ಕಿರುತೆರೆ- ಟಿವಿ ಸಾಧಕರಿಗೆ ನಮನ

ಇಂದಿನ ಐಕಾನ್- ಮಾತಿನ ಮಂಟಪದ ಮಹಾರಾಣಿ ಅಪರ್ಣಾ ವಸ್ತಾರೆ

ನಿರೂಪಣೆ ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಪಡೆಯಲು ಸಾಧ್ಯ ಎಂದು ಕನ್ನಡ ನಾಡಿನಲ್ಲಿ ತೋರಿಸಿಕೊಟ್ಟವರು ಅಪರ್ಣಾ. ಅಚ್ಚ ಕನ್ನಡದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತ, ಟಿವಿ ಲೈವ್ ಶೋಗಳನ್ನು ಮಾಡುತ್ತಾ, ಸ್ಟೇಜ್ ಶೋಗಳನ್ನು ಅಷ್ಟೇ ಸುಂದರವಾಗಿ ನಿರೂಪಣೆ ಮಾಡುವ ಆಕೆಯ ಶೈಲಿಗೆ ಲಕ್ಷಾಂತರ ಜನರು ಫಿದಾ ಆಗಿದ್ದಾರೆ. ಆಕೆಯ ಜೊತೆ ವೇದಿಕೆಗಳಲ್ಲಿ ನಿರೂಪಣೆ ಮಾಡುವ ಭಾಗ್ಯ ನನಗೆ ಹಲವು ಬಾರಿ ದೊರೆತಿತ್ತು. ಆಗೆಲ್ಲ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಕನ್ನಡ ಸರಸ್ವತಿ ಆಕೆಯ ನಾಲಿಗೆಯ ಮೇಲೆ ಬಿಡಾರ ಹೂಡಿ ಬಿಟ್ಟಿದ್ದಾಳೆ ಎಂದು ನನ್ನ ಅನಿಸಿಕೆ!

Advertisement
Advertisement

ಅಪರ್ಣಾ ಅವರ ತಂದೆ ಕೆ. ಎಸ್. ನಾರಾಯಣ ಸ್ವಾಮಿ. ಅವರು ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕದ ಸಂಪಾದಕರಾಗಿ ದುಡಿದವರು. ಅಪ್ಪನಿಂದ ಮಗಳಿಗೆ ಓದುವ ಹವ್ಯಾಸ ಆರಂಭ ಆಯಿತು. ಅವರ ಮನೆಯೇ ಒಂದು ಲೈಬ್ರರಿ ಆಗಿತ್ತು ಎಂದು ಅಪರ್ಣಾ ಹೇಳುತ್ತಾರೆ. ಮಗಳು ಹೊಸ ಫ್ರಾಕ್ ಬೇಕು ಅಪ್ಪಾ ಎಂದು ಹಠ ಹಿಡಿದು ಕುಳಿತಾಗ
“ಬೇಡ ಮಗಳೆ, ಪೆಟ್ಟಿಗೆಯಲ್ಲಿ ಬೇಕಾದಷ್ಟು ಇದೆಯಲ್ಲ. ಹೊಸ ಪುಸ್ತಕ ಬೇಕಾದರೆ ಹೇಳು. ತಂದು ಕೊಡುವೆ” ಎನ್ನುತ್ತಿದ್ದರು ಅಪ್ಪ!

ಅಮ್ಮನಿಂದ ಧಾರೆಯಾಗಿ ಹರಿದು ಬಂದದ್ದು ಸಹನೆ ಮತ್ತು ಸ್ಥಿತಪ್ರಜ್ಞತೆ.

ಕಾಲೇಜು ದಿನಗಳಲ್ಲಿ ಸಾಲು ಸಾಲು ಭಾಷಣಗಳನ್ನು ಮಾಡಿ ಬಹುಮಾನ ಗೆದ್ದದ್ದು, ನವಿರಾಗಿ ನಿರೂಪಣೆ ಮಾಡಿದ್ದು ಎಲ್ಲವೂ ಆಕೆಯ ಆರಂಭದ ಹೆಜ್ಜೆಗಳು.

ಮುಂದೆ 1984ರ ಹೊತ್ತಿಗೆ ಪುಟ್ಟಣ್ಣ ಕಣಗಾಲರ ಕೊನೆಯ ಚಿತ್ರ ‘ಮಸಣದ ಹೂವು’ ಸಿನೆಮಾದಲ್ಲಿ ನೆನಪಲ್ಲಿ ಉಳಿಯುವ ಪಾತ್ರ ದೊರೆತಿತ್ತು. ತುಂಬಾ ಸವಾಲಿನ ಪಾತ್ರ ಅದು. ಆಕೆಯ ಅಭಿನಯವೂ ಸೊಗಸಾಗಿತ್ತು. ಮುಂದೆ ಹತ್ತರಷ್ಟು ಕನ್ನಡದ ಸಿನೆಮಾದಲ್ಲಿ ಅಭಿನಯ ಮಾಡಿದ್ದರು ಅಪರ್ಣಾ. ಒಂದು ದಿನ ಅವರಿಗೆ ಗೊತ್ತಾಯಿತು ಏನೆಂದರೆ ಇದು ನನ್ನ ಕ್ಷೇತ್ರ ಅಲ್ಲ. ನಾನು ಬೇರೇನೋ ಮಾಡಲಿಕ್ಕಿದೆ ಎಂದು!

ಮುಂದೆ 10 ವರ್ಷ ದೂರದರ್ಶನದ ನಿರೂಪಕಿ ಆಗಿ ಆಕೆ ಮಿಂಚಿದರು. ಒಂದೆಡೆ ನೇರ ಪ್ರಸಾರದ ಸರಣಿ ಕಾರ್ಯಕ್ರಮಗಳು, ಮತ್ತೊಂದೆಡೆ ವೇದಿಕೆಯ ನಿರೂಪಣೆ ಕಾರ್ಯಕ್ರಮಗಳು, ಇನ್ನೊಂದೆಡೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮೊದಲಾದ ವಿಐಪಿಗಳ ಕಾರ್ಯಕ್ರಮಗಳು, ಇನ್ನೂ ಕಠಿಣವಾದ ಕಾರ್ಪೊರೇಟ್ ಸಂಸ್ಥೆಗಳ ಕಾರ್ಯಕ್ರಮಗಳು, ಅದರೊಂದಿಗೆ ಹತ್ತು ಹಲವು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಅವುಗಳ ಜೊತೆಗೆ ಚೌತಿ, ಅಷ್ಟಮಿ, ದೀಪಾವಳಿ, ನವರಾತ್ರಿ, ರಾಜ್ಯೋತ್ಸವ ಮೊದಲಾದ ಸಾಂಸ್ಕೃತಿಕ ಶ್ರೀಮಂತಿಕೆಯ ಕಾರ್ಯಕ್ರಮಗಳು… ಹೀಗೆ ಎಲ್ಲ ಕಡೆ ಅಪರ್ಣಾ ಗೆಲ್ಲುತ್ತಾ ಹೋದರು.

ಅಕ್ಷರಕ್ಕೆ ಅಕ್ಷರ ತಾಗದ ಹಾಗೆ ಆಕೆಯ ನಿರರ್ಗಳ ಮಾತು, ಸ್ಪಷ್ಟವಾದ ಕನ್ನಡದ ನುಡಿ, ಸಾಹಿತ್ಯದ ಕಂಪು ಪಲ್ಲವಿಸುವ ಭಾಷೆ, ಭಾವನೆಗಳನ್ನು ಸಮರ್ಥವಾಗಿ ಹೊರಚೆಲ್ಲುವ ಜೆಂದನಿ, ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸುವ ಸ್ವರ ಭಾರ, ಸೂಕ್ಷ್ಮವಾದ ಮುಖದ ಭಾವನೆಗಳು, ಮುಗ್ಧವಾದ ನಗು, ಮಿತವಾಗಿ ಬಳಸುವ ನುಡಿಗಟ್ಟುಗಳು, ಪೋಣಿಸುವ ಪ್ರಾಸಗಳು, ಮಧ್ಯ ಮಧ್ಯ ಚಿಮುಕಿಸುವ ನಗು, ಕಾರ್ಯಕ್ರಮದ ಘನತೆಯನ್ನು ಎತ್ತಿ ಹಿಡಿಯುವ ಡ್ರೆಸ್ ಕೋಡ್ ಇವುಗಳೆಲ್ಲ ಇಂದು ಆಕೆಯನ್ನು ನಿರೂಪಣಾ ಕ್ಷೇತ್ರದ ಐಕಾನ್ ಆಗಿ ಮಾಡಿವೆ. ವಚನ ಸಾಹಿತ್ಯ, ಸುಭಾಷಿತ, ಶ್ಲೋಕಗಳು, ಭಾವಗೀತೆ, ದಾಸರ ಪದಗಳು ಇವೆಲ್ಲವನ್ನೂ ಅವರು ಚೆನ್ನಾಗಿ ಓದಿ ಕೊಂಡಿದ್ದಾರೆ. ವೇದಿಕೆಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವಾಗ ಅತಿಥಿಗಳ ಮತ್ತು ಪ್ರೇಕ್ಷಕರ ನಡುವೆ ಸಂಹವನ ನಡೆಸುವ ಕೌಶಲವು ಖಂಡಿತವಾಗಿಯೂ ಸುಲಭ ಅಲ್ಲ. ಅದು ಆಕೆಗೆ ಸಿದ್ಧಿಸಿದೆ.

ಬೆಂಗಳೂರು ಆಕಾಶವಾಣಿಯಲ್ಲಿ ಆಕೆಯ ಧ್ವನಿ ಹತ್ತು ವರ್ಷಗಳ ಕಾಲ ಸಂಭ್ರಮ ತುಂಬಿತ್ತು. ಆರ್. ಜೆ. ಆಗಿ ರೈನ್ ಬೋ ಎಫ್ಎಂ ಸ್ಟೇಷನ್ನಿನಲ್ಲಿ ಮಾತಿನ ಮಂಟಪ ಕಟ್ಟಿದವರು ಅವರೇ. ಅಪರ್ಣಾ ಇದ್ದರೆ ಕಾರ್ಯಕ್ರಮಗಳು ಕಳೆಗಟ್ಟುವುದು ಖಂಡಿತ ಎಂಬ ನಂಬಿಕೆ ಇದೆ. ಅದು ಅಕ್ಷರಶಃ ಸತ್ಯ. ಕರ್ನಾಟಕ ಸರಕಾರ ನಡೆಸುವ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮಾವೇಶಗಳು ಯಶಸ್ವಿ ಆಗಬೇಕಾದರೆ ಅಲ್ಲಿ ಅಪರ್ಣಾ ಇರಬೇಕು ಎನ್ನುವುದು ಎಲ್ಲರಿಗೂ ಅರ್ಥವಾದ ಸತ್ಯ.

ತನ್ನ ಪ್ರತಿಭೆಯ ಎಲ್ಲಾ ಆಯಾಮಗಳನ್ನು ತುಂಬಾ ಚೆನ್ನಾಗಿ ದುಡಿಸಿಕೊಂಡವರು ಆಕೆ. ಟಿವಿ ಧಾರಾವಾಹಿಗಳಲ್ಲಿ ತನ್ನ ವ್ಯಕ್ತಿತ್ವಕ್ಕೆ ಒಪ್ಪುವಂತಹ ಭಾವನಾತ್ಮಕ ಪಾತ್ರಗಳನ್ನು ತುಂಬಾ ಚೆನ್ನಾಗಿ ಅವರು ನಿರ್ವಹಣೆ ಮಾಡಿದ್ದಾರೆ. ಮೂಡಲ ಮನೆಯ ಜನಪದ ಹೆಂಗಸು, ಮುಕ್ತ ಧಾರಾವಾಹಿಯ ಶೀಲಾ ಪ್ರಸಾದ, ಜೋಗುಳ ಧಾರಾವಾಹಿಯ ಪ್ರಧಾನ ಪಾತ್ರ ಆಕೆಗೆ ಹೆಸರು ತಂದುಕೊಟ್ಟವು. ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅನಂತ್ ನಾಗ್ ಮಗಳು ಪಲ್ಲವಿಯ ಪಾತ್ರ..ಅದೊಂದು ಅದ್ಭುತವಾದ ಭಾವಸ್ಪರ್ಷ! ಅದಕ್ಕೆ ಅವರಿಗೆ ಶ್ರೇಷ್ಟ ನಟಿ ಪ್ರಶಸ್ತಿ ದೊರೆತಿತ್ತು.

ಇತ್ತೀಚೆಗೆ ಸೃಜನ್ ಲೋಕೇಶ್ ಅವರ ಜನಪ್ರಿಯ ಶೋ ಮಜಾ ಟಾಕೀಸ್ ನೋಡಿದವರು ‘ಒನ್ ಅಂಡ್ ಓನ್ಲಿ ವರಲಕ್ಷ್ಮಿ’ ಮರೆಯಲು ಸಾಧ್ಯವೇ ಇಲ್ಲ. ಅದುವರೆಗೆ ಗಂಭೀರವಾದ ಪಾತ್ರಗಳನ್ನು ಮಾಡಿದ್ದ ಅಪರ್ಣಾ ಆ ಚಿನಕುರುಳಿ ಪಾತ್ರದಲ್ಲಿ ಎಲ್ಲರ ಮನೆ ಮಾತಾದದ್ದು ಸುಳ್ಳಲ್ಲ! ಅಪರ್ಣಾ ಆ ರೀತಿಯಿಂದ ನೋಡಿದರೆ ಮಲ್ಟಿ ಸ್ಟಾರ್!

1998ರ ದೀಪಾವಳಿಯ ಸಂಭ್ರಮದ ಕಾರ್ಯಕ್ರಮದಲ್ಲಿ ನಿರಂತರ ಎಂಟು ಘಂಟೆಗಳ ನಿರೂಪಣೆಯನ್ನು ಮಾಡಿದ್ದು ಒಂದು ದಾಖಲೆ. ಒಂದು ಆಂಗ್ಲ ಶಬ್ದ ಬಳಸದೇ ಶುದ್ಧ ಕನ್ನಡದಲ್ಲಿ ಹಲವು ಘಂಟೆಗಳ ಹೊತ್ತು ಮಾತಾಡುವುದು ಆಕೆಗೆ ಸುಲಲಿತ. ಅಷ್ಟೇ ಸ್ಫುಟವಾದ ಇಂಗ್ಲೀಷಲ್ಲಿ ಕೂಡ ಅವರು ನಿರೂಪಣೆ ಮಾಡಿದ್ದು ನಾನು ನೋಡಿದ್ದೇನೆ! 2014 ರಿಂದ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ಮಾಡುವವರು, KSRTC, ಬಿಎಂಟಿಸಿಗಳಲ್ಲಿ ಪ್ರಯಾಣ ಮಾಡುವವರು, ಬಿಎಸ್ಎನ್ಎಲ್ ಗ್ರಾಹಕರು ನಿತ್ಯವೂ ಆಕೆಯ ಧ್ವನಿಯನ್ನು ಕೇಳಿ ರೋಮಾಂಚನ ಹೊಂದುತ್ತಾರೆ. ಕರ್ನಾಟಕ ಸರಕಾರದ ಹೆಚ್ಚಿನ ಪ್ರವಾಸಿ ತಾಣಗಳ ಮತ್ತು ಪುಣ್ಯಕ್ಷೇತ್ರಗಳ ವಿಡಿಯೋಗಳಲ್ಲಿ ಆಕೆಯ ಸಾಹಿತ್ಯ ಮತ್ತು ಧ್ವನಿ ಇದೆ. ಕನ್ನಡಪ್ರಭದಲ್ಲಿ ‘ಸಖೀ ಗೀತ’ ಅಂಕಣವನ್ನು ಅವರು ಬರೆಯುತ್ತಿದ್ದಾರೆ.

ಪ್ರತೀ ಒಬ್ಬರಲ್ಲೂ ಅಂತರಂಗದ ಸೌಂದರ್ಯವನ್ನು ಹುಡುಕುವ, ಬದುಕಿನ ಪುಟ್ಟ ಪುಟ್ಟ ಸಂಭ್ರಮವನ್ನು ಅನುಭವಿಸುವ, ಕಣ್ಣರಳಿಸಿ ಬದುಕನ್ನು ಪಾಸಿಟಿವ್ ಆಗಿ ಆಸ್ವಾದಿಸುವ ಅಪರ್ಣಾ ನಮಗೆ ನೂರಾರು ಕಾರಣಕ್ಕೆ ಇಷ್ಟವಾಗ್ತಾರೆ. ಯುವ ವಾಸ್ತುಶಿಲ್ಪಿ ಮತ್ತು ಉದ್ಯಮಿ ನಾಗರಾಜ್ ವಸ್ತಾರೆ ಅವರನ್ನು ಮದುವೆಯಾಗಿ ಬೆಂಗಳೂರಲ್ಲಿ ನೆಲೆಸಿರುವ ಅವರು ನಿಜವಾದ ಅರ್ಥದಲ್ಲಿ ಮಾತಿನ ಮಂಟಪದ ಮಹಾರಾಣಿ! ಆಕೆಗೆ ಶುಭವಾಗಲಿ.

– ರಾಜೇಂದ್ರ ಭಟ್ ಕೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Advertisement
Advertisement

Related posts

‘ಓಯೋ ಸಮೂಹದ ಸಂಸ್ಥಾಪಕ ರಿತೇಶ್ ಅಗರ್ವಾಲ್

Upayuktha

ವ್ಯಕ್ತಿಚಿತ್ರ: ಜಗದ್ವಿಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್

Upayuktha

ಬಾಲಕೃಷ್ಣ ಸಹಸ್ರಬುಧ್ಯೆ: ಭಗವದ್ಗೀತೆಯ ಶ್ಲೋಕಗಳಿಗೆ ಸರಳಗನ್ನಡದ ಮಾಲೆ ತೊಡಿಸಿದ ಸಾಹಿತ್ಯ ಸರದಾರ

Upayuktha
error: Copying Content is Prohibited !!