ಮನೆ ಮದ್ದು

ಬಹು ಉಪಯೋಗಿ ಕಂಚುಳ್ಳಿ: ರುಚಿಗೆ, ಆರೋಗ್ಯಕ್ಕೆ

ಕಂಚುಳ್ಳಿ (ಕಂಚಿಕಾಯಿ)

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಇದನ್ನು `ಕಂಚುಳ್ಳಿ’, `ಕಂಚೀಕಾಯಿ’, `ಹೇರಳೆಕಾಯಿ’ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದರ ಗಿಡಕ್ಕೂ ದೊಡ್ಡ ಲಿಂಬೆ, ಮುಸುಂಬಿ ಗಿಡಗಳಿಗೂ ಸಾಮ್ಯತೆ ಇದೆ. ಆದರೆ ಎಲೆಯನ್ನು ಹಿಸುಕಿದಾಗ ಬರುವ ಪರಿಮಳದಿಂದ ವ್ಯತ್ಯಾಸ ಗುರುತಿಸ ಬಹುದು. ಇದರ ಸಿಪ್ಪೆ ದಪ್ಪವಾಗಿದ್ದು, ತುಂಬಾ ಹುಳಿಯಾಗಿರುತ್ತದೆ.

ಗಾತ್ರ, ಆಕಾರ, ಬಣ್ಣಗಳಲ್ಲಿ ದೊಡ್ಡ ಲಿಂಬೆ, ಮುಸುಂಬಿಯನ್ನು ಹೋಲುವ `ಕಂಚುಳ್ಳಿ’ ಪರಿಮಳ, ರುಚಿಯಲ್ಲಿ ವ್ಯತ್ಯಾಸ ಹೊಂದಿದೆ. ಅಲ್ಲದೆ ಇದು ಬಹುಉಪಯೋಗಿ ಕೂಡ. ಹೆಸರೇ ಸೂಚಿಸುವಂತೆ ಇದರ ರುಚಿಯೂ ತುಂಬಾ ಹುಳಿಯಾಗಿದೆ. ಆದರೆ ಆರೋಗ್ಯ ವರ್ಧಕ ಹಾಗೂ ಕೆಲವೊಂದು ಕಾಯಿಲೆಗಳಿಗೆ ರಾಮಬಾಣವು ಹೌದು.

ಕಂಚುಳ್ಳಿ ಮಿಡಿಯಾಗಿದ್ದಾಗ ಕಡು ಹಸುರು ಬಣ್ಣ ಹೊಂದಿದ್ದು, ಹಣ್ಣಾದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮುಸುಂಬಿಯಂತೆ ಸಿಪ್ಪೆ ತೆಗೆದರೆ ಎಸಳಿನಾಕಾರ ಹೊಂದಿದ್ದು, ಬೀಜಗಳನ್ನು ಒಳಗೊಂಡಿರುತ್ತದೆ. ಇದು ಕೂಡ ಬೀಜ ಮೊಳಕೆ ಒಡೆದು ಗಿಡವಾಗುವ ಸಸ್ಯ ವರ್ಗಕ್ಕೆ ಸೇರಿದ್ದು ಅಲ್ಲದೆ ನಿಧಾನವಾಗಿ ಫಲ ಬಿಡುವ ಸಸ್ಯ. ಸಸಿ ನೆಟ್ಟು ಬಹಳ ವರ್ಷಗಳ ಅನಂತರ ಇದರಲ್ಲಿ ಕಾಯಿ ಬೆಳೆಯುವುದು. ಆದರೆ ವರ್ಷದ ಎಲ್ಲ ಕಾಲದದಲ್ಲೂ ಫಸಲು ಕೊಡುತ್ತದೆ.

ಹೀಗೆ ಕಂಚುಳ್ಳಿಗೆ ಉತ್ತಮ ಬೇಡಿಕೆ ಇದೆ. ಆದರೆ ಇದು ಮಾರುಕಟ್ಟೆಯಲ್ಲಿ ದೊರೆಯುವುದು ತೀರಾ ಕಡಿಮೆ. ಅಪರೂಪಕ್ಕೆ ಸಂತೆಗಳಲ್ಲಿ ಲಭಿಸುವುದು. ಇದು ದೀರ್ಘಕಾಲಿಕ ಬೆಳೆಯಾದುದರಿಂದ ರೈತರು ಇದನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲು ಹಿಂದೇಟು ಹಾಕುತ್ತಾರೆ.

ಬಹುಪಯೋಗಿಕಂಚುಳ್ಳಿಯನ್ನು ವಿವಿಧ ರೀತಿಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಲಿಂಬೆಯ ಬದಲಾಗಿ ಶರಬತ್ತು ಮಾಡಲು ಇದನ್ನು ಬಳಸಲಾಗುತ್ತದೆ. ರುಚಿ ಕೂಡ ಲಿಂಬೆ ಶರಬತ್ತಿನಂತೆಯೇ ಇರುತ್ತದೆ. ಲಿಂಬೆ ಉಪ್ಪಿನಕಾಯಿ ತಯಾರಿಸುವಂತೆ ಇದನ್ನು ಬಳಸಿ ಉಪ್ಪಿನಕಾಯಿ ತಯಾರಿಸುತ್ತಾರೆ. ಅಲ್ಲದೆ ಕಂಚೀಕಾಯಿ ಉಪಯೋಗಿಸಿ ಚಿತ್ರಾನ್ನ, ತಿಳಿಸಾರು, ತಂಬ್ಳಿ ಇತ್ಯಾದಿಗಳನ್ನು ತಯಾರಿಸಲಾಗುತ್ತದೆ.

ಕಂಚೀಕಾಯಿಯಲ್ಲಿ ಔಷಧೀಯ ಗುಣಗಳಿದ್ದು, ಸಣ್ಣ-ಪುಟ್ಟ ಕಾಯಿಲೆಗಳಿಗೆ ನಾಟಿ ವೈದ್ಯರು ಇದನ್ನು ಔಷಧಿಯಾಗಿ ಬಳಸಲು ಸೂಚಿಸುತ್ತಾರೆ. ಕಂಚುಳ್ಳಿಯ ಸಿಪ್ಪೆಯನ್ನು ಒಣಗಿಸಿ ಉಪ್ಪಿನ ಭರಣಿಯಲ್ಲಿ ಹಾಕಿಡುತ್ತಾರೆ. ಹೀಗೆ ಶೇಖರಿಸಿದ ಕಂಚುಳ್ಳಿ ಸಿಪ್ಪೆಯನ್ನು `ಕಂಚಿಸಟ್ಟು’ ಎನ್ನುವರು. ಇದನ್ನು ನೀರಿನಲ್ಲಿ ನೆನೆಸಿ, ಗಿವುಚಿ ತಂಬ್ಳಿ ತಯಾರಿಸುತ್ತಾರೆ. ಈ ತಂಬ್ಳಿ ಸೇರಿಸಿ ಊಟ ಮಾಡುವುದರಿಂದ ಭೇದಿ ಸಮಸ್ಯೆ ಬಹುಬೇಗನೆ ನಿವಾರಣೆಯಾಗುವುದು. ತಲೆಪಾಸಿ ತೈಲ (ಮೂಗಿನಲ್ಲಿ, ಹಲ್ಲುಗಳ ಬುಡದಿಂದ ರಕ್ತ ಬರುವುದು ತಲೆ ನೋವು ಇತ್ಯಾದಿ ತೊಂದರೆ ಔಷದೀಯಾಗಿ ಇದನ್ನು ಬಳಸುವರು.) ಕುಚ್ಚಿಲಕ್ಕಿ ಗಂಜಿಗೆ ಕಂಚುಳ್ಳಿ ರಸ ಮಿಶ್ರ ಮಾಡಿ ಸೇವಿಸಿದರೆ ಪಿತ್ತ ಶಮನವಾಗುತ್ತದೆ. ಜ್ವರ, ವಾಂತಿ, ಇತ್ಯಾದಿಯಿಂದಾಗಿ ಬಾಯಿರುಚಿ ಕೆಟ್ಟಿದ್ದರೆ ಕಂಚೀಕಾಯಿ ರಸ ಬಳಸಿ ತಿಳಿಸಾರು ತಯಾರಿಸಿ ಊಟ ಮಾಡಿದರೆ ಸರಿಹೊಂದುವುದು.

– ಸ್ಕಂದಶ್ರೀ

Related posts

ಅಸಿಡಿಟಿ ನಿವಾರಣೆಗೆ ಸಿಂಪಲ್ ರೆಮೆಡಿ, ಇಲ್ಲಿದೆ ನೋಡಿ…

Upayuktha

ಕಾಯಿಲೆ ಬಾರದಂತೆ ತಡೆಗಟ್ಟುವುದೇ ಜಾಣತನ

Upayuktha

ಕಹಿಬೇವು: ಸರ್ವರೋಗ ನಿವಾರಿಣಿ

Upayuktha

Leave a Comment

error: Copying Content is Prohibited !!