ದೇಶ-ವಿದೇಶ ಪ್ರಮುಖ

ಶಬರಿಮಲೆ ತೀರ್ಪು ನಾಳೆ: ಕೇರಳದಲ್ಲಿ ಕುತೂಹಲಭರಿತ ಆತಂಕ

ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲ (ಚಿತ್ರ ಕೃಪೆ: ಡಿಎನ್‌ಎ ಇಂಡಿಯಾ)

ತಿರುವನಂತಪುರಂ:

ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಿದ ತೀರ್ಪಿನ ಮರುಪರಿಶೀಲನೆ ತೀರ್ಪು ಗುರುವಾರ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ತೀವ್ರ ಕುತೂಹಲ ಮೂಡಿದೆ.

ರಾಜಕೀಯ ಪಕ್ಷಗಳು, ಬಲಪಂಥೀಯ ಸಂಘಟನೆಗಳು, ಸ್ವಾಮಿ ಅಯ್ಯಪ್ಪನ ಭಕ್ತರಲ್ಲಿ ಕುತೂಹಲಭರಿತ ಆಂಕ ಮನೆಮಾಡಿದೆ.

ಕಳೆದ ವರ್ಷ ಸುಪ್ರೀಂ ಕೋರ್ಟಿನ ಆದೇಶವನ್ನು ಜಾರಿಗೊಳಿಸುವ ನೆಪದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಕೈಗೊಂಡ ತರಾತುರಿಯ ಕ್ರಮಗಳು ಹಾಗೂ ಪ್ರತಿಭಟನಾಕಾರರ ವಿರುದ್ಧ ಅನುಸರಿಸಿದ ದಮನಕಾರಿ ನೀತಿಗಳು ಭಾರೀ ಕೋಲಾಹಲ ಸೃಷ್ಟಿಸಿದ್ದವು.

ಶಬರಿಮಲೆ ದೇಗುಲದಲ್ಲಿ ಈ ಮಾಸದ ಪೂಜಾ ಕಾರ್ಯಗಳು ಆರಂಭವಾಗುವುದಕ್ಕೆ ಇನ್ನು ಮೂರೇ ದಿನಗಳು ಉಳಿದಿದ್ದು, ಈ ಹಂತದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುತ್ತಿದೆ. ಹೀಗಾಗಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ ಸರಕಾರಕ್ಕೂ ಇದು ಅತ್ಯಂತ ಮಹತ್ವದ್ದಾಗಿದೆ.

ಪಶ್ಚಿಮ ಘಟ್ಟದ ಶ್ರೇಣಿಗಳ ನಡುವೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಹಚ್ಚ ಹಸುರಿನ ರಮಣೀಯ ಪರಿಸರದಲ್ಲಿ ನೆಲೆಸಿರುವ ಸ್ವಾಮಿ ಅಯ್ಯಪ್ಪನ ದೇಗುಲದ ಬಾಗಿಲು ಎರಡು ತಿಂಗಳ ಅವಧಿಯ ಮಕರವಿಳಕ್ಕು ಮಂಡಲ ಉತ್ಸವಕ್ಕಾಗಿ ನವೆಂಬರ್ 16ರಂದು ಸಂಜೆ ತೆರೆಯಲಿದೆ.

ಮಂಡಲ ಉತ್ಸವದ ಸಂದರ್ಭದಲ್ಲಿ ದೇಶದ ಎಲ್ಲೆಡೆಯಿಂದ ಕೋಟ್ಯಂತರ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಹೀಗಾಗಿ ಸುಗಮ ಯಾತ್ರೆಗಾಗಿ ಎಲ್ಲ ಸರಕಾರಿ ಇಲಾಖೆಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿದ್ಧತೆಗಳ ಪರಾಮರ್ಶೆ ನಡೆಸಿದ್ದಾರೆ.

ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಲ್ಲಿ ಮತ್ತು ಸುತ್ತಲಿನ ಪರಿಸರದಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಕೇರಳ ಡಿಜಿಪಿ ಲೋಕನಾಥ್ ಬೆಹರಾ ತಿಳಿಸಿದರು.

ಮರುಪರಿಶೀಲನಾ ಅರ್ಜಿಗಳ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಭಕ್ತರ ಭಾವನೆಗಳಿಗೆ ಅನುಗುಣವಾಗಿ ಇರಲಿದೆ ಎಂದು ಕೇರಳ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ. ಯಾವುದೇ ತೀರ್ಪು ಬಂದರೂ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ನಿರ್ವಹಣೆ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಮನವಿ ಮಾಡಿದೆ.

2018ರ ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ, ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಅವಕಾಶ ನೀಡಿತ್ತು. ಆದರೆ ಇದು ಶತಮಾನಗಳಿಂದ ಅನುಸರಿಸಿಕೊಂಡು ಬಂದ ಕ್ಷೇತ್ರದ ಸಂಪ್ರದಾಯ ಮತ್ತು ಧಾರ್ಮಿಕ ಕಟ್ಟಳೆಗಳಿಗೆ ವಿರುದ್ಧವಾಗಿದೆ ಎಂದು ಶಬರಿಮಲೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಪಕ್ಷ ಕಾಂಗ್ರೆಸ್ ಮತ್ತು ಕೇರಳದ ಪ್ರಭಾವಿ ಸಂಘಟನೆ ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್‌), ಸುಪ್ರೀಂ ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವ ಎಡರಂಗ ಸರಕಾರ ನೀತಿಯನ್ನು ಬಲವಾಗಿ ವಿರೋಧಿಸಿದ್ದವು.

ತೀರ್ಪು ವಿರುದ್ಧವಾಗಿದ್ದರೆ ಸಾಂವಿಧಾನಿಕ ಪರಿಹಾರ:
ಸುಪ್ರೀಂ ಕೋರ್ಟಿನ ತೀರ್ಪು ಒಂದೊಮ್ಮೆ ಭಕ್ತರ ಭಾವನೆಗಳಿಗೆ ವಿರುದ್ಧವಾಗಿದ್ದಲ್ಲಿ ಸಾಂವಿಧಾನಿಕಕ್ರಮಗಳ ಮೂಲಕ ಪರಿಹಾರ ಕಂಡು ಹಿಡಿಯುವಂತೆ ತಮ್ಮ ಪಕ್ಷ ಒತ್ತಾಯಿಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಟಿ ರಮೇಶ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಕೋಟ್ಯಂತರ ಭಕ್ತರ ಭಾವನೆಗಳನ್ನು ಗೌರವಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಶಬರಿಮಲೆ ಪ್ರಕರಣಕ್ಕೂ ಅನ್ವಯವಾಗಲಿದೆ ಎಂದು ಅವರು ಹೇಳಿದರು.

Related posts

ಪ್ರಧಾನಿ ಮೋದಿ ನಾಯಕತ್ವ ಮೆಚ್ಚಿದ ಮುಸ್ಲಿಮರು ಬಿಜೆಪಿ ಸೇರುತ್ತಿದ್ದಾರೆ: ಬಂಡಾರು ದತ್ತಾತ್ರೇಯ

Upayuktha

ಭಾರತದ ಹೊಸ ಸಿಎಜಿಯಾಗಿ ಜಿ ಸಿ ಮುರ್ಮು ನಿಯುಕ್ತಿ

Upayuktha News Network

ಸಿಎಎ ಪ್ರತಿಭಟನೆ ಹಿನ್ನೆಲೆ: ಡಿ.20ರ ಮಧ್ಯರಾತ್ರಿ ವರೆಗೆ ಮಂಗಳೂರಿನಲ್ಲಿ ನಿಷೇಧಾಜ್ಞೆ

Upayuktha