ಲೇಖನಗಳು

ನಗರಗಳಿಂದ ಜನರ ಮರುವಲಸೆ…. ಹಳ್ಳಿಗಳಾದರೂ ನೀಡಿಯಾವೆ ಭರವಸೆ…?

(ಚಿತ್ರ ಕೃಪೆ: ಸ್ವರ್ಣ ಗೃಹ)

ಜಾಗತಿಕವಾಗಿ ವ್ಯಾಪಿಸಿರುವ ಮಹಾಮಾರಿ ಕೊರೊನಾ ಸಾಂಕ್ರಾಮಿಕ ಇಡೀ ಜಾಗತಿಕ ವ್ಯವಸ್ತೆಯನ್ನೇ ಬದಲಾಯಿಸುವಂತಿದೆ. ಈ ವರೆಗೆ ಜನತೆ ಜೀವನೋಪಾಯಕ್ಕಾಗಿ ಹಳ್ಳಿಗಳಿಂದ ನಗರಗಳತ್ತ ವಲಸೆ ಬರುತ್ತಿದ್ದರು. ಆದರೆ ಈಗ ಜೀವ ಉಳಿಸಿಕೊಳ್ಳುವುದಕ್ಕಾಗಿ ನಗರಗಳಿಂದ ಹಳ್ಳಿಗಳತ್ತ- ತಮ್ಮ ಮೂಲ ನೆಲೆಯತ್ತ ಮರಳುತ್ತಿದ್ದಾರೆ. ಇದು ಸಾಮಾಜಿಕವಾಗಿ ಬಹುದೊಡ್ಡ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ. ಈಗಾಗಲೇ ಬುಡಮೇಲಾಗಿರುವ ಆರ್ಥಿಕ ವ್ಯವಸ್ಥೆಗೆ ಈ ಸ್ಥಿತ್ಯಂತರವನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.

*****

ಇವತ್ತು ಬೆಳಿಗ್ಗೆ ಟಿ.ವಿ. ಹಾಕಿದರೆ ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಿಕೊಂಡು ವಾಪಾಸು ಊರುಗಳಿಗೆ ವಲಸೆ ಹೊರಟ ಜನರದೇ ಸುದ್ದಿ !

ಬೆಂಗಳೂರಿಗೆ ಬಂದು ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಬದುಕುತ್ತಿದ್ದವರ ಬಾಳು ಈಗ ಮೂರಾಬಟ್ಟೆಯಾಗಿದೆ !

ನಾವು ಬೆಚ್ಚಗೆ ಕುಳಿತು ಟಿ.ವಿ.ಯಲ್ಲಿ ನ್ಯೂಸ್ ನೋಡುತ್ತ ಈ ಜನ ಯಾಕಿಂಗೆ ಆಡುತ್ತಿದ್ದಾರೆ. ಇವರಿಗೆ ಬುದ್ಧಿಯಿಲ್ಲವೇ ಅಂತ ಸುಲಭವಾಗಿ ಹೇಳಿ ಬಿಡಬಹುದು.

ಆದರೆ ಅವರು ಅನುಭವಿಸುತ್ತಿರುವ ಅತಂತ್ರ ಪರಿಸ್ಥಿತಿ‌ ಅನುಭವಿಸಿದವರಿಗೆ ಮಾತ್ರ ಗೊತ್ತಾಗಬಹುದು. ಹಣವಿಲ್ಲದೆ ಬೆಂಗಳೂರಿನಲ್ಲಿ ಬದುಕುವುದು ಸಾಧ್ಯವೇ?

ಬೆಂಗಳೂರು ಮಂಗಳವಾರ ಸಂಜೆಯಿಂದ ಒಂದು ವಾರ ಲಾಕ್ ಡೌನ್ ಆಗುವ ಘೋಷಣೆ ಹೊರಬೀಳುತ್ತಿದ್ದಂತೆ, ಉಳಿದಿದ್ದ ಜನರೂ ಊರುಗಳತ್ತ ಮುಖ ಮಾಡಿದ್ದಾರೆ.

ಟೆಂಪೋ, ಕಾರು, ಲಗೇಜ್ ವ್ಯಾನು ಹೀಗೇ ವಿವಿಧ ವಾಹನಗಳಲ್ಲಿ ತಮ್ಮ ತಮ್ಮ ಮನೆಯ ಸಾಮಾನುಗಳನ್ನು ಏರಿಕೊಂಡು ಹೊರಟವರ ಸಂಖ್ಯೆ ಬಹಳ ದೊಡ್ಡದಿದೆ.

ನೆಲಮಂಗಲ ಟೋಲ್ ಬಳಿ ಕಿ.ಮಿ ಗಟ್ಟಲೆ ವಾಹನಗಳ ಸಾಲೇ ತುಂಬಿವೆ. ಹೋಗುವರೆಲ್ಲ ಹೋಗಿ ಬಿಡಿ ಅಂತ ಸರ್ಕಾರದ ಕಡೆಯಿಂದ ಹೇಳಿಕೆ ಬಂದ ಮೇಲೆ ಇನ್ನೇನು ಉಳಿದಿದೆ?

ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ, ಬೇರೆ ಬೇರೆ ಊರುಗಳಿಂದ, ಬಂದಿದ್ದ ಲಕ್ಷಾಂತರ ಜನರ ಕನಸುಗಳು ಕಮರಿ ಹೋದಂತೆ ಕಾಣುತ್ತಿದೆ.

ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವವರಿಗೆ ಅಷ್ಟು ಸಮಸ್ಯೆ ಕಾಣಿಸುತ್ತಿಲ್ಲ. ಲಾಕ್ ಡೌನ್ ಆದಾಗ ದಿನನಿತ್ಯದ ಸಾಮಾನುಗಳನ್ನು ಕೊಂಡು ಮನೆಯಲ್ಲಿ ಸುಮ್ಮನಿದ್ದು ಬಿಡಬಹುದು.

ಆದರೆ ಫ್ಯಾಕ್ಟರಿ, ಗಾರ್ಮೆಂಟು, ಕನ್‌ಸ್ಟ್ರಕ್ಷನ್‌ ಕೆಲಸ, ಕಾರ್ಪೆಂಟರಿ, ದಿನಗೂಲಿ.. ಹೀಗೆ ತಿಂಗಳ ಸಂಬಳವನ್ನೇ ನೆಚ್ಚಿಕೊಂಡು ಹೇಗೋ ಹೆಣಗಾಟದ ನಡುವೆಯೂ ಬದುಕು ಸಾಗಿಸುತ್ತಿದ್ದ ಲಕ್ಷಾಂತರ ಮಂದಿಗೆ ಈಗ ಆಘಾತ ತಡೆದುಕೊಳ್ಳಲಾಗುತ್ತಿಲ್ಲ.

ಊರುಗಳಿಗೆ ವಲಸೆ ಹೊರಟಿರುವವರ ಬದುಕು ಒಂಥರಾ ಅತಂತ್ರವಾಗಿದೆ. ಇಲ್ಲಿ ಕೆಲಸವಿಲ್ಲ, ಬದುಕಲು ಹಣವಿಲ್ಲ, ಊರಿಗೆ ಹೋದರೆ ಏನು ಮಾಡುವುದು ಗೊತ್ತಿಲ್ಲ

ಹಿಂದೆಲ್ಲ ಬೆಂಗಳೂರಿನಿಂದ ಇವರೆಲ್ಲ ಊರಿಗೆ ಬಂದಾಗ ಮನೆಯಲ್ಲಿ, ಊರಲ್ಲಿ ಕೊಂಚ ಗೌರವ ಸಿಗುತ್ತಿತ್ತು. ಬೆಂಗಳೂರಿನಲ್ಲಿ ತಮಗೂ ಏನಾದರೂ ಕೆಲಸ ಸಿಗಬಹುದೋ ಎಂದು ಇವರ ಬಳಿ ವಿಚಾರಿಸುತ್ತಿದ್ದವರೇ ಹೆಚ್ಚು!

ಆದರೆ ಈಗ ಬೆಂಗಳೂರಿನಿಂದ ವಾಪಾಸು ವಲಸೆ ಹೊರಟಿರುವ ಇವರೀಗ ಮನೆಯವರ, ಊರವರ ವ್ಯಂಗ್ಯದ ತುಚ್ಛ ನೋಟಗಳಿಗೆ ಬಲಿಯಾಗಬೇಕಿದೆ.

ಕೆಲವು ಕಡೆಯಂತೂ ನಿರ್ದಾಕ್ಷಿಣ್ಯವಾಗಿ ಊರಿಗೇ ಇವರನ್ನು ಸೇರಿಸಿಕೊಳ್ಳುತ್ತಿಲ್ಲ. ಇವರಿಂದ ಊರಿಗೇ ಕೊರೋನಾ ಹರಡುವ ಭೀತಿಯಿಂದ ಈ ಪರಿಸ್ಥಿತಿ ಉಂಟಾಗಿದೆ.

ಅದ್ಯಾರೋ ವೀರ ಬ್ರಹ್ಮೇಂದ್ರರಂತೆ, ಕಾಲಜ್ಞಾನಿಗಳಂತೆ. ನಾಲ್ಕುನೂರು ವರ್ಷಗಳ ಹಿಂದೆಯೇ ಮನುಕುಲದ ಭವಿಷ್ಯವನ್ನು ಬರೆದಿಟ್ಟಿದ್ದಾರಂತೆ.

ಅವರು ಹೇಳಿದ್ದ ಭವಿಷ್ಯ ಯಾವುದೂ ಸುಳ್ಳಾಗಿಲ್ಲವಂತೆ. ಮನುಷ್ಯ ತನ್ನ ತಪ್ಪಿನಿಂ‌ದಲೇ ಅವನತಿ ಹೊಂದುತ್ತಾನಂತೆ.

ಪ್ರಾಕೃತಿಕ ವಿಕೋಪಗಳು, ಕಾಯಿಲೆಗಳು ಮನುಷ್ಯನನ್ನು ನಾಶ ಮಾಡುತ್ತವಂತೆ. ಏಳು ಜನರಲ್ಲಿ ಒಬ್ಬ ಉಳಿಯುತ್ತಾನಂತೆ. ಅಂದರೆ ಏಳುನೂರು ಕೋಟಿ ಜನಸಂಖ್ಯೆಯಲ್ಲಿ ಎಷ್ಟು ಉಳಿಯಬಹುದು.

ಅವರ ಭವಿಷ್ಯವಾಣಿ ಏನಾಗುತ್ತೋ ಬಿಡುತ್ತೋ ಆದರೆ ಮನುಕುಲದ ಮೇಲೆ ದೊಡ್ಡ ಗಂಡಾಂತರ ಬಂದೊದಗಿರುವುದು ಸತ್ಯ .

ಮನೆ ಖಾಲಿಮಾಡಿ ಸಾಮಾನುಗಳನ್ನು ತುಂಬಿಕೊಂಡು ಊರಿಗೆ ಹೊರಟ ವಾಹನಗಳಲ್ಲಿ ಕುಳಿತ ಮಹಿಳೆಯರು, ಮಕ್ಕಳ ಮುಖಗಳಲ್ಲಿ ಕಾಣಿಸುವ ನೋವು, ಯಾತನೆ ನಿಜಕ್ಕೂ ಹೃದಯ ವಿದ್ರಾವಕವಾಗಿದೆ.

ವಲಸೆ ಹೊರಟ ಒಬ್ಬೊಬ್ಬರದೂ ಒಂದೊಂದು ಕಥೆ!
ಬೆಂಗಳೂರಲ್ಲಿ ದುಡಿದು ಅಪ್ಪ ಅಮ್ಮನಿಗೆ, ಅಕ್ಕ ತಂಗಿಯರಿಗೆ, ಅಣ್ಣ ತಮ್ಮಂದಿರಿಗೆ ಆಧಾರವಾಗಿದ್ದ ಇವರ ದುಡಿಮೆಯನ್ನು ಕೊರೋನಾ ಕಿತ್ತುಕೊಂಡಿದೆ.

ಅವರನ್ನು ಕೆಲವರು ಟೀಕಿಸುತ್ತಾರೆ. ಊರಲ್ಲಿ ದುಡಿದುಕೊಂಡು ಇರಲಾರದೆ ಬೆಂಗಳೂರಿಗೆ ಹೋದವರಿಗೆ ತಕ್ಕ ಶಾಸ್ತಿ‌ ಆಗಿದೆ ಅನ್ನುತ್ತಾರೆ. ಆದರೆ ಅದು ನಿಜವಲ್ಲ !

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಎಷ್ಟೋ ಜನ ಮನೆಯ ಸದಸ್ಯರ ಬದುಕಿಗೂ ಕೂಡ ಬೆಂಬಲವಾಗಿ ನಿಂತಿದ್ದಾರೆ.

ಊರಲ್ಲೇ ಇದ್ದರೆ ಏನೂ ಮಾಡಲಾಗುತ್ತಿರಲಿಲ್ಲ, ತಮ್ಮಂದಿರ ಓದು, ಅಕ್ಕತಂಗಿಯರ ಮದುವ, ಅಪ್ಪನ ಕಾಯಿಲೆ ಎಲ್ಲದಕ್ಕೂ ಬೆಂಗಳೂರ ಬದುಕು ನೆರವು ನೀಡಿದೆ ಅನ್ನುವವರಿದ್ದಾರೆ.

ಒಟ್ಟಾರೆ ಈ ಕೊರೋನಾ ಎಂಬ ಸಣ್ಣ ವೈರಸ್ ನಮ್ಮ ಬದುಕುಗಳ ಮೇಲೆ ಮಾಡಿರುವ ಪ್ರಹಾರ ಬಹಳ ದೊಡ್ಡದು!

ಮುಂದೆ ಇದೆಲ್ಲ ನಿವಾರಣೆಯಾಗಿ ನಾವೆಲ್ಲ ದೇವರ ದಯೆಯಿಂದ ಬದುಕಿ ಉಳಿದರೆ ಇದೊಂದು ದುಃಸ್ವಪ್ನವಾಗಿ ನಮ್ಮನ್ನು ಕಾಡುವುದು ಖಂಡಿತ!

(ವಾಟ್ಸಪ್‌ ಬಳಕೆದಾರರೊಬ್ಬರು ಬೆರದ ಬರಹವಿದು. ಚಿಂತನಾರ್ಹವಾಗಿರುವುದರಿಂದ ಉಪಯುಕ್ತ ನ್ಯೂಸ್ ಇದನ್ನು ಯಥಾವತ್ ಪ್ರಕಟಿಸುತ್ತಿದೆ. ಮೂಲ ಲೇಖಕರಿಗೆ ಕೃತಜ್ಞತೆಗಳು)

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

‘ಕೊರೋನಾ’ವನ್ನು ತೊಳೆಯಲು ‘ಕೈಜೋಡಿಸಿ’: ನಾಳಿನ ಜನತಾ ಕರ್ಫ್ಯೂ ಬೆಂಬಲಿಸಿ

Upayuktha

ವಿಚಾರ: ಸನ್ಮಾನ, ವಿಜಯೋತ್ಸವ, ದುಂದುವೆಚ್ಚಗಳು ಬೇಕೆ?

Upayuktha

ಇಂದು ಪ್ರಧಾನಿ ಮೋದಿ ಜನ್ಮದಿನ: ನನಗೇಕೆ ಮೇೂದಿ ಇಷ್ಟವಾಗುತ್ತಾರೆ?

Upayuktha