ದೇಶ-ವಿದೇಶ ಪ್ರಮುಖ

ದಂಗೆಕೋರರ ಆಸ್ತಿ ಮುಟ್ಟುಗೋಲು: ಯೋಗಿ ಸರಕಾರದ ದಿಟ್ಟ ಕ್ರಮ

(ಚಿತ್ರ ಕೃಪೆ: ಇಂಡಿಯಾ ಟುಡೇ)

ಲಖನೌ/ ಮುಜಫರ್‌ನಗರ:

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ದೊಂಬಿ, ಹಿಂಸಾಚಾರಕ್ಕಿಳಿದು ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟುಮಾಡಿದ ದೊಂಬಿಕೋರರ ಆಸ್ತಿಗಳನ್ನೇ ಮುಟ್ಟುಗೋಲು ಹಾಕಿಕೊಳ್ಳಲು ಉತ್ತರ ಪ್ರದೇಶ ಸರಕಾರ ದಿಟ್ಟ ಕ್ರಮ ಆರಂಭಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡು ದಿನಗಳ ಹಿಂದೆಯೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಜಿಲ್ಲಾಡಳಿತಗಳು ದೊಂಬಿಕೋರರ ಆಸ್ತಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿವೆ.

ಈ ನಡುವೆ ರಾಮ್‌ಪುರದಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇತ್ತೀಚೆಗೆ ಕಾನ್ಪುರದಲ್ಲಿ ನಡೆದ ಗಲಭೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಗುರುವಾರದಿಂದೀಚೆಗೆ ನಡೆದ ಹಿಂಸಾಚಾರಗಳಲ್ಲಿ ಈ ವರೆಗೆ 18 ಮಂದಿ ಮೃತಪಟ್ಟಿದ್ದಾರೆ.

2018ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮುಜಫರ್‌ನಗರ ಜಿಲ್ಲಾಡಳಿತವು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ ದೊಂಬಿಕೋರರಿಗೆ ಸೇರಿದ 50ಕ್ಕೂ ಹೆಚ್ಚು ಅಂಗಡಿಗಳಿಗೆ ಬೀಗಮುದ್ರೆ ಹಾಕಿ ಜಪ್ತಿ ಮಾಡಿದೆ. ಗಲಭೆಗ್ರಸ್ತ ಮೀನಾಕ್ಷಿ ಚೌಕ ಮತ್ತು ಕಚ್ಛೀ ಸಡಕ್‌ ಪ್ರದೇಶಗಳಲ್ಲಿರುವ ಅಂಗಡಿಗಳನ್ನು ಮುಟ್ಟುಗೋಲು ಹಾಕಲಾಗಿದೆ.

‘ಈ ಅಂಗಡಿಗಳನ್ನು ಮುಚ್ಚಿರುವುದೇಕೆ ಮತ್ತು ಗುಂಪುಗಳು ಈ ಅಂಗಡಿಗಳ ಸುತ್ತವೇ ಜಮಾಯಿಸಿದ್ದೇಕೆ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಎಸ್‌ಎಸ್‌ಪಿ ಅಭಿಷೇಕ್ ಯಾದವ್ ತಿಳಿಸಿದರು.

ಹಿಂಸಾಚಾರ ಮತ್ತು ದೊಂಬಿಗಿಳಿದವರಿಗೆ ತಕ್ಕ ಪಾಠ ಕಲಿಸಲು ರಾಜ್ಯ ಸರಕಾರ ದೃಢ ನಿರ್ಧಾರ ಮಾಡಿದ್ದು, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತ್ವರಿತ ಕ್ರಮ ಕೈಗೊಳ್ಳುತ್ತಿದೆ. ಈ ಕ್ರಮವು ಭವಿಷ್ಯದಲ್ಲಿ ದೊಂಬಿಕೋರರನ್ನು ಹತ್ತಿಕ್ಕುವ ಅಸ್ತ್ರವಾಗಿ ಬಳಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಗಲಭೆಕೋರರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಕೇಸು ದಾಖಲಿಸಿಕೊಳ್ಳಲಾಗುವುದು ಎಂದು ಫಿರೋಜಾಬಾದ್ ಪೊಲೀಸ್ ಮುಖ್ಯಾಧಿಕಾರಿ ಸುಚೀಂದ್ರ ಪಟೇಲ್‌ ತಿಳಿಸಿದರು.

ದಂಗೆಕೋರರ ಪತ್ತೆಗೆ ವೀಡಿಯೋಗಳ ಪರಿಶೀಲನೆ:
ಪೊಲೀಸ್ ಅಧಿಕಾರಿಗಳ ಜತೆ ದಂಗೆಕೋರರ ಗುಂಪು ಕದನಕ್ಕಿಳಿದ ಲಖನೌದಲ್ಲಿ ಅಲ್ಲಿನ ಜಿಲ್ಲಾಡಳಿತ ನಷ್ಟದ ಅಂದಾಜು ಮಾಡಲು ನಾಲ್ವರು ಅಧಿಕಾರಿಗಳ ಸಮಿತಿ ರಚಿಸಿದೆ. ತೀವ್ರ ಹಿಂಸಾಚಾರಗಳು ನಡೆದ ಪ್ರದೇಶಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಚಂದ್ರ ವಿಜಯ್‌ ಸಿಂಗ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ವೀಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ದುಷ್ಕರ್ಮಿಗಳ ಗುರುತು ಪತ್ತೆ ಮಾಡುತ್ತಿದ್ದಾರೆ.

ದೊಂಬಿ, ಹಿಂಸೆಗಳ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಎಸಗಿ ನಷ್ಟಕ್ಕೆ ಹೊಣೆಯಾದವರ ಆಸ್ತಿಗಳನ್ನೇ ಮುಟ್ಟುಗೋಲು ಹಾಕಿಕೊಂಡು ನಷ್ಟ ಭರ್ತಿ ಮಾಡಿಕೊಳ್ಳಬೇಕು ಎಂದು 2018ರ ಅಕ್ಟೋಬರ್ 1ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದೇ ಆಸ್ತ್ರವನ್ನು ಈಗ ಪ್ರಯೋಗಿಸಲಾಗುತ್ತಿದೆ.

ಪೊಲೀಸರು ತಾವಾಗಿಯೇ ಯಾರ ಮೇಲೂ ಗುಂಡು ಹಾರಿಸಿ ಕೊಂದು ಹಾಕಿಲ್ಲ; ಗಲಭೆ ನಡೆಸುವ ಗುಂಪುಗಳು ಗುಂಡಿನ ಘರ್ಷಣೆಗಿಳಿದಾಗ ಪ್ರತಿದಾಳಿ ಅನಿವಾರ್ಯವಾಯಿತು. ಕಳೆದ 36 ಗಂಟೆಗಳಲ್ಲಿ ಪೊಲೀಸರು ಯಾರ ಮೇಲೂ ಗುಂಡು ಹಾರಿಸಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

‘ನಾವು ಈ ವಿಷಯದಲ್ಲಿ ಪಾರದರ್ಶಕವಾಗಿದ್ದೇವೆ. ಒಂದು ವೇಳೆ ಪೊಲೀಸರು ಗುಂಡು ಹಾರಿಸಿ ಯಾರನ್ನಾದರೂ ಕೊಂದಿರುವುದು ಸಾಬೀತಾದರೆ ತಕ್ಕ ಕ್ರಮ ಕೈಗೊಳ್ಳುತ್ತೇವೆ. ಆದರೆ ನಮ್ಮ ಕಡೆಯಿಂದ ತಪ್ಪಾಗಿಲ್ಲ’ ಎಂದು ಅವರು ತಿಳಿಸಿದರು.

ಗಲಭೆಕೋರರು ಮಕ್ಕಳನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಕಾರರಿಂದ ಈವರೆಗೆ ನಾಡ ಬಂದೂಕುಗಳಿಗೆ ತುಂಬುವ 405 ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 705 ಮಂದಿಯನ್ನು ಬಂಧಿಸಲಾಗಿದ್ದು 124 ಎಫ್‌ಐಆರ್‌ ದಾಖಲಿಸಲಾಗಿದೆ.

ಶನಿವಾರದಂದು ರಾಮ್‌ಪುರ, ಮುಜಫರ್‌ನಗರ ಮತ್ತು ಕಾನ್ಪುರ ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದರೂ ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಶಾಂತವಾಗಿತ್ತು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಅರುಣ್ ಜೇಟ್ಲಿ ಪಂಚಭೂತಗಳಲ್ಲಿ ಲೀನ; ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Upayuktha

ವಿಜಯ ದಶಮಿಯ ಶುಭದಿನದಂದು ಭಾರತೀಯ ವಾಯುಪಡೆ ಬತ್ತಳಿಕೆ ಸೇರಿದ ರಫೇಲ್‌ ಯುದ್ಧ ವಿಮಾನ

Upayuktha

ಇರುವುದೊಂದೇ ಹೃದಯ ಜೋಪಾನ, ಇರಲಿ ಅದರ ಕಡೆ ಗಮನ

Upayuktha