ಅರಳಿ ಮರದ ಕೆಳಗೆ ಒಬ್ಬ
ಆದಿ ಕಾಲದಲ್ಲಿ ಮುನಿಯು
ಇಹದ ಪರಿವೆ ಇರದಂತೆಯೆ
ಈಶ ಧ್ಯಾನ ಮಾಡುತಿದ್ದ
ಉಸಿರು ಹಿಡಿತದಲ್ಲಿ ಇರಿಸಿ
ಊಟ ನೀರ ಗೊಡವೆ ಇರದೆ
ಋಷಿಯ ತೆರದಿ ತಪವಗೈದು
ಎನಿತು ಚಿಂತೆ ಇರದಂತೆಯೆ.
ಏನಿದೇನು ಸಾಧನೆಯೊ
ಐಕ್ಯವಾಗಿ ದೇವನೊಳಗೆ
ಒಲವು ತೊರೆದು ಜಗದ ಒಳಗೆ
ಓಲದಂತೆ ಕುಳಿತಿಹನಿವ.
ಔನ್ನತ್ಯಕೆ ಇದುವೆ ದಾರಿ
ಅಂದುಕೊಂಡು ಇರುವ ಮುನಿಗೆ
ಅಹಂಕಾರ ತೊರೆದವನಿಗೆ
ಅಃ ಅದೇನು ತಿರುವು ಬಂತು.
ಕರಿಯ ಮಕರಿ ಹಿಡಿಯುವಂತೆ
ಖಳನು ಒಬ್ಬ ಕಾಯುತಿದ್ದ
ಗಮನ ಸೆಳೆದು ಮುನಿಯ ಧ್ಯಾನ
ಘಳಿಗೆಯಷ್ಟು ತಡೆಯುವಂತೆ
ಙ ಙ್ರ ಙ್ರೋ ಎಂಬ ಶಬ್ದ ಮಾಡಿ.
ಚಲನೆ ಇರದ ಮುನಿಯ ಕಂಡು
ಛಲದಿಂದಲಿ ಆ ಖೂಳನು
ಜಗಳಕೆಂದೆ ಹೊರಟನಾಗ
ಝಳಪಿಸುತ್ತ ಕರಗಳನ್ನು
ಞಮೋ ಞಮೋ ಎಂದಣಕಿಸಿ.
ಟಗರಿನಂತೆ ಎರಗಿದಾಗ
ಠಳಾಯಿಸದ ಮುನಿಯು ಆಗ
ಡಕಾಯಿತನ ಆಕ್ರಮಕ್ಕೆ
ಢವಗುಟ್ಟದೆ ತನ್ನ ಒಳಗ
ಣ ಕಣ್ಣು ತೆರೆದು ನೋಡಿದನು.
ತಕ್ಷಣದಿ ಆ ಖೂಳನು
ಥರಥರದಲಿ ನಡುಗುತ್ತಲೆ
ದಹಿಸಿ ಹೋದ ಕ್ಷಣ ಮಾತ್ರದಿ
ಧರ್ಮ ನಿಂದೆ ಸಾಧು ಹಿಂಸೆ
ನರಕ ದಾರಿ ತೋರಿಸವುದು.
ಪರರ ಪೀಡೆ ಮಾಡಿದವಗೆ
ಫಲವು ಕೆಟ್ಟದಿಹುದು ನೋಡು
ಬಲವು ಕಾಯಕಿರುವದೆಂದು
ಭಕ್ತರನ್ನು ಕೆಣಕಿದಾಗ
ಮರಣ ಕೂಡ ಬರಲುಬಹುದು.
ಯಜ್ಞ ಯಾಗ ಮಾಡಿಕೊಂಡು
ರಮಾರಮಣನೊಲಿಸಿಕೊಂಡು
ಲವಲೇಶವು ಕಪಟವಿರದ
ವಯೋವೃದ್ಧ ಜ್ಞಾನವೃದ್ಧ
ಶರಣರನ್ನು ಯೋಗಿಗಳನು
ಷಡ್ಗುಣದಲಿ ಆರಾಧಿಸಿ
ಸತತ ಗೌರವಿಸಲುಬೇಕು
ಹರೆಯ ಕಳೆದು ಮುದಿತನ ಬಹ
ಳ ವೇಗದಲಿ ಬರುತಲಿಹುದು.
ಕ್ಷರನು ಆದ ಪರಮೇಶನ
ಜ್ಞಪ್ತಿ ಸದಾ ಮನಕೆ ಬೇಕು
ಅಕ್ಷರಜ್ಞ ಹರಸುತಿರಬೇಕು.
*********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ