ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ರಕ್ತದಾನದಿಂದ ಹೃದಯಕ್ಕೆ ರಕ್ಷಣೆ, ರೋಗನಿರೋಧಕ ಶಕ್ತಿ: ಡಾ. ಶರತ್‌ ಕುಮಾರ್‌

ವಿವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ, ಸುಮಾರು 50 ಮಂದಿಯಿಂದ ರಕ್ತದಾನ

ಮಂಗಳೂರು: ರಕ್ತದಾನ ನಮ್ಮ ದೇಹದ ಅನಗತ್ಯ ಕೊಲೆಸ್ಟ್ರಾಲ್‌ ಹೊರಗೆ ಹಾಕುತ್ತದೆ ಮತ್ತು ಹೊಸ ಜೀವಕೋಶಗಳ ಉತ್ಪತ್ತಿಗೆ ಕಾರಣವಾಗುತ್ತದೆ, ಹೀಗಾಗಿ ಇದು ನಮ್ಮ ಹೃದಯಕ್ಕೂ ಒಳ್ಳೆಯದು, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ, ಎಂದು ವೆನ್ಲಾಕ್‌ ಆಸ್ಪತ್ರೆಯ ತಜ್ಞ ವೈದ್ಯ, ಮತ್ತು ಬ್ಲಡ್‌ ಬ್ಯಾಂಕ್‌ ಅಧಿಕಾರಿ ಡಾ. ಶರತ್‌ ಕುಮಾರ್‌ ರಾವ್‌ ಜೆ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್‌ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್‌ಸಿಸಿ ವಿಭಾಗಗಳು, ಲಯನ್ಸ್‌ ಕ್ಲಬ್‌ ಹೈಲ್ಯಾಂಡ್‌ ಸಹಯೋಗದೊಂದಿಗೆ ಮಂಗಳವಾರ ರವೀಂದ್ರ ಕಲಾಭವನದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬನ ರಕ್ತ ನಾಲ್ವರ ಜೀವವುಳಿಸಬಹುದು. ಅದರಲ್ಲೂ ನಿಯಮಿತ ರಕ್ತಪೂರಣದ ಅಗತ್ಯವಿರುವ ತಲಸ್ಸೇಮಿಯಾ (Thalassemia) ದಂತಹ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ರಕ್ತದ ತೀವ್ರ ಅಗತ್ಯತೆಯಿರುತ್ತದೆ, ಎಂದರು.

ಸುಮಾರು 217 ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಹೆಗ್ಗಳಿಕೆಯಿರುವ ಲಯನ್ಸ್‌ ಕ್ಲಬ್‌ನ ಪ್ರಾದೇಶಿಕ ಸಲಹೆಗಾರ ಲಯನ್‌. ನಾಗೇಶ್‌ ಕುಮಾರ್‌, ರಕ್ತದಾನ ಜಾತಿ- ಧರ್ಮದ ಹಂಗಿಲ್ಲದ ಮಾನವೀಯ ಸೇವೆ, ಎಂದು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್‌ ಸಂಯೋಜಕಿ ಡಾ. ನಾಗರತ್ನ ಕೆ.ಎ, ರಕ್ತದಾನದಲ್ಲಿ ಎನ್‌ಎಸ್‌ಎಸ್‌ ಬೋಧಿಸುವ ಸೇವೆ, ಸದ್ಭಾವನೆ, ರಾಷ್ಟ್ರೀಯತೆ, ಏಕತೆ ಎಂಬ ಎಲ್ಲಾ ತತ್ವಗಳು ಅಡಗಿವೆ, ಎಂದರು.

ಪ್ರಾಂಶುಪಾಲ ಡಾ. ಎ ಹರೀಶ ಮಾತನಾಡಿ, ಕೊವಿಡ್‌ ನಂತರ ಇತ್ತೀಚೆಗಷ್ಟೇ ಕಾಲೇಜಿಗೆ ಬರಲು ಆರಂಭಿಸಿರುವ ವಿದ್ಯಾರ್ಥಿಗಳು ರಕ್ತದಾನಕ್ಕೆ ತೋರಿಸಿದ ಉತ್ಸಾಹವನ್ನು ಮೆಚ್ಚಿಕೊಂಡರು. ಲಯನ್ಸ್‌ ಕ್ಲಬ್‌ (ಹೈಲ್ಯಾಂಡ್‌) ಅಧ್ಯಕ್ಷ ಲಯನ್‌ ಕೆ.ಎಸ್‌ ರಂಜನ್ ವಂದನಾರ್ಪಣೆಗೈದರು.

ಎನ್‌ಸಿಸಿ (ನೌಕಾದಳ) ಅಧಿಕಾರಿ ಡಾ. ಯತೀಶ್‌ ಕುಮಾರ್‌, ಎನ್‌ಎಸ್‌ಎಸ್‌ ಅಧಿಕಾರಿಗಳಾದ ಡಾ. ಗಾಯತ್ರಿ, ಡಾ. ಸುರೇಶ್‌, ಕಾಲೇಜಿನ ಯುವ ರೆಡ್‌ಕ್ರಾಸ್‌ ಸಂಯೋಜಕ ಡಾ. ಕುಮಾರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 50 ಮಂದಿ ರಕ್ತದಾನ ಮಾಡಿ ಶಿಬಿರದ ಸದುಪಯೋಗಪಡಿಸಿಕೊಂಡರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಂಕ್ಷಿಪ್ತ ಸುದ್ದಿಗಳು:  ಡಿಪ್ಲೋಮಾ ಬಾಕಿ- ಪರೀಕ್ಷೆಗೆ ಕೊನೆಯ ಅವಕಾಶ

Upayuktha

ನುಡಿದಂತೆ ನಡೆಯುತ್ತೇನೆ, ನಿಮ್ಮ ಗೌರವ ರಕ್ಷಿಸುತ್ತೇನೆ: ಆರ್‌ ಆರ್‌ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

Upayuktha

ಕಾಲೇಜೇನೋ ಆರಂಭವಾಯಿತು, ಆದರೆ….

Upayuktha