
ಕುಕ್ಕೆ ಸುಬ್ರಹ್ಮಣ್ಯ:
ಬೆಂಗಳೂರು ಗಾಯತ್ರಿ ನಗರದ ನಿವಾಸಿ ಸಂತೋಷ್ ನಾಪತ್ತೆಯಾಗಿದ್ದ ವ್ಯಕ್ತಿ. ಅವರು ಭಾನುವಾರ ಸೆ 15ರಂದು ಸಂಜೆ ನಾಪತ್ತೆಯಾಗಿದ್ದರು.
ಪರ್ವತದಲ್ಲಿ ದಾರಿ ತಪ್ಪಿದ ಯುವಕ ಇಂದು ಮದ್ಯಾಹ್ನ 12.30ರ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿದ್ದಾರೆ. ಆದಿ ಸುಬ್ರಹ್ಮಣ್ಯದ ಮೂಲಕ ಅವರು ವಾಪಸಾಗಿದ್ದಾರೆ. ಕುಮಾರ ಪರ್ವತದ ಬಳಿಯ ಗುಡ್ಡದಿಂದ ಕುಕ್ಕೆ ದೇವಾಲಯಕ್ಕೆ ತೀರ್ಥದ ಉದ್ದೇಶಕ್ಕಾಗಿ ನೀರಿನ ಕೊಳವೆ ಅಳವಡಿಸಲಾಗಿತ್ತು. ಈ ಪೈಪನ್ನು ದಾರಿ ಸೂಚಕವಾಗಿ ಬಳಸಿ ಮತ್ತೆ ಸುಬ್ರಹ್ಮಣ್ಯ ತಲುಪಿದೆ ಎಂದು ಸಂತೋಷ್ ತಿಳಿಸಿದ್ದಾರೆ.
ಪತ್ತೆಯಾದ ಸಂತೋಷ್ ಅವರಿಗೆ ಸ್ಥಳೀಯರು ಊಟ ಹಾಗೂ ನೀರು ನೀಡಿ ಉಪಚರಿಸಿದರು.
ಅವರ ಪತ್ತೆಗಾಗಿ ಇಂದು ಬೆಳಗ್ಗೆಯಿಂದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಐದು ತಂಡಗಳಾಗಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಸ್ಥಳೀಯ ತರುಣರು ಈ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದರು .
ಬೆಂಗಳೂರಿನಿಂದ ಚಾರಣಕ್ಕೆ ಬಂದಿದ್ದ 12 ಜನರ ಯುವಕರ ತಂಡದಿಂದ ಸಂತೋಷ್ ಭಾನುವಾರ ಸಂಜೆ ಬೇರ್ಪಟ್ಟಿದ್ದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.