ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

‘ಉದ್ಯೋಗ ಮಾರ್ಗದರ್ಶನದ ಕೊರತೆಯೇ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ’

ಮಂಗಳೂರು ವಿವಿಯ ‘ಕೆರಿಯರ್‌ ಡೇ’ ಯಲ್ಲಿ ಕೆಪಿಎಸ್‌ಸಿ ಸದಸ್ಯ ಡಾ. ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌ ಅಭಿಮತ

ಮಂಗಳೂರು: ನಿರುದ್ಯೋಗ ಸಮಸ್ಯೆಗೆ ಉದ್ಯೋಗ ಮಾರ್ಗದರ್ಶನದ ಕೊರತೆ ಮತ್ತು ಗೊತ್ತುಗುರಿಯಿಲ್ಲದ ಶಿಕ್ಷಣವೇ ಪ್ರಮುಖ ಕಾರಣ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ (ಯುಇಐಜಿಬಿ) ಶುಕ್ರವಾರ ಆಯೋಜಿಸಿದ್ದ ‘ಮೆರಕಿ’ ಅಥವಾ ಕೆರಿಯರ್‌ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ನಿರುದ್ಯೋಗ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ದೇಶದ 36 ಕೋಟಿ ಜನ 15 ಮತ್ತು 29ರ ನಡುವಿನ ವಯಸ್ಸಿನವರು. ಕರ್ನಾಟಕದಲ್ಲಿ ಈ ಪ್ರಮಾಣ 1.7 ಕೋಟಿಯಷ್ಟಿದೆ. ಸಾಂಕ್ರಾಮಿಕದ ಬಳಿಕ ಉದ್ಯೋಗ ಪಡೆದುಕೊಳ್ಳುವುದು ದೊಡ್ಡ ಸವಾಲಾಗಿದೆ. ಇದರ ಪರಿಣಾಮವಾಗಿ ಅನೇಕರು ಅರೆಕಾಲಿಕ ಉದ್ಯೋಗ ಅಥವಾ ತಮ್ಮ ಕಲಿಕೆಗೆ ಸಂಬಂಧವೇ ಇಲ್ಲದ ಉದ್ಯೋಗಗಳ ಮೊರೆ ಹೋಗುತ್ತಿದ್ದಾರೆ. ಉದ್ಯಮಿಗಳಾಗಲು ಪದವಿಯ ಅಗತ್ಯವಿಲ್ಲ ಎಂದು ಅನೇಕರು ಸಾಧಿಸಿ ತೋರಿಸಿದ್ದಾರೆ. ಆದರೂ ಶಾಲಾ- ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ಒದಗಿಸುವುದು ನಮ್ಮ ಮುಂದಿನ ಸವಾಲಿಗೆ ಒಂದು ಪರಿಹಾರವಾಗಬಹುದು, ಎಂದರು.

ಇದೇ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾತನಾಡಿದ ಅವರು, 2020ರಲ್ಲಿ ಸಂದರ್ಶನ ಹಂತಕ್ಕೆ ಬಂದ 2,123 ಅಭ್ಯರ್ಥಿಗಳಲ್ಲಿ ಕರಾವಳಿ ಜಿಲ್ಲೆಯವರು ಕೇವಲ 7 ಮಂದಿ. ಮರುಪ್ರಯತ್ನದ ಗುಣ, ಒಳ್ಳೆಯ ಕೋಚಿಂಗ್‌ ಮತ್ತು ರಾಜ್ಯದ- ದೇಶದ ಎಲ್ಲಾದರೂ ಕೆಲಸ ಮಾಡಲು ಸಿದ್ಧವಾಗಿರುವ ಗುಣ ನಮ್ಮ ಸಾಧನೆಯನ್ನು ಉತ್ತಮಪಡಿಸಬಹುದು ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, “ನಾವು ಯಾವುದೇ ಹುದ್ದೆಗೂ ಅರ್ಹತೆ ಗಳಿಸಬೇಕು, ನಂತರ ಆಕಾಂಕ್ಷೆಯಿರಬೇಕು. ಸೋಲೇ ಕೊನೆಯಲ್ಲ, ಅದು ನಮ್ಮ ಸಾಮರ್ಥ್ಯ ಹೆಚ್ಚಿಸುತ್ತದೆ. ಕೆಲಸ ಮಾಡುವ ಮನಸ್ಸು, ಅವಕಾಶ ಬಳಸಿಕೊಳ್ಳುವಿಕೆ ಮತ್ತು ಸ್ಪರ್ಧಾತ್ಮಕತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ,” ಎಂದರು.

ಮಂಗಳೂರು ವಿವಿಯ ಕುಲಸಚಿವ ಕೆ ರಾಜು ಮೊಗವೀರ (ಕೆಎಎಸ್‌) ಮಾತನಾಡಿ, ಭವಿಷ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಒಂದು ಉತ್ತಮ ವೃತ್ತಿಪರ ಶಿಕ್ಷಣ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಶಯ ವ್ಯಕ್ತಪಡಿಸಿದರು. ಯುಇಐಜಿಬಿ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿʼಸೋಜ, ಕೇಂದ್ರದ ಚಟುವಟಿಕೆಗಳನ್ನು ವಿವರಿಸಿ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಬಂಟ್ವಾಳ ತಹಶೀಲ್ದಾರ್‌, ತಾಲ್ಲೂಕು ಮ್ಯಾಜಿಸ್ಟ್ರೇಟ್‌ ಎಸ್‌ ಆರ್‌ ರಶ್ಮಿ ಮತ್ತು ಐಡಿಪಿ ಎಜುಕೇಶನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ಶಿಜೋಮೊನ್‌ ಯೇಸುದಾಸ್‌ ಹಾಜರಿದ್ದರು. ಯುಇಐಜಿಬಿ ಉಪ ಮುಖ್ಯಸ್ಥ ಹೇಮಚಂದ್ರ ಎಸ್‌ ಜೆ ಧನ್ಯವಾದ ಸಮರ್ಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಫೆ 12 ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ‘ಸಂಚಾರಿ ಕನಕ ಪುರಂದರ ಪ್ರಶಸ್ತಿ’ ಪ್ರದಾನ

Upayuktha

ನಗರವಿಡೀ ಖಾಲಿ ಖಾಲಿ… ಬಾಡಿಗೆ ಮನೆ ಕೇಳೋರಿಲ್ಲ… ಇದು ಬೆಂಗಳೂರಿನ ಕತೆ

Upayuktha

ಪ್ರತಿಭೆಗಳ ಅನಾವರಣಕ್ಕೆ ಕಾಲೇಜು ವೇದಿಕೆ: ಲೆ. ಅತುಲ್ ಶೆಣೈ

Upayuktha