ಬೆಂಗಳೂರು :
”ಹೊಸ ಆರಂಭ, ಈ ಸಂಭ್ರಮ ಕ್ಷಣವನ್ನು ಅನುಭವಿಸಲು ಕಾಯಲಾಗುತ್ತಿಲ್ಲ. ನಮ್ಮ ಮಗು ಆಗಸ್ಟ್ ತಿಂಗಳಲ್ಲಿ ಬರಲಿದೆ, ನಮಗೆ ಆಶೀರ್ವಾದ ಮಾಡಿ, ಧನ್ಯವಾದ” ಎಂದು ನಯನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿ ನಯನ ಪುಟ್ಟಸ್ವಾಮಿ ಮತ್ತು ಚರಣ್ ತೇಜ್ ಅವರ ವಿವಾಹ 2018ರಲ್ಲಿ ನಡೆದಿತ್ತು. ನಯನ ಅವರ ಪತಿ ಚರಣ್ ತೇಜ್ ಮೂಲತಃ ಹೈದರಾಬಾದ್ನವರಾಗಿದ್ದು, ಈ ದಂಪತಿ ಪ್ರಸ್ತುತ ವಿದೇಶದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಇದೆ.
ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು’ ಸೀಸನ್ 1 ರಲ್ಲಿ ನಯನ ಪುಟ್ಟಸ್ವಾಮಿ ವಿಜೇತೆ ಆಗಿದ್ದರು. ಈ ಕಾರ್ಯಕ್ರಮದ ಮೂಲಕ ಅವರು ಮೊದಲು ಕನ್ನಡಿಗರಿಗೆ ಪರಿಚಯ ಆಗಿದ್ದರು.
ಬಳಿಕ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಮೊದಲ ದಿನವೇ ಬಿಗ್ ಬಾಸ್ ಮನೆಗೆ ಹೋಗಿದ್ದ ನಯನ 63 ದಿನಗಳ ಬಳಿಕ ಎಲಿಮಿನೇಟ್ ಆಗಿದ್ದರು.
ರಿಯಾಲಿಟಿ ಶೋ ಬಿಟ್ಟು ‘ಚಿಟ್ಟೆ ಹೆಜ್ಜೆ’ ಎಂಬ ಧಾರಾವಾಹಿಯಲ್ಲಿಯೂ ನಯನ ನಟಿಸಿದರು. ಪುನೀತ್ ರಾಜ್ ಕುಮಾರ್ ಅವರ ‘ಪವರ್’, ‘ಸಿದ್ಧಾರ್ಥ’, ‘ಅಲೆಮಾರಿ’, ‘ಘರ್ಷಣೆ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.