ಮುಂಬೈ: ಇಲ್ಲೊಬ್ಬ ಕುಡಿತದ ಅಮಲಿನಲ್ಲಿ ರೈನ್ ಕೋಟ್ ಎಂದು ತಿಳಿದು ಪಿಪಿಇ ಕಿಟ್ ನ್ನೇ ಕದ್ದ ವ್ಯಕ್ತಿಗೆ ಕೊರೊನಾ ಆವರಿಸಿದೆ. ಈ ವಿಚಿತ್ರ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ವ್ಯಕ್ತಿ ತರಕಾರಿ ವ್ಯಾಪಾರಿಯಾಗಿದ್ದು ಕುಡಿತದ ಅಮಲಿನಲ್ಲಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದ ಈ ಹಿನ್ನೆಲೆಯಲ್ಲಿ ಈತನನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಂತರ ಅಲ್ಲಿಂದ ನಾಗಪುರದ ಮಾಯೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಪಡೆದು ಬರುತ್ತಿದ್ದಾಗ ಅಲ್ಲಿ ಆತನಿಗೆ ಪಿಪಿಇ ಕಿಟ್ ಕಾಣಿಸಿದೆ. ಕೊಂಚ ಅಮಲಿನಲ್ಲಿದ್ದ ವ್ಯಕ್ತಿ ಕೂಡಲೇ ರೈನ್ಕೋಟ್ ಎಂದು ತಿಳಿದುಕೊಂಡು ಅದನ್ನ ಕದ್ದುಕೊಂಡು ಬಂದಿದ್ದಾನೆ. ನಂತರ ಮರು ದಿನ ಮಳೆ ಇದ್ದುದರಿಂದ ತರಕಾರಿ ವ್ಯಾಪಾರಕ್ಕೆ ಪಿಪಿಇ ಕಿಟ್ ಹಾಕಿಕೊಂಡು ಬಂದಿದ್ದಾನೆ. ಅಲ್ಲದೆ ಆತನ ಗೆಳೆಯರೊಂದಿಗೆ 1000 ರೂ. ಕೊಟ್ಟು ಖರೀದಿಸಿದ್ದಾಗಿ ಹೇಳಿದ್ದಾನೆ.
ಇನ್ನೂ ಪಿಪಿಇ ಕಿಟ್ ಹಾಕಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಗಳು ಆತನಿಂದ ಪಿಪಿಇ ಕಿಟ್ ಪಡೆದುಕೊಂಡು ಸುಟ್ಟು ಹಾಕಿದ್ದಾರೆ. ನಂತರ ಆತನನ್ನ ಕರೆದುಕೊಂಡು ಹೋಗಿ ಕೊರೊನಾ ಟೆಸ್ಟ್ ನಡೆಸಿದ್ದಾರೆ.
ಈ ವೇಳೆ ಆತನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಲ್ಲದೇ ಆತನ ಸಂಪರ್ಕಕ್ಕೆ ಬಂದವರ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಆದರೆ ಅವರ ಟೆಸ್ಟ್ ನೆಗೆಟಿವ್ ಬಂದಿದೆ. ಇಂತಹದೊಂದು ಘಟನೆ ಇದೀಗ ನಾಗಪುರದಲ್ಲಿ ನಡೆದಿದೆ.