ಅಪೂರ್ಣಸತ್ಯ’ ಕಥೆಗೆ ಸಿಂಗಾಪುರ ಕನ್ನಡ ಸಂಘದಿಂದ ಕಥಾಸ್ವರ್ಧೆಯಲ್ಲಿ ಮೊದಲ ಬಹುಮಾನ ಹಾಗೂ ‘ದೇವರಗಿಡ’ ಕಥೆಗೆ ಭಾರತೀಯ ಕರ್ನಾಟಕ ಸಂಘ ನಡೆಸಿದ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದೆ. ಇನ್ನಿತರ ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಾದ ತರಂಗ ಹಾಗೂ ಮಂಗಳದಲ್ಲಿ ಪ್ರಕಟವಾಗಿವೆ. ಅಪೂರ್ಣ ಸತ್ಯ ಪುಸ್ತಕಕ್ಕೆ 2017ರಲ್ಲಿ ‘ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್’ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ.

ಈ ಕೃತಿಯನ್ನು ಓದಿದ ನೂರಾರು ಸಾಹಿತ್ಯಾಸಕ್ತರು ಲೇಖಕರಿಗೆ ತಮ್ಮ ಮೆಚ್ಚುಗೆಗಳನ್ನು ಸವಿವರವಾದ ಬರಹದ ಮೂಲಕ ಕಳುಹಿಸಿರುವುದು ಈ ಕೃತಿಯ ಉತ್ಕೃಷ್ಟತೆಗೆ ಕೈಗನ್ನಡಿಯಾಗಿದೆ.

ಹಾಂಟೆಡ್ ಹೊಸಮನೆ ಕಾದಂಬರಿ ಬಗ್ಗೆ ಓದುಗರ ಅನಿಸಿಕೆಯ ಸಾರ:

ಇತ್ತೀಚಿಗೆ ಸಾಹಿತ್ಯಲೋಕದಲ್ಲಿ ಓದುಗರನ್ನು ಸೆಳೆಯುತ್ತಿರುವ ವೈಶಿಷ್ಟ್ಯಪೂರ್ಣವಾದ ಸಸ್ಪೆನ್ಸ್-ಥ್ರಿಲ್ಲರ್‌, ಪ್ಯಾರಾನಾರ್ಮಲ್ ಕಾದಂಬರಿ “ಹಾಂಟೆಡ್ ಹೊಸಮನೆ”. ಪ್ರಸಿದ್ಧ ಲೇಖಕರಾದ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಇವರು ಬರೆದ, ಟೋಟಲ್ ಕನ್ನಡ ಪ್ರಕಟಿಸಿದ “ಹಾಂಟೆಡ್ ಹೊಸಮನೆ” ಕಾದಂಬರಿ ಅನೇಕ ಹೊಸ ಓದುಗರನ್ನು ಹುಟ್ಟುಹಾಕುತ್ತಿದೆ. 2019ರ ಕೊನೆಯಲ್ಲಿ “ಶಿರಾಡಿ ಘಾಟ್” ಎನ್ನುವ ಹಾರರ್ ಕತೆಯು ಕವರ್‌ ಪೇಜ್‌ ಹಾಗೂ ವಾಟ್ಸಾಪ್‌ ಮೂಲಕ ವೈರಲ್‌ ಆಗಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿ, ಲೇಖಕರ ಕಲ್ಪನೆ, ಕತೆಯ ನೈಜತೆ ಹಾಗೂ ಬರವಣಿಗೆಯ ಶೈಲಿಯ ಬಗ್ಗೆ ಅನೇಕರಿಂದ ಮೆಚ್ಚುಗೆಗಳು ಬಂದಿದ್ದವು. ಇದು ಲೇಖಕರಿಗೆ “ಹಾಂಟೆಡ್ ಹೊಸಮನೆ” ಕಾದಂಬರಿ ಬರೆಯಲು ಸ್ಪೂರ್ತಿಯಾಯಿತು.

“ಹಾಂಟೆಡ್ ಹೊಸಮನೆ” ಕಾದಂಬರಿ ವಿಭಿನ್ನವಾದ ಕತೆ, ಸಹಜ ಸಂಭಾಷಣೆ, ತಾರ್ಕಿಕ ತಿರುವು, ಕ್ಷಣ ಕ್ಷಣಕ್ಕೂ ಬದಲಾಗುವ ಸನ್ನಿವೇಶಗಳು, ಅಲ್ಲಲ್ಲಿ ಆಗುವ ಹಾರರ್‌ ಅನುಭವಗಳು, ಪ್ಯಾರಾನಾರ್ಮಲ್‌ ಶಕ್ತಿಗಳು, ಮನಸ್ಸನ್ನು ಆವರಿಸಿಕೊಳ್ಳುವ ಪಾತ್ರಗಳು ಓದುಗರನ್ನು ಕೊನೆಯ ಪುಟಗಳವರೆಗೂ ತನ್ನೊಂದಿಗೆ ಹಿಡಿದಿಟ್ಟುಕೊಳ್ಳುವಂತ ರೋಚಕತೆಯನ್ನು ಒಳಗೊಂಡಿದೆ.

ಗೃಹಪ್ರವೇಶದ ದಿನದಂದು ಮನೆಯೊಂದರಲ್ಲಿ ಜೋಡಿ ಕೊಲೆಗಳು ನಡೆದು ಆಗುವ ಕಷ್ಟನಷ್ಟಗಳು, ಹಾಂಟೆಡ್ ಮನೆಯೆಂಬ ಕುಖ್ಯಾತಿ ಪಡೆದ ಆ ಮನೆಯಲ್ಲಿ ಆಗುವ ಹಾಂಟೆಡ್ ಅನುಭವಗಳು, ಅದನ್ನು ತನಿಖೆ ಮಾಡುವವರ ಸಾಹಸ, ಹೀಗೆ ಕ್ಷಣಕ್ಷಣಗಳ ಮೈನವಿರೇಳಿಸುವ ವ್ಯಾಖ್ಯಾನಗಳಿದ್ದು ಓದುಗರನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದುಕೊಳ್ಳುತ್ತದೆ ಹಾಂಟೆಡ್ ಹೊಸಮನೆ. ಲೇಖಕರು ಎಲ್ಲಿಯೂ ಓದುಗರಿಗೆ ನಿರಾಸೆ ಮಾಡದೆ ಕತೆಯ ಕುತೂಹಲವನ್ನು ಕೊನೆಯವರೆಗೂ ಕಾಪಾಡಿಕೊಂಡು ಒಂದು ಅದ್ಬುತ ಸಂದೇಶದೊಂದಿಗೆ ಅಷ್ಟೇ ಸ್ವಾರಸ್ಯಕರವಾಗಿ ಕತೆಯನ್ನು ಮುಗಿಸಿದ್ದಾರೆ. ಕಥಾವಿಷಯವು ಕರೋನ ಸಮಯದಲ್ಲಿ ನಡೆಯುವ ವಿದ್ಯಮಾನವಾಗಿರುವುದರಿಂದ ಕಾದಂಬರಿಯು ಹೊಸತನದಿಂದ ಕೂಡಿದೆ.

ಕಥಾ ಸನ್ನಿವೇಶಕ್ಕೆ ತಕ್ಕಂತೆ ಬಳಸಿದ ಮಲೆಯಾಳಂ, ಇಂಗ್ಲಿಷ್ ಭಾಷೆಗಳು ಕತೆಗೆ ಇನ್ನಷ್ಟು ನೈಜತೆಯನ್ನು ನೀಡುತ್ತದೆ. ಪುಸ್ತಕ ಓದಿ ದಿನ ಕಳೆದರೂ ಅದರಲ್ಲಿನ ಪಾತ್ರಗಳು ಓದುಗರನ್ನು ಆವರಿಸಿಕೊಂಡು ಬಿಡುತ್ತದೆ. ಮೊದಲ ಪುಟದಿಂದ ಓದುಗನನ್ನು ಹಿಡಿದಿಟ್ಟುಕೊಳ್ಳುವ ಕಥೆಯು ಎಲ್ಲೂ ನಿಲ್ಲದೆ ಓಡುವುದರಿಂದ ಒಂದೇ ಗುಕ್ಕಿಗೆ ಓದಿ ಮುಗಿಸುವಂತೆ ಮಾಡುತ್ತದೆ. ಈ ಕಾದಂಬರಿಯನ್ನು ಓದಿದವರೆಲ್ಲಾ ಒಂದು ಥ್ರಿಲ್ಲಿಂಗ್ ಸಸ್ಪೆನ್ಸ್‌ ಪ್ಯಾರಾನಾರ್ಮಲ್ ಚಿತ್ರವನ್ನು ನೋಡಿದ ಅನುಭವವಾಗಿದೆಯೆಂದು ವಿಶ್ಲೇಷಿಸಿದ್ದಾರೆ.

ಈ ಮೂರೂ ಕೃತಿಗಳು ಬೆಂಗಳೂರಿನ ಅದಿತ್ರಿ ಪಬ್ಲಿಕೇಶನ್ಸ್‌ ಅವರಲ್ಲಿ ಮಾರಾಟಕ್ಕೆ ಲಭ್ಯವಿವೆ. ಸಂಪರ್ಕ: 91 99809 49005

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕನ್ನಡ ಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ಆಯ್ಕೆ

Upayuktha

ಕೇಂದ್ರ ಸಾಹಿತ್ಯ ಅಕಾಡೆಮಿ ವೆಬ್‍ಸರಣಿಗೆ ಡಾ.ರಾಜಶೇಖರ ಹಳೆಮನೆ ಸಣ್ಣಕಥೆ ಆಯ್ಕೆ

Upayuktha

ಆದಿಚುಂಚನಗಿರಿಯ ಜಾನಪದ ಕಲಾಮೇಳ ರದ್ದು

Harshitha Harish