ಬೆಂಗಳೂರು: ಬೆಂಗಳೂರಿನ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ ಅವರು ಅಭಿವೃದ್ಧಿಪಡಿಸಿರುವ ಎರಡು ಔಷಧಗಳನ್ನು ಕೊರೊನಾ ಸೋಂಕಿತ ರೋಗಿಗಳಿಗೆ ಪ್ರಾಯೋಗಿಕವಾಗಿ ನೀಡುವ ನಿಟ್ಟಿನಲ್ಲಿ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಅನುಮತಿ ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚಿಸಿದ್ದಾರೆ.
ಡಾ. ಗಿರಿಧರ ಕಜೆ ಅವರು ಕೊರೊನಾ ಸಹಿತ ವೈರಸ್ಗಳ ನಿವಾರಕ ಅಯುರ್ವೇದ ಗುಳಿಗೆಗಳನ್ನು ಕಂಡು ಹಿಡಿದಿರುವುದಾಗಿ ಹಲವು ದಾಖಲೆಗಳ ಸಹಿತ ಪತ್ರ ಬರೆದು ತಿಳಿಸಿದ್ದರು. ಈ ಬಗ್ಗೆ ನನ್ನನ್ನು ಭೇಟಿ ಮಾಡಿ ವಿವರವಾದ ಮಾಹಿತಿ ನೀಡಿದ್ದರು ಎಂದು ಸಚಿವ ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
‘ಆಯುರ್ವೇದ, ಅಲೋಪಥಿ, ಹೋಮಿಯೋಪಥಿ ಎಂಬ ಭೇದವಿಲ್ಲ; ಸದ್ಯ ಕೊರೊನಾಗೆ ಔಷಧ ಕಂಡು ಹಿಡಿಯುವುದೇ ಮುಖ್ಯವಾಗಿದ್ದು, ಈ ಬಗ್ಗೆ ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಐಸಿಎಂಆರ್ನಿಂದ ಅಗತ್ಯ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಅವರು ತಿಳಿಸಿದರು.
‘ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದು, ಡಾ. ಕಜೆ ಅವರ ಪ್ರಸ್ತಾವವನ್ನು ಐಸಿಎಂಆರ್ಗೆ ಕಳುಹಿಸಿದ್ದಾರೆ. ಕೊರೊನಾ ಸೋಂಕಿತ ರೋಗಿಗಳ ಮೇಲೆ ಈ ಎರಡು ಔಷಧಗಳನ್ನು ಪ್ರಯೋಗಿಸಿ ಅಧ್ಯಯನ ಮಾಡಲು ಮತ್ತು ಅನುಮೋದನೆ ನೀಡಲು ಮನವಿ ಸಲ್ಲಿಸಲಾಗಿದೆ. ಯಾವುದೇ ಔಷಧಗಳ ಕ್ಲಿನಿಕಲ್ ಟ್ರಯಲ್ಗೆ ಐಸಿಎಂಆರ್ ಒಪ್ಪಿಗೆ ಮುಖ್ಯವಾಗಿದ್ದು, ಪರವಾನಗಿ ದೊರೆತರೆ ಇದೊಂದು ಪ್ರಮುಖ ಮೈಲುಗಲ್ಲಾಗುತ್ತದೆ. ಅಲ್ಲದೆ ಡಾ. ಕಜೆ ಅವರು ಈ ಔಷಧಗಳ ಹಕ್ಕುಸ್ವಾಮ್ಯವನ್ನು ಸರಕಾರಗಳಿಗೇ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ’ ಎಂದು ಸುಧಾಕರ್ ಹೇಳಿದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ