ಬೆಂಗಳೂರು: ಒಂದೇ ಸೂರಿನಡಿ ಸಮಗ್ರ ಭಾರತೀಯ ಕಲೆ ಹಾಗೂ ವಿದ್ಯೆಗಳ ಕಲಿಕೆಗೆ ಅವಕಾಶವಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾಂಕುರ ದಿನವನ್ನು ಮುಂದೂಡಲಾಗಿದೆ. ಅಂದು ಕೇವಲ ಸಾಂಕೇತಿಕವಾಗಿ ವಿವಿವಿ ಉದ್ಘಾಟನೆಯಾಗಲಿದೆ.
ಗೋಕರ್ಣ ಸಮೀಪದ ಅಶೋಕೆಯಲ್ಲಿ ಏಪ್ರಿಲ್ 26ರಂದು ಅಂದರೆ ಅಕ್ಷಯ ತೃತೀಯದಂದು ತಕ್ಷಶಿಲೆ ಮಾದರಿಯ ವಿಶ್ವವಿದ್ಯಾಪೀಠದ ಉದ್ಘಾಟನೆಗೆ ನಿರ್ಧರಿಸಲಾಗಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ದೇಶದಲ್ಲಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಎಲ್ಲ ಸಭೆ ಸಮಾರಂಭಗಳನ್ನು ಸರ್ಕಾರ ನಿರ್ಬಂಧಿಸಿದೆ. ಈ ಕಾರಣದಿಂದ ಉದ್ದೇಶಿತ ಉದ್ಘಾಟನಾ ದಿನಾಂಕವನ್ನು ಮುಂದೂಡಲಾಗಿದೆ ಎಂದು ವಿವಿವಿ ವ್ಯವಸ್ಥಾ ಸಮಿತಿ ಪ್ರಕಟಿಸಿದೆ.
ಮೊದಲ ಹಂತದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪೂರಕ ಸಂಸ್ಥೆಯಾಗಿ ಸಾರ್ವಭೌಮ ಗುರುಕುಲ ಆರಂಭವಾಗುತ್ತಿದೆ. ಅಂತರ್ಜಾಲದ ಮೂಲಕ ದೂರಶಿಕ್ಷಣವೂ ಆರಂಭವಾಗುತ್ತಿದೆ. ವಿವಿವಿ ಮೊದಲ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದರೂ, ಸರ್ಕಾರದ ಸೂಚನೆಯನ್ನು ಪಾಲಿಸುವ ದೃಷ್ಟಿಯಿಂದ ಉದ್ಘಾಟನಾ ಸಮಾರಂಭ ಮುಂದೂಡಲಾಗಿದ್ದು, ಸಾಂಕೇತಿಕವಾಗಿ ಏಪ್ರಿಲ್ 26ರಂದೇ ಲೋಕಾರ್ಪಣೆಯಾಗಲಿದೆ ಎಂದು ಪ್ರಕಟಣೆ ಹೇಳಿದೆ.
ಮೊದಲ ಹಂತದಲ್ಲಿ ಮೂಲಾಧಾರ ಎಂಬ ಎರಡು ವರ್ಷದ ಕೋರ್ಸ್ ಆರಂಭಿಸಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ. ವೇದಪಥ (ವೇದಮೂಲವಾದ ಭಾರತೀಯ ವಿದ್ಯೆ- ಕಲೆಗಳ ಸಮಗ್ರ ಪರಿಚಯ), ರಾಮಾಯಣ, ಮಹಾಭಾರತ, ಸಂಸ್ಕೃತ ವ್ಯಾಕರಣ, ಆಯುರ್ವೇದ, ಯೋಗ, ಸಂಗೀತ, ಮಹಾಪುರುಷ ಚರಿತ್ರೆ, ಇಂಗ್ಲಿಷ್, ಕಂಪ್ಯೂಟರ್, ವಿಜ್ಞಾನ, ಸಂಪರ್ಕ ಸಂವಾದ ಕೌಶಲ, ಭಾರತದ ಸಂವಿಧಾನ, ಲೋಕಜ್ಞಾನ ಮತ್ತಿತರ ವಿಷಯಗಳು ಸೇರಿವೆ.
ಪೂರ್ವಾಂಕುರ (8-16 ವಯಸ್ಸು), ಉತ್ತರಾಂಕುರ (16 ರಿಂದ 24 ವರ್ಷ) ಹಾಗೂ ಫಲಿತ ಹೀಗೆ ಮೂರು ವಿಭಾಗಗಳಲ್ಲಿ ಕಲಿಕೆಗೆ ಅವಕಾಶವಿದ್ದು, ಜಾತಿ, ಮತ, ಲಿಂಗ, ಭಾಷಾಭೇದವಿಲ್ಲದೇ ಹಿರಿಯ ನಾಗರಿಕರು ಕೂಡಾ ಮೇ 15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಲಿಕಾರ್ಥಿಗಳಿಗೆ ಸೂಕ್ತ ವಸತಿ ಮತ್ತು ಆಹಾರ ವ್ಯವಸ್ಥೆ ಇರುತ್ತದೆ.
ದೂರವಾಣಿ: 9449595248, 9449595288. ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು https://vishnuguptavv.org/ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ