ಲೇಖನಗಳು

ಎಂಟನೇ ತರಗತಿಯ ಹುಡುಗಿಯ ಪ್ರೇಮಪತ್ರ!

ಒಂದು ಶಾಲೆಯಲ್ಲಿ ಹೊಸದಾಗಿ ಎಂಟನೇ ತರಗತಿಗೆ ಮಕ್ಕಳು ಬಂದು ಸೇರಿದ್ದರು. ಹೊಸ ಶಾಲೆ, ಹೊಸ ಅಧ್ಯಾಪಕರು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಪಡುತ್ತಾ ಇದ್ದರು. ಕಲಿಯುವ ಉತ್ಸಾಹ ಮಾತ್ರ ಕಡಿಮೆ ಆಗಿರಲಿಲ್ಲ. ಆ ತರಗತಿಗೆ ಹೋಗಿ ಪಾಠ ಮಾಡಲು ಅಧ್ಯಾಪಕರ ಉತ್ಸಾಹವೂ ಮೇರೆ ಮೀರಿತ್ತು.

ಒಂದೆರಡು ವಾರ ಕಳೆದ ನಂತರ ಒಮ್ಮೆ ಒಬ್ಬರು ಮೇಷ್ಟ್ರು ತರಗತಿಯಲ್ಲಿ ಗಂಭೀರವಾಗಿ ಪಾಠ ಮಾಡ್ತಾ ಇರುವಾಗ ಒಬ್ಬಳು ಚಂದದ ಹುಡುಗಿ ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು. ಅವಳು ಒಂದು ಪುಟದ ಪತ್ರ ಬರೆದು ಅದನ್ನು ಮಡಚಿ ತನ್ನದೇ ತರಗತಿಯ ಹುಡುಗನಿಗೆ ಪಾಸ್ ಮಾಡಿದ್ದಳು. ಹುಡುಗ ಅದನ್ನು ಬೆವರುತ್ತಾ, ಭಯ ಪಡುತ್ತಾ ತೆರೆಯುತಿದ್ದಾಗ ಆ ಮೇಷ್ಟ್ರ ಕೈಗೆ ಸಿಕ್ಕಿ ಹಾಕಿದ್ದ. ಮೇಷ್ಟ್ರು ಅದನ್ನು ಮನಸ್ಸಿನಲ್ಲಿಯೇ ಓದಿದರು. ಅವರ ಮುಖ ಸಿಟ್ಟಲ್ಲಿ ಕೆಂಪು ಕೆಂಪಾಯಿತು. ಹುಡುಗ ಹೆದರಿದ ಗುಬ್ಬಚ್ಚಿ ಮರಿಯ ಹಾಗೆ ಬೆವರುತ್ತಾ ನಿಂತಿದ್ದ. ಹುಡುಗಿ ಕಿಟಕಿಯಿಂದ ಹೊರಗೆ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ ಹಕ್ಕಿಯನ್ನು ನೋಡುತ್ತಿದ್ದಳು.

ಎಲ್ಲಾ ಅಧ್ಯಾಪಕರ ಮತ್ತು ಮುಖ್ಯ ಶಿಕ್ಷಕರ ಮುಂದೆ ಒಂದು ರೌಂಡ್ ವಿಚಾರಣೆ ನಡೆಯಿತು. ಹುಡುಗಿ ಅದು ತಾನೇ ಬರೆದ ಪತ್ರ ಎಂದು ಒಪ್ಪಿಕೊಂಡು ಬಿಟ್ಟಳು. ಅವಳ ಮುಖದಲ್ಲಿ ಯಾವ ತಪ್ಪಿತಸ್ಥ ಮನೋಭಾವ ಕೂಡ ಇರಲಿಲ್ಲ. ಹುಡುಗ ಮಾತ್ರ ನಾಚಿಕೆಯಿಂದ ತಲೆ ತಗ್ಗಿಸಿ ನಿಂತಿದ್ದ.

ರೆಡ್ ಹ್ಯಾಂಡ್ ಆಗಿ ಅವರನ್ನು ಹಿಡಿದ ಮೇಷ್ಟ್ರ ಇಗೋ ಇನ್ನು ಕೂಡ ಧಗ ಧಗ ಉರಿಯುತ್ತಿತ್ತು. ಆ ಇಬ್ಬರೂ ಮಕ್ಕಳ ಹೆತ್ತವರನ್ನು ಶಾಲೆಗೆ ಕರೆದು ವಿಚಾರಣೆ ಮುಂದುವರೆಯಿತು. ಆ ದೃಶ್ಯ ಹೇಗಿತ್ತು ಅಂದರೆ ಕೋರ್ಟಲ್ಲಿ ಕೊಲೆಗಡುಕ ಅಪರಾಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ ಹಾಗಿತ್ತು.

ಹುಡುಗಿಯ ಮುಖದಲ್ಲಿ ಇದ್ದ ನಿರ್ಲಿಪ್ತ ಭಾವನೆ ಮೇಷ್ಟ್ರ ಇಗೋವನ್ನು ಮತ್ತೆ ಹೆಚ್ಚು ಮಾಡಿತು. ‘ಇಷ್ಟು ಸಣ್ಣ ಪ್ರಾಯದಲ್ಲಿ ಹೀಗೆ ಮಾಡಿದವರು ಮುಂದೆ ಓಡಿ ಹೋಗುವುದು ಖಂಡಿತ. ನಿಮ್ಮ ಮನೆತನದ ಮರ್ಯಾದೆ ಮೂರು ಕಾಸಿಗೆ ಮಾರಾಟ ಮಾಡಲು ಕೂಡ ಇಬ್ಬರೂ ಹೇಸುವುದಿಲ್ಲ. ಇಬ್ಬರೂ ಕ್ಷಮಾ ಪತ್ರ ಬರೆದು ಕೊಡಲಿ’ ಎಂಬ ಆಜ್ಞೆ ಹೊರಟಿತು. ಹೆತ್ತವರು ಅದಕ್ಕೆ ದನಿ ಸೇರಿಸಿದರು.

‘ಹುಡುಗ ಹೇಗಾದರೂ ಬದುಕುತ್ತಾನೆ. ನಿಮ್ಮ ಮಗಳು ಮುಂದೆ ಅನುಭವಿಸಬೇಕು ಅಲ್ವಾ?’ ಎಂಬ ಕಾಳಜಿಯ ಮಾತುಗಳು ಕೇಳಿ ಬಂದವು. ಆದರೂ ಹುಡುಗಿಯ ಕಣ್ಣಲ್ಲಿ ಒಂದು ತೊಟ್ಟು ನೀರಿಲ್ಲ! ಗುಬ್ಬಚ್ಚಿ ಹುಲ್ಲಿನ ನಡುವೆ ಕಡ್ದಿಗಳನ್ನು ಜೋಡಿಸುತ್ತಿತ್ತು.

‘ಒಂದೆರಡು ದಿನ ಅವರನ್ನು ಉಪವಾಸ ಹಾಕಿ. ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಿ. ಎಲ್ಲವೂ ಸರಿ ಆಗ್ತದೆ.’ ಎಂದರು ಮೇಷ್ಟ್ರು. ಹುಡುಗನ ಅಳು ಜೋರಾಯಿತು. ಹುಡುಗಿಯ ಮುಖದಲ್ಲಿ ವಿಷಾದದ ಗೆರೆ ಕೂಡ ಇರಲಿಲ್ಲ. ಕೊನೆಗೆ ಕ್ಷಮಾಪಣೆಯ ಪತ್ರ ಡ್ರಾಫ್ಟ್ ಆಯಿತು. ಹುಡುಗ ಮತ್ತು ಹುಡುಗಿಯ ಹೆತ್ತವರು ಅದಕ್ಕೆ ಸಹಿ ಮಾಡಿದರು. ಹುಡುಗ ತಲೆ ತಗ್ಗಿಸಿ ಸಹಿ ಮಾಡಿದ. ಹುಡುಗಿ ಅವನ ಮುಖ ನೋಡುತ್ತಾ ಸಹಿ ಮಾಡಿದಳು. ಅದನ್ನು ಫೈಲಿಗೆ ಸೇರಿಸಿ ಸಭೆಗೆ ಮುಕ್ತಾಯ ಹಾಡಲಾಯಿತು. ಮೇಷ್ಟ್ರು ವಿಜಯದ ನಗೆ ಬೀರುತ್ತಾ ಸ್ಟಾಫ್ ರೂಮಿಗೆ ಬಂದರು. ಮಕ್ಕಳು ತರಗತಿಗೆ ಹೋದರು. ಹೆತ್ತವರು ಮನೆಗೆ ಹೋದರು. ಗುಬ್ಬಚ್ಚಿ ಅಷ್ಟು ಹೊತ್ತಿಗೆ ಗೂಡು ಕಟ್ಟಿ ಮುಗಿಸಿತ್ತು.

ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಆದ ಆ ಪ್ರೇಮಪತ್ರದಲ್ಲಿ ಏನಿತ್ತು ಎಂಬ ಕುತೂಹಲ ನಿಮಗೂ ಇರಬಹುದು. ಅದನ್ನು ಒಮ್ಮೆ ನಿಮಗೆ ಇದ್ದ ಹಾಗೆ ಓದಿ ಹೇಳುತ್ತೇನೆ. ಹುಡುಗಿ ಬರೆದಿದ್ದಳು…

“ನನ್ನ ಪ್ರೀತಿಯ ಹುಡುಗ, ನಾವು ಇಬ್ಬರೂ ನೆರೆಕರೆಯ ಮನೆಯವರು. ಒಟ್ಟಿಗೆ ಆಟ ಆಡಿಕೊಂಡು ಬೆಳೆದವರು. ಒಂದೇ ಕ್ಲಾಸಲ್ಲಿ ಕೂತು ಪಾಠ ಕೇಳಿದವರು. ಚಿಕ್ಕಂದಿನಿಂದ ನಾವು ಒಟ್ಟಿಗೆ ಇದ್ದವರು. ನೀನು ನನ್ನ ಜೊತೆ ಆಟ ಆಡಲು ಬರುತ್ತಿದ್ದಿ. ಈಗ ಯಾಕೆ ಬರುವುದಿಲ್ಲ? ನಾನು ಕರೆದರೆ ಯಾಕೆ ನಾಚಿಕೆಯಿಂದ ದೂರ ಓಡುತ್ತಿ? ಹುಡುಗರ ಜೊತೆ ಮಾತ್ರ ಆಡುತ್ತೀ. ನನ್ನನು ಯಾಕೆ ಸೇರಿಸಿಕೊಳ್ಳುವುದಿಲ್ಲ? ನಾವು ಒಂದನೇ ತರಗತಿಯಿಂದ ಕ್ಲಾಸಮೇಟ್ಸ್. ಬೆಸ್ಟ್ ಫ್ರೆಂಡ್ಸ್. ಶಾಲೆಗೆ ಹೋಗುವಾಗ, ಬರುವಾಗ ನೀನು ನನ್ನ ಜೊತೆ ಬರುತ್ತಿದ್ದಿ. ಈಗ ನಾನು ಕರೆದರೂ ನೀನು ಯಾಕೆ ಹುಡುಗರ ಜೊತೆಗೆ ಓಡಿ ಹೋಗುತ್ತೀ. ನನಗೆ ಅರ್ಥ ಆಗದ ಪಾಠಗಳನ್ನು ನಾನು ನಿನ್ನ ಬಳಿಯೇ ಕೇಳುತ್ತಿದ್ದೆ. ನೀನು ನನಗೆ ಚೆನ್ನಾಗಿ ಅರ್ಥ ಮಾಡಿಸುತ್ತಿದ್ದಿ. ಈಗ ನಾನು ಕರೆದು ಕೇಳಿದರೂ ನೀನು ನಾಚಿಕೆಯಿಂದ ದೂರ ಓಡುತ್ತೀ. ನಾನು ಅರ್ಥ ಆಗದ ಪಾಠವನ್ನು ಯಾರ ಬಳಿ ಕೇಳುವುದು? ನೀನು ಏಕೆ ಹೀಗೆ ಮಾಡುವುದು? ನಾನೇನು ತಪ್ಪು ಮಾಡಿದ್ದೇನೆ?” ಎಂದು ಹುಡುಗಿ ಪತ್ರ ಬರೆದಿದ್ದಳು!

ಈಗ ನಿಮ್ಮ ವಿವೇಚನೆಗೆ ಬಿಡುತ್ತೇನೆ. ಅದು ಪ್ರೇಮ ಪತ್ರವೇ!?

-ರಾಜೇಂದ್ರ ಭಟ್ ಕೆ
ಜೇಸಿಐ ರಾಷ್ಟ್ರೀಯ ತರಬೇತುದಾರರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಬಾಳಪ್ಪನ ಜಿಜ್ಞಾಸೆ: ರೈಲು ಚಲಿಸುವಾಗ ನಮಗೆ ದಾರಿ ಮುಖ್ಯವಲ್ಲ, ಗುರಿ ಮುಖ್ಯ

Upayuktha

ಎಡವಿದಲ್ಲೇ ಮತ್ತೆ ಎಡವಬೇಕೆ…? ಮರಳಿ ಬದುಕು ಕಟ್ಟೋಣ ಬನ್ನಿ…

Upayuktha

ರಾಮ ನವಮಿ

Harshitha Harish