ಗ್ರಾಮಾಂತರ ಸ್ಥಳೀಯ

ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ ಸಭಾ ಭವನ ಉದ್ಘಾಟನೆ

 

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ಸಭಾ ಭವನ ಉದ್ಘಾಟಿಸಿದರು.

ಉಜಿರೆ: ಸಮಾಜದ ವಿವಿಧ ಕ್ಷೇತ್ರಗಳಲ್ಲಿರುವ ಸಮಾನ ಮನಸ್ಕರಾದ ಗಣ್ಯರು ಹಾಗೂ ಪರಿಣತರು ರೋಟರಿ ಕ್ಲಬ್ ಸದಸ್ಯರಾಗಿರುವುದರಿಂದ ಪರಸ್ಪರ ಪರಿಚಯವಾಗಿ ಸಾರ್ವಜನಿಕ ಸಂಪರ್ಕವೃದ್ಧಿಯಾಗಿ ಸಮಾಜ ಸೇವೆಗೆ ಹೊಸ ಹೊಸ ಅವಕಾಶಗಳು ಸಿಗುತ್ತವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಮತ್ತು ರೋಟರಿ ಸುವರ್ಣ ಮಹೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಉಜಿರೆಯಲ್ಲಿ ಕಾಶಿಬೆಟ್ಟು ಬಳಿ ಸೇವಾ ಟ್ರಸ್ಟ್ ಸಭಾ ಭವನವನ್ನು ಭಾನುವಾರ ಅವರು ಉದ್ಘಾಟಿಸಿ ಮಾತನಾಡಿದರು.

ಅವರರವರಿಗೆ ಪ್ರಿಯವಾದ ಕ್ಷೇತ್ರದಲ್ಲಿ ಅನುಭವಿಗಳಾದ ತಜ್ಞರು ತಮ್ಮ ತಿಳುವಳಿಕೆ, ಅನಿಸಿಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಉತ್ತಮ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್‍ನಲ್ಲಿ ಆರ್ಥಿಕವಾಗಿ ಶ್ರೀಮಂತರು ಅಲ್ಲದೆ ಹೃದಯ ಶ್ರೀಮಂತಿಕೆಯನ್ನೂ ಹೊಂದಿರುವ ಉದಾರಿಗಳು ಸದಸ್ಯರಾಗಿರುತ್ತಾರೆ. ಪ್ರತಿಯೊಬ್ಬರೂ ಆಯಾ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಸಂಸ್ಥೆಗಳಿಗೆ ಸೇವೆ ಮಾಡಲು ಉತ್ತಮ ಅವಕಾಶಗಳಿವೆ. ಹಾಗಾಗಿ ಇಂದು ಸೇವೆಯಲ್ಲಿ ಕೂಡಾ ಸ್ಪರ್ಧೆ ಏರ್ಪಟ್ಟಿದೆ. ರೋಟರಿ ಕ್ಲಬ್ ಸದಸ್ಯರೆಲ್ಲ ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ಯಶಸ್ವಿ ಸಾಧಕರು ಹಾಗೂ ಸೇವಾಕರ್ತರುಗಳಾಗಿದ್ದಾರೆ ಎಂದು ಅವರು ಶ್ಲಾಘಿಸಿ ಅಭಿನಂದಿಸಿದರು.

ಕಳೆದ 49 ವರ್ಷಗಳಲ್ಲಿ ಕೃಷಿ, ಶಿಕ್ಷಣ ಆರೋಗ್ಯ ಸೇವೆ, ಸಾಹಿತ್ಯ, ವ್ಯವಹಾರ, ವಾಣಿಜ್ಯ ಮೊದಲಾದ ಕ್ಷೇತ್ರಗಳಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್‍ನ ಸೇವೆ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶೇಷವಾಗಿ ಕೊರೊನಾ ಸೋಂಕಿನ ಭೀತಿಯ ಸಂದರ್ಭ ಜನ ಸಾಮಾನ್ಯರಲ್ಲಿ ಅರಿವು, ಜಾಗೃತಿ ಮೂಡಿಸಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದ ಬಗ್ಯೆ ಅವರು ವಿಶೇಷ ಅಭಿನಂದನೆ ಅಲ್ಲಿಸಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಶಾಸಕರ ನಿಧಿಯಿಂದ ರೋಟರಿ ಕ್ಲಬ್‍ಗೆ ಹತ್ತು ಲಕ್ಷ ರೂ ನೆರವು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಖ್ಯ ರಸ್ತೆಯಿಂದ ಸಭಾ ಭವನದ ವೆರೆಗೆ ಹೊಸ ರಸ್ತೆ ನಿರ್ಮಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ, ತಮ್ಮ ನಿಧಿಯಿಂದ ರೋಟರಿ ಕ್ಲಬ್ ಸೇವಾ ಕಾರ್ಯಗಳಿಗೆ 5 ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ್ ರಾವ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ರೋಟರಿ ಕ್ಲಬ್ ವಿವಿಧ ಕ್ಷೇತ್ರಗಳಲ್ಲಿ ಏಳುನೂರಕ್ಕೂ ಮಿಕ್ಕಿ ವಿವಿಧ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಹೇಳಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ರೋಟರಿ ಕ್ಲಬ್‍ನ ಜಿಲ್ಲಾ ರಾಜ್ಯಪಾಲ ಎಂ. ರಂಗನಾಥ ಭಟ್, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‍ಸಿಂಹ ನಾಯಕ್, ಡಾ. ಯತಿಕುಮಾರ್ ಸ್ವಾಮಿ ಗೌಡ, ಮೋನಪ್ಪ ಪೂಜಾರಿ ಶುಭ ಹಾರೈಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಮೇಜರ್ ಜನರಲ್ ಎಂ.ವಿ. ಭಟ್, ಡಾ. ಶಶಿಧರ ಡೋಂಗ್ರೆ, ರಜನಿ ಎಂ. ಮತ್ತು ಶ್ರೀಧರ ಕೆ.ವಿ. ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಸ್ವಾಗತಿಸಿದರು. ಶ್ರೀಕಾಂತ್ ಕಾಮತ್ ಧನ್ಯವಾದವಿತ್ತರು.

ಡಾ. ಎ. ಜಯಕುಮಾರ ಶೆಟ್ಟಿ ಮತ್ತು ಮನೋರಮಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

14 ಟನ್ ಬೂದುಗುಂಬಳ ಬೆಳೆದ ಕಾಸರಗೋಡು ಕೃಷಿಕನ ನೆರವಿಗೆ ಬಂದ ಕೇರಳ ಸರಕಾರ

Upayuktha

ಎಸ್‌ಡಿಎಂಸಿ ಉಜಿರೆ: ಜ.22ರಿಂದ ಮೂಲ ವಿಜ್ಞಾನಗಳ ಕುರಿತು ಜಾಲಗೋಷ್ಠಿ ಸರಣಿ

Upayuktha

ಶೇಣಿಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಾಗತ ಸಮಿತಿ ರಚನೆ

Upayuktha