ಪ್ರಮುಖ ವಿಜ್ಞಾನ-ತಂತ್ರಜ್ಞಾನ

ಬೆಂಗಳೂರು ತಂತ್ರಜಾನ ಮೇಳ- 2020: ಗಮನಸೆಳೆದ ಕನ್ನಡ ಕೇಂದ್ರಿತ ನವೋದ್ಯಮಗಳು

ಬೆಂಗಳೂರು: ಇದೇ ಮೊದಲ ಸಲ ಸಂಪೂರ್ಣ ವರ್ಚ್ಯುಯಲ್ ಆಗಿ ನಡೆದ ಬೆಂಗಳೂರು ತಂತ್ರಜ್ಞಾನ ಮೇಳ-2020ರ ಭಾಗವಾಗಿದ್ದ ತಂತ್ರಜ್ಞಾನ ಪ್ರದರ್ಶನದಲ್ಲಿ (ಎಕ್ಸ್ ಪೋ) ಹಲವು ಕನ್ನಡ ಕೇಂದ್ರಿತ ನವೋದ್ಯಮಗಳು ಭಾಗವಹಿಸಿ ಗಮನಸೆಳೆದವು. ಭಾಷಾ ತಂತ್ರಜ್ಞಾನ, ತರಬೇತಿ ಹಾಗೂ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ, ಕನ್ನಡದ ವ್ಯಾಪ್ತಿಯನ್ನು ವಿಸ್ತರಿಸಲು ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಹೇಗೆಲ್ಲಾ ಬಳಸಬಹುದೆಂಬುದಕ್ಕೆ ನಿದರ್ಶನವಾಗಿರುವ ಈ ಕೆಲವು ನವೋದ್ಯಮಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಭಾಷಿಣಿ ಡಿಜಿಟೈಸೇಷನ್
ಮುದ್ರಿತ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತಂದು, ವಿವಿಧ ವೇದಿಕೆಗಳಲ್ಲಿ ಬಳಸಬಹುದಾದ ಇ-ಪುಸ್ತಕ ಹಾಗೂ ಆಡಿಯೋ ಪುಸ್ತಕಗಳಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ಈ ಸಂಸ್ಥೆ ರೂಪಿಸಿದೆ. ಮುದ್ರಿತ ಪುಸ್ತಕಗಳನ್ನು ಸ್ಕ್ಯಾನ್ ಮಾಡಿದ ನಂತರ, ಆ ಚಿತ್ರಗಳಲ್ಲಿರುವ ಪಠ್ಯವನ್ನು ಗುರುತಿಸಿ ಡಿಜಿಟಲೀಕರಿಸುವ ‘ಲಿಪಿಜ್ಞಾನಿ’ ಓಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್) ಹಾಗೂ ಪಠ್ಯವನ್ನು ಧ್ವನಿಗೆ ಬದಲಿಸುವ ‘ಮಧುರ ವಾಚಕ’ ಟಿಟಿಎಸ್ (ಟೆಕ್ಸ್ಟ್ ಟು ಸ್ಪೀಚ್) ತಂತ್ರಜ್ಞಾನಗಳನ್ನು ಈ ಸಂಸ್ಥೆ ಬಳಸುತ್ತದೆ. ಎರಡೂ ತಂತ್ರಜ್ಞಾನಗಳನ್ನು ಭಾಷಿಣಿ ಸಹ ಸಂಸ್ಥಾಪಕ ಡಾ. ಎಚ್. ಆರ್. ಶಿವಕುಮಾರ್ ಅವರೇ ಅಭಿವೃದ್ಧಿಪಡಿಸಿರುವುದು ವಿಶೇಷ. ಭಾಷಿಣಿ ಕುರಿತ ಹೆಚ್ಚಿನ ಮಾಹಿತಿ bhashiniservices.comನಲ್ಲಿ ಲಭ್ಯವಿದೆ.

ಡಿಜಿಟೂರ್
ವಿಆರ್ (ವರ್ಚುಯಲ್ ರಿಯಾಲಿಟಿ) ಹಾಗೂ ಎಆರ್ (ಆಗ್ಮೆಂಟೆಡ್ ರಿಯಾಲಿಟಿ) ತಂತ್ರಜ್ಞಾನಗಳನ್ನು ಬಳಸುವ ಮೂಲಕ ಪ್ರವಾಸದ ಪರಿಕಲ್ಪನೆಗೆ ಡಿಜಿಟಲ್ ಸ್ಪರ್ಶ ನೀಡಿರುವ ಹೆಗ್ಗಳಿಕೆ ಡಿಜಿಟೂರ್ ಸಂಸ್ಥೆಯದು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಈ ಸಂಸ್ಥೆ ಪ್ರವಾಸಿ ತಾಣಗಳ ವರ್ಚುಯಲ್ ಅನುಭವ ಕಟ್ಟಿಕೊಡುವ ಡಿಜಿಟಲ್ ಪ್ರವಾಸ ಮಾರ್ಗದರ್ಶಿ ಆಪ್ ಅನ್ನು ರೂಪಿಸಿದೆ. ಹಂಪೆ, ಬಾದಾಮಿ, ಬೇಲೂರು, ಹಳೇಬೀಡು, ಸೋಮನಾಥಪುರ ಮುಂತಾದ ಹಲವು ವಿಶ್ವವಿಖ್ಯಾತ ತಾಣಗಳ ಕುರಿತು ಧ್ವನಿ-ಚಿತ್ರಗಳೆರಡೂ ಸೇರಿದ ಸಮಗ್ರ ವಿವರಣೆ ಈ ಆಪ್‌ನಲ್ಲಿ ಲಭ್ಯವಿದೆ. ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇಸ್ಟೋರ್‌ನಲ್ಲಿ DigiTour ಎಂದು ಹುಡುಕಬಹುದು.

ಕೋರ್ಸ್‌ಲೋಕ ಲರ್ನಿಂಗ್
ಆನ್‌ಲೈನ್ ಮೂಲಕ ಭಾಷಾಕಲಿಕೆಯನ್ನು ಸುಲಭಗೊಳಿಸಿರುವುದು ಕೋರ್ಸ್‌ಲೋಕ ಲರ್ನಿಂಗ್ ಸಂಸ್ಥೆಯ ಹೆಗ್ಗಳಿಕೆ. ವಿವಿಧ ಭಾಷೆಗಳನ್ನು ಆಯಾ ಹಂತದ ಅವಶ್ಯಕತೆಗಳಿಗೆ ತಕ್ಕಂತೆ ಕಲಿಯಲು ಬೇಕಾದ ಆನ್‌ಲೈನ್ ಕೋರ್ಸ್‌ಗಳನ್ನು ಈ ಸಂಸ್ಥೆ ರೂಪಿಸಿದೆ. ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಮೂಲಕ ಕನ್ನಡ ಕಲಿಯಲು ಬೇಕಾದ ಮಾಹಿತಿಯೂ ಈ ಕೋರ್ಸ್‌ಗಳ ಮೂಲಕ ಲಭ್ಯವಿರುವುದು ವಿಶೇಷ. ಹೆಚ್ಚಿನ ಮಾಹಿತಿಗಾಗಿ courseloka.com ಗೆ ಭೇಟಿ ನೀಡಬಹುದು.

ಜ್ಞಾನಿ.ಎಐ
ಸ್ಪೀಚ್ ರೆಕಗ್ನಿಶನ್ ಪರಿಕಲ್ಪನೆಯ ಮೂಲಕ ತಂತ್ರಜ್ಞಾನದಲ್ಲಿ ಧ್ವನಿ ಆಧಾರಿತ ಸಂವಹನದ ಮಹತ್ವ ಹೆಚ್ಚುತ್ತಿರುವ ಸಂದರ್ಭದಲ್ಲಿ ಜ್ಞಾನಿ.ಎಐ ಸಂಸ್ಥೆಯು ಈ ಸೌಲಭ್ಯವನ್ನು ಕನ್ನಡ ಸೇರಿದಂತೆ ಹಲವು ಇಂಗ್ಲಿಷೇತರ ಭಾಷೆಗಳಿಗೆ ವಿಸ್ತರಿಸುತ್ತಿದೆ. ಧ್ವನಿಯನ್ನು ಪಠ್ಯರೂಪಕ್ಕೆ ಬದಲಿಸುವುದರಿಂದ ಪ್ರಾರಂಭಿಸಿ, ಗ್ರಾಹಕಸೇವೆ – ಮಾರ್ಕೆಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸುವವರೆಗೆ ಈ ಸಂಸ್ಥೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. gnani.ai ಜಾಲತಾಣದಲ್ಲಿ ಈ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

ಕ-ನಾದ ಫೊನೆಟಿಕ್ಸ್
ಭಾರತೀಯ ಭಾಷೆಗಳನ್ನು ಮೂಡಿಸಲು ಇಂಗ್ಲಿಷ್ ಕೀಲಿಮಣೆಯನ್ನು ಅವಲಂಬಿಸಬೇಕಾದ ಸನ್ನಿವೇಶ ಬದಲಿಸಿ ನಮ್ಮ ಭಾಷೆಯದೇ ಕೀಲಿಮಣೆಯ ಬಳಕೆ ಸಾಧ್ಯವಾಗಿಸಲು ಈ ಸಂಸ್ಥೆ ಪ್ರಯತ್ನಿಸುತ್ತಿದೆ. ಕನ್ನಡ, ತುಳು ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆಂದೇ ವಿಶಿಷ್ಟ ವಿನ್ಯಾಸದ ಪ್ರತ್ಯೇಕ ಕೀಲಿಮಣೆಗಳನ್ನು ರೂಪಿಸಿ ಮಾರುಕಟ್ಟೆಗೆ ಪರಿಚಯಿಸಿರುವುದು ಕ-ನಾದ ಸಂಸ್ಥೆಯ ಸಾಧನೆಯಾಗಿದೆ. ಸಂಸ್ಥೆಯ ಜಾಲತಾಣ ka-naada.com ಮೂಲಕ ಈ ಕೀಲಿಮಣೆಗಳು ಖರೀದಿಗೂ ಲಭ್ಯವಿರುವುದು ವಿಶೇಷ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

‘ನನ್ನ ಮಿತ್ರ ಅರುಣ್‌ರನ್ನು ಕಳೆದುಕೊಂಡೆ’: ಪ್ರಧಾನಿ ಮೋದಿ ಶೋಕ

Upayuktha

‘ಹೆಲಿಕಾಪ್ಟರ್ ಪೋಷಕತ್ವ’ ಎಂಬ ಪೆಡಂಬೂತವನ್ನು ಓಡಿಸಿ, ಮಕ್ಕಳು ಅನುಭವಿಸಲಿ ಬಾಲ್ಯದ ಖುಷಿ

Upayuktha

ಕಾಲಿನ ಬೆರಳಿನಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಬಂಟ್ವಾಳದ ಕೌಶಿಕ್‌ಗೆ ಶಿಕ್ಷಣ ಸಚಿವರ ಮೆಚ್ಚುಗೆ

Upayuktha