ಕೊರೊನಾ ಸವಾಲಿಗೆ ಸೆಡ್ಡು ಹೊಡೆದು ಗೆದ್ದ ಕಾಸರಗೋಡು
ಮತ್ತೊಮ್ಮೆ ಸಾಬೀತಾಯ್ತು ವೈದ್ಯೋ ನಾರಾಯಣೋ ಹರಿಃ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಸರಕಾರಿ ಆರೋಗ್ಯ ರಂಗದ ವೈದ್ಯರಿಗೂ, ದಾದಿಯರಿಗೂ, ಆರೋಗ್ಯರಂಗದ ಇತರ ನೌಕರರಿಗೂ ಅತ್ಯಂತ ಹೆಮ್ಮೆಯನ್ನುಂಟು ಮಾಡಿದ ದಿನ. ಹಲವಾರು ಸಮಸ್ಯೆಗಳನ್ನೆದುರಿಸುತ್ತಿರುವ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾರಂಗಕ್ಕೆ ಹಿರಿಮೆಯನ್ನು ತಂದುಕೊಟ್ಟ ದಿನ.
169 ಕೋವಿಡ್ ರೋಗಿಗಳಲ್ಲಿ 132 ಮಂದಿಗೆ ಚಿಕಿತ್ಸೆ ನೀಡಿದ ಜಿಲ್ಲೆಯ 2 ಆಸ್ಪತ್ರೆಗಳಲ್ಲಿ ಬೆರಳೆಣಿಕೆಯ ರೋಗಿಗಳು ಮಾತ್ರ ಇನ್ನು ಬಿಡುಗಡೆಯಾಗಲು ಬಾಕಿ ಉಳಿದಿದ್ದು ಇಲ್ಲಿನ ಚಿಕಿತ್ಸೆಯ ಗುಣಮಟ್ಟ ಪ್ರಪಂಚದ ಗಮನ ಸೆಳೆದಿದೆ.
89 ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ 92 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನು ಕೇವಲ 7 ಮಂದಿ ಮಾತ್ರ ಬಿಡುಗಡೆಯಾಗಲು ಬಾಕಿ ಉಳಿದಿದ್ದಾರೆ ಹೀಗೆ 92% ರೋಗಿಗಳು ಸಂತೋಷದಿಂದ ಆಸ್ಪತ್ರೆಯಿಂದ ಗುಣಮುಖರಾಗಿ ತೆರಳಿದರು.
ಕಾಞ್ಞಂಗಾಡಿನಲ್ಲಿರುವ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ 43 ಮಂದಿ ರೋಗಿಗಳಲ್ಲಿ 9 ಮಂದಿ ಮಾತ್ರ ಬಿಡುಗಡೆಗೊಳ್ಳಲು ಬಾಕಿಯಾಗಿದ್ದಾರೆ. ಈಗಾಗಲೇ ಸುಮಾರು 80% ರೋಗಿಗಳು ಇಲ್ಲಿಂದಲೂ ಗುಣಮುಖರಾದಂತಾಯಿತು.

ಆರೋಗ್ಯಸೌಕರ್ಯಗಳಲ್ಲಿ ಪರಾವಲಂಬನೆಯ ನಡುವೆಯೂ ಜಿಲ್ಲೆಯಲ್ಲಿ 137 ಕೋವಿಡ್ ರೋಗಿಗಳ ಸಂಖ್ಯೆ ಈಗ ಕೇವಲ 16 ಕ್ಕೆ ತಲಪಿದೆಯೆನ್ನುವುದು ಕೇರಳದ ಯಾಕೆ ಪ್ರಪಂಚದ ಆರೋಗ್ಯರಂಗವನ್ನೇ ಅಚ್ಚರಿಗೊಳಿಸುವ ಹಿರಿಮೆಯಾಗಿದೆ.
ಕೋವಿಡ್ ಕಾಲದಲ್ಲಿ ಪ್ರಪಂಚದಲ್ಲೇ ಯಾವುದೇ ಒಂದು ಆಸ್ಪತ್ರೆಯಲ್ಲಿ ಜನರಲ್ ವಾರ್ಡಿನಿಂದ 90% ಕ್ಕಿಂತ ಹೆಚ್ಚುರೋಗಿಗಳು ಯಾವುದೇ ತೊಂದರೆಯಿಲ್ಲದೆ ಬಿಡುಗಡೆ ಹೊಂದಿದ ಇತಿಹಾಸವಿಲ್ಲ.
ಇದರ ಹಿನ್ನೆಲೆಯಲ್ಲಿ ನೋಡಿದಾಗ ಸಾಮಾನ್ಯ ಸೌಕರ್ಯಗಳಿರುವ ಜನರಲ್ ವಾರ್ಡುಗಳನ್ನಿರಿಸಿಕೊಂಡು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಕಾಸರಗೋಡು ಜನರಲ್ ಆಸ್ಪತ್ರೆಯ ವಿಜಯಗಾಥೆ ಮಹತ್ವವನ್ನು ಪಡೆಯುತ್ತದೆ.
ಸೂಪರ್ ಸ್ಪೆಶಾಲಿಟಿ ಸೌಕರ್ಯವಿಲ್ಲದ ಜಿಲ್ಲೆಯಲ್ಲಿ ಅಪಘಾತ ಚಿಕಿತ್ಸಾ ಕೇಂದ್ರ (ಟ್ರಾಮಾಕೇರ್ ಸೆಂಟರ್) ಗಳಿಲ್ಲದ, ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ನರರೋಗತಜ್ಞ (ನ್ಯೂರಾಲಜಿಸ್ಟ್) ಮೂತ್ರಜನಕನಾಳ ತಜ್ಞ (ನೆಫ್ರಾಲಜಿಸ್ಟ್) ಅರ್ಬುದ ರೋಗತಜ್ಞ (ಓನ್ಕಾಲಜಿಸ್ಟ್) ಇಲ್ಲದ ಜಿಲ್ಲೆಯಲ್ಲಿ, ಗಡಿಮುಚ್ಚಿದರೆ ರೋಗಿಗಳು ಪ್ರಾಣ ಕಳೆದುಕೊಳ್ಳುವ ಜಿಲ್ಲೆಯಲ್ಲಿ ಪರಾವಲಂಬನೆಯ ನಡುವೆಯೂ ಮೈಮುರಿದು ದುಡಿದ ಇಲ್ಲಿನ ಆರೋಗ್ಯ ರಂಗದ ಕಾರ್ಯಕರ್ತರಿಗೆ ಬೊಟ್ಟುಮಾಡಿ ತೋರಿಸಲು ಇರುವ ಸಾಧನೆ ಇದಾಗಿದೆ.
ಮಲಯಾಳಂ ಮೂಲ: ಡಾ. ಶಕೀಲ್; ಕನ್ನಡಕ್ಕೆ: ಡಾ. ನರೇಶ್ ಮುಳ್ಳೇರಿಯಾ
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ