ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಸೆರೆಯಾದ ನಟಿ ರಾಗಿಣಿ ದ್ವಿವೇದಿ ಅವರ ಕನಸಿನ ಮನೆಯನ್ನು ಅವರ ತಂದೆಯೇ ಮಾರಾಟಕ್ಕಿಟ್ಟಿದ್ದಾರೆ.
ಖಾಸಗಿ ವೆಬ್ಸೈಟ್ನಲ್ಲಿ ಮನೆಯ ಮಾರಾಟದ ವಿವರಗಳನ್ನು ರಾಗಿಣಿಯ ತಂದೆ ರಾಕೇಶ್ ದ್ವಿವೇದಿ ಪೋಸ್ಟ್ ಮಾಡಿದ್ದಾರೆ.
ರಾಗಿಣಿ ಮನೆ ಯಲಹಂಕದ ಜ್ಯುಡಿಶಿಯಲ್ ಲೇಔಟ್ ನಲ್ಲಿದೆ. ರಾಗಿಣಿ ಈ ಫ್ಲಾಟ್ ಅನ್ನು ಖರೀದಿಸಿದ ನಂತರ ಲಕ್ಷಾಂತರ ರೂ ಖರ್ಚು ಮಾಡಿ ತಮ್ಮಿಷ್ಟದಂತೆ ಇಂಟೀರಿಯರ್ ಡೆಕೋರೇಶನ್ ಮಾಡಿಸಿಕೊಂಡಿದ್ದರು.
ಅನನ್ಯ ಅಪಾರ್ಟ್ಮೆಂಟ್ನ ಎರಡನೇ ಮಹಡಿಯಲ್ಲಿರುವ ಮೂರು ಬೆಡ್ ರೂಮ್ಗಳ 2061 ಚದರಡಿಯ ವಿಶಾಲ ಮನೆಯನ್ನು ಅವರ ತಂದೆ ರಾಕೇಶ್ ದ್ವಿವೇದಿ 2 ಕೋಟಿ ರೂಪಾಯಿಗೆ ಮಾರಾಟಕ್ಕಿಟ್ಟಿದ್ದಾರೆ. ಈ ಮನೆಯ ಮಾಲೀಕತ್ವ ರಾಕೇಶ್ ದ್ವಿವೇದಿ ಹೆಸರಿನಲ್ಲೇ ಇದೆ. ಇವರು ನಿವೃತ್ತ ಸೇನಾಧಿಕಾರಿಯಾಗಿದ್ದಾರೆ.
ಖಾಸಗಿ ವೆಬ್ಸೈಟ್ನಲ್ಲಿ (NoBroker.In) ಮನೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ರಾಗಿಣಿ ದ್ವಿವೇದಿ ಅವರು ಡ್ರಗ್ಸ್ ದಂಧೆ ಮೂಲಕ ಅಕ್ರಮವಾಗಿ ಈ ಮನೆಯನ್ನು ಕೊಂಡಿದ್ದರೆಂದು ಆರೋಪಿಸಲಾಗಿದೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಸದ್ದಿಲ್ಲದೆ ಮನೆ ಮಾರಾಟ ಮಾಡಿ ಕೈತೊಳೆದುಕೊಳ್ಳಲು ಅವರ ಕುಟುಂಬದವರು ಯೋಜನೆ ಹಾಕಿರಬಹುದು ಎಂಬ ಮಾತು ಕೂಡ ಸ್ಯಾಂಡಲ್ವುಡ್ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ.
ಬಂಧನಕ್ಕೊಳಗಾಗಿರುವ ರಾಗಿಣಿಯವರು 14 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.