ಓದುಗರ ವೇದಿಕೆ

ಅಪರಾಧಿಗಳಿಂದ ನಡೆದ ದುರಂತಕ್ಕೆ ತೆರಿಗೆದಾರನ ಕಿಸೆಯಿಂದ ಕಸಿದು ಪರಿಹಾರ ನೀಡಬೇಕೆ?

ಈ ಹಿಂದೆ ಭೋಪಾಲ್ ಅನಿಲ ದುರಂತದ ಕುರಿತು ಬರೆದಾಗಲೂ ನಾನಿದನ್ನು ಪ್ರಸ್ತಾಪಿಸಿದ್ದೆ, ಪ್ರಶ್ನಿಸಿದ್ದೆ. ನಂತರದ ದಿನಗಳಲ್ಲಿ ಸಾಲು ಸಾಲು ಇಂತದೇ ಘಟನೆಗಳು ನಡೆಯುತ್ತಿರುವಾಗಲೂ ನಾನು ಸಶಬ್ದವಾಗಿ ಯೋಚಿಸಿದ್ದೆ.

ಇಂತಹ ದುರಂತಗಳಲ್ಲಿ ಮಡಿದವರಿಗೆ ಯಾರು ಹಣಕಾಸಿನ ಪರಿಹಾರ, ನೆರವು ನೀಡಬೇಕು? ಅನ್ನ ತರುವವನ ಪ್ರಾಣಹೋದಾಗ ಆತನ ಮನೆಮಂದಿಗೆ ಪರಿಹಾರ ಬೇಕು. ಆದರೆ ಸರ್ಕಾರ ಅದನ್ನು ತೆರಿಗೆದಾರನ ಕಿಸೆಯಿಂದ “ಕಸಿದು” ನೀಡುವುದು ಸರಿಯೇ? ವಿವೇಚನಾಬದ್ಧವಾದದ್ದೇ?

ಅಪರಾಧಿಗಳಿಂದ ನಡೆದ ದುರಂತ, ಅನ್ಯಾಯಗಳಿಂದ ನೊಂದವರಿಗೆ ಪರಿಹಾರವನ್ನು ಪ್ರಜೆಗಳ ನಿಧಿಯಿಂದ ಏಕೆ ಕೊಡಬೇಕು?

ಹುಣಸೋಡು ಗ್ರಾಮದಲ್ಲಿ ನಡೆದ ಸ್ಫೋಟಕ್ಕೆ ಆ ಅಕ್ರಮ ಗಣಿಗಾರಿಕೆ ನಡೆಸಿದ ಖದೀಮರು, ಅದಕ್ಕೆ ಅವಕಾಶ, ಕುಮ್ಮಕ್ಕು ನೀಡಿದ ರಾಜಕಾರಣಿಗಳು, ಅಧಿಕಾರಿಗಳು ಕಾರಣ. ಕಣ್ಮುಚ್ಚಿ ಕುಳಿತ ನ್ಯಾಯಾಲಯ ಕಾರಣ. ಪರಿಹಾರವನ್ನು ಯಾರ ನಿಧಿಯಿಂದ ಕೊಡಬೇಕು? ಇದಕ್ಕೆ ಯಾವ ರೀತಿಯಲ್ಲಿಯೂ ಸಂಬಂಧಿಸದ ನನ್ನ-ನಿಮ್ಮಂತಹ ಸಾಮಾನ್ಯ ಜನರ ಕಿಸೆಯಿಂದ ತೆಗೆದು ಪರಿಹಾರ ಕೊಡುವುದು ಕಳ್ಳತನಕ್ಕೆ ಸಮವಲ್ಲವೇ?

ನೆರೆ, ಭೂಕಂಪ, ಸಿಡಿಲು ಇತ್ಯಾದಿ ನೈಸರ್ಗಿಕ ದುರಂತಗಳಲ್ಲಿ ಯಾರಾದರೂ ಮೃತಪಟ್ಟರೆ ಪರಿಹಾರವಾಗಿ ಸಾರ್ವಜನಿಕ ನಿಧಿಯಿಂದ ಅನುದಾನ ನೀಡಿದರೆ ಅದನ್ನು ಒಪ್ಪಬಹುದು. ಆದರೆ ಇಂತಹ ಅಪರಾಧ ಕೃತ್ಯಗಳಲ್ಲಿ ಪರಿಹಾರ ನೀಡುವಾಗ ಯಾರು ಕೊಡಬೇಕು? ಯಾರದೋ ಹಣವನ್ನು ಪರಿಹಾರವಾಗಿ ನೀಡಿ, ಅಪರಾಧಿಗಳನ್ನು ಉಳಿಸುವ ಕೆಟ್ಟ ಕೆಲಸವಲ್ಲವೇ ಇದು?

ದಶಕಗಳಿಂದ ಇಂತಹ (2-3 ವರ್ಷಗಳ ಹಿಂದೆ ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲಿನ ಗಣಿಯೊಳಕ್ಕೆ ನೀರು ನುಗ್ಗಿ ಹಲವರು ಮೃತರಾಗಿದ್ದರು) ದುರಂತಗಳು ನಡೆಯುತ್ತಿವೆ. ಪರಿಹಾರದ ಕುರಿತು ಸರಕಾರವಾಗಲಿ, ನ್ಯಾಯಾಲಯವಾಗಲಿ ಒಂದು ಸ್ಪಷ್ಟ ನಿಯಮವನ್ನು ರೂಪಿಸಿಲ್ಲ. ಯಾಕಾಗಿ? ಯಾರ ಲಾಭಕ್ಕಾಗಿ?

ಸರಿ. ತುರ್ತಾಗಿ ಪರಿಹಾರವನ್ನು ಸಾರ್ವಜನಿಕ ಬೊಕ್ಕಸದಿಂದ ನೀಡಿ, ನಂತರ ದಾವೆ ತೀರ್ಮಾನವಾದ ಬಳಿಕ ಅದನ್ನು ಅಪರಾಧಿಗಳಿಂದ ಭರಿಸುವ ವ್ಯವಸ್ಥೆ ಇದೆಯೇ? ಅದೂ ಇಲ್ಲ! ಇಲ್ಲಿ ತೆರಿಗೆದಾರರ ಸುಲಿಗೆ ಏಕೆ? ಇದು ತಪ್ಪು. ಇದು ಸರಿಯಾಗಬೇಕಾಗಿದೆ.

ಒಬ್ಬ ಅಪರಾಧಿಯಲ್ಲದ ಪ್ರಜೆಯಾಗಿ ನಾನು ಈ ಔದಾರ್ಯದ ಸೋಗಿನಲ್ಲಿ ನಡೆಯುವ ಅನೈತಿಕ, ವಿವೇಚನಾರಹಿತ ಸುಲಿಗೆಯನ್ನು ವಿರೋಧಿಸುತ್ತೇನೆ. ನಾನು ದುಡಿದ ಸಂಬಳದಲ್ಲಿ ಶೇಕಡಾ 20ನ್ನು ತೆರಿಗೆಯಾಗಿ ಕೊಡುವ, ಏನು ವಸ್ತು ಕೊಂಡರೂ 10-20 ಶೇಕಡಾ ಸುಂಕ ಕೊಡುವ ನಾನು ಖದೀಮರ ಹಿತಾಸಕ್ತಿಗಳನ್ನು ಕಾಪಾಡಲು ನನ್ನ ಹಣ ಪೋಲಾಗುವುದನ್ನು ಖಂಡಿಸುತ್ತೇನೆ.

ನನ್ನ ಹಣವನ್ನು ಕಳ್ಳರ ಪರವಾಗಿ ದಾನಮಾಡಲು ಈ ರಾಜಕಾರಣಿಗಳಿಗೆ ಒಪ್ಪಿಗೆಕೊಟ್ಟವರು ಯಾರು? ನಾನಲ್ಲ.

-ದೇವು ಹನೆಹಳ್ಳಿ, ಮಂಗಳೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾಸರಗೋಡು: ಕೊರೊನಾ ವಿರುದ್ಧ ಸಮರದಲ್ಲಿ ಮುಂಚೂಣಿ ಸೇನಾನಿ ಇವರು… ವೈದ್ಯೋ ನಾರಾಯಣ ಹರಿಃ 🙏

Upayuktha

ಕರ್ನಾಟಕ-ಕೇರಳ ಎರಡು ಪ್ರತ್ಯೇಕ ದೇಶಗಳೇ? ಗಡಿ ಹಿಂಸೆಗೆ ಕೊನೆ ಎಂದು?

Upayuktha