ದೇಶ-ವಿದೇಶ ಪ್ರಮುಖ

ನಾವು ಕಠಿಣ ಸನ್ನಿವೇಶದಲ್ಲಿದ್ದೇವೆ: ಸಿಎಎ ವಿರುದ್ಧ ಪ್ರತಿಭಟನೆಗೆ ಬಗ್ಗೆ ಸಿಜೆಐ

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ (ಪಿಟಿಐ ಚಿತ್ರ, ಕೃಪೆ: ಇಂಡಿಯಾ ಟುಡೇ)

ಹೊಸದಿಲ್ಲಿ:

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವಂತೆ ಯಾರೂ ವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿಎಎ ಸಾಂವಿಧಾನಿಕ ಮತ್ತು ಅದನ್ನು ಎಲ್ಲ ರಾಜ್ಯಗಳೂ ಕಡ್ಡಾಯವಾಗಿ ಜಾರಿಗೊಳಿಸುವಂತೆ ಆದೇಶ ನೀಡಬೇಕೆಂದು ವಕೀಲರಾದ ವಿನೀತ್ ಧಂಡಾ ಕೋರಿದಾಗ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ, ನ್ಯಾಯಮೂರ್ತಿ ಬಿ.ಆರ್ ಗವಾಯ್‌ ಮತ್ತು ಸೂರ್ಯಕಾಂತ್ ಅವರ ಪೀಠ, ‘ಪ್ರಸ್ತುತ ಬಹಳಷ್ಟು ಹಿಂಸಾಚಾರಗಳು ನಡೆಯುತ್ತಿವೆ. ನಿಮ್ಮ ಕೋರಿಕೆಯ ಮೂಲಕ ನೀವು ಮತ್ತಷ್ಟು ಸಮಸ್ಯೆ ಹುಟ್ಟುಹಾಕುವಂತೆ ಕಾಣಿಸುತ್ತಿದ್ದೀರಿ. ಪ್ರಸ್ತುತ ನಾವು ಬಹಳಷ್ಟು ಕಠಿಣ ಪರಿಸ್ಥಿತಿಯನ್ನು ಹಾದುಹೋಗುತ್ತಿದ್ದೇವೆ. ಶಾಂತಿ ಸ್ಥಾಪಿಸಲು ಪೂರಕವಾಗುವ ಸಲಹೆಗಳನ್ನು ನೀಡಿ’ ಎಂದು ಸೂಚಿಸಿದರು.

‘ನಿಮ್ಮ ಕೋರಿಕೆ ವಿಶಿಷ್ಟವಾಗಿದೆ. ಒಂದು ಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸಿ ಎಂಬ ಕೋರಿಕೆಯನ್ನು ಇದೇ ಮೊದಲ ಬಾರಿಗೆ ನಾವು ನೋಡುತ್ತಿದ್ದೇವೆ.. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ ಒಂದು ಕಾಯ್ದೆ ಸಾಂವಿಧಾನಿಕವೇ ಅಥವಾ ಅಸಾಂವಿಧಾನಿಕವೇ ಎಂದು ಪರಿಶೀಲಿಸುವಂತೆ ಕೋರಿಕೆಗಳು ಬರುತ್ತವೆ ಎಂದು ಅವರು ಹೇಳಿದರು.

ಬಳಿಕ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಗೊಳಿಸಲಾಯಿತು. ಇತರ 60 ಅರ್ಜಿಗಳ ಜತೆಗೆ ಇದನ್ನೂ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿತು.

ಪೌರತ್ವ ಕಾಯ್ದೆಯಲ್ಲಿನ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಕೋರಿದ ಹಲವು ಅರ್ಜಿಗಳನ್ನು ಡಿಸೆಂಬರ್ 18ರಂದು ಸುಪ್ರೀಂ ಕೋರ್ಟ್ ಸ್ವೀಕರಿಸಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಹಿಂದೂಗಳು, ಕ್ರೈಸ್ತರು, ಸಿಖ್‌, ಬೌದ್ಧರು, ಪಾರ್ಸಿಗಳು ಮತ್ತು ಜೈನರಿಗೆ ತ್ವರಿತ ಗತಿಯಲ್ಲಿ ಭಾರತದ ಪೌರತ್ವ ಪಡೆಯಲು ಸಾಧ್ಯವಾಗುವಂತೆ ಕಾಯ್ದೆಯನ್ನು ರೂಪಿಸಲಾಗಿತ್ತು.

ಕಾಯ್ದೆಯಲ್ಲಿ ಮುಸ್ಲಿಮರನ್ನು ಸೇರಿಸದೆ ಇರುವುದರಿಂದ ಅದು ಜಾತ್ಯತೀತ ವಿರೋಧಿ ಮತ್ತು ಸಮಾನತೆಯ ಹಕ್ಕಿನ ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಆಲಿಗಢ ಮುಸ್ಲಿಂ ಯುನಿವರ್ಸಿಟಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರತಿಭಟನೆಕಾರರ ಮೇಲೆ ಪೊಲೀಸರ ದಮನ ಕಾರ್ಯಾಚರಣೆ ಪ್ರಶ್ನಿಸಿದ ಅರ್ಜಿಗಳನ್ನುಡಿಸೆಂಬರ್ 16ರಂದು ಕೋರ್ಟ್ ವಜಾಗೊಳಿಸಿತ್ತು.

‘ಪೊಲೀಸರು ಅಥವಾ ವಿದ್ಯಾರ್ಥಿಗಳಲ್ಲಿ ಯಾರು ಹೊಣೆಗಾರರು ಎಂದು ನಾವು ಹೇಳುವುದಿಲ್ಲ. ಗಲಭೆಗಳನ್ನು ಅಂತ್ಯಗೊಳಿಸಬೇಕು ಎಂದು ಮಾತ್ರ ಹೇಳುತ್ತೇವೆ. ಗಲಭೆಗಳು ಹೇಗೆ ಆರಂಭವಾದವು ಮತ್ತು ಪ್ರತಿಭಟನೆಕಾರರ ಹಕ್ಕುಗಳು ಏನು ಎಂಬುದನ್ನು ನಿರ್ಧರಿಸುವ ಜ್ಞಾನ, ಅನುಭವ ನ್ಯಾಯಾಧೀಶರಿಗಿದೆ. ಇಂತಹ ವಾತಾವರಣದಲ್ಲಿ ನಾವು ಏನನ್ನೂ ನಿರ್ಧರಿಸಲಾರೆವು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಶಾಂತಚಿತ್ತದಿಂದ ನಾವು ಎಲ್ಲವನ್ನೂ ಪರಿಶೀಲಿಸುತ್ತೇವೆ. ಕೋರ್ಟ್ ಮಧ್ಯಪ್ರವೇಶಿಸಬೇಕಾದರೆ ಎಲ್ಲ ಹಿಂಸಾಚಾರಗಳೂ ಕೊನೆಗೊಳ್ಳಬೇಕು’ ಎಂದು ಸಿಜೆಐ ಎಸ್‌ಎ ಬೊಬ್ಡೆ ಸ್ಪಷ್ಟಪಡಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಪ್ರಿಲ್ 20ರ ವರೆಗೆ ಮುಂದೂಡಿಕೆ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

Upayuktha

ಭಾರತೀಯ ಅಧಿಕಾರಿಗಳ ನಾಪತ್ತೆ ಪ್ರಕರಣ: ಪಾಕಿ‌ಗೆ ವಿದೇಶಾಂಗ ಸಚಿವಾಲಯ ತೀಕ್ಷ್ಣ ಎಚ್ಚರಿಕೆ

Upayuktha

ಬಿಗಿ ಭದ್ರತೆ ನಡುವೆ ಕಾಶ್ಮೀರ ಕಣಿವೆಯಲ್ಲಿ ಶಾಂತಿಯುತ ಬಕ್ರೀದ್

Upayuktha

Leave a Comment