ಧರ್ಮ-ಅಧ್ಯಾತ್ಮ ಯೋಗ- ವ್ಯಾಯಾಮ

ಅಷ್ಟಾಂಗ ಯೋಗ ಸಾಧನಾ ಮಾರ್ಗ- (ಲೌಕಿಕತೆಯೂ ಆಧ್ಯಾತ್ಮಿಕತೆಯಾಗುವ ಪರಿ) ಭಾಗ- 2

 

ಆಧ್ಯಾತ್ಮಿಕ ಅಥವಾ ಲೌಕಿಕ ಸಾಧನೆ ಯಾವುದೇ ಅದರೂ ಅದರಲ್ಲಿ ಉನ್ನತಿಯ ಹೊಂದಬೇಕಾದರೆ ಒಂದು ನಿಯಮ ಪಾಲನೆ ಮುಖ್ಯ.

ಶ್ರೀ ಪತಂಜಲಿಯವರು ತಿಳಿಸಿದ ಐದು ನಿಯಮಗಳ (ಶೌಚ, ಸಂತೋಷ, ತಪಃ, ಸ್ವಾಧ್ಯಾಯ, ಈಶ್ವರ ಪ್ರಣಿಧಾನಾನಿ ನಿಯಮಾಃ) ಪಾಲಿಸುತ್ತಾ ಯಾವುದೇ ಸಾಧನೆ (ಲೌಕಿಕ ಸಾಧನೆಯೇ ಆದರೂ) ಮಾಡುವುದಾದರೂ ಅದು ಆಧ್ಯಾತ್ಮಿಕವೇ ಆಗಬಲ್ಲದು. ಇದು ವಿಶೇಷ. ಏಕ ಕಾಲಕ್ಕೆ ಲೌಕಿಕ ಜೀವನದಲ್ಲೇ ಇದ್ದರೂ ಅದುವೇ ಆಧ್ಯಾತ್ಮಿಕ ಜೀವನವಾಗಿ ಸಂತಸದ ಬಾಳು ನಮ್ಮದಾಗಬಹುದಾರೆ, (ಆಧ್ಯಾತ್ಮಿಕ ಜೀವನದಲ್ಲಿ ಒಲವು ಇರುವವರು ಲೌಕಿಕವ ಕಡೆಗಣಿಸುವರು- ಎಂಬ ನಂಬಿಕೆ ಜನ ಸಾಮಾನ್ಯರಲ್ಲಿ ಇದೆ) ಆಧ್ಯಾತ್ಮಿಕ ಜೀವನವ ಜೀವನದ ಸಂಧ್ಯಾ ಕಾಲದಲ್ಲಿ ನೋಡೋಣ ಎಂದು ಹೇಳಬೆಕಿಲ್ಲವಷ್ಟೇ?!!.

ಲೌಕಿಕ ಜೀವನವ ಎಲ್ಲರಂತೇ ಬದುಕುತ್ತಿದ್ದಂತೇ… ಅದು ಆಧ್ಯಾತ್ಮಿಕವಾಗಬಲ್ಲುದಾದರೆ, ನಾವು ಜೀವನ ಸಂಧ್ಯಾ ಕಾಲಕ್ಕೊರೆಗೆ ಕಾಯುವುದು ಬುದ್ದಿವಂತಿಕೆ ಆಗದು. ಅಲ್ಲವೇ?!!. ನಾವು ಈಗ ಲೌಕಿಕ ಜೀವನ ಎಲ್ಲರಂತೆಯೇ ಬಳಸಿಕೊಳ್ಳುತ್ತಾ ಇರುವಾಗ ಜೀವನದ ಜಂಜಡದಲ್ಲಿ ಕಡಿಮೆ ಸಮಯವಿರುವ ಈ ಸಂದರ್ಭದಲ್ಲಿ ಹೆಚ್ಚಿನ ಸಮಯದ ಅವಶ್ಯಕತೆಯೂ ಇಲ್ಲದೇ, ಲೌಕಿಕ ಜೀವನವೇ ಆಧ್ಯಾತ್ಮಿಕ ಜೀವನವಾಗುವುದಾದರೆ- ಅದು ಕಡಿಮೆ ಒತ್ತಡದ ಜೀವನವಾಗುವುದರಿಂದ ಎಲ್ಲರಿಗೂ ಯೋಗ್ಯವಾಗಿರುವ ಕೌಶಲ್ಯಯುಕ್ತ (ಯೋಗಃ ಕರ್ಮಷು ಕೌಶಲಂ) ಜೀವನವಾಗುವುದು. ಆದ್ದರಿಂದ ಪ್ರತೀ ಮಾನವನು ಇದರ ಅಳವಡಿಸಿಕೊಂಡು ಜೀವನದಲ್ಲಿ ಈಗಲೇ ಇಲ್ಲೇ ಆತ್ಯಂತಿಕ ಸಂತೃಪ್ತ ಜೀವನ ಹೊಂದಬಹುದು.ಆದರೆ ನಾವು ಮನಸ್ಸು ಮಾಡಬೇಕು.

ಮಾನವನ ಉನ್ನತಿ ಅವನ/ಳ ಮನದ ಯೋಚನೆ, ಭಾವನೆ ಮತ್ತು ಅದಕ್ಕೆ ಪೂರಕವಾದ ವರ್ತನಾ ವಿಧಾನಗಳನ್ನು ಅವಲಂಬಿಸಿ ಇರುತ್ತದೆ. ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ. ಜೀವ, ಜಗತ್ತು, ದೈವ (ಈಶ್ವರ) ನಿಗೂಢತೆ ಎಲ್ಲದಕ್ಕೂ ಸಮಂಜಸ ಉತ್ತರ ಹೇಳುವುದು ಅಥವಾ ಹೇಳಿದರೂ ಅರ್ಥೈಸಿಕೊಳ್ಳುವುದು ಕಷ್ಟ. ಆದರೆ ನಮ್ಮ ಋಷಿ ಮುನಿಗಳು, ವೇದೋಪನಿಷತ್ತುಗಳು ನಮಗನುಕೂಲವಾಗಲಿ ಎಂದು ಅನೇಕ ವಿಚಾರಗಳ ಹೇಳಿ ಹೋಗಿದ್ದಾರೆ. ಅವರು ಹೇಳಿದ 99 ಶೇಖಡಾ ವಿಚಾರಗಳಿಗೆ ವೈಜ್ಞಾನಿಕ ಆಧಾರ ಸಿಗುತ್ತದೆ, ಅವರು ಸುಳ್ಳು ಹೇಳದ ಸಾತ್ವಿಕರು ಎಂಬ ನಂಬಿಕೆ ನಮ್ಮದಾದರೆ ಅವರು ಹೇಳಿದ 1 ಶೇಖಡಾ ವಿಚಾರಗಳಿಗೆ ನಮಗೆ ಅರ್ಥವಾಗುವ ವೈಜ್ಞಾನಿಕ ದಾಖಲೆ ಸಿಗದಿದ್ದರೂ ಅವರು ಹೇಳಿದ್ದಾರೆ ಎಂದು ನಾವು ಆ 1 ಶೇಕಡಾ ವಿಚಾರಗಳನ್ನೂ ಹೆಚ್ಚಿನ ವಿಮರ್ಶೆ ಮಾಡದೇ ನಂಬಲೇಬೇಕಾಗುತ್ತದೆ. ಅದಕ್ಕೆ- ಆಪ್ತ ವಾಕ್ಯವೆಂದು ಅದನ್ನು ನಂಬ ತಕ್ಕದ್ದು ಎಂದೇ ಮತ.

ಅಷ್ಟಾಂಗ ಯೋಗ ಸಾಧನಾ ಮಾರ್ಗ…

ಅಷ್ಟಾಂಗ ಯೋಗ ಭೌತಿಕ ಬದುಕಿಗೂ ಅನ್ವಯಿಸುವುದು ಹೇಗೆಂದು ಅರಿಯ ಬೇಕಾದರೆ ಯೋಗ ನಿಯಮದಲಿ ಇರುವ ಸ್ವಾಧ್ಯಾಯದ ಬಗ್ಗೆ ತಿಳಿಯೋಣ. ಸ್ವ- ಅಧ್ಯಯ ಎಂದರೆ ತನ್ನ ತಾನರಿವ ವಿದ್ಯೆ (ಆಧ್ಯಾತ್ಮ ವಿದ್ಯಾ ವಿದ್ಯಾನಾಂ).

ಭೌತಶಾಸ್ತ್ರದಲ್ಲಿ ಥಿಯರಿ ಓಫ್ ರಿಲೆಟಿವಿಟಿಯಲ್ಲಿ ಒಂದು ವಿಚಾರ ಮಂಡನೆಯಲ್ಲಿ ಹೀಗೆ ಹೇಳಿದೆ — ಯಾವುದಾದರೂ ವಸ್ತು ಬೆಳಕಿನ ವೇಗದಲ್ಲಿ ಚಲಿಸುವುದಾದರೆ ಅದರ ಅಯಸ್ಸು ಹೆಚ್ಚು ಕಡಿಮೆ ಆಗುವುದಿಲ್ಲ- ಎಂದಿದೆ.ಭೌತಶಾಸ್ತ್ರದ ಯಾವ ನಿಯಮಗಳೂ ಅದಕ್ಕೆ ಅನ್ವಯಿಸುವುದಿಲ್ಲ. ಆಧ್ಯಾತ್ಮಿಕ ಬೆಳಕು ಎಲ್ಲಾ ಬೆಳಕಿನ ಬೆಳಕು. ಹಾಗಿದ್ದಾಗ ಅದಕ್ಕೆ ಲೌಕಿಕ ನಿಯಮಗಳು ಅನ್ವಯಿಸುವುದೆಂತು?!! ಇಂತಿಪ್ಪಾಗ ಆ ಬೆಳಕು ಏಕ ಕಾಲಕೆ ನಮ್ಮಿಂದ ಅನಂತ ದೂರದಲ್ಲಿ ಇರುತ್ತಾ ನಮ್ಮ ಆಂತರ್ಯವ ಬೆಳಗುವ ಬೆಳಕೂ ಆಗಿ ಇದೆ. ಇಡೀ ಬ್ರಹ್ಮಾಂಡದಲ್ಲಿ ಪೂರ್ಣವಾಗಿ ಸರ್ವ ವ್ಯಾಪಕವಾಗಿದ್ದು ನಮ್ಮೀ ಪಿಂಡಾಂಡದಲ್ಲೂ ಪೂರ್ಣವಾಗಿ ಇದೆ.(ಆಶ್ಚರ್ಯವತ್ ಪಶ್ಯತು,ವದತು,ಶೃಣೋತು). ಅದು ಭೌತಿಕ ನಿಯಮದ ಆಚೆ ಇರುವ ವಸ್ತು… ಅದೇ ಏಕ ಕಾಲಕೆ ಪ್ರಕೃತಿಯಲಿರ್ಪ ಬೇರೆ ಬೇರೆ ಪಶು,ಪಕ್ಷಿ ಚರಾಚರ ವಸ್ತುಗಳೆಲ್ಲದರಲಿ ಇರುವ ಏಕವೇ ಆದ ಪೂರ್ಣ ಚೈತನ್ಯ.

Home

(ಓಂ.. ಪೂರ್ಣಮದಃ ಪೂರ್ಣಮಿದಂ….) ದ್ವೈತದಂತೆ ತೋರಿಸಿಕೊಳ್ಳುತ್ತಿರುವ ಅದೇ… ಅದ್ವೈತ ವಸ್ತು (ಅದಕ್ಕೇ ಇದು ಅದ್ಭುತ ಪರಮಾಶ್ಚರ್ಯ ಚೈತನ್ಯ). ಮೇಲಿನ ವಿಚಾರಗಳ ಗುರುಗಳ ಬಳಿ ಸಾರಿ ಆಗಾಗ ಶ್ರವಣ, ಮನನ, ನಿದಿಧ್ಯಾಸನ ಮಾಡುತ್ತಾ ನಮ್ಮ ಮನಕ್ಕೆ ಅನುಷ್ಟಾನ ಮಾಡುಲನುಕೂಲವಾಗುವ ಸಾಧನಾ ಪಥ (ಭಕ್ತಿ, ಕರ್ಮ, ಜ್ಞಾನ, ಹಠ ಇತ್ಯಾದಿ) ಹಿಡಿಯಬೇಕು. ಸ್ವಾಧ್ಯಾಯದ ಆಧಾರದಲ್ಲಿ ನಾವು ಚಿಂತನೆ ಮಾಡಿದಾಗ ನಮ್ಮ ಮನಸ್ಸಿಗೆ ಸಹಜವಾಗಿ ಅನಿಸುವುದು (ನನ್ನ ಒಳಗೂ ಅವನೇ) ಅಥವಾ ಬರುವುದು ಸೋಹಂ ಭಾವ. ಸೋಹಂ, ತತ್ ತ್ವಂ ಭಾವ ಉಂಟಾದಾಗ ಸಹಜವಾಗಿ ಹೊಳೆಯುವುದೇನೆಂದರೆ- ನನ್ನ ದೇಹದ ಕಣಕಣಗಳೂ ಆ ದೈವೀ ಚೈತನ್ಯವೇ ತುಂಬಿದೆ.. ಅದೇ ನನ್ನ ದೇಹ,ಮನೋಬುದ್ದಿಗಳ ನಡೆಸುತ್ತಿದೆ.

ಲೌಕಿಕದ ನಾನು (ಮನಸ್ಸು) ಸೊನ್ನೆ ಆಧ್ಯಾತ್ಮಿಕತೆಯ (ಆತ್ಮ) ನಾನು ಪೂರ್ಣ. ನನ್ನಂತೇ… ಜಗದ ಎಲ್ಲಾ ಚರಾಚರಗಳಲ್ಲೂ ಆ ಏಕಂ ಸತ್ ಇರುವುದು ಎಂಬರಿವು ಸಹಜವಾಗುವುದು. ಹೀಗೆಂದಾದಾಗ.. ಹೇಗೆ ನಾನು ಶ್ರೇಷ್ಠನೋ ಹಾಗೆಯೇ ಪ್ರತಿಯೊಂದೂ, ಪ್ರತಿಯೊಬ್ಬನೂ ಶ್ರೇಷ್ಠ ಎಂಬ ಯೋಚನೆ, ಭಾವನೆಯಲ್ಲಿ ಇದ್ದು- ಸಮಾನ ಭಾವ (ಸಮತ್ವಂ ಯೋಗಮುಚ್ಚ್ಯತೆ) ಉಂಟಾಗಿ ಅಹಂ (ಹೆಚ್ಚುಗಾರಿಕೆ) ನಾಶವಾಗುವುದು. ಆಧ್ಯಾತ್ಮಿಕ ಜೀವನಕ್ಕಿರುವ ಮೊದಲ ಹೆಬ್ಬಾಗಿಲು ನಮ್ಮ ಅಹಂ ನಾಶ (ಮನ್ನಣೆಯ ದಾಹವೀ ಎಲ್ಲಕಿಂ ತೀಕ್ಷ್ಣತಮ ತಿನ್ನುವುದು ಆತ್ಮವನೆ -ಮಂಕುತಿಮ್ಮ). ನಮ್ಮ ಅಶೌಚ ನಮ್ಮ ಮನದ (ಅಹಂ) ಕಲ್ಮಶದಲ್ಲೇ ಇದೆ. ಈಗ ಅಹಂ ನಾಶವಾದ ಕೂಡಲೇ ಮನಃ ಶುದ್ದಿ. ಇದೇ ನಿಯಮದ ಮೊದಲ ಸೂತ್ರವಾದ ಶೌಚ.

ಅದಕ್ಕೇ- ಅಪವಿತ್ರ ಪವಿತ್ರೋ ವಾ ಸರ್ವಾವಸ್ತಾಂಗ ತೋಪಿವ| ಯಸ್ಮರೇತ್ ಪುಂಡಾರೀಕಾಕ್ಷಂ ಸಭಾಹ್ಯಾಭ್ಯಂತರ ಶುಚಿಃ| ಎಂದಿದ್ದಾರೆ. ಎಂದರೆ – ಆ ಸರ್ವವ್ಯಾಪಕನ ಭಾವಶುದ್ದಿಯಿಂದ ನೆನೆದರೆ (ಭಕ್ತಿ ಯೋಗ) ಒಳ ಹೊರ ಎಲ್ಲೆಲ್ಲೂ ಅವನೇ ಎಂಬ ಅರಿವು ಉಂಟಾಗಿ ( ಜ್ಞಾನ ಯೋಗ), ಎಲ್ಲವೂ ದೈವವೇ ಅದ್ದರಿಂದ ಎಲ್ಲವೂ ಶುದ್ದ ಎಂಬ ಜ್ಞಾನ ದಿಟವಾಗುವುದು, ನಮ್ಮ ಒಳಗಿನ ಅಹಂ ನಾಶವಾಗುವುದು -ಎಂದೇ ಭಾವಾರ್ಥ. ಈ ಭಾವದೊಂದಿಗೆ ಅಷ್ಟಾಂಗ ಯೋಗ ಯಾ ಲೌಕಿಕ ವ್ಯವಹಾರ ಮಾಡುವುದಾದರೆ ಅದೆಲ್ಲಾ ಪವಿತ್ರ ಕರ್ಮಗಳೇ ಆಗುವುದು (ಕರ್ಮ ಯೋಗ). ನಾವು ಮಾಡುವ ಯಾವುದೇ ಕೆಲಸದ ಬಗ್ಗೆ ನಮಗೆ ಹೆಮ್ಮೆ, ಸಂತೃಪ್ತ ಭಾವ,ದೈವ ನನಗೊದಗಿಸಿದ ಜವಾಬ್ದಾರಿ ಎಂಬ ಅರಿವಿನೊಂದಿಗೆ ಸಂತೋಷದಿಂದ ತೊಡಗಿಸಿಕೊಂಬುದಾದರೆ ಆಗ ಅದೂ ಶೌಚ ಹಾಗೂ ಸಂತೋಷ. ಸಂತೋಷ ನಿಯಮದ ಎರಡನೇ ಮಟ್ಟಿಲು. ನಾನು ಅವನೇ ಎಂಬುದರ ನಂಬುವುದು ಕಷ್ಟ. ಆದರೂ ಇದು ಆಪ್ತ ವಾಕ್ಯ. ಆದ್ದರಿಂದ ನಾವು ನಂಬಲೇ ಬೇಕಾಗಿದೆ. ಅದರ ಸ್ವ ಸಂಮೋಹಿನಿಗೊಳಿಸುತ್ತಾ ನಮ್ಮ ಮನಕ್ಕೆ ಪುನರ್ಮನನ ಮಾಡುತ್ತಿದ್ದರೆ ಆ ನಂಬಿಕೆ ದೃಢವಾಗುವುದು. ಆಗ (ನನ್ನ ಒಡೆಯ ನಾನೇ/ ಉದ್ದರೇತ್ ಆತ್ಮನಾತ್ಮಾನಾಂ/ ನನ್ನ ಒಳಗೂ ಅವನೇ) ನಮಗೆ ಒಂದು ಸಂತೋಷದ ಅನುಭೂತಿ ಉಂಟಾಗುವುದು.

ನಿಯಮದ ಒಂದು ಮತ್ತು ಎರಡನೇ ಮೆಟ್ಟಲು ಸಾಧಿತಗೊಂಡು-ಈ ಚಿಂತನೆಯ ನಾವು ಮಾಡುವ ಎಲ್ಲಾ ಕಾರ್ಯಗಳಲ್ಲಿ ನಿರಂತರ (ನೈರಂತರ್ಯಂ) ಅಳವಡಿಸುವುದಾದರೆ ಅದೇ ತಪಃ. ಯೋಗಾಸನ ಅಭ್ಯಾಸದಲ್ಲಿ- ನಾವು ಮಾಡುವ ಪ್ರತೀ ಆಸನವೂ ನನ್ನ ಆಂತರ್ಯದಲ್ಲಿರುವ ಆ ಏಕಂ ಸತ್ ಗೆ ಮಾಡುವ ಕೃತಜ್ಞತಾ ಪೂರ್ವಕ ಪ್ರಣಾಮ ಎಂದೇ ಭಾವಿಸುತ್ತಾ ಸಂತೋಷ ಉತ್ಸಾಹದೊಂದಿಗೆ ಆಸನ ಮಾಡುವಾಗ ದೇಹದ ಯಾವ ಭಾಗಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೋ ಆ ಜಾಗಕ್ಕೆ ಹೆಚ್ಚಿನ ಪ್ರಾಣದ ಹರಿವು ಉಂಟಾಗುವುದರ, ಹಾಗೂ ಉಸಿರಿನ ಗತಿಯನ್ನೂ ಗಮನಿಸುತ್ತಾ, ಪ್ರತೀ ಪೂರಕದಲ್ಲಿ ವಾಯುವಿನ ದೈವೀ ಶಕ್ತಿ (ನಮಸ್ತೇ ವಾಯೋಃ ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ) ನಮಗೊದಗಿ ಬರುವುದರ ಗಮನಿಸುತ್ತಾ, ನಿಶ್ವಾಸದಲ್ಲಿ ನನ್ನ ದೇಹದ ಕಣಕಣಗಳಲ್ಲಿರುವ ಕಲ್ಮಶಗಳು ಹೊರ ಹಾಕಲ್ಪಡುತ್ತಿದೆ ಎಂದೇ ಭಾವಿಸುತ್ತಾ, ಆಸನದಿಂದ ವಿಶ್ರಾಂತಿಗೆ ಬಂದಾಗ ಇಡೀ ದೇಹವ ಶಾಂತ ಸಮಾಧಾನದಿಂದ ಸಂತೋಷದಿಂದ ಏಳೂ ಚಕ್ರಗಳಲ್ಲಿ ಇರುವ ಚೈತನ್ಯಗಳ ಗುರುತಿಸುತ್ತಾ (ಧಾರಣ- ಅಷ್ಟಾಂಗ ಯೋಗದ ಆರನೇ ಮೆಟ್ಟಲು) ತೊಡಗಿಸಿಕೊಂಡು ವಿಶ್ರಾಂತಿ ಸಾಕೆನಿಸಿದಾಗ ಮುಂದಿನ ಆಸನಕ್ಕೆ ಹೋಗಬೇಕು.

ಹೀಗೆ ನಿರಂತರ ಮನವ ಕಾಪಿಡುವುದಕ್ಕೇ ತಪಃ ಎನ್ನುವುದು. ಇದೇ ನಿಯಮದ ಮೂರನೇ ಮೆಟ್ಟಿಲು. ಈಗ ನಾವು ಅಷ್ಟಾಂಗ ಯೋಗದ ಮೂರನೇ ಮತ್ತು ನಾಲ್ಕನೇ ಮೆಟ್ಟಿಲುಗಳಾದ ಆಸನ, ಪ್ರಾಣಾಯಾಮ ಅನುಸರಿಸಿದಂತೇ ಆಯಿತು. ನಾವೊಂದು ಧನ್ಯತಾ ಭಾವದಿಂದ ಆಸನ ಪ್ರಾಣಾಯಾಮಗಳಲ್ಲಿ ತೊಡಗಿಸಿಕೊಳ್ಳುವುದಾದರೆ ನಮಗೆ ಯಾವುದೇ ಇಂದ್ರಿಯ ಚಪಲದ ತೊಡಕುಗಳೂ ಉಂಟಾಗದು.

ನಾವು ಯಾವುದಾದರೂ ಕಾರ್ಯದಲ್ಲಿ ಶ್ರದ್ದೆಯಿಂದ ತೊಡಗಿಸಿಕೊಂಡಿರುವಾಗ ನಮಗೆ ಬೇರೆ ಯಾವ ಇಂದ್ರಿಯ ಸೆಳೆತಗಳು ಉಂಟಾಗದೇ ನಾವು ಆ ಕೆಲಸವ ಮಾಡುವಂತೇ- ಇದೂ ಕೂಡ. ಇದೇ ಪ್ರತ್ಯಾಹಾರ( ಇಂದ್ರಿಯ ನಿಗ್ರಹ), ಈಗ ನಮ್ಮ ಮನವು ಶೌಚದಲ್ಲಿ ಇದ್ದು ಏಳೂ ಚಕ್ರಗಳಲ್ಲಿ ಚೈತನ್ಯವಿದೆ ಎಂದೇ ಭಾವಿಸುತ್ತಾ (ಧ್ಯಾನಾವಸ್ತಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ) ಮುಂದುವರಿಯಬೇಕು. ಅದೇ ಧಾರಣ (ಅಷ್ಟಾಂಗ ಯೋಗದ ಐದನೇ ಮೆಟ್ಟಿಲು). ಈ ಚಿಂತನೆಯಲ್ಲೇ ಮುಂದುವರಿಯುತ್ತಾ ನಿಯಮದ ನಾಲ್ಕನೇ ಮೆಟ್ಟಿಲಾದ ಸ್ವಾಧ್ಯಾಯ (ನಿತ್ಯಾನಿತ್ಯ ವಿವೇಕ ವಿಚಾರ) ಚಿಂತನೆ ಮಾಡುತ್ತಾ ನಿಯಮದ ಐದನೇ ಮಟ್ಟಿಲಾದ ಈಶ್ವರ ಪ್ರಣಿಧಾನ (ಎಲ್ಲಾ ದೈವೇಚ್ಚೆ) ಭಾವವ ಆಸನ ಯಾ ಯಾವುದೇ ಸಾಧನಾ ಪಥದಲ್ಲಿ ಅಳವಡಿಸುವುದಾದರೆ ಅದು ಆ ಕಾರ್ಯದಲ್ಲಿದ್ದೂ ಧ್ಯಾನದಲ್ಲಿದ್ದಂತೆ. ಅದೇ ಅಷ್ಟಾಂಗ ಯೋಗದ ಏಳನೇ ಮೆಟ್ಟಿಲಾದ ಧ್ಯಾನ. ಈ ಸ್ಥಿತಿಯಲ್ಲಿ ಮನಸ್ಸು ನಿರುಮ್ಮಳವಾಗಿ ಇರುವುದು. ಆಗಲೇ ಡೊಪಮೀನ್, ಸರೋಟಿನಿನ್, ಓಕ್ಷಿಟೋಸಿನ್ ರಸಧಾತುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಬೇಕೋ ಅಷ್ಟು ಸ್ರವಿಸುವುದು. ಆಗ ನಮ್ಮ ಬುದ್ದಿ ನಮ್ಮ ಹತೋಟಿಯಲ್ಲಿ ಸಂತೋಷ ಭಾವದಲ್ಲಿ ಇರುವುದು. ಒಂದು ಅನಿರ್ವಚನೀಯ ಆನಂದ ನಮಗೆ ಸ್ಥಿರ ಬುದ್ದಿಯ ಕೊಡುವುದು. ಇದೇ ಅಷ್ಟಾಂಗ ಯೋಗದ ಎಂಟನೇ ಮೆಟ್ಟಿಲು ಆದ ಆನಂದಾನುಭೂತಿಯ ಸಮಾಧಿ ಸ್ಥಿತಿ.

ಭಗವದ್ ಚಿಂತನೆ ಇಲ್ಲದೇ ಆಸನ ಮಾಡಿದರೆ ಎಂಡೊರ್ಫಿನ್ ಹಾರ್ಮೋನ್ ಸೃವಿಸುವುದು ಆದರೆ ಅದರಿಂದ ದೇಹಕ್ಕೆ ಸ್ವಲ್ಪ ಹಿತವಾಗಬಹುದಾದರೂ ಆನಂದಾನುಭೂತಿ ಉಂಟಾಗದು.

ನಿಮಗೆ ಭಕ್ತಿ ಮಾರ್ಗ ಇಷ್ಟವಾದರೂ- ಎಲ್ಲೆಲೂ ಅವನೇ ಎಂಬ ನಿಜ ಭಾವ ತುಂಬಿ, ದೇವಗಾನದಲ್ಲಿ ಶರಣಾಗತ ಭಾವದಿಂದ ತೊಡಗಿಸಿಕೊಳ್ಳುವುದಾದರೆ ಅಲ್ಲಿಯೂ ಇದೇ ಸಂತೃಪ್ತ ಭಾವ ಉಂಟಾಗದೇ ಇರದು. ಬದುಕಿನಲ್ಲಿ ಸಂತೃಪ್ತಿ ಬೇಕಾದರೆ ಯಾವುದಾದರೂ ಸಾಧನಾ ಪಥ ಹಿಡಿಯಲೇ ಬೇಕು. (ನಾನ್ಯಃ ಪಂಥಾ ಅಯನಾಯ ವಿಧ್ಯತೇ) ಎಲ್ಲವೂ ಅವನಿಂದಲೇ ಅದ್ದರಿಂದ ಯಾವುದೂ ಕೀಳಲ್ಲ, ಮೇಲಲ್ಲ. ಆ ವಿಚಿತ್ರಕೆ ನಮಿಸೋ ಮಂಕುತಿಮ್ಮ.. ಎಂಬ ಭಾವ ಮುಖ್ಯ. ನಮ್ಮ ಭಾವನೆ,ಯೋಚನೆ ಅದಕ್ಕೆ ಪೂರಕವಾದ ವರ್ತನೆ ನಮಗೆ ಆನಂದಾನುಭೂತಿ ಕೊಟ್ಟೀತು.
|ಸರ್ವೇ ಸಂತು ನಿರಾಮಯಾಃ|

-ಶ್ಯಾಮ ಪ್ರಸಾದ ಮುದ್ರಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸುಯೋಗ- ಯೋಗಾಸನ ಮಾಲಿಕೆ 11- ಪಾರ್ಶ್ವೋತ್ಥಾನಾಸನ (Parshwothanasana)

Upayuktha

ಶ್ರೀ ಸರಸ್ವತೀ ಅಷ್ಟೋತ್ತರ ಶತನಾಮ ಸ್ತೋತ್ರ

Upayuktha

ನಿತ್ಯ ಪಂಚಾಂಗ: ಆಗಸ್ಟ್ 5, 2019

Upayuktha