ದೇಶ-ವಿದೇಶ ಪ್ರಮುಖ

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ: ಮಕರ ಸಂಕ್ರಾಂತಿಗೆ ನಿರ್ಮಾಣ ಕಾರ್ಯ ಆರಂಭ ನಿರೀಕ್ಷೆ

ಪ್ರಾತಿನಿಧಿಕ ಚಿತ್ರ (ಕೃಪೆ: ಅಮರ್ ಉಜಾಲಾ)

ಹೊಸದಿಲ್ಲಿ:

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಕಾರ್ಯ ಮಕರ ಸಂಕ್ರಾಂತಿ ದಿನದಿಂದ ಆರಂಭವಾಗುವ ನಿರೀಕ್ಷೆಯಿದೆ. ಹೊಸದಾಗಿ ಶಿಲಾನ್ಯಾಸ ಮಾಡುವ ಸಾಧ್ಯತೆಯಿಲ್ಲ.

ಮಂದಿರ ನಿರ್ಮಣಕ್ಕೆ ಟ್ರಸ್ಟ್ ರಚಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತ್ವರಿತ ಕ್ರಮ ಕೈಗೊಳ್ಳಲಿದೆ. ಭವ್ಯ ರಾಮ ಮಂದಿರ ನಿರ್ಮಿಸುವುದಾಗಿ ದೇಶದ ಜನತೆಗೆ ನೀಡಿದ್ದ ಭರವಸೆ ಈಡೇರಿಸಲು ಸಂಬಂಧಿತ ಎಲ್ಲ ಪಕ್ಷಗಳ ಜತೆ ಸಮನ್ವಯ ಕಾರ್ಯವನ್ನು ಸರಕಾರ ಮಾಡಲಿದೆ.

‘ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಸಂಕ್ರಾಂತಿ ಅತ್ಯಂತ ಪವಿತ್ರ ದಿನವಾಗಿದ್ದು, ಆ ದಿನವೇ ಮಂದಿರ ನಿರ್ಮಾಣ ಕಾರ್ಯ ಅರಂಭಿಸಲು ಅನುಕೂಲವಾಗುಂತೆ ಎಲ್ಲ ಪೂರ್ವಭಾವಿ ಪ್ರಕ್ರಿಯೆಗಳನ್ನು ಪೂರ್ಣಗೊಳಸಿಉವ ನಿರೀಕ್ಷೆಯಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

2022ರ ವೇಳೆಗೆ ಉತ್ತರ ಪ್ರದೇಶ ವಿಧಾನ ಸಭೆಗೆ ಚುನಾವಣೆಗಳು ನಡೆಯಲಿದ್ದು, ಅದಕ್ಕೆ ಮೊದಲೇ ಉತ್ತಮ ಪ್ರಗತಿ ಕಂಡುಬರಲಿದೆ. ಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲ ಅಡೆತಡೆಗಳನ್ನೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶೀಘ್ರ ತೆರವುಗೊಳಿಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ಸುಪ್ರೀಂ ಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಹಾಗೂ ತನ್ನ ಕೋರಿಕೆಯಂತೆ ಖ್ಯಾತ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ರಚಿಸಿದ ವಿನ್ಯಾಸದಂತೆ ಭವ್ಯ ರಾಮ ಮಂದಿರ ನಿರ್ಮಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಖ್ಯಾತ ದೇವಾಲಯ ವಾಸ್ತು ಶಿಲ್ಪಿ ಸೋಂಪುರ ಅವರಿಗೆ ಉದ್ದೇಶಿತ ರಾಮ ಮಂದಿರದ ವಿನ್ಯಾಸ ರಚಿಸಿಕೊಡುವಂತೆ 1989ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಆಗಿನ ಅಧ್ಯಕ್ಷ ಅಶೋಕ್ ಸಿಂಘಾಲ್ ಕೋರಿದ್ದರು. ಅದರಂತೆ ರಚನೆಯಾದ ಆ ವಿನ್ಯಾಸವನ್ನು ವಿಹಿಂಪ ತನ್ನ ಕಾರ್ಯಕರ್ತರಿಗೆ ಹಂಚಿತ್ತು. ‘ನೂತನ ಮಂದಿರ ಈ ವಿನ್ಯಾಸದಂತೆ ರಚನೆಯಾಗುವ ನಿರೀಕ್ಷೆಯಿದೆ ಎಂದು ವಿಹಿಂಪದ ಈಗಿನ ಕಾರ್ಯಾಧ್ಯಕ್ಷರಾದ ಅಲೋಕ್ ಕುಮಾರ್ ತಿಳಿಸಿದರು.

ಶಿಲೆಗಳ ಕೆತ್ತನೆ ಮತ್ತು ಕಂಬಗಳ ನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ಪ್ರಗತಿಯಾಗಿದೆ. ನಿರ್ಮಾಣದ ವೇಳೆ ಅವುಗಳನ್ನು ಬಳಸಿಕೊಳ್ಳಬೇಕು ಎಂದು ವಿಹಿಂಪ ಹೇಳಿದೆ. ಭವ್ಯವಾದ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ವಿಹಿಂಪ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗಲಿರುವ ಟ್ರಸ್ಟ್‌ನಲ್ಲಿ ಈಗಿರುವ ರಾಮ ಜನ್ಮಭೂಮಿ ನ್ಯಾಸದ ಸದಸ್ಯರನ್ನು ಸೇರಿಸಿಕೊಳ್ಳಬೇಕು. ಈ ವರೆಗೂ ಮಂದಿರ ನಿರ್ಮಾಣ ಕಾರ್ಯದ ಹೊಣೆ ಹೊತ್ತವರು ಅವರೇ ಆಗಿರುವುದರಿಂದ ಅವರನ್ನು ಹೊರಗಿಡುವುದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಹೇಳಿದ್ದಾರೆ.

ಮೂರು ತಿಂಗಳ ಒಳಗಾಗಿ ಟ್ರಸ್ಟ್ ರಚನೆಯಾಗಬೇಕಿದ್ದು, ಆ ಬಳಿಕ ಕೂಡಲೇ ಮಂದಿರ ನಿರ್ಮಾಣ ಕಾರ್ಯ ಶುರುವಾಗಲಿದೆ’ ಎಂದು ಎಲ್ಲ ಬೆಳವಣಿಗೆಗಳಿಗೆ ನಿಕಟ ಸಾಕ್ಷಿಯಾಗಿರುವ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದರು.

ಮುಕ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪದೇ ಪದೇ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣದ ಹೊಣೆಯನ್ನು ಅವರೇ ಮುಂಚೂಣಿಯಲ್ಲಿ ನಿಂತು ಹೊರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯೋಗಿ ಮುಖ್ಯಮಂತ್ರಿಯಾದ ಬಳಿಕ 18 ಬಾರಿ ಅಯೋದ್ಯೆಗೆ ಭೇಟಿ ನೀಡಿದ್ದಾರೆ. ಕಳೆದ ತಿಂಗಳು ದೀಪಾವಳಿ ಸಂದರ್ಭದಲ್ಲಿ ಅತ್ಯಂತ ಅದ್ದೂರಿಯ ‘ದೀಪೋತ್ಸವ’ ಆಚರಿಸಲಾಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ಇದರ ಉಸ್ತುವಾರಿ ಹೊತ್ತಿದ್ದರು.

ಸುಪ್ರೀಂ ಕೋರ್ಟಿನ ತೀರ್ಪು ಎಲ್ಲ ಅಡೆತಡೆಗಳನ್ನೂ ನಿವಾರಿಸಿದ್ದು, ಇನ್ನು ಭವ್ಯ ರಾಮ ಮಂದಿರದ ಕನಸು ಸಾಕಾರಗೊಳ್ಳಲಿದೆ ಎಂದವರು ನುಡಿದರು.

492 ವರ್ಷಗಳ ಹಳೆಯ ವಿವಾದ ಕೊನೆಗೂ ಶಾಂತಿಯುತವಾಗಿ ಇತ್ಯರ್ಥಗೊಂಡಿದ್ದು, ದೇಶದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಡಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತೀರ್ಪನ್ನು ಸ್ವಾಗತಿಸುತ್ತ ಪ್ರತಿಕ್ರಿಯಿಸಿದ್ದರು.

‘ರಾಜಕೀಯ ಹಿತಾಸಕ್ತಿಗಳಿಂದಾಗಿ ಕೆಲವು ಸಂಘಟನೆಗಳು ಸಂಚು ಹೂಡಿ ಅಯೋಧ್ಯೆಯನ್ನು ಅತ್ಯಂತ ಸೂಕ್ಷ್ಮ ವಿಚಾರವಾಗಿ ಪರಿವರ್ತಿಸಿದ್ದವು. ಅಯೋಧ್ಯೆ ಸಂಪೂರ್ಣವಾಗಿ ಒಂದು ನಂಬಿಕೆ- ಶ್ರದ್ಧೆಯ ವಿಷಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಧರ್ಮಾತೀತವಾಗಿ ತಮ್ಮ ಪೂರ್ವಜ ಶ್ರೀರಾಮನೆಂದು ಬಲವಾಗಿ ನಂಬಿದ್ದಾರೆ’ ಎಂದು ಯೋಗಿ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಬರೆದಿದ್ದಾರೆ.

Related posts

ದೇಶದಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಕ್ಕೆ ಡೇಟ್ ಫಿಕ್ಸ್ – ಕೇಂದ್ರ ಸರ್ಕಾರ

Harshitha Harish

ಹಸಿರು ವಲಯದ ಉಡುಪಿಯೀಗ ಕೊರೊನಾ ಹಾಟ್‌ ಬೆಡ್: ಮುಂಬೈ, ವಿದೇಶಿ ರಿಟರ್ನ್‌ಡ್‌ಗಳಿಂದ ಹರಡುತ್ತಿದೆ ಸೋಂಕು

Upayuktha

ಉಡುಪಿಯ ಯುವ ಪ್ರತಿಭೆ ಸಮನ್ವಿಗೆ ‘ಟೈಮ್ಸ್ ತ್ಯಾಗರಾಜ’ ಪ್ರಶಸ್ತಿ

Upayuktha