ಪ್ರಮುಖ ರಾಜ್ಯ

ಕೊರೊನಾ ಸವಾಲು: ಕನ್ನಡದ 8 ಪ್ರಮುಖ ಪತ್ರಿಕೆಗಳಲ್ಲಿ ಒಂದೇ ಸಂಪಾದಕೀಯ

ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲೇ ಅಪೂರ್ವ

ಮಂಗಳೂರು: ಇಡೀ ಜಗತ್ತಿನಲ್ಲೇ ವ್ಯಾಪಿಸಿ ಜನಜೀವನವನ್ನು ಮತ್ತು ಮಾನವ ನಿರ್ಮಿತ ಆಧುನಿಕ ವ್ಯವಸ್ಥೆಗಳನ್ನೆಲ್ಲ ಸಂಪೂರ್ಣ ಅಸ್ತವ್ಯವ್ಯಸ್ತಗೊಳಿಸುತ್ತಿರುವ ಮಾರಕ ಕೊರೊನಾ ವೈರಸ್‌ ಹಾವಳಿಗೆ ವಿಶ್ವವೇ ಒಂದಾಗಿ ಸ್ಪಂದಿಸುತ್ತಿದೆ. ಭಾರತದಲ್ಲೂ ಹಲವು ರಾಜ್ಯಗಳು ಸಂಪೂರ್ಣ ಲಾಕ್‌ಡೌನ್ ಆಗಿವೆ.

ಕರ್ನಾಟಕವೂ ಇದಕ್ಕೆ ಹೊರತಲ್ಲ. ಲಾಕ್‌ಡೌನ್ ಮಾಡದ ಹೊರತು ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಅನ್ಯ ಮಾರ್ಗವೂ ಇಲ್ಲ. ಇಂತಹ ದುರ್ಭರ ಸನ್ನಿವೇಶದಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಪತ್ರಿಕೆಗಳು ಮುಚ್ಚುಗಡೆಯ ಭೀತಿಯನ್ನು ಎದುರಿಸುತ್ತಿವೆ. ಮುದ್ರಣ ಮಾಧ್ಯಮ ತನ್ನ ಇತಿಹಾಸದಲ್ಲಿ ಈ ವರೆಗೂ ನಾನಾ ಸವಾಲುಗಳನ್ನು ಎದುರಿಸುತ್ತಲೇ ಬೆಳೆದು ಬಂದಿದೆ. ಆದರೆ ಈಗ ಎದುರಾಗಿರುವ ಸವಾಲು ಮಾತ್ರ ಮಾಧ್ಯಮ ಲೋಕಕ್ಕೇ ಆಘಾತ ಮತ್ತು ನೋವನ್ನು ನೀಡುವಂತಹ ಬೆಳವಣಿಗೆಯಾಗಿದೆ.

ಪತ್ರಿಕೆಗಳನ್ನು ಮುದ್ರಿಸುವುದೇ ಕಷ್ಟ ಎಂಬ ಪರಿಸ್ಥಿತಿ ಬಂದಿದೆ. ಹಾಗೂ ಹೀಗೂ, ಕನಿಷ್ಠ ಸಿಬ್ಬಂದಿಯನ್ನು ಇಟ್ಟುಕೊಂಡು ಪತ್ರಿಕೆ ಹೊರತಂದರೆ ಅದನ್ನು ಜನತೆಗೆ ತಲುಪಿಸುವುದು ಹೇಗೆ ಎಂಬ ಸವಾಲಿಗೆ ಯಾರಲ್ಲೂ ಉತ್ತರವಿಲ್ಲ. ಅದೇ ಹೊತ್ತಿಗೆ ಸುಳ್ಳು ಸುದ್ದಿಕೋರರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಪತ್ರಿಕೆಗಳಿಂದಲೂ ಕೊರೊನಾ ಹರಡುತ್ತದೆ ಎಂಬ ವದಂತಿಗಳನ್ನು ತೇಲಿಬಿಡುತ್ತಿದ್ದಾರೆ. ವಿಶ್ವ ಆರೋಗ್ಯಸಂಸ್ಥೆಯೇ ಇದಕ್ಕೆ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ವದಂತಿಗಳ ಹಾವಳಿ ನಿಲ್ಲುತ್ತಿಲ್ಲ.

ಈ ಸನ್ನಿವೇಶದಲ್ಲಿ ಎಲ್ಲರ ಮೆಚ್ಚಿನ ಮಾಧ್ಯಮವಾದ ಪತ್ರಿಕಾ ಮಾಧ್ಯಮದ ಮೂಲ ಅಸ್ತಿತ್ವಕ್ಕೆ ಸವಾಲು ಎದುರಾಗಿದೆ. ಈ ಸವಾಲನ್ನು ಎದುರಿಸಿ ನಿಲ್ಲಲು ಎಲ್ಲ ಕನ್ನಡದ ಎಲ್ಲ ಪ್ರಧಾನ ಪತ್ರಿಕೆಗಳೂ ಒಂದಾಗಿ ನಿಂತಿವೆ. ಇದರ ದ್ಯೋತಕವಾಗಿ ಇಂದು ಕನ್ನಡದ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಹೊಸದಿಗಂತ ಮತ್ತು ವಿಶ್ವವಾಣಿ ಪತ್ರಿಕೆಗಳು ಒಂದೇ ಸಂಪಾದಕೀಯವನ್ನು ಪ್ರಕಟಿಸಿ ಇತಿಹಾಸ ಸೃಷ್ಟಿಸಿವೆ.

ಮುದ್ರಣ ಮಾಧ್ಯಮ ಎದುರಿಸುತ್ತಿರುವ ಈ ಸವಾಲನ್ನು ಎದುರಿಸುವಲ್ಲಿ ಡಿಜಿಟಲ್ ಮಾಧ್ಯಮವಾದ ಉಪಯುಕ್ತ ನ್ಯೂಸ್ ತನ್ನ ಸಂಪೂರ್ಣ ಬೆಂಬಲ (Solidarity)ವನ್ನು ವ್ಯಕ್ತಪಡಿಸುತ್ತ ಪತ್ರಿಕೆಗಳು ಇಂದು ಪ್ರಕಟಿಸಿದ ಸಂಪಾದಕೀಯವನ್ನು ಯಥಾವತ್ ಪ್ರಕಟಿಸುತ್ತಿದೆ.

ಈ ಸಂಪಾದಕೀಯದ ಪೂರ್ಣಪಾಠ ಇಲ್ಲಿದೆ:

ಪ್ರಿಯ ಓದುಗರಲ್ಲಿ ಅರಿಕೆ…
ದಿನ ಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೊನಾ ಆಪತ್ತಿನತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಅರವತ್ತರ ದಶಕದಲ್ಲಿ ಹರಡಿದ ಪ್ಲೇಗ್‌ ಮಹಾಮಾರಿ, ಮಾರಣಾಂತಿಕ ಎಬೋಲಾ ಇತ್ಯಾದಿ ಕಾಯಿಲೆಗಳಿಂದ ಹಿಡಿದು ಈವರೆಗೆ ಹತ್ತು ಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ಗೆದ್ದಿವೆ. ಈಗಲೂ ನಾವು ಅಂಥದ್ದೇ ಗಟ್ಟಿ ಸಂಕಲ್ಪ ಮಾಡಿ ಅಂತಿಮ ಗೆಲುವಿನ ಕಡೆ ದಾಪುಗಾಲಿಡುವ ತೀರ್ಮಾನ ಮಾಡಬೇಕಿದೆ.

ನಾಳಿನ ಒಳಿತಿಗಾಗಿ ಇಡೀ ದೇಶವೇ ಭಾನುವಾರ ಜನತಾ ಕರ್ಫ್ಯೂಗೆ ಓಗೊಟ್ಟಿದೆ. ಇನ್ನೂ ಹತ್ತು ದಿನಗಳ ಕಾಲ ಕಠಿಣ ನಿರ್ಬಂಧ ಮುಂದುವರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ನಮ್ಮ ಜೀವ ರಕ್ಷಣೆ ಮತ್ತು ದೇಶದ ಹಿತ ರಕ್ಷಣೆಗಾಗಿ ಇದೊಂದು ತುರ್ತು ಸಂದರ್ಭವೆಂದು ಭಾವಿಸಿ ನಾವೆಲ್ಲ ಸರಕಾರದ ಆದೇಶ ಪಾಲಿಸಲೇಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರು, ಮಿಲಿಟರಿ, ಪೊಲೀಸ್‌ ಸಮೂಹದ ಜತೆ ಮಾಧ್ಯಮದವರನ್ನೂ ‘ಅಗತ್ಯ ಸೇವಕ’ರೆಂದು ಘೋಷಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಈ ವ್ಯಾಖ್ಯಾನಕ್ಕೆ ಸಹಮತ ವ್ಯಕ್ತಪಡಿಸಿ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ.

ಯುದ್ಧ, ಅತಿವೃಷ್ಟಿ, ಅನಾವೃಷ್ಟಿಯಂಥ ವಿಷಮ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವುದು ಮಾಧ್ಯಮದ ಜಾಯಮಾನ ಮತ್ತು ಕರ್ತವ್ಯ. ಆದರೆ ಕೊರೊನಾದಂತಹ ಮಾರಣಾಂತಿಕ ಕಾಯಿಲೆ ಸಂದರ್ಭದಲ್ಲಿ ಕೇವಲ ಕೆಚ್ಚು ಇದ್ದರೆ ಸಾಲದು, ಮುನ್ನೆಚ್ಚರಿಕೆಯೂ ಬೇಕೆಂಬ ಅರಿವು ನಮಗಿದೆ. ಈಗಾಗಲೇ ನಮ್ಮ ಪತ್ರಿಕಾಲಯಗಳು, ಪ್ರಿಂಟಿಂಗ್‌ ಪ್ರೆಸ್‌ಗಳು ಅತ್ಯಾಧುನಿಕ, ಹೈಟೆಕ್‌ ತಂತ್ರಜ್ಞಾನವನ್ನು ಬಳಕೆಗೆ ತಂದಿವೆ. ಮನುಷ್ಯನ ಕೈ ಸ್ಪರ್ಶವೇ ಇಲ್ಲದೆ ಪತ್ರಿಕೆಗಳು ಮುದ್ರಣಗೊಂಡು ಕೊನೆಯ ವಿತರಣಾ ಕೇಂದ್ರದವರೆಗೆ ತಲುಪಿಸುವ ವ್ಯವಸ್ಥೆ ಜಾರಿಯಾಗುತ್ತಿದೆ. ಕೊನೆಯ ವಿತರಣಾ ಕೇಂದ್ರದಿಂದ ವಿತರಕರು ಬರಿಗೈನಲ್ಲಿ ಪತ್ರಿಕೆಯನ್ನು ಮುಟ್ಟದೇ ವಿತರಣೆ ಮಾಡುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಪತ್ರಿಕಾ ಸಂಸ್ಥೆಗಳೂ ಪತ್ರಿಕೆಗಳ ವಿತರಣೆಗೆ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯೇ ಪತ್ರಿಕೆಗಳಿಂದ ಕೊರೊನಾ ಹರಡುವ ಸಾಧ್ಯತೆಗಳು ಇಲ್ಲ ಎಂದು ಸ್ಪಷ್ಟಪಡಿಸಿದೆ.

ಪತ್ರಿಕೆಗಳಿಂದ ಯಾವುದೇ ವೈರಸ್‌ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಇದೇ ಮೊದಲ ಬಾರಿ ಪತ್ರಿಕೆಗಳು ಇಂಥ ಸುಳ್ಳು ವದಂತಿಯ ಅಪಾಯವನ್ನು ಎದುರಿಸುತ್ತಿವೆ. ಖಚಿತ ಮಾಹಿತಿಯನ್ನು ಕೊರೊನಾದಂತಹ ತುರ್ತು ಸಂದರ್ಭಗಳಲ್ಲಿ ಪಡೆಯುವ ವಿಶ್ವಾಸಾರ್ಹ ಮಾಧ್ಯಮವೆಂದರೆ ಅವು ಪತ್ರಿಕೆಗಳು ಎನ್ನುವುದನ್ನು ನಾವು ಮರೆಯಬಾರದು.

ಅನಗತ್ಯ ಭಯ ಬಿತ್ತಿ, ಸುಳ್ಳು ಸುದ್ದಿಗಳನ್ನು ಹರಡಿ ಸೋಷಿಯಲ್‌ ಮೀಡಿಯಾಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಜನರ ಜೀವನವನ್ನು ದುರ್ಭರಗೊಳಸುತ್ತಿರುವ ಇವತ್ತಿನ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಗಳನ್ನು ಬೇರೆ ಯಾವುದಿದೆ? ಹೀಗಾಗಿ ಪತ್ರಕರ್ತರು, ಮುದ್ರಣ ತಂತ್ರಜ್ಞರು, ನಿಮ್ಮ ಮನೆ ಬಾಗಿಲಿಗೆ ಮಳೆ, ಗಾಳಿ, ಚಳಿಗೆ ಜಗ್ಗದೆ ಪತ್ರಿಕೆ ಹೊತ್ತು ತರುವ ವಿತರಣಾ ಸೇನಾನಿಗಳು ಜೀವದ ಹಂಗು ತೊರೆದು ‘ಅಗತ್ಯ ಸೇವೆ’ಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಿಯ ಓದುಗ ದೊರೆಗಳೇ, ನಾವು ಗರಿಷ್ಠ ಹೊಣೆಗಾರಿಕೆಯಿಂದ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನುಕುಲದ ಹಿತ ಕಾಯುವ ಕೆಲಸ ಮಾಡೋಣ. ಕೊರೊನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ…

ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ ಒಂದು ಪ್ರಮಾಣ…

-ಸಂಪಾದಕರು, ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಶ್ವವಾಣಿ

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ವೃತ್ತಿ ಜೀವನದಲ್ಲಿ ಸಂಪಾದಿಸಿದ ಅಪಾರ ಅನುಭವವೇ ನಿವೃತ್ತಿ ಜೀವನದ ಸಂಪನ್ಮೂಲವಾಗುತ್ತದೆ: ವಂ|ಬೇಸಿಲ್ ವಾಸ್

Sushmitha Jain

ಸೆ.29ರಂದು ನೀರ್ಚಾಲಿನಲ್ಲಿ ಖಂಡಿಗೆ ಶಾಮಭಟ್ಟ ಜನ್ಮಶತಮಾನೋತ್ಸವ

Upayuktha

ಐಪಿಎಲ್ 2020: ಫೆರ್ಗುಸನ್ ಬೆಂಕಿಯ ಚೆಂಡಿಗೆ ಬೆದರಿದ ಸನ್‌ರೈಸರ್ಸ್

Upayuktha News Network