ಪ್ರಮುಖ ರಾಜ್ಯ

ಚಾಲಿ ಅಡಿಕೆಗೆ ಕ್ಯಾಂಪ್ಕೋದಲ್ಲಿ ಐತಿಹಾಸಿಕ ಗರಿಷ್ಠ 400 ರೂ.!

ಮಂಗಳೂರು: ಕ್ಯಾಂಪ್ಕೋ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಲಿ ಅಡಿಕೆಗೆ ದಾಖಲೆಯ 400 ರೂ. ಬೆಲೆ ದಾಖಲಾಗಿದೆ.

ಸೆಪ್ಟೆಂಬರ್ 7ರಂದು ಸೋಮವಾರ ದಕ್ಷಿಣ ಕನ್ನಡದಾದ್ಯಂತ ಕ್ಯಾಂಪ್ಕೋ ಶಾಖೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹಳೆ ಅಡಿಕೆಗೆ ಕಿಲೋವಿಗೆ 400 ರೂ. ಧಾರಣೆ ನಿಗದಿಪಡಿಸಲಾಗಿದೆ. ಇದೇ ವೇಳೆ ಹೊಸ ಅಡಿಕೆಗೆ 360 ರೂ. ದರ ನೀಡಲಾಗುತ್ತಿದೆ.

ತಿಂಗಳ ಹಿಂದೆ ಕ್ಯಾಂಪ್ಕೋಕ್ಕಿಂತ 5, 10 ರೂ. ಹೆಚ್ಚಿಗೆ ನೀಡಿ ಖರೀದಿಸುತ್ತಿದ್ದ ಖಾಸಗಿ ವರ್ತಕರು ಇದೀಗ ಪೈಪೋಟಿಯಲ್ಲಿ ಹಿಂದೆ ಬಿದ್ದಿದ್ದು, ಹಳೆ ಅಡಿಕೆಗೆ ಗರಿಷ್ಠ 390 ರೂ. ಹಾಗೂ ಹೊಸ ಅಡಿಕೆಗೆ 350 ರೂ. ನೀಡುತ್ತಿದ್ದಾರೆ.

ಲಾಕ್‌ಡೌನ್ ವೇಳೆಯಲ್ಲೇ ಅಡಿಕೆ ಬೆಳೆಗಾರರ ಹಿತ ಕಾಪಾಡಿದ್ದ ಕ್ಯಾಂಪ್ಕೋ ಹಂತ ಹಂತವಾಗಿ ಅಡಿಕೆ ಬೆಲೆ ಏರಿಸುತ್ತಾ ಬಂದಿದೆ. ಲಾಕ್‌ಡೌನ್ ಆರಂಭದ ದಿನಗಳಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಸ್ಥಗಿತಗೊಳಿಸಿತ್ತು. ಆಗ ಕೆಲ ಖಾಸಗಿ ವರ್ತಕರು ಪರಿಸ್ಥಿತಿಯ ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸಿ ಜುಜುಬಿ ಬೆಲೆಗೆ ಅಡಿಕೆ ಖರೀದಿಸಿದ ಉದಾಹರಣೆಗಳೂ ಇವೆ.

ರೂ.280 ರಿಂದ ರೂ.400 ತನಕ ಅಡಿಕೆಯ ನಾಗಾಲೋಟ

ಆದರೆ ಕ್ಯಾಂಪ್ಕೋ ಅಡಿಕೆ ಖರೀದಿಯನ್ನು ಆರಂಭಿಸಿದ ಕ್ಷಣದಿಂದ ಅಡಿಕೆ ಮಾರುಕಟ್ಟೆಯ ದಿಕ್ಕೇ ಬದಲಾಯಿತು. ನೋಡನೋಡುತ್ತಿದ್ದಂತೆ ಈ ಹಿಂದೆ ಕೆ.ಜಿ.ಗೆ 280 – 285ರೂ.ಗೆ ಖರೀದಿಯಾಗುತ್ತಿದ್ದ ಅಡಿಕೆಯ ಧಾರಣೆ ಗಗನಮುಖಿಯಾಗುತ್ತಾ ಹೋಯಿತು. ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿತು. ಒಂದು ಹಂತದ ತನಕ ಖಾಸಗಿ ವರ್ತಕರು ಕ್ಯಾಂಪ್ಕೋದೊಂದಿಗೆ ಪೈಪೋಟಿಗೆ ಬಿದ್ದು ಬೆಲೆ ಏರಿಸುತ್ತಾ ಹೋದರು. ಕೆಲ ವರ್ತಕರು ಸೀಮಿತ ಲಾಟ್‌ಗಳ ಹಳೆ ಅಡಿಕೆಗೆ 400-405-410 ರೂ. ತನಕವೂ ಬೆಲೆ ನೀಡಿದ್ದಿದೆ. ಆದರೆ ಕ್ಯಾಂಪ್ಕೋದಲ್ಲಿ ಮಾತ್ರ ಬೆಲೆ 390 ರೂ.ಗಿಂತ ಮೇಲೆ ಹೋಗಿರಲಿಲ್ಲ. ಕಳೆದ ನಾಲ್ಕು ವಾರಗಳಿಂದ ಕ್ಯಾಂಪ್ಕೋದ ಧಾರಣೆ 390 ರೂ.ನಲ್ಲೇ ಸ್ಥಿರವಾಗಿತ್ತು. ಕಳೆದ ವಾರ 395 ರೂ.ಗೆ ಏರಿತ್ತು. ಇದೀಗ ಕ್ಯಾಂಪ್ಕೋ ಚಾಲಿ ಹಳೆ ಅಡಿಕೆಯ ಕಿಲೋ ಧಾರಣೆಯನ್ನು 400 ರೂ.ಗೆ ಏರಿಸಿದೆ.

ಮಾರುಕಟ್ಟೆಯಲ್ಲಿ ಅಡಿಕೆ ಬೇಡಿಕೆ ಕುಸಿದಿಲ್ಲ. ಹೊಸ ಅಡಿಕೆಯ ಧಾರಣೆಯೇ 400 ರೂ. ಗಡಿ ದಾಟಲಿದೆ. ಬೆಳೆಗಾರರು ಆತಂಕ ಪಡಬೇಕಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್‌ಚಂದ್ರ ಅವರು ಈ ಹಿಂದೆಯೇ ಬೆಳೆಗಾರರಿಗೆ ಧೈರ್ಯದ ಮಾತುಗಳನ್ನಾಡಿದ್ದರು. ಖಾಸಗಿಯವರು ಧಾರಣೆ ಇಳಿಸಿದರೂ, ಕ್ಯಾಂಪ್ಕೋ ಮಾತ್ರ ತನ್ನ ಅಡಿಕೆ ಧಾರಣೆಯನ್ನು ಸ್ಥಿರವಾಗಿರಿಸಿಕೊಂಡು ಕ್ಯಾಂಪ್ಕೋ ಕೊಟ್ಟ ಮಾತು ಉಳಿಸಿಕೊಂಡಿದೆ.

ಮಾರುಕಟ್ಟೆಗೆ ಬರುತ್ತಿಲ್ಲ ಅಡಿಕೆ
ಕಳೆದ ಎರಡು ವರ್ಷಗಳಿಂದ ವಿಪರೀತ ಕೊಳೆ ರೋಗ ಬಂದಿದ್ದರಿಂದ ರೈತರಿಗೆ ದೊರೆತ ಅಡಿಕೆ ಫಸಲು ಕಡಿಮೆಯಾಗಿತ್ತು. ಇದೀಗ ಅಡಿಕೆ ಧಾರಣೆ ಇತಿಹಾಸ ಗರಿಷ್ಠ 400 ರೂ. ಆಗಿದ್ದರೂ ಬಹುತೇಕ ರೈತರ ಕೈಯಲ್ಲಿ ಅಡಿಕೆ ಖಾಲಿಯಾಗಿದೆ. ಹಾಗಾಗಿ ಬಹುತೇಕ ಸಣ್ಣ ಹಾಗೂ ಮಧ್ಯಮ ರೈತರು ಈ ಬೆಲೆಯ ಖುಷಿಯನ್ನು ಅನುಭವಿಸುವ ಸ್ಥಿತಿಯಲ್ಲಿಲ್ಲ. ಹೊಸ ಅಡಿಕೆಯ ಧಾರಣೆಯೂ ಏರಿದರೆ ಮಾತ್ರ ಸಣ್ಣ ರೈತರಿಗೂ ಈ ಗರಿಷ್ಠ ಬೆಲೆಯ ಪಾಲು ದೊರಕೀತು ಎಂಬುದು ರೈತರ ಅಭಿಮತ.

ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದ್ದ ಪರಿಣಾಮ ದೇಶದ ಗಡಿಗಳೆಲ್ಲಾ ಬಂದ್ ಆಗಿವೆ. ದೇಶದ ಗಡಿಗಳಲ್ಲಿ ಅಡಿಕೆ ಆಮದು ಸಂಪೂರ್ಣ ಸ್ಥಗಿತಗೊಂಡಿದೆ. ಈ ಕಾರಣದಿಂದಾಗಿಯೇ ದೇಶಿ ಅಡಿಕೆಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಈ ಹಿಂದೆ ಇಂಡೋನೇಷ್ಯಾ, ಬರ್ಮಾ, ನೇಪಾಳ, ಬಾಂಗ್ಲಾದೇಶಗಳಿಂದ ಈಶಾನ್ಯ ರಾಜ್ಯಗಳ ಗಡಿಗಳ ಮೂಲಕ ವ್ಯಾಪಕ ಪ್ರಮಾಣದ ಅಡಿಕೆ ಅಕ್ರಮವಾಗಿ ಆಮದಾಗುತ್ತಿತ್ತು. ಈ ಕಳ್ಳ ಸಾಗಾಟದಿಂದಲೇ ಇದುವರೆಗೆ ದೇಶದ ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಧಾರಣೆ ಏರುತ್ತಿರಲಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಬ್ಬಕ್ಕ ರಾಣಿಯದು ಸ್ವಾಭಿಮಾನಿ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

Upayuktha

ತಮಿಳುನಾಡಿನ ಕೃಷಿ ಸಚಿವ ನಿಧನ

Harshitha Harish

ವಾಜಪೇಯಿಯವರ 2ನೇ ವರ್ಷದ ಪುಣ್ಯ ಸ್ಮರಣೆ- ರಾಷ್ಟ್ರಪತಿ, ಪ್ರಧಾನಿಯಿಂದ ನಮನ

Harshitha Harish

Leave a Comment