ಕೊಪ್ಪಳ ಜಿಲ್ಲೆಯಲ್ಲಿ ಯುವತಿಯರು ಹಾಗೂ ಗೃಹಿಣಿಯರಿಗೆ ಜೇನು ಕೃಷಿಯಲ್ಲಿ ತರಬೇತಿ ನೀಡುತ್ತಿರುವ ಶಾಹಿನ ಬೇಗಂ ಅವರು ತಮ್ಮ ಜೇನು ಕೃಷಿ ಅನುಭವವನ್ನು ಸ್ವತಃ ಉಪಯುಕ್ತ ನ್ಯೂಸ್ ಓದುಗರ ಜತೆ ಹಂಚಿಕೊಂಡಿದ್ದಾರೆ.
ಜೇನು ಕೃಷಿಯಲ್ಲಿ ತೊಡಗಿಕೊಂಡು ಬದುಕು ರೂಪಿಸಿಕೊಂಡ ಶಾಹಿನಾ ಬೇಗಂ ಅವರ ಬಗ್ಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಡಾ. ಪಿ.ಆರ್ ಬದರಿಪ್ರಸಾದ್ ಅವರು ಬರೆದ ಪರಿಚಯಾತ್ಮಕ ಲೇಖನವನ್ನು ಉಪಯುಕ್ತ ನ್ಯೂಸ್ ಜ.20ರಂದು ಪ್ರಕಟಿಸಿತ್ತು. ಈ ಲೇಖನಕ್ಕೆ ವ್ಯಾಪಕ ಮೆಚ್ಚುಗೆಗಳು ಬಂದಿದ್ದವು. ಕೊಪ್ಪಳದ ಹಲವು ಮಂದಿ ಕರೆ ಮಾಡಿ ವಿಚಾರಿಸಿದ್ದರು.
ಸಿಹಿ ಹಂಚುವುದನ್ನೇ ಬಾಳಿನ ಧ್ಯೇಯವಾಗಿಸಿಕೊಂಡಿರುವ ಶಾಹಿನ ಬೇಗಂ ಅವರು ಜೇನು ಕೃಷಿಯಲ್ಲಿ ತೊಡಗುವ ಆಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದಾರೆ.
ಇದೀಗ ಅವರದೇ ಮಾತುಗಳಲ್ಲಿ ಅವರ ಬಾಳಿನ ಕತೆಯನ್ನು ಓದಿ. ಓವರ್ ಟು ಶಾಹಿನ ಬೇಗಂ….
ನನ್ನ ಹೆಸರು ಶಾಹೀನ್. ಕೊಪ್ಪಳ ಜಿಲ್ಲೆಯ ಒಂದು ಚಿಕ್ಕ ಹಳ್ಳಿ ಹ್ಯಾಟಿಯಲ್ಲಿ ಬೆಳೆದೆ. ಬಾಲ್ಯದಿಂದಲೇ ನನಗೆ ಪರಿಸರದ ಬಗ್ಗೆ ತುಂಬಾ ಕಾಳಜಿ, ಗಿಡಮರ ಹಾಗೂ ಪ್ರಾಣಿ ಪಕ್ಷಿ ಬೆಳೆಸುವುದೊಂದು ಹವ್ಯಾಸವಾಗಿತ್ತು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ನಾನು, ಆ ನೋವನ್ನು ಮರೆಮಾಚಲು ಕುರಿ ಹಾಗೂ ಕೋಳಿ ಸಾಕಾಣಿಕೆ ಪ್ರಾರಂಭಿಸಿದೆ. ಅದರೊಡನೆ ಬಟ್ಟೆ ಹೊಲೆಯುವುದು, ಹೆಣೆಯುವುದು, ಟೈಲರಿಂಗ್ ಕೆಲಸ ಹೀಗೆ ಹತ್ತು ಹಲವು ವೃತ್ತಿಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಆದರೂ ನನಗೆ ನೆಮ್ಮದಿ ಸಿಗಲಿಲ್ಲ.
ಆಗ ನಾನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಡಾ. ಪಿ.ಆರ್ ಬದರಿಪ್ರಸಾದ್ ಇವರಿಂದ ಜೇನು ಕೃಷಿಯಲ್ಲಿ ತರಬೇತಿ ಪಡೆದು ಜೇನುನೊಣ ಸಾಗಾಣಿಕೆಯತ್ತ ಒಲವು ತೋರಿದೆ. ಆಗ ನನ್ನವರೇ ನನ್ನ ಅಪಹಾಸ್ಯ ಮಾಡುತ್ತಿದ್ದರು. ಆದರೂ ಸಹ ನಾನು ನನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಆಗ ನನ್ನ ಅಣ್ಣ ಹಾಗೂ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ನನಗೆ ಪ್ರೋತ್ಸಾಹಿಸಿ ಮುನ್ನಡೆಯಲು ಸಹಾಯಹಸ್ತ ನೀಡಿದರು. ಈಗ ನಾನು ತುಂಬಾ ಸಂತೋಷವಾಗಿದ್ದೇನೆ.
ಕಳೆದ ಒಂದು ವರ್ಷದಿಂದ ಜೇನುಕೃಷಿ ಕೈಗೊಂಡು ಸುಮಾರು 5 ಕೆಜಿ ಜೇನುತುಪ್ಪ ಪಡೆದಿದ್ದೇನೆ. ಒಂದು ಜೇನು ಕುಟುಂಬದಿಂದ 8 ಜೇನು ಕುಟುಂಬಗಳು ಆಗಿವೆ. ನೈಸರ್ಗಿಕವಾಗಿ ಪಾಲಾಗಿ ಬಂದ ಜೇನು ಕುಟುಂಬಗಳನ್ನು ಹಿಡಿಯುವುದನ್ನು ಕಲಿತಿದ್ದೇನೆ. ಆಸಕ್ತರಿಗೆ ಜೇನು ಕೃಷಿ ಕುರಿತು ತರಬೇತಿ ಕೊಡುತ್ತೇನೆ. ಇತರರಿಗೆ ಸಹಾಯ ಮಾಡಲು ನಾನು ಸದಾ ಸಿದ್ಧವಾಗಿದ್ದೇನೆ.
ಇದರೊಡನೆ ನಾನು ಪೂರ್ವಜರಿಂದ ಕಲಿತಿರುವ ಆಯುರ್ವೇದಿಕ ಹಾಗೂ ಗಿಡಮೂಲಿಕೆ ಔಷಧಿಗಳನ್ನು ತಯಾರಿಸಿ ಬಡವರಿಗೆ ವಿವರಿಸುತ್ತೇನೆ. ಮಹಾಮಾರಿ ಕರೋನಾದ ಸಂದರ್ಭದಲ್ಲಿ ನಾನು ಹಾಗೂ ನನ್ನ ಅಣ್ಣ ಬಡವರ ಮನೆಮನೆಗೆ ಹೋಗಿ ಔಷಧಿ ತಲುಪಿಸಿದೆವು. ಪರವೂರುಗಳಿಗೂ ಸಹ ನಾವಿದನ್ನು ತಲುಪಿಸಿದೆವು. ಇದರಿಂದ ತುಂಬಾ ಜನ ಗುಣಮುಖರಾಗಿ ನಮಗೆ ಹಾರೈಸುತ್ತಾರೆ ಹಾಗೂ ಆಶೀರ್ವದಿಸುತ್ತಾರೆ. ಇದೇ ನಮಗೆ ಸಂತೋಷವನ್ನುಂಟು ಮಾಡುತ್ತದೆ.
ನೀನಾರಿಗಾದೆಯೋ ಎಲೆ ಮಾನವ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಅಲ್ಲಾಹನು ದಯಪಾಲಿಸಿದ ಈ ಜೀವನ ಅತ್ಯಮೂಲ್ಯವಾದದ್ದು, ಇದನ್ನು ವ್ಯರ್ಥಮಾಡದಿರಿ. ಇನ್ನೊಬ್ಬರಿಗೆ ಮಾದರಿಯಾಗಿ ಬದುಕಿ ತೋರಿಸಿ.
ಜೀವನವಿಡಿ ನಾನು ನಿಸ್ವಾರ್ಥಿಯಾಗಿ ಬದುಕಲು ಪ್ರಯತ್ನಿಸಿದೆ. ನನ್ನಿಂದ ಇನ್ನೊಬ್ಬರಿಗೆ ಒಳಿತಾದರೆ, ನನ್ನ ಜೀವನ ಅವರಿಗೆ ದಾರಿದೀಪವಾದರೆ ಅಷ್ಟೇ ಸಾಕು, ಅದೇ ನನಗೆ ಅತಿ ಹೆಮ್ಮೆಯ ವಿಷಯ.
*****
ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಂ. ಎಸ್. ಕೆ. ಗಾರ್ಮೆಂಟ್ಸ್ ಕೊಪ್ಪಳ ಇವರ ಸಂಸ್ಥೆಯಲ್ಲಿ ತರಬೇತಿಗೆ ಬಂದಿದ್ದ ಮಹಿಳಾ ಫಲಾನುಭವಿಗಳಿಗೆ ಬಿಡುವಿನ ಸಮಯದಲ್ಲಿ ಜೇನಿನ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ಕೊಡಿಸಿ ಮನೆ ಆವರಣದಲ್ಲಿ ಜೇನು ಸಾಕಾಣಿಕೆ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದ ಸಂದರ್ಭವಿದು.
-ಶಾಹಿನ ಬೇಗಂ, ಕೊಪ್ಪಳ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ