ಕತೆ-ಕವನಗಳು

ಬದುಕಲು ಕಲಿಯಬೇಕಿತ್ತು ನಾನು..!

ಬದುಕಲು ಕಲಿಯಬೇಕಿತ್ತು ನಾನು..!

ನಿಂತ ಬದುಕಿನ ಬೆನ್ನು ದೂಡಿ ದೂಡಿ
ಮೋಡಗಟ್ಟಿದ ಹನಿಯು
ಭೂಮಿಯ ನೋಡುವ ತೆರದಿ
ಮಳೆಯಾಗಿ ಇಳಿದು
ಹರಿದು ಹಸಿರು ಹುಟ್ಟಿಸುವ ಹಾಗೇ..

ನೆನವ ಸುಖ ಅನುಭವಿಸಿ
ಕುಣಿದು ಕುಪ್ಪಳಿಸಿ
ಕುರುಹುವೆಂಬಂತೆ ನವಿಲು ತನ್ನ ಗರಿ
ಉದುರಿಸಿ ಹೋದ ಹಾಗೇ…

ಲೆಕ್ಕವ ಎಣಿಸದೆ ಬೆನ್ನ
ಹಿಂದೊಂದರಂತೆ ಪದೇ ಪದೇ
ತೀರಕ್ಕೆ ಬಂದು ಬಡಿವ ಕಡಲು‌
ಕಳಿಸಿದ ಅಲೆಗಳ ಹಾಗೇ..

ಗಾವುದ ದೂರ ನಡೆದೆನೆಂದು
ತಿಳಿದು ಹೆಜ್ಜೆಯ ಗುರುತ ಹುಟ್ಟಿಸಿ
ಮಾರು ಅಳತೆ ವ್ಯಾಪ್ತಿಯೊಳಗೆ
ಹುದುಗುವ ನಕ್ಷತ್ರ ಮೀನಿನ ಹಾಗೇ…

ಇಬ್ಬನಿಯಲ್ಲಿ ತನ್ನ ಬಿಂಬ
ನೋಡುವ ಹಠಕ್ಕೆ ಬಿದ್ದು
ಎಳೆ ಮೈಯ್ಯ ಸೋಕಿ ಉಸಿರ
ನೀಡುವ ಬಿಸಿಲ ಹಾಗೇ…

ನಟ್ಟ ನಡುವಿರುಳಲಿ ನಿಶ್ಯಬ್ಧ ಹತ್ತಿಸಿ
ಮತ್ತೆ  ಬೆಳಕ ತೋರಿ ಸಾವಿಗೆ
ದೂಡುವ ದೀಪದ ಹಾಗೇ…

ಯಾರ ಹಂಗಿರದೆ ಮುಳ್ಳ
ಬಗಲಲಿರಿಸಿಕೊಂಡು
ನಗುವ ಹಂಚೆಂದು ದುಂಬಿಯ ಕರೆವ
ಅರಳಿದ ಹೂವಿನ ಹಾಗೇ..

ಮೊನಚಿನಿಂದ ಎದೆಯ ಮೇಲೆಲ್ಲ
ಪೆಟ್ಟು ತಿಂದು ಸಣ್ಣಗೆ ಶಾಶ್ವತವಾಗಿ
ನಗುತ್ತಲೇ ಇರುವ ಶಿಲೆಯ ಮೂರ್ತಿಯ ಹಾಗೇ…

*…✍️❤️ಹೃದಯ ಸ್ಪರ್ಶಿ*

 

Related posts

*🛑ಇದು* *ಶೀರ್ಷಿಕೆಯಿಲ್ಲದ ಕವನ*🛑

Harshitha Harish

ನಾಡ ಗೀತೆ: ಭಾರತ ಜನನಿ

Harshitha Harish

ಸಣ್ಣಕಥೆ: ಹೀಗೊಂದು ಪ್ರತಿಭಟನೆ

Upayuktha