ಬೆಂಗಳೂರು: ಇಂದು ಅದ್ದೂರಿ ಕಾರ್ಯಕ್ರಮವಾದ ರಾಮ ಮಂದಿರ ಭೂಮಿಪೂಜೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಯಾವುದೇ ಉದ್ರೇಕಕಾರಿ ಹಾಗೂ ಕೋಮು ಗಲಭೆ ಪ್ರಚೋದನಕಾರಿ ಮಾಡುವ ಪೋಸ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವರು ಸೂಚನೆ ನೀಡಿದ್ದಾರೆ.
ಫೇಸ್ಬುಕ್, ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಮಾಹಿತಿ ಪ್ರಕಟಿಸಿದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಸೈಬರ್ ತಂಡ ನಿರಂತರವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಗಮನ ಹರಿಸಲಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೂಕ್ಷ್ಮ ಮಾಹಿತಿಗಳು ಹಾಗೂ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹರಿಯಬಿಡಲಾಗುತ್ತಿದೆ.
ಆದ್ದರಿಂದ ಕಿಡಿಗೇಡಿಗಳ ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಕಾರಣವಾಗುತ್ತದೆ. ಈ ಉದ್ದೇಶ ದಿಂದ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ಗಮನ ಇಟ್ಟಿದೆ.
ಯಾವುದೇ ಪೋಸ್ಟ್ಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಅದರಲ್ಲಿ ಆಕ್ಷೇಪಾರ್ಹ ಅಂಶಗಳು ಇಲ್ಲ ಎಂಬುವುದನ್ನು ದೃಢಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಪೊಲೀಸ್ ಇಲಾಖೆ, ಸರ್ಕಾರದ ಸೂಚನೆಗಳನ್ನು ಮೀರಿ ಆಕ್ಷೇಪಾರ್ಹ ಮಾಹಿತಿಗಳನ್ನು ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ಗಳನ್ನು ಹಂಚಿಕೊಂಡರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.