ಕತೆ-ಕವನಗಳು

ಪೇಜಾವರ ಶ್ರೀಗಳಿಗೊಂದು ಕಾವ್ಯ ನಮನ

🙏🙏 ವಿಶ್ವ ಕೃಷ್ಣೈಕ್ಯಂ 🙏🙏
~~~~~~

ಶ್ರೀಕೃಷ್ಣನ ಚರಣಾಬ್ಜಗಳಲ್ಲಿ ಐಕ್ಯರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ದಿವ್ಯಸ್ಮರಣೆಯೊಂದಿಗೆ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ ಕುಳಮರ್ವ ಅವರು ಅರ್ಪಿಸಿದ ಕಾವ್ಯಾಂಜಲಿ.

(ಶ್ರೀ) ಶ್ರೀಗಂಧದೊಲು ಜೀವನಮಂ
ನಿಚ್ಚ ಸವೆಸುತಂ
(ಶ್ರೀ) ಶ್ರೀಮುಖದಿ ದೃಢನಿರ್ಧಾರಮಂ
ತೋರುತಂ
(ವಿ) ವಿಚಾರವಂತಿಕೆಯೊಳ್ ವಿಜಯ-
ದುಂದುಭಿಯಂ ಮೊಳಗಿಸುತಂ
(ಶ್ವೇ) ಶ್ವೇತವರ್ಣದೋಲ್ ನಿಷ್ಕಲ್ಮಷ-
ಮೆನಿಪ್ಪ ಮುಗುಳ್ನಗೆಯಂ ಬೀರುತಂ
(ಶ) ಶತಸಹಸ್ರ ವರುಷಂ ನೆಲೆಗೊಳ್ವ
ಮಹಾಚಿಂತನೆಯಂ ಮಾಡುತಂ
(ತೀ) ತೀಕ್ಷ್ಣಮೆನಿಪ್ಪ ಸತ್ಯಮಂ ಸ್ವಾಯತ್ತ-
ಗೊಳಿಸಲೆಳಸುತಂ
(ರ್ಥ) ಥಳಥಳಿಸುತ್ತಿರ್ಪ ಕಂಗಳ
ದಿವ್ಯದೃಷ್ಟಿಯಿಂ ನೋಡುತಂ
(ಸ್ವಾ) ಸ್ವಾಧ್ಯಾಯದಿಂ ಸ್ವಾನುಭವಮಂ
ಸ್ವಾಭಾವಿಕಮಾಗಿ ಗಳಿಸುತಂ
(ಮೀ) ಮೀಮಾಂಸಕರಾಗಿ ಭವಿಷ್ಯಮಂ
ಕುರಿತು ಚಿಂತಿಸುತಂ
(ಜಿ) ಜಿಗೀಷು ವ್ರತಿಯಾಗಿ ಆತ್ಮವಿಶ್ವಾ-
ಸಮಂ ಬೆಳೆಸುತಂ
(ಪೇ) ಪೇರುಕ್ಕೆವದಿ ರಾಮಮಂದಿರಮಂ
ಸ್ಥಾಪಿಸಲೆಳಸುತಂ
(ಜಾ) ಜಾಡ್ಯಮಂ ಕಳೆದು ನವ ಜಾಗೃ-
ತಿಯಂ ಮೂಡಿಸುತಂ
(ವ) ವಯಿನದಿಂ ಜನಮಾನಸದಿ
ಸ್ಥಿರಗೊಳಿಸುತಂ
(ರ) ರಮಣೀಯಮೆನಿಪ್ಪ ದೇಗುಲಮಂ
ನಿರ್ಮಿಸಲ್ಕೆಂದುಂ
(ಮ) ಮಹಾಮಾತ್ಯರಂ ಅಡಿಗಡಿಗೆ
ಬಿಡದೆ ಸಂಧಿಸುತಂ
(ಠ) ಠಕ್ಕುಗೊಳದೆ ನಿರ್ಮಲಚಿತ್ತದಿಂ
ಪೋರಾಡುತಂ
(ಉ) ಉಲ್ಲಾಸದೊಳೋಡಾಡುತಂ
ವಿಮರ್ಶೆ ಗೈಯುತಂ
(ಡು) ಡುಬ್ಬದೊಳ್ ಬಲ್ಮೆಯಂ
ನೆಲೆಗೊಳಿಸುತಂ
(ಪಿ) ಪಿಳ್ಳಂಗೋವಿಯ ಚೆಲ್ವಕೃಷ್ಣನೊಳ್
ಐಕ್ಯರಾದರಿಂದುಂ||

ಶ್ರೀಕೃಷ್ಣನ ಚರಣಾಬ್ಜಗಳಲ್ಲಿ ಐಕ್ಯರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ದಿವ್ಯಸ್ಮರಣೆಯೊಂದಿಗೆ …🙏🙏🙏
ರಚನೆ:-
ವಿ.ಬಿ.ಕುಳಮರ್ವ ,ಕುಂಬ್ಳೆ ✍
ದಿನಾಂಕ-29-12-2019

Related posts

ಕವನ: ನಮೋ ರಾಘವೇಶ್ವರ

Upayuktha

*ಕoಬಾರ ಜಗದಂಬಿಕೆ*

Harshitha Harish

ಹನಿಗವನ: ಆಪತ್ಕಾಲ..!!

Upayuktha