ಲೇಖನಗಳು

ಭೂಮಿ ಆಗದಿರಲಿ ಪ್ಲಾಸ್ಟಿಕ್ ತ್ಯಾಜ್ಯಗಳ ತೊಟ್ಟಿ**

ಸಾರ್ವಜನಿಕ ರಸ್ತೆಗಳ ಎರಡೂ ಬದಿಗಳಲ್ಲಿ, ಖಾಲಿ ಬಿದ್ದ ಸ್ಥಳ, ಮನೆ, ಅಂಗಡಿಗಳ ಹೊರಗೆ, ಮಳೆಗಾಲದಲ್ಲಿ ನೀರು ಹರಿದು ಹೋಗಲಿರುವ ರಾಜಾ ಕಾಲುವೆ, ಚರಂಡಿ, ಜನಸ್ತೋಮ ತುಂಬಾ ಇರುವ ದೇವಾಲಯಗಳ ಪರಿಸರದಲ್ಲಿ ಕಣ್ಣಿಗೆ ಎದ್ದು ಕಾಣುವ, ಗಾಳಿಗೆ ಹಾರಾಡುವ ಬಳಸಿ ಎಲ್ಲೆಂದರಲ್ಲಿ ಎಸೆದ ನಾನಾ ಬಣ್ಣ, ಗಾತ್ರಗಳ ಪ್ಲೇಸ್ಟಿಕ್ ಲಕೋಟೆ, ತೊಟ್ಟೆ, ದೊಡ್ಡ ಚೀಲಗಳು ಇಂದು ಸಾಮಾನ್ಯವಾಗಿದೆ! ಕಸಾಯಿ ತ್ಯಾಜ್ಯಗಳನ್ನು, ಕೊಳೆತ ತರಕಾರಿಗಳನ್ನು ದೊಡ್ಡ ಪ್ಲೇಸ್ಟಿಕ್ ಚೀಲಗಳಲ್ಲಿ ತುಂಬಿ ಕಟ್ಟಿ ಗ್ರಾಮಾಂತರ ರಸ್ತೆಗಳ ಬದಿಗಳಲ್ಲಿ, ಕೆಲವೊಮ್ಮೆ ನಡು ರಸ್ತೆಯಲ್ಲಿ ರಾತ್ರಿ ಎಸೆಯುತ್ತಾರೆ! ವಾಹನಗಳ ಅಡಿಗೆ ಸಿಲುಕಿ ಅದರೊಳಗಿನ ತ್ಯಾಜ್ಯ ವಸ್ತುಗಳು ಅಸ್ತವ್ಯಸ್ತವಾಗಿ ಹರಡಿ ಕೊಳೆತು ನಾರುತ್ತವೆ!ಕಸಾಯಿ ತ್ಯಾಜ್ಯಗಳನ್ನು ತಿನ್ನಲು ಬೀದಿ ನಾಯಿಗಳು ಇಂತಹ ಚೀಲಗಳನ್ನು ಹರಿದು ಜಾಲಾಡುತ್ತವೆ.ಇದರಿಂದ ರಸ್ತೆಯಲ್ಲಿ ನಿತ್ಯ ಸಂಚರಿಸುವವರಿಗೆ ನರಕ ದರ್ಶನವಾಗುತ್ತದೆ! ಹುಚ್ಚು ನಾಯಿಗಳ ಕಾಟ ಇನ್ನೊಂದೆಡೆ ! ತೊಟ್ಟೆ, ಬಳಸಿ ಎಸೆದ ಮದ್ಯ,ಲಘು ಪಾನೀಯಗಳ ಬಾಟಲಿಗಳನ್ನು ಸಿಕ್ಕಸಿಕ್ಕಲ್ಲಿ ಎಸೆಯುವುದರಿಂದ ಅವುಗಳಲ್ಲಿ ಮಳೆ ನೀರು ನಿಂತು ಮಾರಕ ರೋಗಗಳಾದ ಡೆಂಗ್ಯೂ, ಮಲೇರಿಯಾ ತರಬಲ್ಲ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ.

50 ವರ್ಷಗಳ ಹಿಂದೆ ಈ ರೀತಿಯ ಪ್ಲೇಸ್ಟಿಕ್ ಲಕೋಟೆ, ತೊಟ್ಟೆಗಳ ಬಳಕೆ ಇರಲಿಲ್ಲ ! ಈ ವಿಚಾರವನ್ನು ಇಂದಿನ ಯುವ ಜನರು ನಂಬಲಾರರು! ಹಿಂದೆ ದಿನಸಿ ಅಂಗಡಿಗಳಲ್ಲಿ ವಸ್ತುಗಳನ್ನು ತೂಗಿ ಗೋಣಿ ನಾರಿನ ಚೀಲಗಳಲ್ಲಿ, ಸುರುಳಿ ಸುತ್ತಿದ ಪತ್ರಿಕೆಗಳಲ್ಲಿ ತುಂಬಿ ಕಟ್ಟಿ ಕೊಡುತ್ತಿದ್ದರು.ಕಟ್ಟಲು ತೆಳುವಾದ ಗೋಣಿ ನಾರಿನ (ಬಕ್ಕು) ಹಗ್ಗಗಳನ್ನು ಬಳಸುತ್ತಿದ್ದರು.ಇವು ಸಾವಯವ ವಸ್ತುವಾಗಿದ್ದು ಮರಳಿ ಮಣ್ಣಿಗೆ ಸೇರುವಂತದು. ಆದರೆ ಪ್ಲೇಸ್ಟಿಕ್ ಚೀಲಗಳನ್ನು ಬಳಸಿ ಎಸೆದರೆ ಅದು ಮಣ್ಣಿಗೆ ಸೇರದೆ ಹಾಗೇ ಉಳಿದು ಹರಿಯುವ ನೀರಿಗೆ ತಡೆಯಾಗುವುದು. ಸುಟ್ಟರೆ ಕಾರ್ಬನ್ ಮೊನೋಕ್ಸೈಡ್ ವಿಷವು ಗಾಳಿಯನ್ನು ಮಲಿನಗೊಳಿಸಿ ಅಸ್ತಮಾ,ಕೆಮ್ಮು, ಕ್ಯಾನ್ಸರ್ ನಂತಹ ರೋಗಕ್ಕೆ ಕಾರಣವಾದೀತು.ಇಂತಹ ಪ್ಲೇಸ್ಟಿಕ್ ತ್ಯಾಜ್ಯಗಳನ್ನು ತಿಂದ ಜಾನುವಾರುಗಳು ಸಾಯುತ್ತವೆ.

ಹಿಂದೆ ಇಂದಿನಂತೆ ಪ್ಲೇಸ್ಟಿಕ್ ತೊಟ್ಟೆಗಳಲ್ಲಿ ಹಾಲು, ಎಣ್ಣೆ, ನಾನಾ ಬಗೆಯ ತಿಂಡಿ ತಿನಿಸುಗಳನ್ನು ತುಂಬಿ ಮಾರುತ್ತಿರಲಿಲ್ಲ. ಮರಳಿ ಬಳಸಬಹುದಾದ ಗಾಜಿನ ಬಾಟಲಿಗಳಲ್ಲಿ ದ್ರವ ವಸ್ತುಗಳನ್ನು ತುಂಬಿ ಸೀಲ್ ಮಾಡಿ ನೀಡುತ್ತಿದ್ದರು.

ಇಂದು ಪ್ಲೇಸ್ಟಿಕ್ ತ್ಯಾಜ್ಯಗಳು ಚರಂಡಿ, ರಾಜಾ ಕಾಲುವೆಗಳಲ್ಲಿ ತುಂಬಿ ನಗರ, ಪಟ್ಟಣ ಪ್ರದೇಶಗಳಲ್ಲಿ ಕೃತಕ ನೆರೆಗೆ ಕಾರಣವಾಗುತ್ತದೆ!ಮಾನವನು ಪರಿಸರ, ನಿಸರ್ಗದ ಶಿಶು. ಆದರೆ ಈ ಶಿಶುಗಳಿಂದ ಕಲುಷಿತವಾಗಿ ನೆಲತಾಯಿಯ ಮೈ ಇಡಿ ವಿಷ ತುಂಬಿದೆ! ತಾಯೊಡಲಿಗೆ ವಿಷವೂಡಿದ ಶಿಶುವಿನ ಆರೋಗ್ಯ ಹಾಳಾಗುವುದು ಖಂಡಿತಾ.ಆದುದರಿಂದ ಜನರು, ಸರಕಾರ, ಸ್ಥಳೀಯ ಆಡಳಿತ ಸಂಸ್ಥೆಗಳು ಎಚ್ಚತ್ತು ಇನ್ನಾದರೂ ಪ್ಲೇಸ್ಟಿಕ್ ವಸ್ತುಗಳನ್ನು ಅದು ಯಾವುದೇ ರೂಪದಲ್ಲಿರಲಿ ಎಲ್ಲೆಂದರಲ್ಲಿ ಪರಿತ್ಯಕ್ತವಾಗಲು ಬಿಡಬಾರದು. ಪ್ಲೇಸ್ಟಿಕ್ ಬಳಕೆಯನ್ನು, ಉತ್ಪಾದನೆಯನ್ನು ಪೂರ್ತಿಯಾಗಿ ನಿಷೇಧಿಸಲು ಕಷ್ಟಸಾಧ್ಯವಾದರೂ, ಅದರ ಬಳಕೆಗೆ ಕಡ್ಡಾಯ ಮಿತಿಯ ಲಕ್ಷ್ಮಣ ರೇಖೆಯನ್ನು ಎಳೆಯಲೇ ಬೇಕು ನಮ್ಮ ನೆಮ್ಮದಿಯ ಬದುಕಿಗಾಗಿ, ಮುಂದಿನ ಜನಾಂಗದವರಿಗಾಗಿ.
ಬಳಸಿ ಎಸೆಯುವ, ಪ್ಲೇಸ್ಟಿಕ್ ರಾಶಿಗಳಿಂದ ರಸ್ತೆಗೆ ಡಾಮಾರಿ ನಂತೆ ಬಳಸಬಹುದು. ವಾಹನಗಳಿಗೆ ಇಂಧನ ತಯಾರಿಸಬಹುದು. ಹಳೆಯ ಪ್ಲೇಸ್ಟಿಕ್ ಚೀಲಗಳನ್ನು ಶುಚಿಗೊಳಿಸಿ ಮರುಬಳಕೆ ಮಾಡಬಹುದು. ಅಮೇರಿಕಾದಲ್ಲಿ ಸಾವಯವ ಲಕೋಟೆ, ಚೀಲಗಳನ್ನು ಬಳಸುತ್ತಾರೆ. ಅಂಗಡಿ, ಮಾಲ್ ಗಳಿಗೆ ವಸ್ತುಗಳನ್ನು ಕೊಳ್ಳಲು ಹೋದಾಗ ನಾವು ನೂಲಿನ, ನಮ್ಮಲ್ಲಿ ಸಂಗ್ರಹವಾದ ಪ್ಲೇಸ್ಟಿಕ್ ಚೀಲಗಳನ್ನು ಕೊಂಡೊಯ್ಯಬೇಕು. ಎಲ್ಲೆಂದರಲ್ಲಿ ಪ್ಲೇಸ್ಟಿಕ್ ಚೀಲಗಳಲ್ಲಿ ತ್ಯಾಜ್ಯಗಳನ್ನು ತುಂಬಿ ಎಸೆಯುವ ಚಾಳಿಯನ್ನು ನಿಲ್ಲಿಸಲೇ ಬೇಕು. ಎಲ್ಲೆಂದರಲ್ಲಿ ಕಸ ತ್ಯಾಜ್ಯ ಚೆಲ್ಲುವವರನ್ನು ಕಠಿಣವಾಗಿ ಶಿಕ್ಷಿಸಬೇಕು. ಜನರಲ್ಲಿ ಪ್ಲೇಸ್ಟಿಕ್ ತ್ಯಾಜ್ಯಗಳಿಂದಾಗುವ ಭೀಕರ ಹಾನಿಗಳ ಬಗ್ಗೆ ತಿಳಿವನ್ನು ಮೂಡಿಸಬೇಕು. ಇದೇ ರೀತಿ ಪರಿಸರಕ್ಕೆ ಮಾರಕ ವಿಷ ತುಂಬುವ ಪ್ಲೇಸ್ಟಿಕ್ ತ್ಯಾಜ್ಯಗಳನ್ನು ಸಮರೋಪಾದಿಯಲ್ಲಿ ನಿಯಂತ್ರಿಸದಿದ್ದರೆ ನಮ್ಮ ಪಾಲಿಗಿರುವ ಒಂದೇ ಭೂಮಿಯು ಕೆಲವು ದಶಕಗಳಲ್ಲಿ ಉಸಿರುಗಟ್ಟಿಸುವ ವಿವಿಧ ರೋಗಗಳನ್ನು ಪಸರಿಸುವ ಒಂದು ಬೃಹತ್ ಕಸದ ಬುಟ್ಟಿ, ತೊಟ್ಟಿಯಾದೀತು.ಪ್ಲೇಸ್ಟಿಕ್ ವಿಷ ತ್ಯಾಜ್ಯದ ಉರುಳು ಮಾನವ ಹಾಗೂ ಸಕಲ ಜೀವಿಗಳ ಕೊರಳುಗಳನ್ನು ಬಿಗಿದು ಕೊಲ್ಲುವ ಮೊದಲೇ ಎಚ್ಚತ್ತುಕೊಳ್ಳೋಣ.

*ಗುಣಾಜೆ ರಾಮಚಂದ್ರ ಭಟ್*

Related posts

ಔತಣಕೂಟಗಳ ಮಾಯಾಲೋಕ…

Upayuktha

ಕೋವಿಡ್-19 ಮತ್ತು ಮುಖಕವಚ (ಮಾಸ್ಕ್‌)

Upayuktha

ವಿಶ್ವ ಜನಸಂಖ್ಯಾ ದಿನ- ಜುಲೈ 11, ಮಹತ್ವ ಮತ್ತು ಇತಿಹಾಸ

Upayuktha