ಕೃಷಿ ಪ್ರಚಲಿತ ವಿದ್ಯಮಾನಗಳು ಲೇಖನಗಳು

ಎಪಿಎಂಸಿ ಕಾಯ್ದೆ ತಿದ್ದುಪಡಿ: ಬಾಣಲಿಯಿಂದ ಬೆಂಕಿಗೆ..!

“ನೆರೆ ಊರಿನ ಮಳ್ಳನಿಗಿಂತ ನಮ್ಮೂರಿನ ಕಳ್ಳ ವಾಸಿ” ಅನ್ನೋ ಗಾದೆ ಮಾತು ನೆನಪಿಗೆ ಬಂತು ಕರ್ನಾಟಕ ಸರ್ಕಾರ ಮಾಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಎಪಿಎಂಸಿ) ಕಾಯ್ದೆಗೆ ತಿದ್ದುಪಡಿ ಮಾಡಿ ಹೊರಡಿಸಿರುವ ಆದೇಶ ನೋಡಿ. ಇದು ಎಪಿಎಂಸಿ ಸಮರ್ಥಿಸುವ ಅಥವಾ ಕಂಪನಿ ವಿರೋಧಿಸುವ ವಿಚಾರವಲ್ಲ, ಸರ್ಕಾರಗಳ ನೆಡೆ ಕಂಪನಿಗಳ ಕಡೆ ಅನ್ನೋ ವಿಚಾರ ಅಷ್ಟೇ. ಹಿಂದಿನಿಂದಲೂ ದೈತ್ಯ ಕಂಪನಿಗಳು ಸರ್ಕಾರಗಳ ಕತ್ತು ಹಿಸುಕಿ ತಮ್ಮ ಲಾಭಕೋರತನಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್, ಕಾಯ್ದೆಗಳು ಆಗುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿ ಪರವಾದ ಜನವಿರೋಧಿ ನೀತಿಗಳು ಹೆಚ್ಚು ಜಾರಿಯಾಗುತ್ತಿವೆ.

ಈಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ತಿದ್ದುಪಡಿಯನ್ನು ತರಾತುರಿಯಿಂದ ಮಾಡಿರುವ ಆತುರ ನೋಡಿದ್ರೆ ಕಂಪನಿ ಮತ್ತು ಸರ್ಕಾರ ನಡೆಸುತ್ತಿರೋ ದೊರೆಗಳ ಉದ್ದಾರಕ್ಕೆ ಹೊರತು ರೈತರ ಉದ್ಧಾರಕ್ಕಲ್ಲ. ಈ ಕಾಯ್ದೆಗೆ ತಿದ್ದುಪಡಿ ಮಾಡಿ ಎಂದು ಯಾವೊಬ್ಬ ರೈತ ಅಥವಾ ರೈತ ಸಂಘಟನೆಗಳು ಸರ್ಕಾರದೊಂದಿಗೆ ಪ್ರಸ್ತಾಪ ಕೂಡ ಮಾಡಿಲ್ಲ, ಅತ್ಯಾವಶ್ಯಕವಾಗಿ ಆಗಬೇಕಾದ ಬೆಲೆ ನೀತಿ, ಕೃಷಿ ನೀತಿ, ಸಾಲ ನೀತಿ, ಭೂ ಹಿಡುವಳಿ ನೀತಿ ಮುಂತಾದ ರೈತಪರ ನಿರ್ಣಯಗಳನ್ನು ಮಾಡುವಂತೆ ಹಲವಾರು ವರ್ಷಗಳಿಂದ ಪ್ರತಿಭಟನೆ, ಒತ್ತಾಯ ಮಾಡಿಕೊಂಡು ಬರಲಾಗಿದ್ದರೂ ಈ ಬಗ್ಗೆ ಸರ್ಕಾರಗಳು ತಲೆಕೆಡಿಸಿಕೊಂಡಿಲ್ಲ, ಅಂಥದ್ದರಲ್ಲಿ ದೇಶವೇ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವಾಗ ಅವಶ್ಯಕ ಕೆಲಸಗಳ ಬಗ್ಗೆ ಗಮನಕೊಡುವುದು ಬಿಟ್ಟು ರೈತರ ಅಭಿಪ್ರಾಯ ಸಹ ಕೇಳದೆ ದಿಢೀರ್ ಆಗಿ ತಿದ್ದುಪಡಿ ಮಾಡಿರುವ ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ.

*ಎಪಿಎಂಸಿ ಮಾರುಕಟ್ಟೆ ಸಮಿತಿಯಲ್ಲಿ ರೈತ ಪ್ರತಿನಿಧಿ ಇರುತ್ತಾರೆ, ವರ್ತಕರ ಲೆಕ್ಕ ಪುಸ್ತಕ, ಗೋದಾಮು ಪರಿಶೀಲನೆ ಮಾಡುವ ಅವಕಾಶ ಇದೆ, ಅಕ್ರಮ ದಾಸ್ತಾನಿಗೆ ಕಡಿವಾಣ ಹಾಕಬಹುದು.

*ಕಂಪನಿಯವರು ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡಿದ್ರೆ ಗ್ರಾಹಕರಿಗೆ ಹೊರೆಯಾಗುತ್ತೆ ಅವರ ಮೇಲೆ ನಿಯಂತ್ರಣ ಇರೋಲ್ಲ.

*ರೈತ ಎಪಿಎಂಸಿ ಆವರಣದಲ್ಲಿ ಬೆಳೆ ಮಾರಾಟ ಮಾಡೋದ್ರಿಂದ ಅಲ್ಲಿ ಸಾಕಷ್ಟು ವರ್ತಕರು ಪಾಲ್ಗೊಂಡು ಹರಾಜು ಆಗುವ ಸ್ಥಳದಲ್ಲೇ ಬೆಲೆ ಬರುತ್ತಿಲ್ಲ ಅಂದ್ರೆ ಕಂಪನಿ ಹೊಲಕ್ಕೆ ಹೋಗಿ ಖರೀದಿ ಮಾಡಿದಾಗ ಬೆಲೆ ಬರೋ ಖಾತ್ರಿ ಎಲ್ಲಿದೆ?

*ಎಪಿಎಂಸಿಯಲ್ಲಿ ಹಾರಾಜಗುವ ಬೆಳೆಗೆ ಹಣ ಸಂದಾಯ ಮಾಡೋ ಜವಾಬ್ದಾರಿ ಮತ್ತು ಖಾತ್ರಿ ಎಪಿಎಂಸಿಯಾದಾಗಿರುತ್ತದೆ.ಕಂಪನಿಯವರು ರೈತರಿಗೆ ಹಣ ಸಂದಾಯ ಮಾಡುವಲ್ಲಿ ವ್ಯತ್ಯಾಸ ಆದ್ರೆ ಹೊಣೆ ಯಾರು.

*ದೊಡ್ಡ e-commerce ಕಂಪನಿಯೊಂದು ರೈತರಿಂದ ಖರೀದಿ ಮಾಡಿ ವಂಚನೆ ಮಾಡಿರೋ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ದೊಡ್ಡವರ ಆಶೀರ್ವಾದ ಇರೋದ್ರಿಂದ ಹಾಗೇ ಕೇಸ್ ಕುಂಟುತ್ತಿದೆ.

*ರೈತರಿಗೆ ಅಷ್ಟೊಂದು ಪ್ರಯೋಜನ ಇದ್ರೆ ರೈತರೇ ಈ ವ್ಯವಸ್ಥೆ ಮಾಡಿ ಆಂತ ಕೇಳ್ತಿದ್ರು, lockdown ಸಮಯ ಉಪಯೋಗಿಸಿಕೊಂಡು ರೈತರ ಗಮನಕ್ಕೆ ತರದೇ ಮಾಡೋ ತರಾತುರಿ ಬೇಕಿರಲಿಲ್ಲ.

*ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಫಡ್ನವಿಸ್ ಸರ್ಕಾರ ಇದ್ದಾಗ ಸುಗ್ರೀವಾಜ್ಞೆ ಮಾಡಿ ಇದೆ ರೀತಿಯ ತಿದುಪಡ್ಡಿ ಮಾಡಿತ್ತು. ಆಮೇಲೆ ವಿರೋಧ ಅದ ನಂತರ ಕೈ ಬಿಟ್ಟಿತ್ತು. ರೈತರಿಗೆ ಅನುಕೂಲ ಇದ್ರೆ ಮುಂದುವರಿಸಬಹುದಿತ್ತಲ್ಲ.

*ಖಾಸಗಿ ಮಾರುಕಟ್ಟೆ ಮೇಲೆ ಸರ್ಕಾರದ ನಿಯಂತ್ರಣ ಹೋದ ಮೇಲೆ ರೈತರ ಶೋಷಣೆ ತಡೆಯುವುದು, ಬೆಲೆ ನಿಯಂತ್ರಣ ಹೇಗೆ ಸಾಧ್ಯ?

*ಸರ್ಕಾರ ಹೇಳುವಂತೆ ರೈತರಿಗೆ ಹೊಸ ವ್ಯವಸ್ಥೆಯಿಂದ ಆಗುವ ಅನುಕೂಲಗಳು ಯಾವುವು?

*ಎಪಿಎಂಸಿ ವ್ಯಾಪ್ತಿ ಹೊರತುಪಡಿಸಿ ಖಾಸಗಿಯವರು ಮಾರುಕಟ್ಟೆ ಸ್ಥಾಪನೆಗೆ ಅವಕಾಶ ಇದೆ ಅಂದ್ರೆ ಅದರ ವ್ಯಾಪ್ತಿ ಯಾವುದು? ಇದರ ಅಗತ್ಯವೇನು?

*ಕಂಪನಿಗಳು ಒಗಟ್ಟಾಗಿ, ಉದ್ದೇಶಪೂರ್ವಕವಾಗಿ ಕಡಿಮೆ ಬೆಲೆಗೆ ಖರೀದಿಸುವ ಜಾಲ ಸೃಷ್ಟಿ ಮಾಡಿಕೊಂಡರೆ ಅದನ್ನು ನಿಯಂತ್ರಣ ಮಾಡುವ ಶಕ್ತಿಯನ್ನು ಸರ್ಕಾರಗಳು ಕಳೆದುಕೊಳ್ಳುವುದಿಲ್ಲವೇ?

*ಹೊಸ ಕಾಯ್ದೆಯಿಂದ ರೈತರಿಗೆ ಮಾರಾಟ ಮತ್ತು ಬೆಲೆಯಲ್ಲಿ ಆಗುವ ಅನುಕೂಲಕರವಾದ ಪ್ರಮುಖ ಬದಲಾವಣೆ ಏನು?

*ಹೊಸ ಕಾಯ್ದೆಯಿಂದ ಬೆಳೆಗೆ ಬೆಲೆ ಸ್ಥಿರತೆ ಸಿಗುವ ಖಾತ್ರಿ ಇದ್ದೀಯೆ?

*ಶೇ 90%ಕ್ಕೂ ರೈತರು ತಾವು ಬೆಳೆದ ಬೆಳೆಯನ್ನು ಹೊಲದಲ್ಲಿಯೇ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದರು, ಕಂಪನಿ ಬಂದಾಗಲೂ ಕಂಪನಿ ಪ್ರತಿನಿಧಿಗೆ ಕೊಡುತ್ತಾರೆ. ಇದರಲ್ಲಿ ಅದ ಬದಲಾವಣೆ ಏನು?

*ಹೊಸ ಎಪಿಎಂಸಿ ಕಾಯ್ದೆ ರೈತರನ್ನು ಬಾಣಲಿಯಿಂದ ಬೆಂಕಿಗೆ ಹಾಕಿದಂತೆ ಆಗುವುದಿಲ್ಲವೇ?

ಈಗ ರೈತರು ಮತ್ತು ವರ್ತಕರ ನಡುವೆ ಹಲವು ವರ್ಷಗಳಿಂದ ಒಂದು ರೀತಿಯಲ್ಲಿ ಸಂಬಂಧವಿದೆ, ಎಪಿಎಂಸಿಯಲ್ಲಿ ನಡೆಯುವ ಕಮಿಷನ್ ದಂಧೆ, ತೂಕದಲ್ಲಿ ಮೋಸವಾಗುವ ಬಗ್ಗೆ ರೈತರಿಗೆ ಆಕ್ರೋಶವಿದೆ ಹಾಗೂ ಎಪಿಎಂಸಿ ಹಿಡಿತ ಪಡೆಯಲು ಚುನಾವಣೆಗಳಲ್ಲಿ ನಡೆಯುವ ಹಣದ ಅಬ್ಬರ ವಿಧಾನಸಭೆ ಚುನಾವಣೆಯನ್ನು ಮೀರಿಸುವಂತೆ ಇದೆ ನಿಜ, ಯಾವ ಕ್ಷೇತ್ರದಲ್ಲಿ ಇಲ್ಲ, ಎಲ್ಲಾ ಕ್ಷೇತ್ರದಲ್ಲೂ ಇದೆ. ಸುಧಾರಣೆ ನಿಟ್ಟಿನಿನಲ್ಲಿ ಯೋಚಿಸಬೇಕೇ ಹೊರತು ಅದನ್ನೇ ನೆಪಮಾಡಿಕೊಂಡು ಬಂಡವಾಳಶಾಹಿಗಳ ಹಿಡಿತಕ್ಕೆ ಕೊಟ್ಟು ಸುಧಾರಣೆ ಮಾಡಿದ್ದೇವೆ ಎಂದರೆ ಅದು ನಮ್ಮ ಸರ್ಕಾರಗಳ ಆತ್ಮವಂಚನೆಯಷ್ಟೇ. ಕೆಲವು ಸಂದರ್ಭದಲ್ಲಿ ಬೆಲೆ ಕುಸಿತವಾದಾಗ ಸರ್ಕಾರ, ರೈತರು ಮತ್ತು ವರ್ತಕರ ನಡುವೆ ಸಂಧಾನ ಏರ್ಪಟ್ಟು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಪಡೆದಿರುವ ನಿರ್ದೇಶನಗಳಿವೆ. ಶಾಸನಬದ್ದವಾಗಿ ರಚನೆಯಾಗುವ ಸಮಿತಿಗೆ ಎಪಿಎಂಸಿ ಚುನಾವಣೆ ಮೂಲಕ ಒಳ್ಳೆಯ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವ ಮತ್ತು ವ್ಯವಸ್ಥೆ ಸರಿಯಿಲ್ಲದಾಗ ಪ್ರಶ್ನಿಸುವ ಹಕ್ಕು ಮುಕ್ತವಾಗಿದೆ, ಉತ್ತಮ ಸಮಿತಿ ಆಯ್ಕೆ ಮಾಡಿಕೊಂಡ್ರೆ ಮಾರುಕಟ್ಟೆಯನ್ನು ವ್ಯವಸ್ಥಿವಾಗಿ ವರ್ತಕರು ಮತ್ತು ರೈತರು ಸೇರಿ ಮಾದರಿಯಾಗಿ ನೆಡೆಸುವ ಅವಕಾಶವಿದೆ. ಕಂಪನಿಗೆ ಯಾವ ನಿಯಂತ್ರಣವಿದೆ?

ಸರ್ಕಾರದ ಘೋಷಣೆ “ನನ್ನ ಬೆಳೆ, ನನ್ನ ಹಕ್ಕು” ಕೇಳಲು ಸೊಗಸಾಗಿದೆ, ಈಗಲೂ ಅಷ್ಟೇ ರೈತನ ಬೆಳೆಗೆ ಅವನೇ ಹಕ್ಕುದಾರ ನಿಮ್ಮ ಕಾಯ್ದೆಯಿಂದ ಹಕ್ಕು ಕೊಟ್ಟಿರೋ ತರಹ ಹೇಳೋದು ನೋಡಿದ್ರೆ ನಿಮಗೆ ಪ್ರಜೆಗಳಿಗಿಂತ ಪ್ರಚಾರ ಮುಖ್ಯ ಅನ್ನೋದು ಸಾಬೀತು ಮಾಡಲು ಹೊರಟಂತಿದೆ. ರೈತರಿಗೆ ಕಾಯ್ದೆಯಿಂದ ಅನುಕೂಲ ಆಂತ ಮಾತ್ರ ಬೊಗಳೆ ಬಿಡುತ್ತಿದ್ದರೆ, ಯಾವ ರೀತಿ ಅನುಕೂಲ ಆಂತ ದಯಮಾಡಿ ವಿವರವಾಗಿ ತಿಳಿಸ್ರಪ್ಪ ಅಂದ್ರೆ ಹೇಳೋಕೆ ನಾಲ್ಕು ಪದ ಸಿಗದೇ ಒದ್ದಾಡುತ್ತಿದ್ದಾರೆ, ಆ ರೀತಿ ಪ್ರಯೋಜನ ಇದ್ದಿದ್ರೆ ಊರು ತುಂಬಾ ಕೇಳೋ ಹಾಗೆ ಟಿವಿಯಲ್ಲಿ ಬಡ್ಕೋತಾ ಇದ್ರು, ಪೇಪರ್ ತುಂಬಾ ಬರೆಸುತ್ತಾಯಿದ್ರು. ಮಂತ್ರಿ ಹೇಳೋ ಎರಡು ಪದ ಏನು ಅಂದ್ರೆ ‘ಕಂಪನಿ ಬರೋದ್ರಿಂದ್ರ ಪೈಪೋಟಿ ಹೆಚ್ಚುತ್ತೆ, ಕಂಪೆನಿಯವರೇ ಹೊಲಕ್ಕೆ ಬಂದು ಖರೀದಿ ಮಾಡ್ತಾರೆ ಅಂತ ‘ಇದರಾಚೆಗೆ ಏನಪ್ಪಾ ಅಂದ್ರೂ ಗೊತ್ತಿಲ್ಲ, ಗೊತ್ತಿದ್ರೂ ಬಾಯಿ ಬಿಟ್ರೆ ಬಣ್ಣಗೇಡು ಅನೋ ತರಹ ಆಗಿದೆ ಸರ್ಕಾರಕ್ಕೆ.

ಪೈಪೋಟಿ ಏರ್ಪಡೋದು ಬೇಡಿಕೆ-ಪೂರೈಕೆ ವ್ಯತ್ಯಾಸವಾದಾಗ ಅನೋ ಕನಿಷ್ಠ ಜ್ಞಾನ ಇರಬೇಕು, ಎಪಿಎಂಸಿಯಲ್ಲಿ ಮೊದಲು 10 ವರ್ತಕರು ಇರೋ ಜಾಗದಲ್ಲಿ 100 ವರ್ತಕರು ಬಂದಿದ್ದಾರೆ ಪೈಪೋಟಿ ಹೆಚ್ಚಿ ಬೆಲೆ ಹೆಚ್ಚಾಗಿದೆಯೆ? ಕಂಪನಿ ಬಂದ್ರು ಅಷ್ಟೇ ಅಲ್ಲವೇ. ಪೈಪೋಟಿ ಹೆಚ್ಹೋದೆ ಆದ್ರೆ ವರ್ತಕರ ಸಂಖ್ಯೆ ಜಾಸ್ತಿ ಮಾಡಿದ್ರೆ ಅಗೋಲ್ಲವೇ? ಈಗಲೂ ಶೇ 90% ರೈತರು ಹೊಲಕ್ಕೆ ಬರೋ ದಲ್ಲಾಳಿಗೆ ಮಾರಾಟ ಮಾಡ್ತಾ ಇರೋದು, ಕಂಪನಿ ಬಂದ್ರೆ ಕಂಪನಿ ದಲ್ಲಾಳಿ ಬರುತ್ತಾನೆ ಅಷ್ಟೇ ಅದ್ರಲ್ಲಿ ವಿಶೇಷತೆ ಏನು? ವರ್ತಕರು ಲಕ್ಷಗಟ್ಟಲೆ ಹಣ ಹೂಡಿ ವ್ಯಪಾರ ಮಾಡುತ್ತಿದ್ದರೆ,ಸ್ಥಳೀಯ ಪರಿಚಯದ ಮೇಲೆ ರೈತ ಕೆಲವು ವರ್ತಕರಿಂದ ಕೃಷಿ ಖರ್ಚಿಗೆ ಮುಂಗಡ ಪಡೆಯುವುದು ಮಾರಾಟದ ನಂತರ ಲೆಕ್ಕ ಚುಕ್ತಾ ಮಾಡುವುದು ಇದೆ, ಇದು ಇಬ್ಬರಿಗೂ ಸಾಂದರ್ಭಿಕ ಅನುಕೂಲ. ಕಂಪನಿಯವರು ಕೋಟಿ ಲೆಕ್ಕದಲ್ಲಿ ವಹಿವಾಟು ಮಾಡೋದ್ರಿಂದ ಲಕ್ಷಗಳ ಲೆಕ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವರ್ತಕರು ನಾಶವಾಗುತ್ತಾರೆ. ನಗರಗಳಿಗೆ ದೊಡ್ಡ ಮಾಲುಗಳು ಬಂದ ನಂತರ ಸಣ್ಣ ವ್ಯಾಪಾರಿಗಳು ಕಣ್ಮರೆಯಾದ ರೀತಿ. ದೊಡ್ಡ ಕಂಪನಿಯ ಮಾಲ್ ಗಳು ಬಂದ ಮೇಲೆ ಗ್ರಾಹಕರಿಗೆ ಯಾವ ರೀತಿ ಅನುಕೂಲವಾಗಿದೆ? ಇಂತಹ ಮಾಲ್ ಗಳು ಗ್ರಾಹಕರನ್ನು ಆಕರ್ಷಿಸಲು ಹಳೆ ಎಕ್ಕಡ ತಂದ್ರು ಕಾಸು ಕೊಡ್ತೀವಿ ಅನ್ನೋ ಆಕರ್ಷಕ ಜಾಹಿರಾತಿಗೆ ಮರಳಾಗಿ, ವಿದ್ಯಾವಂತರು ಹೆಚ್ಚಿರುವ ನಗರಗಳಲ್ಲೇ ಕಂಪನಿಯವರ ಬೋನಿಗೆ ಬೀಳುತ್ತಿರುವಾಗ ಇನ್ನೂ ರೈತರನ್ನು ಯಾವ ರೀತಿ ಯಾಮಾರಿಸಬಹುದು ಯೋಚಿಸಿ.

ಕಂಪನಿಗಳು ಮೊದ ಮೊದಲು ರೈತರಿಗೆ ಶೇ 5% ಹೆಚ್ಚುವರಿ ಹಣ ಕೊಟ್ಟು ಖರೀದಿಸಬಹುದು ಅಂತಾನೆ ಇಟ್ಟ್ಕೊಳೋಣ, ಅದು ಅವರ ವ್ಯಾಪಾರದ ಕುತಂತ್ರ ಸಹಜವಾಗಿ ರೈತರು ಜಾಸ್ತಿ ಬೆಲೆ ಇರೋ ಕಡೆ ಮಾರಾಟ ಮಾಡ್ತಾರೆ, ಅವಾಗ ಸಣ್ಣ ವರ್ತಕರು ನೆಲ ಕಚ್ಚುತ್ತಾರೆ, ಎಪಿಎಂಸಿ ರೋಗಗ್ರಸ್ತವಾಗಿ ನಿಷ್ಕ್ರಿಯವಾಗುತ್ತದೆ, ಈ ಪರಿಸ್ಥಿತಿಯ ಲಾಭ ಪಡೆಯಲು ಸದಾ ಸಿದ್ದವಾಗಿರುವ ನಮ್ಮ ಸರ್ಕಾರಗಳು ಮತ್ತು ಹೊಂಚು ಹಾಕಿ ಕಾದು ಕುಳಿತಿರುವ ಕಂಪನಿಗಳು ಸರ್ಕಾರಗಳ ಬಾಯಿಗೆ ತುರುಕಿ, ಜಿಲ್ಲಾ ಮತ್ತು ತಾಲ್ಲೂಕಿನಲ್ಲಿ ಪ್ರಮುಖ ಸ್ಥಳಗಳಲ್ಲಿರುವ ಎಪಿಎಂಸಿ ಹೊಂದಿರುವ ಭೂಮಿ ಮತ್ತು ಸಮಗ್ರ ಅಸ್ತಿಯನ್ನು ವಶ ಮಾಡಿಕೊಳ್ಳುವ ಕಾಲ ದೂರವಿಲ್ಲ. ಕಂಪನಿಗಳ ಪಾಲಾದ ಮೇಲೆ ಅವು ಆಡಿದೆ ಆಟ, ಸರ್ಕಾರಗಳನ್ನೇ ನಿಯಂತ್ರಿಸುತ್ತಿರುವ ಅವು ರೈತರನ್ನು ನಿಯಂತ್ರಣ ಮಾಡಲು ಬಹಳ ಕಾಲ ಬೇಕಿಲ್ಲ.

ಕಂಪನಿಗಳು ಹೆಚ್ಚು ಉತ್ಪಾದನೆ ಮೇಲೆ ಮಾತ್ರ ಗಮನ ಕೊಡುವುದರಿಂದ ಅವುಗಳ ಸಾಗಾಟ, ಶೇಖರಣೆ ಗೋದಾಮು, ಶೈತ್ಯಾಗಾರ ಇವುಗಳಿಗೆ ಹೊಂದಾಣಿಕೆ ಆಗುವ ರೀತಿಯಲ್ಲಿ ಏಕಬೆಳೆ ಪದ್ಧತಿ (monocrop) ವ್ಯಾಪಕವಾಗುತ್ತದೆ, ಏಕಬೆಳೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಈಗಾಗಲೇ ನಮ್ಮಗೆ ಅದರ ಅನುಭವಾಗಿದೆ ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ ಒಂದು ಪ್ರತಿಷ್ಠಿತ ಕಂಪನಿ ಮಾವು ಬೆಳೆ ಬೆಳೆಯಲು ರೈತರಿಗೆ ಉತ್ತೇಜಿಸುತ್ತಿದೆ, ಶೇಖರಣೆ ಮಾಡಲು ಶೈತ್ಯಾಗಾರ ಕೂಡ ಹೊಂದಿದೆ. ಕಳೆದ 2 ವರ್ಷದ ಹಿಂದೆ ಮಾವು ಬೆಳೆಗಾರರು ಬೆಲೆ ಇಲ್ಲದೇ ಸಂಕಷ್ಟದಲ್ಲಿದಾಗ ಸರ್ಕಾರ ಆ ಕಂಪೆನಿಯವರನ್ನು ಸಂಪರ್ಕಿಸಿ ಸರ್ಕಾರದಿಂದ ಪ್ರತಿ ಕೆಜಿ ಮಾವಿಗೆ ಇಂತಿಷ್ಟು ಬೆಂಬಲ ಬೆಲೆ ನಿಗದಿಪಡಿಸುತ್ತೇವೆ ಅದನ್ನು ರೈತರಿಗೆ ಸರ್ಕಾರದ ವತಿಯಿಂದ ನೀಡುತ್ತೇವೆ, ಕಂಪನಿ ವತಿಯಿಂದ ಸಾದ್ಯವಾದ ಮೊತ್ತ ಸೇರಿಸಿ ರೈತರಿಗೆ ಕೊಟ್ಟು ಶೈತ್ಯಾಗಾರದಲ್ಲಿ ಸಂಗ್ರಹಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ನೇರವಾಗಿ ಕಂಪನಿಯೊಂದಿಗೆ ಮಾತನಾಡಿದಾಗ ಮುಂದಿನ 3 ವರ್ಷಕ್ಕೆ ಆಗುವಷ್ಟು ಮಾವಿನ ಶೇಖರಣೆ ಇರೋದ್ರಿಂದ ಸಾಧ್ಯವಾಗುತ್ತಿಲ್ಲ ಅನೋ ವಿಚಾರ ತಿಳಿದು ಬಂತು, ಕೆಜಿ ಮಾವಿಗೆ ಕನಿಷ್ಠ ರೂ 5/ ಸಹ ಕೊಟ್ಟು ಖರೀದಿಸಲಾಗದ ಕಂಪನಿಗಳ ಬಂಡವಾಳ ಸಹ ನಾವು ಕಂಡಿದ್ದೇವೆ.

ಕಂಪನಿ ಬರುವುದರಿಂದ ರೈತರಿಗೆ ಬೆಲೆ ಖಾತ್ರಿ, ಸ್ಥಿರತೆ ಕಾಯಲು ಸಾಧ್ಯವಿದೆಯೆ? ಸರ್ಕಾರ ನಿರ್ದಿಷ್ಟ ಬೆಲೆ ನಿಗದಿಪಡಿಸಿ ಆ ಬೆಲೆಗಿಂತ ಕಡಿಮೆಗೆ ಖರೀದಿ ಮಾಡದ ರೀತಿ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲು ಸಾಧ್ಯವೇ? Buyback ಅಗ್ರಿಮೆಂಟ್ ಹೆಸರಿನಲ್ಲಿ ಹುಟ್ಟಿಕೊಂಡಿರುವ ಕಂಪನಿಗಳಿಂದ ರೈತರಿಗೆ ಅನುಕೂಲವಾಗಿದ್ದೀಯೆ? ಹಾಗಾದ್ರೆ ಕಂಪನಿಗಳಿಂದ ಆಗುವ ಅನುಕೂಲಗಳ ಬಗ್ಗೆ ಸರ್ಕಾರ ತಿಳಿಸಬೇಕಲ್ಲವೇ. ಕಂಪನಿಗಳು ಮಾರುಕಟ್ಟೆಗೆ ಜಾಗ, ಮೂಲ ಸೌಕರ್ಯ ಇತ್ಯಾದಿ ನಿರ್ಮಿಸಲು ಬ್ಯಾಂಕ್/ಸರ್ಕಾರದ ಮೂಲಕ ನೀಡುವ ದೊಡ್ಡ ಮೊತ್ತದ ಹಣಕ್ಕೆ ಬದಲಾಗಿ ಸಣ್ಣ ಮೊತ್ತ ಬಳಸಿ ಹಾಲಿ ಇರುವ ಸೌಕರ್ಯಗಳನ್ನು ಸುಧಾರಣೆ ಮಾಡಬಹುದು, ಹೊಸ ಮಾರುಕಟ್ಟೆ ಸ್ಥಾಪನೆಗೆ ನೀಡುವ ನೆರವುಗಳನ್ನು ರೈತರ ನೆರವಿಗೆ ಬಳಸಬಹುದು.

ಬಹುತೇಕ ಬಹುರಾಷ್ಟ್ರೀಯ ಕಂಪೆನಿಗಳ ಕಾರ್ಯ ನೀತಿಗಳು ವಿದೇಶಗಳಲ್ಲಿ ಅನ್ವಯವಾಗುವ ಕಾನೂನಿಗೆ ಒಳ್ಳಪಡುವುದರಿಂದ ಸದರಿ ಕಂಪನಿಗಳಿಂದ ಮುಂದೆ ಆಗಬಹುದಾದ ತೊಂದ್ರೆಗಳಿಗೆ ರೈತ ವಿದೇಶಿ ಕೋರ್ಟ್ ಮೊರೆ ಹೋಗಲು ಸಾಧ್ಯವೇ? ಈಗಿರೋ ಸಣ್ಣ ವರ್ತಕರು ಕಂಪನಿ ಹೊಡೆತ ಶುರುವಾದ ನಂತರ ವ್ಯಪಾರ ಮಾಡಲಾಗದೆ ಕಂಪನಿ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಿಕೊಳ್ಳಬಹುದು, ಆಗ ಇದನ್ನೇ ಉದ್ಯೋಗ ಸೃಷ್ಟಿ ಆಂತ ಸರ್ಕಾರಗಳು ತಮ್ಮ ಕಿರೀಟಕ್ಕೆ ಮೊತ್ತೊಂದು ಗರಿ ಸಿಕ್ಕಿಸಿಕೊಂಡು ನಲಿಯಬಹುದು. ಆದರೆ ವರ್ತಕರು ಮತ್ತು ರೈತರ ಸ್ವಾಲಂಬನೆ ಬದುಕು ನಲುಗಿ ಹೋಗುವುದು ನಿಶ್ಚಿತ.

ಕಂಪನಿಗಳು ಕೊಡುವ ಕಾಸಿನಿಂದ ಪಕ್ಷಗಳು ಚುನಾವಣೆ ವೆಚ್ಚ ನಿಭಾಯಿಸಿ ವೋಟ್ ಖರೀದಿಸಬಹುದು ಎಂಬ ಭ್ರಮೆ ಮೇಲೆ ಅವುಗಳ ತಾಳಕ್ಕೆ ಕುಣಿಯುತ್ತಿವೆ. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ, ನಿಮ್ಮ ಪ್ರತಿಯೊಂದು ನಡೆ ಅದ್ರಲ್ಲೂ ಅನ್ನದಾತರನ್ನು ವಂಚಿಸಿ ಉಳಿದುಕೊಳ್ಳೋದು ಅಷ್ಟು ಸುಲಭ ಅಲ್ಲ, ಕಾಲ ಮಿಂಚಿಲ್ಲ ಸರ್ಕಾರ ಆತ್ಮವಂಚನೆ ಮಾಡಿಕೊಳ್ಳೋದು ಬಿಟ್ಟು ಈ ತಿದ್ದುಪಡಿ ಕಾಯ್ದೆಗೆ ಎಳ್ಳು- ನೀರು ಬಿಡೋದು ಒಳ್ಳೇದು, ಇಲ್ಲಾಂದ್ರೆ ರೈತರ ಶಾಪದ ತಾಪ ತಡ್ಕೊಳ್ಳೋ ಭಂಡ ಧೈರ್ಯ ಇದ್ರೆ ಮುಳುಗಿ ಹೋಗೋ ನಿಮ್ಮನ್ನು ಆ ಪರಮಾತ್ಮ ಕೂಡ ಕಾಪಾಡಲ್ಲ.

-ಪ್ರಶಾಂತ್ ಜಯರಾಮ್
ಕೃಷಿಕರು
ಮೊಬೈಲ್ :9342434530

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸೆಪ್ಟೆಂಬರ್ 25: ‘ವಿಶ್ವ ಫಾರ್ಮಸಿಸ್ಟರ ದಿನ’; ಧ್ಯೇಯ ಮತ್ತು ಮಹತ್ವ

Upayuktha

ವಿಶ್ವ ಯೋಗ ದಿನಾಚರಣೆ 2020: ಯೋಗ ಎಂಬುದು ಮನೋ ಪ್ರಧಾನ

Upayuktha

ಯಕ್ಷಲೋಕದ ಬಹುಮುಖ ಪ್ರತಿಭೆ- ವಿಕ್ರಮ್ ಮಯ್ಯ ಪೈವಳಿಕೆ

Upayuktha

Leave a Comment