ಪ್ರಮುಖ ಪ್ರಶ್ನೆ- ಉತ್ತರಗಳು (FAQs)

ಪೌರತ್ವ ತಿದ್ದುಪಡಿ ಕಾಯ್ದೆ 2019: ಅನುಮಾನಗಳಿಗೆಲ್ಲ ಉತ್ತರ ಇಲ್ಲಿದೆ ನೋಡಿ…

ಹೊಸದಿಲ್ಲಿ: ಪೌರತ್ವ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯ ನೂತನ ಕಾಯ್ದೆ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಪ್ರಶ್ನೋತ್ತರ ಮಾದರಿಯಲ್ಲಿ ನೀಡಿದೆ. ಅದರ ಪೂರ್ಣ ವಿವರ ಇಲ್ಲಿದೆ:

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದ ಭಾರತೀಯ ಪ್ರಜೆಗೆ ಏನಾದರೂ ಹಾನಿಯಿದೆಯೇ?
– ಇಲ್ಲ. ಯಾವೊಬ್ಬ ಭಾರತೀಯ ಪ್ರಜೆಯ ಮೇಲೂ ಈ ಕಾಯ್ದೆಯಿಂದ ಯಾವುದೇ ಪರಿಣಾಮವಿಲ್ಲ. ಭಾರತೀಯ ಪ್ರಜೆಗಳು ಭಾರತೀಯ ಸಂವಿಧಾನದಿಂದ ದತ್ತವಾದ ಎಲ್ಲ ಮೂಲಭೂತ ಹಕ್ಕುಗಳನ್ನೂ ಪೂರ್ಣವಾಗಿ ಅನುಭವಿಸುತ್ತಾರೆ. ಸಿಎಎ ಸಹಿತ ಯಾವುದೇ ಕಾಯ್ದೆಯೂ ಅವರಿಂದ ಯಾವುದೇ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ. ಈ ಬಗ್ಗೆ ಬಹಳಷ್ಟು ಅಪಪ್ರಚಾರಗಳು ನಡೆಯುತ್ತಿವೆ. ಮುಸ್ಲಿಂ ಪ್ರಜೆಗಳೂ ಸೇರಿದಂತೆ ಯಾವೊಬ್ಬ ಭಾರತೀಯ ಪ್ರಜೆಯ ಮೇಲೂ ಸಿಎಎ ಪರಿಣಾಮವಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಯಾರಿಗೆ ಅನ್ವಯವಾಗುತ್ತದೆ?

2014ರ ಡಿಸೆಂಬರ್ 31ರ ವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಿಂದ ತಮ್ಮ ಧರ್ಮದ ಕಾರಣಕ್ಕೆ ಹಿಂಸೆ, ದೌರ್ಜನ್ಯ ತಾಳಲಾಗದೆ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ವಿದೇಶೀಯರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಮುಸ್ಲಿಮರೂ ಸೇರಿದಂತೆ ಈ ಮೂರು ದೇಶಗಳ ಸಹಿತ ಯಾವುದೇ ದೇಶಗಳಿಂದ ಭಾರತಕ್ಕೆ ವಲಸೆ ಬಂದ ಇತರ ವಿದೇಶೀಯರಿಗೆ ಇದು ಅನ್ವಯಿಸುವುದಿಲ್ಲ.

ಈ ಮೂರು ದೇಶಗಳಿಂದ ವಲಸೆ ಬಂದ ಹಿಂದೂ, ಸಿಖ್‌, ಜೈನ, ಬೌದ್ಧ,, ಪಾರ್ಸಿ ಮತ್ತು ಕ್ರಿಶ್ಚಿಯನ್‌ ವಿದೇಶೀಯರಿಗೆ ಇದು ಹೇಗೆ ಲಾಭದಾಯಕ?
– ಪಾಸ್‌ಪೋರ್ಟ್‌ ಮತ್ತು ವೀಸಾ ಸೇರಿದಂತೆ ಅವರ ಪ್ರಯಾಣ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಅಥವಾ ದಾಖಲೆಗಳೇ ಇಲ್ಲದಿದ್ದರೆ, ಮರಳಿ ತಮ್ಮ ಮೂಲ ದೇಶಕ್ಕೆ ತೆರಳಿದಾಗ ಮತ್ತೆ ಹಿಂಸಾಚಾರಕ್ಕೆ ತುತ್ತಾಗುವ ಭೀತಿ ಎದುರಿಸುತ್ತಿದ್ದರೆ ಅಂಥವರು ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ವಲಸಿಗರಿಗೆ ಕಾನೂನುಬದ್ಧ ಹಕ್ಕನ್ನು ಸಿಎಎ ಸೃಷ್ಟಿಸುತ್ತದೆ. ಎರಡನೆಯದಾಗಿ, ಅವರು ಭಾರತೀಯ ಪೌರತ್ವವನ್ನು ತ್ವರಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇತರ ಎಲ್ಲಾ ವರ್ಗದ ವಿದೇಶೀಯರಿಗೆ ಭಾರತೀಯ ಪೌರತ್ವ ಪಡೆಯಲು ವಿಧಿಸಲಾಗಿರುವ 1+11 ವರ್ಷದ ಕನಿಷ್ಠ ವಾಸ್ತವ್ಯದ ಅರ್ಹತೆಯ ಬದಲಿಗೆ ಈ ವರ್ಗದ ವಲಸಿಗರು 1+5 ವರ್ಷದ ವಾಸ್ತವ್ಯವನ್ನು ಭಾರತದಲ್ಲಿ ಕಳೆದಿದ್ದರೆ ಪೌರತ್ವ ಪಡೆಯಲು ಅರ್ಹರಾಗುತ್ತಾರೆ.

ಹಾಗಾದರೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ವಲಸೆ ಬಂದ ಮುಸ್ಲಿಮರು ಭಾರತದ ಪೌರತ್ವವನ್ನು ಯಾವತ್ತೂ ಪಡೆಯಲು ಸಾಧ್ಯವಿಲ್ಲವೆಂದು ಅರ್ಥವೆ?
– ಅಲ್ಲ. ಪ್ರಸ್ತುತ ಯಾವನೇ ವಿದೇಶೀ ಪ್ರಜೆಗೆ ಭಾರತೀಯ ಪೌರತ್ವವನ್ನು ಪಡೆಯಲು ಅನ್ವಯಿಸುವ ಇತರ ಕಾನೂನು (ಪೌರತ್ವ ಕಾಯ್ದೆಯ ಸೆಕ್ಷನ್ 6) ಅಥವಾ ನೋಂದಣಿ ನಿಯಮ (ಸೆಕ್ಷನ್ 5) ಅನ್ವಯಿಸುತ್ತದೆ. ಸಿಎಎ ಇತರ ಯಾವುದೇ ಕಾನೂನುಗಳನ್ನೂ ಬದಲಿಸುವುದಿಲ್ಲ. ಈ ಮೂರು ದೇಶಗಳಿಂದ ವಲಸೆ ಬಂದಿರುವ ನೂರಾರು ಮುಸ್ಲಿಮರಿಗೆ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ. ಅರ್ಹರೆಂದು ಪರಿಗಣಿತವಾದರೆ ಭವಿಷ್ಯದ ವಲಸಿಗರಿಗೂ ಭಾರತೀಯ ಪೌರತ್ವ ಪಡೆಯಲು ಸಾಧ್ಯವಿದೆ. ಆಗ ಅವರ ಸಂಖ್ಯೆ ಅಥವಾ ಧರ್ಮ ಪರಿಗಣಿತವಾಗುವುದಿಲ್ಲ. 2014ರಲ್ಲಿ ಭಾರತ-ಬಾಂಗ್ಲಾದೇಶ ಗಡಿ ವಿವಾದಗಳು ಇತ್ಯರ್ಥಗೊಂಡ ಬಳಿಕ ಕೆಲವು ಹಳ್ಳಿಗಳು ಭಾರತಕ್ಕೆ ಸೇರಿದ ಹಿನ್ನೆಲೆಯಲ್ಲಿ 14,864 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ. ಈ ಪೈಕಿ ಸಾವಿರಾರು ವಿದೇಶೀಯರು ಮುಸ್ಲಿಮರೇ ಆಗಿದ್ದರು.

ಈ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದ ಮುಸ್ಲಿಮರನ್ನು ಸಿಎಎ ಅಡಿಯಲ್ಲಿ ಗಡೀಪಾರುಗೊಳಿಸಲಾಗುವುದೆ?

– ಇಲ್ಲ. ಯಾವನೇ ವಿದೇಶೀಯನನ್ನು ಗಡೀಪಾರುಗೊಳಿಸುವ ಪ್ರಕ್ರಿಯೆಯಲ್ಲಿ ಸಿಎಎಗೆ ಯಾವುದೇ ಪಾತ್ರವಿರುವುದಿಲ್ಲ. 1946ರ ವಿದೇಶೀಯರ ಕಾಯ್ದೆ ಅಥವಾ 1920ರ ಪಾಸ್‌ಪೋರ್ಟ್‌ ಕಾಯ್ದೆ ಅಡಿಯಲ್ಲಿ ಅರ್ಹತೆ/ ಅನರ್ಹತೆ ಪರಿಗಣಿಸಿ ವಿದೇಶೀಯರನ್ನು ಗಡೀಪಾರುಗೊಳಿಸಲಾಗುತ್ತದೆ. ಎಲ್ಲ ವಿದೇಶೀಯರಿಗೂ ಅವರ ಅವರ ಧರ್ಮ ಅಥವಾ ದೇಶವನ್ನು ಪರಿಗಣಿಸದೆ ಭಾರತದೊಳಗೆ ಪ್ರವೇಶ, ವಾಸ್ತವ್ಯ, ಚಲನವಲನ ಮತ್ತು ಭಾರತದಿಂದ ನಿರ್ಗಮನವನ್ನು ಈ ಎರಡು ಕಾಯ್ದೆಗಳು ನಿರ್ಧರಿಸುತ್ತವೆ.

ಆದ್ದರಿಂದ ಭಾರತದಲ್ಲಿ ಅಕ್ರಮವಾಗಿ ವಾಸ್ತವ್ಯವಿರುವ ಯಾವನೇ ವಿದೇಶೀ ಪ್ರಜೆಗೆ ಸಾಮಾನ್ಯ ಗಡೀಪಾರು ಪ್ರಕ್ರಿಯೆ ಅನ್ವಯವಾಗುತ್ತದೆ. ಇದು ಸಂಪೂರ್ಣ ಪರಿಗಣಿತವಾದ ನ್ಯಾಯಾಂಗ ಪ್ರಕ್ರಿಯೆಗಳ ಬಳಿಕವೇ ತೀರ್ಮಾನವಾಗುತ್ತದೆ. ಅಕ್ರಮ ವಿದೇಶೀಯನ ಪತ್ತೆ, ತನಿಖೆ ವಿಚಾರದಲ್ಲಿ ಪೊಲೀಸರು ಮತ್ತು ಸ್ಥಳೀಯಾಡಳಿತದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ ಬಳಿಕವೇ ನ್ಯಾಯಾಂಗ ಪ್ರಕ್ರಿಯೆಗಳು ನಡೆಯುತ್ತವೆ. ಅಂತಹ ವಿದೇಶೀ ವಲಸಿಗನಿಗೆ ಮರಳಿ ತನ್ನ ದೇಶಕ್ಕೆ ತೆರಳಲುಕಾನೂನುಬದ್ಧ ಪ್ರಯಾಣ ದಾಖಲೆಗಳು ಆತನ ದೇಶದಿಂದ ಲಭ್ಯವಾಗುವಂತೆ ಖಾತ್ರಿಪಡಿಸಿದ ಬಳಿಕವೇ ಆತನನ್ನು ಗಡೀಪಾರು ಮಾಡಲಾಗುತ್ತದೆ.

ಅಸ್ಸಾಂನಲ್ಲಿ ಗಡೀಪಾರು ಪ್ರಕ್ರಿಯೆಗಳು ಅಂತಹ ವ್ಯಕ್ತಿಯೊಬ್ಬ 1946ರ ವಿದೇಶೀಯರ ಕಾಯ್ದೆ ಅನನ್ವಯ ‘ವಿದೇಶೀಯನೆಂದು ಸಾಬೀತಾದ ಬಳಿಕವಷ್ಟೇ ನಡೆಯುತ್ತವೆ. ಹಾಗಾದಾಗ ಮಾತ್ರ ಆತ ಗಡೀಪಾರಿಗೆ ಅರ್ಹನಾಗುತ್ತಾನೆ. ಆದ್ದರಿಂದ ಸ್ವಯಂಚಾಲಿತ, ಯಾಂತ್ರಿಕವಾದ ಅಥವಾ ತಾರತಮ್ಯದ ಗಡೀಪಾರು ಪ್ರಕ್ರಿಯೆ ಅನ್ನುವುದು ಇಲ್ಲವೇ ಇಲ್ಲ. ರಾಜ್ಯ ಸರಕಾರಗಳು ಮತ್ತು ಅವುಗಳ ಜಿಲ್ಲಾಡಳಿತಗಳು ವಿದೇಶೀಯರ ಕಾಯ್ದೆಯ ಸೆಕ್ಷನ್‌ 3 ಮತ್ತು ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್‌ 3ರ ಅಡಿಯಲ್ಲಿ ಕೇಂದ್ರ ಸರಕಾರದ ಅಧಿಕಾರವನ್ನೇ ಹೊಂದಿರುತ್ತವೆ. ಈ ಅಧಿಕಾರ ಯಾವನೇ ಅಕ್ರಮ ವಲಸಿಗ ವಿದೇಶೀಯರನ್ನು ಪತ್ತೆ ಮಾಡಲು, ವಶಕ್ಕೆ ಪಡೆಯಲು ಮತ್ತು ಗಡೀಪಾರು ಮಾಡಲು ಬಳಕೆಯಾಗುತ್ತದೆ.

ಈ ಮೂರು ದೇಶಗಳಲ್ಲದೆ, ಬೇರೆ ದೇಶಗಳಲ್ಲಿ ಹಿಂಸೆ, ದೌರ್ಜನ್ಯಕ್ಕೆಗುರಿಯಾಗಿರುವ ಹಿಂದೂಗಳು ಸಿಎಎ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದೆ?
– ಇಲ್ಲ. ಅಂಥವರು ಬೇರೆ ಯಾವನೇ ವಿದೇಶಿ ಪ್ರಜೆ ಭಾರತೀಯ ಪೌರತ್ವ ಪಡೆಯಲು ಅನುಸರಿಸಬೇಕಾದ ನಿಯಮ ಮತ್ತು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ. ಸಿಎಎ ಅಡಿಯಲ್ಲಿ ಅವರಿಗೆ ವಿನಾಯಿತಿ ಸಿಗದು. ಅವರು 1955ರ ಪೌರತ್ವ ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಜನಾಂಗ, ಲಿಂಗ, ರಾಜಕೀಯ ಪಕ್ಷ ಅಥವಾ ಸಾಮಾಜಿಕ ಸಂಘಟನೆಯ ಸದಸ್ಯತ್ವ, ಭಾಷೆ, ಜನಾಂಗೀಯತೆ ಇತ್ಯಾದಿ ನೆಲೆಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದವರಿಗೂ ಸಿಎಎ ಅನ್ವಯಿಸುವುದೆ?
– ಇಲ್ಲ. ಸಿಎಎ ಒಂದು ನಿಖರವಾದ ಮತ್ತು ನಿರ್ದಿಷ್ಟವಾದ ಕಾಯ್ದೆಯಾಗಿದ್ದು, ಈ ಮೂರು ನೆರೆಯ ದೇಶಗಳಿಂದ ತಮ್ಮ ಧರ್ಮದ ಕಾರಣಕ್ಕಾಗಿ ವಲಸೆ ಬಂದ ಆರು ಧರ್ಮೀಯರಿಗೆ ಮಾತ್ರ ಇದು ಅನ್ವಯಿಸುತ್ತದೆ. ಇತರ ಯಾವುದೇ ದೇಶಗಳಲ್ಲಿ ಅನ್ಯಾಯ, ದೌರ್ಜನ್ಯ ತಾರತಮ್ಯಕ್ಕೆ ಒಳಗಾಗುವ ವಿದೇಶೀ ಪ್ರಜೆಗಳು 1955ರ ಪೌರತ್ವ ಕಾಯ್ದೆ ಅಡಿಯಲ್ಲಿ ವಿಧಿಸಲಾದ ಷರತ್ತು ಮತ್ತು ನಿರ್ಬಂಧಗಳನ್ವಯ ಕನಿಷ್ಠ ವಾಸ್ತವ್ಯದ ಅವಧಿಯನ್ನು ಪೂರೈಸಿದ ಬಳಿಕವೇ ಸಹಜೀಕರಣ ಮತ್ತು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸಿಎಎ ಕ್ರಮೇಣ ಭಾರತೀಯ ಮುಸ್ಲಿಮರನ್ನು ಭಾರತದ ಪೌರತ್ವದಿಂದ ಹೊರಗಿಡಬಹುದೆ?
– ಸಿಎಎ ಯಾವುದೇ ಭಾರತೀಯ ಪ್ರಜೆಗೆ ಯಾವ ರೂಪದಲ್ಲೂ ಅನ್ವಯವಾಗುವುದಿಲ್ಲ. ಎಲ್ಲ ಭಾರತೀಯ ಪ್ರಜೆಗಳೂ ಭಾರತದ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಅನುಭವಿಸುತ್ತಾರೆ. ಯಾವನೇ ಭಾರತೀಯ ಪ್ರಜೆಯ ಪೌರತ್ವವನ್ನು ಕಸಿಯಲು ಅಥವಾ ತಾರತಮ್ಯವೆಸಗಲು ಸಿಎಎ ರಚಿಸಿದ್ದಲ್ಲ. ನೆರೆಯ ಮೂರು ದೇಶಗಳಲ್ಲಿ ನಿರ್ದಿಷ್ಟ ಸನ್ನಿವೇಶಗಳನ್ನು ಎದುರಿಸಿದ ನಿರ್ದಿಷ್ಟ ವಿದೇಶೀಯರಿಗೆ ಮಾತ್ರ ಭಾರತೀಯ ಪೌರತ್ವ ಪಡೆಯಲು ಅನುಕೂಲವನ್ನು ಈ ಕಾಯ್ದೆ ಮಾಡಿಕೊಡುತ್ತದೆ.

ಎನ್‌ಆರ್‌ಸಿ ಬಳಿಕ ಸಿಎಎ ಜಾರಿಯಾಗುತ್ತದೆ. ಅನಂತರ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಎಲ್ಲರಿಗೆ ಭ ಭಾರತೀಯ ಪೌರತ್ವ ನೀಡಲಾಗುತ್ತದೆ ಮತ್ತು ಮುಸ್ಲಿಮರನ್ನು ಬಂಧನ ಶಿಬಿರಗಳಿಗೆ ಕಳುಹಿಸಲಾಗುತ್ತದೆ ಎಂಬುದು ನಿಜವೆ?

– ಪೌರತ್ವ ತಿದ್ದುಪಡಿ ಕಾಯ್ದೆಗೂ (ಸಿಎಎ) ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್‌ಆರ್‌ಸಿ) ಯಾವುದೇ ಸಂಬಂಧವಿಲ್ಲ. ಎನ್‌ಆರ್‌ಸಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು 1955ರ ಪೌರತ್ವ ಕಾಯ್ದೆಯ ಭಾಗವಾಗಿದೆ. 2004ರ ಬಳಿಕದ ಪ್ರಕರಣಗಳಿಗೆ ಇದು ಅನ್ವಯವಾಗುತ್ತದೆ. 2003ರ ಪ್ರಕರಣಗಳಿಗೆ ಪ್ರತ್ಯೇಕ ನಿರ್ದಿಷ್ಟ ಶಾಸನಾತ್ಮಕ ನಿಯಮಗಳು ಜಾರಿಯಲ್ಲಿವೆ. ಭಾರತೀಯ ಪ್ರಜೆಗಳ ನೋಂದಣಿ ಮತ್ತು ರಾಷ್ಟ್ರೀಯತೆಯ ಪ್ರಮಾಣಪತ್ರ ವಿತರಣೆಗೆ ಆ ನಿಯಮಗಳು ಅನ್ವಯಿಸುತ್ತವೆ. ಈ ಕಾನೂನು ಪ್ರಕ್ರಿಯೆಗಳು 15-16 ವರ್ಷಗಳಿಂದಲೂ ಶಾಸನ ಪುಸ್ತಕಗಳಲ್ಲಿವೆ. ಅವುಗಳನ್ನು ಸಿಎಎ ಯಾವುದೇ ರೂಪದಲ್ಲೂ ಬಾಧಿಸುವುದಿಲ್ಲ ಅಥವಾ ಬದಲಾಯಿಸುವುದಿಲ್ಲ.

ಸಿಎಎ ಅಡಿಯಲ್ಲಿ ಪೌರತ್ವ ಪಡೆಯಲು ಏನೇನು ನಿಯಮಗಳಿವೆ?
ಸಿಎಎ ಅಡಿಯಲ್ಲಿ ಸೂಕ್ತ ನಿಯಮಗಳನ್ನು ರೂಪಿಸಲಾಗುತ್ತದೆ. ಅವುಗಳು ಸಿಎಎ ನಿಯಮಗಳ ಅನುಸಾರವೇ ಚಾಲ್ತಿಗೆ ಬರಲಿವೆ.

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಸಾವರ್ಕರ್‌ ಪ್ರಧಾನಿಯಾಗಿದ್ರೆ ಪಾಕ್ ಇರುತ್ತಿರಲಿಲ್ಲ: ಉದ್ಧವ್ ಠಾಕ್ರೆ

Upayuktha

ವಿ‌.ಕೃ ಗೋಕಾಕ್ ಜನ್ಮದಿನ ಇಂದು- ಜ್ಞಾನಪೀಠ ಪುರಸ್ಕೃತ ‘ಭಾರತ ಸಿಂಧು ರಶ್ಮಿ’ಯ ಸ್ಮರಿಸೋಣ

Upayuktha

ದ.ಕ. ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲ

Upayuktha