ದೇಶ-ವಿದೇಶ ನಿಧನ ಸುದ್ದಿ ಪ್ರಮುಖ ರಾಜ್ಯ

ಕೊರೋನಾ ತಂದ ಆಘಾತ: ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ನವದೆಹಲಿ:  ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬುಧವಾರ ಸಂಜೆ ಅವರು ದೆಹಲಿಯ ಏಮ್ಸ್‌ನಲ್ಲಿ ಕೊನೆಯುಸಿರೆಳೆದರು. ಕ್ರಿಯಾಶೀಲ ಸಚಿವರಾಗಿ ಜನರ ಮನಸ್ಸು ಗೆದ್ದಿದ್ದ ಸುರೇಶ್ ಅಂಗಡಿಯವರ ಹಠಾತ್ ನಿಧನ ಇಡೀ ದೇಶವನ್ನು ದಿಗ್ಮೂಢಗೊಳಿಸಿದೆ.

ಸೆಪ್ಟೆಂಬರ್ 11ರಂದು 65ರ ಹರೆಯದ ಸುರೇಶ್ ಅಂಗಡಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಆರಂಭದಲ್ಲಿ ಯಾವುದೇ ರೋಗಲಕ್ಷಣವಿರಲಿಲ್ಲ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಅವರು ದೆಹಲಿಯ ಏಮ್ಸ್‌ಗೆ ದಾಖಲುಗೊಂಡರು.  ಕಳೆದ ಎರಡು ದಿನಗಳಿಂದ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಐಸಿಯುಗೆ ದಾಖಲಿಸಲಾಗಿತ್ತು. ಬುಧವಾರ ಹಠಾತ್ ಆಗಿ ನಿಧನ ಹೊಂದಿದರು. ದುರ್ದೈವವಶಾತ್, ಸುರೇಶ್ ಅಂಗಡಿ ಅವರು ಕೊರೋನಾ ಸೋಂಕಿಗೆ ಬಲಿಯಾದ ಪ್ರಥಮ ಕೇಂದ್ರ ಸಚಿವರಾಗಿದ್ದಾರೆ. ಈ ಮೊದಲು ಉತ್ತರ ಪ್ರದೇಶದ ಇಬ್ಬರು ಸಚಿವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು.

ರಾಜಕೀಯ ಸಾಧನೆ:

ಮೂಲತಃ ವಾಣಿಜ್ಯೋದ್ಯಮಿಯಾದ ಸುರೇಶ್ ಅಂಗಡಿಯವರು ಬಾಲ್ಯದಿಂದಲೇ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. 1996 ರಿಂದ 1999ರ ತನಕ ಸುರೇಶ್ ಅಂಗಡಿ ಅವರು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2001ರಲ್ಲಿ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡರು. 2004ರಲ್ಲಿ ಬೆಳಗಾವಿ ಲೋಕಸಭಾ ಸ್ಥಾನದ ಅಭ್ಯರ್ಥಿಯಾಗಿ ಘೋಷಣೆಯಾಗುವ ತನಕವೂ ಅವರು ಆ ಹುದ್ದೆಯನ್ನು ನಿರ್ವಹಿಸಿದ್ದರು. ಅಂಗಡಿಯವರು 2004ರಲ್ಲಿ (14ನೇ ಲೋಕಸಭಾ ಚುನಾವಣೆ) ಭಾರೀ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು. ಬಳಿಕ ಅವರು ಸೋಲಿನ ಮುಖ ಕಂಡಿದ್ದೇ ಇಲ್ಲ. ಸತತವಾಗಿ ನಾಲ್ಕು ಬಾರಿ ಪುನರಾಯ್ಕೆಯಾಗುತ್ತಾ ಬಂದರು. 2019ರಲ್ಲಿ ಮೋದಿ ಸಂಪುಟದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಸ್ಥಾನವನ್ನೂ ಪಡೆದುಕೊಂಡಿದ್ದರು.

ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾದ ಬಳಿಕ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕರ್ನಾಟಕದ ಹಲವು ರೈಲ್ವೆ ಯೋಜನೆಗಳಿಗೆ ಮರುಜೀವ ಬಂದಿತ್ತು. ಅವರ ಇಚ್ಛಾಶಕ್ತಿಯಿಂದಾಗಿ ಹಲವು ಕಾಮಗಾರಿಗಳು ವೇಗ ಪಡೆದುಕೊಂಡಿದ್ದವು. ಅನೇಕ ಹೊಸ ರೈಲುಗಳು ರಾಜ್ಯದಲ್ಲಿ ಆರಂಭಗೊಂಡಿದ್ದವು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ರೈಲ್ವೆ ಮಂಡಳಿಯ ಹಸಿರು ನಿಶಾನೆ ದೊರಕಿಸುವಲ್ಲಿ ಸುರೇಶ್ ಅಂಗಡಿ ಪಾತ್ರ ಮಹತ್ವದ್ದಾಗಿದೆ. ಇತ್ತೀಚೆಗಷ್ಟೇ ಸುರೇಶ್ ಅಂಗಡಿ ಸಮ್ಮುಖದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಹಾಲ್ಟ್ ಸ್ಟೇಶನ್ ಆರಂಭ ಸಂಬಂಧ ರೈಲ್ವೆ-ವಿಮಾನ ನಿಲ್ದಾಣ ಆಡಳಿತದ ಮಧ್ಯೆ ಒಪ್ಪಂದವನ್ನು ಮಾಡಲಾಗಿತ್ತು.

ಹುಬ್ಬಳ್ಳಿ-ಕಿತ್ತೂರು- ಬೆಳಗಾವಿ ನೇರ ರೈಲು ಮಾರ್ಗಕ್ಕೆ ಮಂಜೂರಾತಿ ಕೊಡಿಸಿದ್ದರು. ಬಾಗಲಕೋಟೆ- ಕುಡಚಿ ರೈಲ್ವೆ ಮಾರ್ಗ ನಿರ್ಮಾಣ ವೇಗ ಪಡೆದುಕೊಳ್ಳುವಂತೆ ಮಾಡಿದ್ದರು. ಮೀರಜ್-ಲೋಂಡಾ ಡಬ್ಲಿಂಗ್, ಟ್ರಿಪ್ಲಿಂಗ್‌ಗೆ ಅನುಮತಿ ಕೊಡಿಸಿದ್ದರು. ಶಿಕಾರಿಪುರ-ರಾಣೆಬೆನ್ನೂರಿಗೆ ಹೊಸ ರೈಲು ಮಾರ್ಗ, ಬೈಯಪ್ಪನಹಳ್ಳಿ ರೈಲು ನಿಲ್ದಾಣ ಅಭಿವೃದ್ಧಿಗೂ ಆದ್ಯತೆ ನೀಡಿದ್ದರು. ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಘಾಟ್ ಪ್ರದೇಶದಲ್ಲಿ ವೇಗವರ್ಧನೆಗೆ ಅನುಕೂಲಕರವಾಗುವ ಸಿಗ್ನಲಿಂಗ್ ಅಳವಡಿಕೆ ಕಾರ್ಯಕ್ಕೂ ಒತ್ತು ನೀಡಿದ್ದರು.

ಕುಟುಂಬ ಹಿನ್ನೆಲೆ:

ಸೋಮವ್ವ ಹಾಗೂ ಚನ್ನಬಸಪ್ಪ ಅಂಗಡಿ ದಂಪತಿಯ ಪುತ್ರನಾಗಿ 1955ರ ಜೂನ್ 1 ರಂದು ಸುರೇಶ್ ಅವರು ಜನಿಸಿದರು. ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ ಇವರ ಹುಟ್ಟೂರು. ಬೆಳಗಾವಿಯ ಎಸ್.ಎಸ್.ಎಸ್. ಸಮಿತಿ ವಾಣಿಜ್ಯ ಕಾಲೇಜಿನಲ್ಲಿ ಪದವಿ ಪೂರೈಸಿದ ಸುರೇಶ್ ಅಂಗಡಿಯವರು ಬಳಿಕ ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್‌ಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದರು.

ಸುರೇಶ್ ಅಂಗಡಿಯವರು ಪತ್ನಿ ಮಂಜುಳಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ತಮ್ಮ ಪುತ್ರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರನಿಗೆ ಧಾರೆ ಎರೆದಿದ್ದರು.

ಪ್ರಧಾನಿ, ಸಚಿವರ ಸಂತಾಪ
ಸುರೇಶ್ ಅಂಗಡಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಸುರೇಶ್ ಅಂಗಡಿಯವರು ಅಪ್ರತಿಮ ಕಾರ್ಯಕರ್ತರಾಗಿದ್ದರು. ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಕಠಿಣ ಶ್ರಮಪಟ್ಟಿದ್ದರು. ಅವರೊಬ್ಬ ಬದ್ಧತೆಯ ಸಂಸದ ಹಾಗೂ ದಕ್ಷ ಸಚಿವರಾಗಿ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅವರ ನಿಧನ ದುಃಖ ತಂದಿದೆ. ಅವರ ಕುಟುಂಬ ಹಾಗೂ ಸ್ನೇಹಿತ ವರ್ಗದ ನೋವಿಗೆ ನಾನು ಭಾಗಿಯಾಗುತ್ತೇನೆ. ಓಂ ಶಾಂತಿ ಎಂಬುದಾಗಿ ಟ್ವೀಟ್ ಮಾಡಿದ್ದಾರೆ. ಜತೆಗೆ ಸುರೇಶ್ ಅಂಗಡಿ ಜತೆಗೆ ತಾವಿದ್ದ ಫೊಟೋವೊಂದನ್ನೂ ಹಾಕಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಹಿತ ಹಲವು ಸಚಿವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಭಿನಂದನ್ ವರ್ಧಮಾನ್‌ಗೆ ಕೀರ್ತಿಚಕ್ರ ಪುರಸ್ಕಾರ

Upayuktha

ಆರ್ಲಪದವು- ಕಡಂದೇಲು- ಗಿಳಿಯಾಲು-ಮುಳ್ಳೇರಿಯ ಅಂತಾರಾಜ್ಯ ರಸ್ತೆಯೇ ನಾಪತ್ತೆ…!

Upayuktha

ಒಂದೇ ದಿನ 14 ರಾಷ್ಟ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ

Upayuktha