ವಾಣಿಜ್ಯ

ಎಂಎಸ್‌ಎಂಇಗಳಿಗೆ 5,000 ಕೋಟಿ ರೂ ಜಿಎಸ್‌ಟಿ ತ್ವರಿತ ಮರುಪಾವತಿಗೆ ಕ್ರಮ

ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ 4000-5000 ಕೋಟಿ ರೂ.ಗಳ ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಂಸ್ ಮಂಡಳಿ (ಸಿಬಿಐಸಿ) ರೂಪುರೇಷೆಗಳನ್ನು ಅಂತಿಮಗೊಳಿಸುತ್ತಿದೆ.

ಉದ್ಯಮಗಳಿಗೆ ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆಯನ್ನು ಸಂಪೂರ್ಣ ಸುಲಲಿತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಬೆನ್ನಿಗೇ ಈ ಪ್ರಕ್ರಿಯೆ ಆರಂಭವಾಗಿದೆ.

ಎಂಎಸ್‌ಎಂಇ ಗಳಿಗೆ ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆಯನ್ನು ಮುಂದಿನ 30 ದಿನಗಳೊಳಗೆ ಪೂರ್ಣಗೊಳಿಸುವುದಾಗಿ ಸಚಿವೆ ನಿರ್ಮಲಾ ಶುಕ್ರವಾರ ಪ್ರಕಟಿಸಿದ್ದರು. 60 ದಿನಗಳಿಗಿಂತ ಹೆಚ್ಚು ಕಾಲ ‘ನೋ ಡ್ಯೂ’ (ಹಿಂಬಾಕಿ ಇಲ್ಲ) ಇರದಂತೆ ನೋಡಿಕೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದರು.

ಸುಗಮ ಮರುಪಾವತಿ ವ್ಯವಸ್ಥೆ ರೂಪಿಸಲು ಸಿಬಿಐಸಿ ಅಧಿಕಾರಿಗಳು ಮತ್ತು ಜಿಎಸ್‌ಟಿ ನೆಟ್‌ವರ್ಕ್‌ (ಐಟಿ ಬೆಂಬಲ ನೀಡುವ ಕಂಪನಿ) ಅಧಿಕಾರಿಗಳ ಜತೆ ಸಚಿವೆ ಇಂದು ಮಹತ್ವದ ಸಮಾಲೋಚನೆಗಳನ್ನು ನಡೆಲಿದ್ದಾರೆ.

‘ಜಿಎಸ್‌ಟಿ ಮರುಪಾವತಿಗಳು ಭಾರೀ ಪ್ರಮಾಣದಲ್ಲೇನೂ ಇಲ್ಲ; ಆದರೆ ಎಷ್ಟೇ ಮೊತ್ತ ಬಾಕಿಯಿರಲಿ, ಅದನ್ನು ಶೀಘ್ರವೇ ಪೂರ್ಣಗೊಳಿಸಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮೈಸೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಚಿವೆ ನಿರ್ಮಲಾ, ಮರುಪಾವತಿ ಹರಿವಿಗೆ ಯಾವುದೇ ಅಡೆತಡೆ ಇರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ‘ಅಡಚಣೆ ಸೃಷ್ಟಿಸುವ ಅಂಶಗಳನ್ನು ತೆಗೆದುಹಾಕಲಾಗುವುದು. ಮೋದಿ ಸರಕಾರ ಸುಮ್ಮನೇ ನೋಡುತ್ತ ಕುಳಿತುಕೊಳ್ಳುವುದಿಲ್ಲ’ ಎಂದು ಸಚಿವೆಯನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಸಣ್ಣ ಉದ್ಯಮಗಳಿಗೆ ಸಾಕಷ್ಟು ಹಣದ ಹರಿವು ಒದಗಿಸುವ ಕೇಂದ್ರದ ಪ್ರಯತ್ನವಾಗಿ ಜಿಎಸ್‌ಟಿ ಮತ್ತು ಸರಕಾರಿ ಇಲಾಖೆಗಳು ಹಾಗೂ ಕೇಂದ್ರ ಸಾರ್ವಜನಿಕ ವಲಯದ ಕಂಪನಿಗಳ ಬಾಕಿ ಮರುಪಾವತಿ ತ್ವರಿತವಾಗಿ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಈ ಕಂಪನಿಗಳು ಎಂಎಸ್‌ಎಂಇಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣಕಾಸು ಪೂರೈಸುತ್ತವೆ.

ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರಿಗೆ ಈಕ್ವಿಟಿಗಳು ಮತ್ತು ಡಿರೈವೇಟಿವ್ ವಿಭಾಗಗಳಲ್ಲಿ ಬಂಡವಾಳ ಗಳಿಕೆ ಮೇಲಣ ಹೆಚ್ಚುವರಿ ಸರ್ಚಾರ್ಜ್‌ಗಳನ್ನು ಹಿಂಪಡೆಯಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಡಿರೈವೇಟಿವ್‌ಗಳನ್ನು (ಫ್ಯೂಚರ್ಸ್ ಮತ್ತು ಆಪ್ಷನ್ಸ್‌) ಬಂಡವಾಳ ಸೊತ್ತು ಎಂದು ಪರಿಗಣಿಸದೆ, ಡಿರೈವೇಟಿವ್‌ಗಳ ವರ್ಗಾವಣೆಯಿಂದ ಬರುವ ಆದಾಯವನ್ನು ಉದ್ಯಮ ಆದಾಯ (ಬಿಸಿನೆಸ್‌ ಇನ್‌ಕಂ) ಎಂದು ಪರಿಗಣಿಸದೆ, ದೇಶೀಯ ಹೂಡಿಕೆದಾರರಿಗೆ ವಿಧಿಸುವ ಸಾಮಾನ್ಯ ತೆರಿಗೆ ದರವನ್ನೇ ವಿಧಿಸಲು ಇಲಾಖೆ ಮುಂದಾಗಿದೆ.

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (08-01-2021)

Upayuktha

ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ (ಫೆ.28)

Upayuktha

26, 27ರ ಉದ್ದೇಶಿತ ಬ್ಯಾಂಕ್‌ ಮುಷ್ಕರ ರದ್ದು, ಎಂದಿನಂತೆ ವಹಿವಾಟು

Upayuktha