ಆರೋಗ್ಯ ಲೇಖನಗಳು

ಆಸಿಡಿಟಿ (ಅತಿ ಆಮ್ಲತೆ): ಕಾರಣ, ಲಕ್ಷಣ, ಚಿಕಿತ್ಸೆ, ತಡೆಗಟ್ಟುವುದು ಹೇಗೆ..?

ಆಸಿಡಿಟಿ ಅಥವಾ ಅತಿ ಆಮ್ಲತೆ ಎನ್ನುವುದು ಇಂದಿನ ಕಾಲದಲ್ಲಿ ಜಗತ್ತಿನಾದ್ಯಂತ ಎಲ್ಲರಲ್ಲೂ ಕಂಡು ಬರುವ ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಧಾವಂತದ, ವೇಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತದೆ. ಎಲ್ಲರೂ ತಮ್ಮ ಕೆಲಸದಲ್ಲಿ ಮಗ್ನರಾಗಿ ಕಾಲಕಾಲಕ್ಕೆ ಸರಿಯಾಗಿ ಆಹಾರ ಸೇವಿಸಲಾಗದ ಒತ್ತಡದ ಜೀವನ ಶೈಲಿಗೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಇಂದು ಇಂದಿನ ನಮ್ಮ ಯುವ ಜನಾಂಗದ ಜೀವನ ಶೈಲಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಲ್ಲ. ಆಸಿಡಿಟಿ ಎನ್ನುವುದು ಆಧುನಿಕ ಯಾಂತ್ರಿಕ ಜೀವನದ ಬಹುದೊಡ್ಡ ಶಾಪ ಎಂದರೂ ಅಪರಾಧವಾಗಲ್ಲಿಕ್ಕಿಲ್ಲ. ವಿಪರಾಸ್ಯವೆಂದರೆ ಆಸಿಡಿಟಿ ಎಂದು ಗೋಳಾಡುವ ಜನರಿಗೆ ಆಸಿಡಿಟಿ ಏನು ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ಕೂಡ ಇಲ್ಲದಿರುವುದು. ಆಸಿಡಿಟಿ ಎನ್ನುವುದು ಬಹಳ ಸುಲಭವಾಗಿ ಸರಿಪಡಿಸಹುದಾದ ಸಮಸ್ಯೆ. ನಿಯಮಿತ ನಿಯಂತ್ರಿತ ಜೀವನ ಶೈಲಿಯಿಂದ ಖಂಡಿತವಾಗಿಯೂ ಆಸಿಡಿಟಿಯ ಸಮಸ್ಯೆಯನ್ನು ನಿವಾರಿಸಬಹುದು.

ನಾವು ತಿನ್ನುವ ಆಹಾರ ಬಾಯಿಯ ಮುಖಾಂತರ ಜಠರಕ್ಕೆ ಸೇರುತ್ತದೆ. ಈ ಆಹಾರದ ಜೀರ್ಣ ಪ್ರಕ್ರಿಯೆಗೆ ಸಹಾಯವಾಗಲೆಂದು ಹೊಟ್ಟೆಯೊಳಗಿನ ಗಾಸ್ಟ್ರಿಕ್ ಗ್ರಂಥಿಗಳು ಹಲವಾರು ಕಿಣ್ವಗಳನ್ನು ಮತ್ತು ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಜಠರದ ಗ್ರಂಥಿಗಳು ನಿಗದಿತ ಪ್ರಮಾಣದಲ್ಲಿ ನಿರಂತರವಾಗಿ ಈ ಆಮ್ಲಗಳು ಮತ್ತು ಕಿಣ್ಣಗಳನ್ನು ಸ್ರವಿಸುತ್ತಲೇ ಇರುತ್ತದೆ. ನಾವು ಸೇವಿಸಿದ ಆಹಾರವನ್ನು ಅರಗಿಸಲು, ಕರಗಿಸಲು ಮತ್ತು ಜೀರ್ಣಿಸಲು ಈ ಆಮ್ಲಗಳು ಅತೀ ಅಗತ್ಯ. ಆದರೆ ನಾವು ನಿಯಮಿತವಾಗಿ ನಿಗದಿತ ಸಮಯಕ್ಕೆ ಆಹಾರ ತೆಗೆದುಕೊಳ್ಳದಿದ್ದಲ್ಲಿ ಈ ಆಮ್ಲಗಳ ನಮ್ಮ ದೇಹದೊಳಗಿನ ಜೀರ್ಣಾಂಗವ್ಯೂಹದ ತೆಳುವಾದ ಪದರಕ್ಕೆ ಹಾನಿ ಮಾಡಿ, ಆಸಿಡಿಟಿಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಕೆಲವೊಮ್ಮೆ ಅತಿಯಾಗಿ ಆಮ್ಲಗಳ ಸ್ರವಿಸುವಿಕೆಯಿಂದಲೋ ಈ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ.

ಕಾರಣಗಳು ಏನು?
1. ಕಡಮೆ ನಾರಿನಾಂಶವಿರುವ ಆಹಾರ ಪದಾರ್ಥಗಳ ಸೇವನೆಯಿಂದ ಅಸಿಡಿಟಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಮಾನಸಿಕ ಮತ್ತು ಕೆಲಸದ ಒತ್ತಡದಿಂದಲೂ ರಸದೂತಗಳ ಏರುಪೇರು ಉಂಟಾಗಿ ಆಸಿಡಿಟಿ ಉಂಟಾಗಬಹುದು.
3. ಮದ್ಯಪಾನ, ಧೂಮಪಾನ ಕೂಡಾ ಆಸಿಡಿಟಿಗೆ ನಾಂದಿ ಹಾಡಬಹುದು.
4. ಖಾರ ಪದಾರ್ಥಗಳನ್ನು ಹೆಚ್ಚು ಸೇವಿಸುವುದು, ಕುರುಕಲು ತಿಂಡಿಗಳು, ಅಧಿಕ ಎಣ್ಣೆ ಪದಾರ್ಥ ಸೇವನೆ, ರಾಸಾಯನಿಕ, ಬಣ್ಣಯುಕ್ತ, ದಿಢೀರ್ ಆಹಾರಗಳು ಮತ್ತು ಜಂಕ್ ಆಹಾರಗಳ ಸೇವನೆಯಿಂದಲೂ ಆಸಿಡಿಟಿ ಉಂಟಾಗುವ ಸಾಧ್ಯತೆ ಇದೆ.
5. ಬೆಳಗಿನ ಉಪಹಾರಗಳನ್ನು ತಪ್ಪಿಸುವುದು, ಮಧ್ಯಾಹ್ನದ ಊಟವನ್ನು ಸಾಯಂಕಾಲ ಮಾಡುವುದು ಕೂಡಾ ಆಸಿಡಿಟಿಗೆ ಕಾರಣವಾಗಬಹುದು.
6. ಮಾಂಸಹಾರ, ಮಸಾಲೆಯುಕ್ತ ಆಹಾರಗಳ ಅಧಿಕ ಸೇವನೆ, ಅತಿಯಾದ ಖಾರವಾದ ವಸ್ತುಗಳ ಸೇವನೆ ಕೂಡಾ ಆಸಿಡಿಟಿಗೆ ಮುನ್ನುಡಿ ಬರೆಯಬಹುದು.
7. ದೈಹಿಕ ಚಟುವಟಿಕೆಗಳ ಕೊರತೆ, ವಿಲಾಸಿ ಜೀವನಶೈಲಿ, ಅತಿಯಾದ ನೋವು ನಿವಾರಕಗಳ ಅನಗತ್ಯ ಸೇವನೆ ಕೂಡಾ ಆಸಿಡಿಟಿಗೆ ಕಾರಣವಾಗುತ್ತದೆ.

ಲಕ್ಷಣಗಳು ಏನು:-
1. ಹೊಟ್ಟೆಯಲ್ಲಿ ಊರಿ, ಗಂಟಲಿನಲ್ಲಿ ಊರಿ, ಎದೆಯಲ್ಲಿ ಉರಿ ಎಲ್ಲವೂ ಕಾಣಿಸಿಕೊಳ್ಳಬಹುದು.
2. ಅತಿಯಾದ ಹಸಿವು, ಜೋರಾದ ತೇಗು, ಹೊಟ್ಟೆ ಉಬ್ಬರಿಸುವುದು ಅಥವಾ ಗ್ಯಾಸು ತುಂಬಿದಂತಾಗುವುದು ಕಾಣಿಸಿಕೊಳ್ಳುತ್ತದೆ.
3. ಹೊಟ್ಟೆ ತೊಳೆಸುವಿಕೆ, ವಾಂತಿ ಬಂದಂತಾಗುವುದು, ಬಾಯಿಯಲ್ಲಿ ಕಹಿ ಉಂಟಾದಂತೆ ಆಗುವುದು.
4. ಅಜೀರ್ಣ, ಮಲಬದ್ಧತೆ ಕೂಡಾ ಉಂಟಾಗುವ ಸಾಧ್ಯತೆ ಇರುತ್ತದೆ.
5. ಹೊಟ್ಟೆಯಲ್ಲಿ ಹುಣ್ಣಾಗಿದ್ದಲ್ಲಿ ಊಟದ ಬಳಿಕ ವ್ಯಕ್ತಿಗಳು ಬಹಳ ಹೊಟ್ಟೆ ಉರಿ ಅನುಭವಿಸುತ್ತಾರೆ ಮತ್ತು ಬಾಯಿಯಿಂದ ಆಗಾಗ ಹುಳಿ ತೆಗು ಬರುತ್ತಿರುತ್ತದೆ.
6. ಬಾಯಿ ವಾಸನೆ ಕೂಡ ಬರುವ ಸಾಧ್ಯತೆ ಇದೆ. ಹಲ್ಲುಗಳ ಏನಾಮಲ್ ಕರಗಿ ಹಲ್ಲುಗಳಲ್ಲಿ ಅತಿಯಾದ ಸಂವೇದನೆ ಉಂಟಾಗುವ ಸಾಧ್ಯತೆಯೂ ಇದೆ.

ಚಿಕಿತ್ಸೆ ಹೇಗೆ?:
ಆಸಿಡಿಟಿಯ ಚಿಕಿತ್ಸೆ ಅತೀ ಸರಳ ಯಾವ ಕಾರಣದಿಂದ ರೋಗಿಗೆ ಆಸಿಡಿಟಿ ಉಂಟಾಗಿದೆ ಎಂಬುದನ್ನು ರೋಗಿಯನ್ನು ಕುಲಂಕುಷವಾಗಿ ಪರೀಕ್ಷಿಸಿ ಮತ್ತು ರೋಗಿಯ ರೋಗದ ಚರಿತ್ರೆಯನ್ನು ವಿಚಾರಿಸಿ ಅರಿತುಕೊಳ್ಳತಕ್ಕದ್ದು. ವ್ಯಕ್ತಿಯ ಒತ್ತಡದ ಜೀವನಶೈಲಿಯಿಂದ ಉಂಟಾಗಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು. ಅತಿಯಾದ ನೋವು ನಿವಾರಕ ಸೇವಿಸುತ್ತಿದ್ದಲ್ಲಿ ಅದನ್ನು ನಿಲ್ಲಿಸಬೇಕು. ಅತಿಯಾದ ಮದ್ಯಪಾನ, ಧೂಮಪಾನ ಕಡಿತಗೊಳಿಸಬೇಕು. ನಿಯಮಿತವಾಗಿ ಆಹಾರ ಸೇವಿಸಿ ಜಠರಕ್ಕೆ ಹಾನಿಯಾಗದಂತೆ ಜಾಗ್ರತೆ ವಹಿಸತಕ್ಕದ್ದು.

ಸಾಮಾನ್ಯವಾಗಿ ಅಸಿಡಿಟಿಗೆ ‘ಅಂಟಾಸಿಡ್’ ಎಂಬ ಔಷಧಿ ನೀಡಿ ಗುಣಪಡಿಸಲಾಗುತ್ತದೆ. ಇದರಲ್ಲಿ ಮೆಗ್ನಿಷಿಯಮ್ ಅಥವಾ ಕ್ಯಾಲಿಯಂ ಹೊಂದಿರುವ ಸಂಯುಕ್ತ ಲವಣಗಳು ಇರುತ್ತದೆ. ಇವುಗಳು ಹೊಟ್ಟೆಯೊಳಗೆ ಅತಿಯಾಗಿ ಸ್ರವಿಸಲ್ಪಡುವ ಆಮ್ಲಗಳ ಜೊತೆ ಸೇರಿ ಆಮ್ಲಗಳ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಜಠರದ ತೆಳುವಾದ ಪದರಗಳಿಗೆ ರಕ್ಷಣೆ ನೀಡುತ್ತದೆ ಮತ್ತು ನೋವು ನಿವಾರಣೆ ಮಾಡುತ್ತದೆ. ಹೊಟ್ಟೆ ಊರಿಯನ್ನು ಶಮನಗೊಳಿಸುತ್ತದೆ. ಸಾಮಾನ್ಯವಾಗಿ ಹಿಸ್ಟಾಮಿನ್ ಎಂಬ ರಾಸಾಯನಿಕಗಳ ಸ್ರವಿಸುವಿಕೆಯನ್ನು ತಡೆಯುವ ರಾನಿಟಿಡಿನ್, ಸಿಮೆಟಿಡಿನ್ ನಿಜಾಟಿಡಿನ್ ಅಥವಾ ಪ್ಯಾಮೊಟಿಡಿನ್ ಮುಂತಾದ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಇದನ್ನು ಹೆಚ್ಚಿನವರು ಸ್ವಯಂ ಔಷಧಿಗಾರಿಕೆ ಮಾಡುತ್ತಾರೆ. ಇದು ತಪ್ಪು, ವೈದ್ಯರ ಸಲಹೆ ಮೇರೆಗೆ ಮಾತ್ರ ಈ ಔಷಧಿ ತೆಗೆದುಕೊಳ್ಳತಕ್ಕದ್ದು.

ಇತ್ತೀಚಿನ ದಿನಗಳಲ್ಲಿ ಓಮೆಪ್ರೆಜೋಲ್ ಮತ್ತು ಲಪಾಲೊ ಪ್ರಜೋಲ್ ಮುಂತಾದ ಉತ್ತಮ ಔಷಧಿಗಳು ಲಭ್ಯವಿದೆ. ಇವೆಲ್ಲವನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳತಕ್ಕದ್ದು. ಯಾವುದೇ ಚಿಕಿತ್ಸೆಗೆ ಸ್ಪಂದಿಸದಿದ್ದಲ್ಲಿ, ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಸೂಚಿಸಿದಲ್ಲಿ ಶಸ್ತ್ರ ಚಿಕಿತ್ಸೆ ಮುಖಾಂತರ ತೂತಾದ ಜಠರದ ಭಾಗವನ್ನು ಸರಿಪಡಿಸಿ ಆಸಿಡಿಟಿಯನ್ನು ಶಾಶ್ವತ ನಿರ್ಮೂಲನ ಮಾಡಲಾಗುತ್ತದೆ. ಒಟ್ಟಿನಲ್ಲಿ ಆಸಿಡಿಟಿಯು ಒಂದು ಸಾಮಾನ್ಯ ಖಾಯಿಲೆಯಾಗಿದ್ದು, ರೋಗಿಯ ರೋಗದ ಚರಿತ್ರೆ ಮತ್ತು ರೋಗ ಲಕ್ಷಣಗಳಿಗನುಗುಣಾವಾಗಿ ರೋಗದ ಚಿಕಿತ್ಸೆಯನ್ನು ವೈದ್ಯರೇ ನಿರ್ಧರಿಸುತ್ತಾರೆ. ವೈದ್ಯರ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳು ಸೂಕ್ತವಾಗಿ ಅನುಸರಿಸಿದಲ್ಲಿ ಆಸಿಡಿಟಿ ಖಂಡಿತವಾಗಿಯೂ ಕಬ್ಬಿಣದ ಕಡಲೆಯಲ್ಲ ಎಂದು ಸಾಬೀತಾಗಿದೆ.

ತಡೆಗಟ್ಟುವುದು ಹೇಗೆ?
1. ಹೆಚ್ಚು ನಾರುಯುಕ್ತ ಆಹಾರಗಳನ್ನು ಸೇವಿಸಬೇಕು.
2. ಹೆಚ್ಚು ಹೆಚ್ಚು ಹಸಿ ತರಕಾರಿ, ತಾಜಾ ಹಣ್ಣುಗಳನ್ನು ಹಸಿ ತರಕಾರಿಗಳನ್ನು ಸೇವಿಸಬೇಕು.
3. ಮಸಾಲೆಯುಕ್ತ, ಕರಿದ ಎಣ್ಣೆ ಪದಾರ್ಥಗಳನ್ನು ವರ್ಜಿಸಬೇಕು.
4. ರಾಸಾಯನಿಕಯುಕ್ತ, ಬಣ್ಣಯುಕ್ತ, ಆಕರ್ಷಕ ದಿಢೀರ್ ಆಹಾರಗಳು ಮತ್ತು ಜಂಕ್ ಆಹಾರಗಳಿಗೆ ತಿಲಾಂಜಲಿ ಇಡಬೇಕು.
5. ಅತಿಯಾದ, ನೋವು ನಿವಾರಣ ಔಷಧಿಗಳನ್ನು ತೆಗೆದುಕೊಳ್ಳಬಾರದು, ಅಗತ್ಯವಿದ್ದಲ್ಲಿ ಮಾತ್ರ ವೈದ್ಯರ ಸಲಹೆಯಂತೆ ನೋವು ನಿವಾರಕ ಔಷಧಿ ಸೇವಿಸಬೇಕು. ಸ್ವಯಂ ವೈದ್ಯಗಾರಿಕೆ ಖಂಡಿತಾ ಸಹ್ಯವಲ್ಲ.
6. ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ನಿಯಮಿತವಾಗಿ, ಸ್ವಲ್ಪ ಸ್ವಲ್ಪ ತಿನ್ನಬೇಕು. ಹೊತ್ತು ಹೊತ್ತಿಗೆ ಸರಿಯಾದ ಸಮಯಕ್ಕೆ ಆಹಾರ ಸೇವಿಸಿ.
7. ಬೆಳಗಿನ ಉಪಾಹಾರವನ್ನು ತ್ಯಜಿಸಿ ಬೇಗನೆ ಊಟ ಮಾಡುವುದು ಮಧ್ಯಾಹ್ನದ ಊಟವನ್ನು ಸಂಜೆ ಮಾಡುವುದು ಸರಿಯಾದ ಕ್ರಮದಲ್ಲಿ ಹೊತ್ತು ಹೊತ್ತಿಗೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸಬೇಕು.
8. ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ಇಡಬೇಕು. ನಿಮ್ಮ ಜೀವನಶೈಲಿಗೆ ನಿಮ್ಮ ಆಹಾರ ಪದ್ಧತಿಯನ್ನು ಹೊಂದಿಸಬಾರದು. ಆರೋಗ್ಯ ಪೂರ್ಣ ಸಮತೋಲಿತ ಆಹಾರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತೀ ಅಗತ್ಯ.
9. ರಾತ್ರಿ ಹೊತ್ತು ಊಟವಾದ ಕೂಡಲೇ ಮಲಗುವ ಹವ್ಯಾಸ ಒಳ್ಳೆಯದಲ್ಲ. ಊಟದ ಬಳಿಕ ಒಂದೆರಡು ಗಂಟೆಗಳ ಅಂತರ ಇದ್ದರೆ ಉತ್ತಮ.
10. ಧೂಮಪಾನ, ಮಧ್ಯಪಾನ ಖಂಡಿತ ಸಹ್ಯವಲ್ಲ, ಅತಿಯಾದ ಖಾರವಾದ ಪದಾರ್ಥ ಕೂಡ ಜೀರ್ಣಂಗ ವ್ಯವಸ್ಥೆಗೆ ಮಾರಕವಾಗಬಹುದು.
11. ಮಾಂಸಹಾರವನ್ನು ಆದಷ್ಟು ಕಡಮೆ ಮಾಡಿ ಶಾಖಹಾರ ಆಸಿಡಿಟಿ ಸಮಸ್ಯೆ ಇದ್ದವರಿಗೆ ಬಹಳಷ್ಟು ಉತ್ತಮ.
12. ದೈನಂದಿನ ಬದುಕಲ್ಲಿ ಬಿರುಸು ನಡಿಗೆ, ಸ್ಕೆಕ್ಲಿಂಗ್, ವ್ಯಾಯಾಮ ದೈಹಿಕ ಪರಿಶ್ರಮಕ್ಕೂ ಹೆಚ್ಚು ಆಧ್ಯತೆ ನೀಡಬೇಕು. ವಿಲಾಸಿ ಜೀವನ, ಸೋಮಾರಿ ಜೀವನ ಶೈಲಿ, ದೈಹಿಕ ದುಡಿಮೆಯಿಲ್ಲದ ವಿಲಾಸಿ ಜೀವನ ಪದ್ಧತಿ ಖಂಡಿತವಾಗಿಯೂ ಆಸಿಡಿಟಿ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಯೋಗ, ಪ್ರಾಣಾಯಾಮದಂತಹ ಉತ್ತಮ ಹವ್ಯಾಸ ಬೆಳೆಸಿಕೊಂಡಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಖಂಡಿತ ಸಹಕಾರಿಯಾಗಬಹುದು.

ಕೊನೆಮಾತು:-
ಆಸಿಡಿಟಿ ಎನ್ನುವುದು ನಮ್ಮ ಜೀವನಶೈಲಿಗೆ ಸಂಬಂಧಪಟ್ಟ ಒಂದು ಸಂರ್ಕೀಣ ಖಾಯಿಲೆಯಾಗಿದ್ದು ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಅತಿಯಾದ ಕೆಫೇನ್‍ಯುಕ್ತ ಪೇಯಗಳು, ಇಂಗಾಯುಕ್ತ ಪೇಯಗಳು ರಾಸಾಯನಿಕಯುಕ್ತ ಪೇಯಗಳನ್ನು ತ್ಯಜಿಸಬೇಕು, ಸಿಟ್ರಲ್ (ಆಮ್ಲಿಯಾ) ಗುಣವುಳ್ಳ ಟೊಮೆಟೊ, ಕಿತ್ತಳೆ, ದ್ರಾಕ್ಷೆ, ಅನನಾಸು ಇತ್ಯಾದಿ ಹಣ್ಣುಗಳನ್ನು ತ್ಯಜಿಸತಕ್ಕದ್ದು. ಜೀವನಶೈಲಿ ಮಾರ್ಪಾಡು, ಆಹಾರ ಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆ ಮತ್ತು ನಿಯಮಿತ ಔಷಧಿಗಳಿಂದ ಈ ಆಸಿಡಿಟಿ ಎಂಬ ಪೆಡಂಭೂತವನ್ನು ಖಂಡಿತವಾಗಿಯೂ ನಿಯಂತ್ರಿಸಬಹುದು. ನಿರಂತರವಾದ ದೈಹಿಕ ಪರಿಶ್ರಮ, ಒತ್ತಡ ರಹಿತ ಜೀವನ ಶೈಲಿ ಮತ್ತು ಯೋಗ ಪ್ರಾಣಾಯಾಮ ಮುಂತಾದ ಸಾಂಪ್ರಾದಾಯಿಕ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ, ಸಾಕಷ್ಟು ಮೂಲಹಾರವನ್ನು ಸೇವಿಸಿ ಸಿದ್ಧ ಆಹಾರವನ್ನು ತ್ಯಜಿಸಿದ್ದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಪೂರಕವಾಗಿ ಆಹಾರವನ್ನು ಸೇವಿಸಿದ್ದಲ್ಲಿ ಖಂಡಿತವಾಗಿಯೂ ಆಸಿಡಿಟಿಯೂ ಖಾಯಿಲೆ ಬರಲಿಕ್ಕಿಲ್ಲ. ಹಾಗಾದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಬಹುದು. ಅದರಲ್ಲಿಯೇ ಜನರ ಮತ್ತು ಜನಾಂಗದ ಹಿತ ಅಡಗಿದೆ.

-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ: 09845135787

 

Related posts

24ರ ಹೊಸ್ತಿಲಿನಲ್ಲಿ ಸುರಕ್ಷಾದಂತ ಚಿಕಿತ್ಸಾಲಯ: ದಂತಚಿಕಿತ್ಸೆಗೊಂದು ಸುರಕ್ಷಿತ ಹೆಸರು

Upayuktha

ಕೋವಿಡ್-19 ಮತ್ತು ಹೈಡ್ರೋಕ್ಸಿಕ್ಲೋರೋಕ್ವಿನ್

Upayuktha

ಮಕ್ಕಳು ಹೆಬ್ಬೆರಳು ಚೀಪುವುದು ಯಾಕೆ? ಬಿಡಿಸುವುದು ಹೇಗೆ..?

Upayuktha

Leave a Comment