ದೇಶ-ವಿದೇಶ ಪ್ರಮುಖ

ಅಯೋಧ್ಯೆ ಭೂ ವಿವಾದ: ನವೆಂಬರ್‌ನಲ್ಲಿ ಅಂತಿಮ ತೀರ್ಪು ಸಾಧ್ಯತೆ ಉಜ್ವಲ

(ಚಿತ್ರ ಕೃಪೆ: ಪತ್ರಿಕಾ.ಕಾಂ – ಹಿಂದಿ ಪೋರ್ಟಲ್)

ಹೊಸದಿಲ್ಲಿ:

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ 70 ವರ್ಷಗಳ ಹಳೆಯದಾದ 2.77 ಎಕರೆ ಭೂಮಿಯ ಮಾಲೀಕತ್ವದ ದಾವೆ ಕುರಿತು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಅಲಹಾಬಾದ್ ಹೈಕೋರ್ಟ್ ತೀರ್ಪಿನಂತೆ ಒಟ್ಟು ಭೂಮಿಯ ಮೂರನೇ ಎರಡರಷ್ಟು ಪಾಲು ಪಡೆದ ಹಿಂದೂ ಕಕ್ಷಿದಾರರು ತಮ್ಮ ವಾದಗಳನ್ನು ಪೂರ್ಣಗೊಳಿಸಿದ್ದಾರೆ. ಆಗಸ್ಟ್ 6ರಿಂದ ಸುಪ್ರೀಂ ಕೋರ್ಟ್‌ ಈ ಕುರಿತು ದೈನಂದಿನ ವಿಚಾರಣೆ ನಡೆಸುತ್ತಿದೆ.

ಕಕ್ಷಿದಾರರ ವಾದಗಳನ್ನು ತಾಳ್ಮೆಯಿಂದ ಆಲಿಸಿದ ನ್ಯಾಯಾಲಯ ಪರಸ್ಪರರ ವಾದಗಳ ಪುನರಾವರ್ತನೆಗೆ ಅವಕಾಶ ನೀಡಲಿಲ್ಲ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎಸ್‌.ಎ ಬೊಬ್ಡೆ, ಡಿ. ವೈ ಚಂದ್ರಚೂಡ್, ಅಶೋಕ್ ಭೂಷಣ್‌ ಮತ್ತು ಎಸ್‌ ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ ಅನೂಹ್ಯವಾದ ವೇಗದಲ್ಲಿ ತ್ವರಿತವಾಗಿ ಹಿಂದೂ ಕಕ್ಷಿದಾರರ ವಿಚಾರಣೆಗಳನ್ನು ಪೂರ್ಣಗೊಳಿಸಿದೆ.

ಕ್ಷೇತ್ರದ ದೇವತೆ ರಾಮ್‌ಲಲ್ಲಾ, ನಿರ್ಮೋಹಿ ಆಖಾಡ, ಆಲ್‌ ಇಂಡಿಯಾ ರಾಮಜನ್ಮಸ್ಥಾನ್ ಪುನರುತ್ಥಾನ್ ಸಮಿತಿ, ಹಿಂದೂ ಮಹಾಸಭಾದ ಎರಡು ಬಣಗಳು, ಶಿಯಾ ವಕ್ಫ್‌ ಬೋರ್ಡ್, ಗೋಪಾಲ್ ಸಿಂಗ್ ವಿಶಾರದ ಅವರ ಶಾಸನಬದ್ಧ ಉತ್ತರಾಧಿಕಾರಿ ಅವರ ವಾದಗಳ ಆಲಿಕೆಯನ್ನು ಕೋರ್ಟ್ ಪೂರ್ಣಗೊಳಿಸಿದೆ.

1949ರ ಡಿಸೆಂಬರ್‌ನಲ್ಲಿ ಬಾಬ್ರಿ ಮಸೀದಿಯ ಒಳಗೆ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದ ಬಳಿಕ 1951ರಲ್ಲಿ ಮೊದಲ ಬಾರಿಗೆ ದಾವೆ ಹೂಡಿದವರು ಗೋಪಾಲ್‌ ಸಿಂಗ್‌ ವಿಶಾರದ.

ಅಲಹಾಬಾದ್ ಹೈಕೋರ್ಟ್ 2.77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ ರಾಮ್‌ ಲಲ್ಲಾ, ನಿರ್ಮೋಹಿ ಆಅಖಾಡ ಮತ್ತು ಸುನ್ನಿ ವಕ್ಫ್‌ ಬೋರ್ಡ್‌ಗಳಿಗೆ ಹಂಚಿಕೆ ಮಾಡಿ ತೀರ್ಪು ನೀಡಿತ್ತು. 1992ರಲ್ಲಿ ಮಸೀದಿ ಧ್ವಂಸಗೊಳ್ಳುವುದಕ್ಕೆ ಮುನ್ನ ಮಧ್ಯದ ಗುಮ್ಮಟದ ಕೆಳಗಿನ ಭಾಗ ರಾಮ್‌ ಲಲ್ಲಾಗೆ ಹಾಗೂ ರಾಮ್‌ ಚಬೂತರಾ ಮತ್ತು ಸೀತಾ ರಸೋಯಿ ಇರುವ ಭಾಗ ನಿರ್ಮೋಹಿ ಆಖಾಡಕ್ಕೆ ನೀಡಲಾಗಿತ್ತು.

ರಾಮ್ ಲಲ್ಲಾ ಮತ್ತು ನಿರ್ಮೋಹಿ ಆಖಾಡದ ಪರ ವಾದಗಳನ್ನು ವಿಚಾರಣೆ ಆರಂಭವಾಗಿ 16ನೇ ದಿನಕ್ಕೆ ಪೂರ್ಣಗೊಳಿಸಲಾಗಿದೆ. ಇನ್ನು ಸುನ್ನಿ ವಕ್ಫ್ ಮಂಡಳಿ ಪರ ವಕೀಲರಾದ ರಾಜೀವ್ ಧವನ್ ವಾದಗಳನ್ನು ಮಾತ್ರ ಆಲಿಸುವುದು ಬಾಕಿಯಿದೆ. ವಾರದಲ್ಲಿ ಐದು ದಿನ ವಿಚಾರಣೆ ನಡೆಸುವುದನ್ನು ಅವರು ವಿರೋಧಿಸಿದ್ದರು.

ಸಿಜೆಐ ರಂಜನ್ ಗೊಗೋಯ್‌ ನವೆಂಬರ್ 17ರಂದು ನಿವೃತ್ತರಾಗಲಿದ್ದು, ಅಷ್ಟರೊಳಗೆ ತೀರ್ಪು ಪ್ರಕಟವಾಗಲಿದೆಯೇ ಎಂದು ನಿರೀಕ್ಷಿಸಲಾಗುತ್ತಿದೆ. ಕೋರ್ಟ್ ಆವರಣದಲ್ಲಿ ಈ ಬಗ್ಗೆ ಸಾಕಷ್ಟು ಕುತೂಹಲಕಾರಿ ಚರ್ಚೆಗಳು ಕೇಳಿಬರುತ್ತಿವೆ. ಈಗಾಗಲೇ ಎರಡು ಪ್ರಮುಖ ಪಕ್ಷಗಳ ವಾದಗಳ ಆಲಿಕೆ ಮುಗಿದಿರುವುದರಿಂದ ನವೆಂಬರ್‌ನಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಅಧಿಕವಾಗಿದೆ.

ಈ ಮೊದಲು ನ್ಯಾಯಪೀಠ ಪ್ರಶ್ನಿಸಿದಾಗ, ತಮ್ಮ ವಾದಗಳನ್ನು ಪೂರ್ಣಗೊಳಿಸಲು 20 ದಿನಗಳು ಬೇಕಾಗುತ್ತವೆ ಎಂದು ಸುನ್ನಿ ವಕ್ಫ್ ಮಂಡಳಿ ವಕೀಲ ರಾಜೀವ್ ಧವನ್ ಹೇಳಿದ್ದರು. ಒಂದು ವೇಳೆ ಧವನ್ ಇಷ್ಟು ದಿನಗಳನ್ನು ತೆಗೆದುಕೊಂಡರೂ ಸುಪ್ರೀಂ ಕೋರ್ಟಿಗೆ ಅಂತಿಮ ತೀರ್ಮಾನಕ್ಕೆ ಬರಲು ಒಂದು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ಇದೆ.

Related posts

ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಸಹಕಾರಿ: ವಂ| ಬೇಸಿಲ್ ವಾಸ್

Sushmitha Jain

ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ ಫೆ.23ಕ್ಕೆ

Upayuktha

ರಾತ್ರಿ ಕರ್ಫ್ಯೂ ನಾಳೆಯಿಂದ ಜಾರಿ; ರಾತ್ರಿ 11ರಿಂದ ಬೆಳಗ್ಗೆ 5ರ ವರೆಗೆ

Upayuktha