ಯೋಗ- ವ್ಯಾಯಾಮ

ಅಷ್ಟಾಂಗ ಯೋಗ ಸಾಧನಾ ಮಾರ್ಗ…

ಮಾನವ ಜನ್ಮ ದೊಡ್ಡದು… ಅದ ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ…. ಎಂದು ದಾಸವರೇಣ್ಯರುಗಳೆಲ್ಲಾ ಬೇರೆ ಬೇರೆ ರೀತಿಯಲ್ಲಿ ಬಿನ್ನವಿಸಿದ್ದಾರೆ. ಹೇಗೆ ನದಿಗಳೆಲ್ಲಾ ಸಹಜವಾಗಿ ಸಮುದ್ರಗಾಮಿಯಾಗಿ ಹರಿಯುತ್ತಿದೆಯೋ ಹಾಗೆಯೇ ಎಲ್ಲಾ ಜೀವ ಜಂತುಗಳೂ ಜನ್ಮದಿಂದ ಜನ್ಮಕ್ಕೆ ಕೆಳ ಹಂತದಿಂದ ಮೇಲಿನ ಹಂತಕ್ಕೆ ಹೋಗುತ್ತಾ ಅರಿತೋ ಅರಿಯದೆಯೋ ಪರಮ ದೈವತ್ವದೆಡೆಗೇ ಪಯಣಿಸುತ್ತಿದೆ. ಪ್ರತೀ ಜೀವಾತ್ಮಕ್ಕೂ ಆ ಪರಮ ಪದವ ಸೇರುವ ಅವ್ಯಕ್ತ ಯಾ ವ್ಯಕ್ತ ತವಕ ಇದ್ದೇ ಇದ್ದರೂ ಜಗದ ಮಾಯೆಯ ಹಿಡಿತ, ಸಂಚಿತ, ಪ್ರಾರಬ್ದ ಆಗಾಮೀ ಕರ್ಮ ಫಲಗಳ ಸೆಳೆತಗಳು ಜೀವನವ ಹಿಂಡಿ ಹಿಪ್ಪೆಗೊಳಿಸುತ್ತಿರುತ್ತದೆ.

ಸಾಧನಾ ಫಥದ ಅರಿವಿರದವರಿಗೆ ಜೀವನದಲ್ಲಿ ಎಲ್ಲವೂ ಅನುಕೂಲವಾಗಿ ನಡೆದರೂ ಏನೋ ಹೇಳಲಾಗದ ದುಗುಡ (ಮನೆಯಿಂದ ಹೊರಟ ವ್ಯಕ್ತಿಗೆ ಪುನಃ ಮನೆಗೆ ತಲುಪಲಾಗದೇ ಇರುವ ತರಹದ ದುಗುಡ) ಕಾಡುತ್ತಿರುವುದು ಜೀವನದ ನಿಜ ಉದ್ದೇಶ ಅರಿಯದೇ ಇರುವುದರಿಂದ. ಹೀಗೇ ಸುಮ್ಮನೆ ವ್ಯರ್ಥ ಜೀವನ ಬದುಕಿ ಹೋಗುವವರು ಬಹಳ ಜನ.

ಇಂತಹವರು- ಪರಮಾತ್ಮ ತತ್ವ ತಿಳಿಯದೇ ಇರುವುದು, ಆ ದಿಸೆಯಲ್ಲಿ ಪ್ರಯತ್ನಿಸದೇ ಇರುವುದು ಆತ್ಮ ಹತ್ಯೆಗೆ ಸಮ ಎಂಬ ಅರಿವೂ ಇರದ ಅವಿವೇಕಿಗಳು. ಕಾಲಾಂತರದಲ್ಲಿ ಅಂತಹವರ ಪ್ರಾರಬ್ದ ದೋಷ ಕಡಮೆಯಾದಾಗ ದೈವವೇ ಕರುಣಾಳುವಾಗಿ ಸ್ವಲ್ಪ ಸ್ವಲ್ಪವೇ ಸತ್ಯವ ತೋರಿಸುತ್ತಾ- ಇದು ಅಲ್ಲ… ಇದು ಅಲ್ಲ… (ನೇತಿ ನೇತಿ) ಎಂದು ಬುದ್ದಿಯ ಪ್ರಚೋದಿಸಿ ಸ್ವಲ್ಪ ಸ್ವಲ್ಪವೇ ಪೂರ್ಣತೆಯೆಡೆಗೆ ಕೈ ಹಿಡಿದು ಕರೆದುಕೊಂಡು ಹೋಗುವುದು.

ಈ ಪರಿಜ್ಞಾನದೊಂದಿಗೆ ತೊಡಗಿಸಿಕೊಳ್ಳುವ ಪ್ರಕ್ರಿಯೆಗೆ ಯೋಗ (ದೈವ ಮಿಲನಕೆ ಅನುಕೂಲಿಪ) ಸಾಧನಾ ಪಥ ಎಂದು ಹೇಳಬಹುದು. ಯೋಗ ಸಾಧನಾ ಪಥದಲ್ಲಿ ಹಲವು ವಿಧ. ಭಕ್ತಿ, ಕರ್ಮ, ಜ್ಞಾನ, ಹಠ ಇತ್ಯಾದಿ. ಯಾವುದೇ ಪಥದಲ್ಲಾದರೂ ಸ್ವಲ್ಪವಾದರೂ ಇತರ ಪಥಗಳ ವಿಚಾರಗಳು ಸಮ್ಮಿಳಿತವಾಗಿ ಇದ್ದೇ ಇರುತ್ತದೆ. ಜ್ಞಾನವಿಲ್ಲದ ಭಕ್ತಿ ಮೂಡ ಭಕ್ತಿಯಾಗುವುದು. ಹಾಗೇನೇ.. ಭಕ್ತಿ ಇಲ್ಲದ ಜ್ಞಾನ ಪೇಲವ. ಭಕ್ತಿ, ಜ್ಞಾನಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಕರ್ಮ ಬೇಕೇ ಬೇಕಲ್ಲಾ?!!. ಆದ್ದರಿಂದ ಯಾವುದೇ ಸಾಧನಾ ಪಥವಾದರೂ ಅವುಗಳಿಗೆ ಕಣ್ಣಿಗೆ ಕಾಣದ ನಿಯಮವೆಂಬ ಪಂಚಾಂಗವಿದೆ. ಅದರ ಅನುಸಂಧಾನ ಮಾಡುತ್ತಾ ಯೋಗ ಸಾಧನೆ ಮಾಡಬೇಕು ಎಂದೇ ಪ್ರಾಜ್ಞರ ಮತ. ಶೌಚ ಸಂತೋಷ ತಪಃ ಸ್ವಾಧ್ಯಾಯ ಈಶ್ವರ ಪ್ರಣಿಧಾನಾನಿ ನಿಯಮಾಃ – ಎಂದೇ ಶ್ರೀ ಪತಂಜಲಿಯವರು ಯೋಗಸೂತ್ರದಲ್ಲಿ ತಿಳಿಸಿದ್ದಾರೆ. ಅವು ಹೇಗೆ ಎಂದು ವಿಮರ್ಶಿಸೋಣ….

Home

ಯೋಗ ನಿಯಮ..
ಮನದಲಿ ಸರ್ವತ್ರ ಓತಪ್ರೋತವಾಗಿರ್ಪ ಆ ಏಕಂ ಸತ್ಯವ ನೆನೆಯುತ ಯಾವುದೇ (ಆಸನ) ಕಾರ್ಯಂಗಳ ಮಾಳ್ಪುದಾದರೆ ಆಗಲೇ ನಮ್ಮೊಳ ಹೊರಗಿನದೆಲ್ಲಾ ಶೌಚವಾಗುವುದಯ್ಯಾ……..
ಆ ಚೈತನ್ಯ ಸರ್ವವ್ಯಾಪಕವೆಂಬ ಚಿಂತನೆ ದೃಡವಾದೊಡೆ ಆಗಲೇ ಸಹಜ ಸಂತೋಷ ಪ್ರತಿಬಿಂಬಿಪುದು ನಮ್ಮ ಮುಕಾರವಿಂದದಲಿ ಅಯ್ಯಾ…….
ಈ ಸ್ಥಿತಿಯ ಶ್ರದ್ಧೆ ನಿಷ್ಟೆಯಲಿ ಕಾಪಿಡುತ ಮಾಳ್ಪ (ಆಸನ) ಕಾರ್ಯಂಗಳ ಮುಂದುವರಿಸುತಿರ್ದು.. ಸಹಜ ಸಂತೃಪ್ತ ಭಾವದಲಿ ನಮ್ಮಾಂತರ್ಯದಲಿರ್ಪ ವಿಶ್ವ ಚೈತನ್ಯವ ಧ್ಯಾನಿಸುತ ಮುಂದಡಿ ಇಡುವ ಪರಿಯೇ ತಪವಯ್ಯಾ….
ಈ ಪರಿಯಲಿರಲನುಕೂಲಿಪ ವಿಚಾರಂಗಳಾದ ತತ್ ತ್ವಂ ಚಿಂತನಾ ಲಹರಿಯೊಳಗಿರುತ….. ವಿವೇಕದಿ ವಿವೇಚಿಸುತ ಮನಕೆ ಮುದನೀಡುತ……. (ಆಸನ) ಕಾರ್ಯಂಗಳಲಿ ಮುಂದುವರಿವ ಪರಿಯೇ ಸ್ವಾಧ್ಯಾಯವಾಧಾರಿತ ಕ್ರಿಯೆಯಯ್ಯಾ….

ಇಂತಿರ್ಪುದೀ ಲೋಕ, ಎಲ್ಲವೂ ಈಶ್ವರಾಧೀನ ಮತ್ತವನ ಪ್ರಸಾದವೆಂಬ ದೃಡ ನಿಶ್ಚಯದಲಿರ್ದು.. ನನ್ನೀ ದೇಹವೆಂಬ ದೇವಾಲಯದೊಳಗಿರ್ಪ ನಿಶ್ಚಲ ತತ್ವಕೆ ಶರಣು ಶರಣೆಂದೆನುತ……. ಅವನ ಕೃಪೆಯಿಂದಲೇ ನಾ ಮಾಳ್ಪೆ ಈ (ಆಸನ) ಕಾರ್ಯಂಗಳ ಎಂಬ ಚಿಂತನಾ ಲಹರಿಯೇ ಈಶ್ವರ ಪ್ರಣಿಧಾನವಯ್ಯಾ –
ಇಂತಾ ಭಾವ ಮನವ ಶಾಂತಿಯಲಿರಿಸಿ ವಿವರಿಸಲಾಗದ ಭಾವೋನ್ಮಾದಕ್ಕೊಯ್ವದು…………
ಅದೇ ಮನದ ಸಂಸ್ತಿತಿ ಅದೇ ಆತ್ಮ ತೃಪ್ತಿ ಮುಕ್ತಿ…. ಇದನನುಭವಿಸಲೇ ಈ ಜೀವನವಯ್ಯಾ…
ಈ ನಿಯಮಂಗಳು ಬರೀ ಯೋಗಾಸನಾಭ್ಯಾಸಕೆ ಮಾತ್ರವಲ್ಲವಯ್ಯಾ….. ಈ ಸೂತ್ರ ನಾವು ಆಚರಿಸಬಹುದಾದ ಭಕ್ತಿ,ಕರ್ಮ,ಜ್ಞಾನ, ಹಠ ಯೋಗ ಮಾರ್ಗಂಗಳೆಲ್ಲದಕೂ ಪಂಚಾಗದಂತಿರ್ಪ ಸೂತ್ರವಯ್ಯಾ- ಶ್ಯಾಮ.

ಯಮ ನಿಯಮಗಳ ಪಾಲಿಸುತ ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳ ಏಕ ಕಾಲಕೆ ಸಾಧಿಸುವ ಕಲೆಯೇ ಅಷ್ಟಾಂಗ ಯೋಗ. ಮೇಲಿನದರಲ್ಲಿ ಯಾವುದಾದರೂ ಒಂದರ ಬಗ್ಗೆ ಮಾತ್ರ ಗಮನಕೊಟ್ಟು ಮಾಡುವ ಅಭ್ಯಾಸ ಮಾಡುವುದಾದರೆ ಅದು ಯೋಗಾಸನ ಎಂದು ಆಗದು. ಅದು ಸರ್ಕಸ್ ಯಾ ವ್ಯಾಯಮವೆಂದಷ್ಟೇ ಆಗಬಹುದು. ಯೋಗದಲ್ಲಿ ಎಷ್ಟು ಪರಿಣಾಮಕಾರಿಯಾಗಿ ನಾವು ಭಾಗವಹಿಸುವೆವೋ ಅಷ್ಟು ಪ್ರಯೋಜನ ಒದಗೀತು. ಪೂರ್ತಿ ದೈವ ಚಿಂತನೆಯೊಂದಿಗೆ ಮಾಡುವ ಯೋಗಾಸನಗಳು ಯಾ ಲೋಕ ವ್ಯವಹಾರಗಳು ಮಾತ್ರ ಉನ್ನತ ದೈವಾನುಭೂತಿ ಕೊಡಬಲ್ಲದು.
– ಶ್ಯಾಮ ಪ್ರಸಾದ ಮುದ್ರಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಯೋಗ ಒಂದು ದಿನದ ಆಡಂಬರದ ಆಚರಣೆ ಆಗದೆ ಜೀವನದ ದಾರಿದೀಪವಾಗಲಿ

Upayuktha

ಯೋಗ ನಮ್ಮ ‘ಜೀವನ ಕ್ರಮ’ ವಾದಾಗ ರೋಗಗಳಿಗೆ ಇಲ್ಲ ಜಾಗ…

Upayuktha

ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವತಿಯಿಂದ ಯೋಗ ತರಗತಿ ನೇರಪ್ರಸಾರ

Upayuktha