ಲೇಖನಗಳು

ಕೊರೋನಾ ಸೋಂಕು ರಕ್ಕಸನ ಕಬಂಧ ಬಾಹು ಬಿಗಿಯುತ್ತಿದೆ

ಚೀನಾದ ಒಂದು ಮಾಂಸದ ಮಾರುಕಟ್ಟೆಯಿಂದ ಕೊರೋನಾ ಎಂಬ ರೋಗಾಣು ಇಡಿ ವಿಶ್ವಕ್ಕೆ ಹರಡಿದೆ ಎಂದು ಹೇಳಲಾಗುತ್ತಿದೆ.ವೇಗವಾಗಿ ಹರಡಿದ ಈ ಸೂಕ್ಷ್ಮಾಣು ರಕ್ಕಸನ ಕಬಂಧ ಬಾಹುವಿನ ಬಿಗಿ ಹಿಡಿತ ಹೆಚ್ಚುತ್ತಿದ್ದು ಜಗತ್ತಿನಲ್ಲಿ ಲಕ್ಷಾಂತರ ಜನರ ಸಾವು ನೋವು ನಾನಾ ಬವಣೆಗಳಿಗೆ ಕಾರಣವಾಗಿದೆ. ಈ ಸೋಂಕಿನ ಅಕ್ಟೋಪಸ್ ಬಿಗಿತದಿಂದ ಮನುಷ್ಯ ಕುಲ ಪಾರಾಗಲೇ ಬೇಕು. ಒಂದು ಶತಮಾನ ಹಿಂದೆ ಪ್ಲೇಗ್ ರೋಗವು ಇದೇ ರೀತಿ ಲಕ್ಷಾಂತರ ಜನರಿಗೆ ಬಾಧಿಸಿ ಮರಣ ಮೃದಂಗವನ್ನು ಭೀಕರವಾಗಿ ಬಾರಿಸಿತ್ತು. ಅದಕ್ಕೆ ಸೂಕ್ತ ಔಷಧಿಯನ್ನು ಕಂಡು ಹಿಡಿಯಲಾಗಿದ್ದು ಈಗ ವಿಶ್ವದಲ್ಲಿ ಪ್ಲೇಗ್ ಹಾವಳಿ ಇಲ್ಲ.

2020 ಮಾರ್ಚಿ ತಿಂಗಳ ಕೊನೆಯ ವಾರದಿಂದ ಭಾರತವಿಡೀ ಕೊರೋನಾ ಸೋoಕು ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಕೇಂದ್ರ ಸರಕಾರವು ಲಾಕ್ ಡೌನಿನ ಬಿಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜ್ಯಾರಿಗೆ ತಂದಿದೆ. ಇದರಿಂದ ಪೋಲಿಸ್ ಇಲಾಖೆಯ ಜವಾಬ್ಬಾರಿ ಹೆಚ್ಚಾಯಿತು. ಅವರ ಹಾಗೂ ಕೋವಿಡ್ ಬಗ್ಗೆ ಎಚ್ಚರ ಮೂಡಿಸುವ ಕಾರ್ಯಕರ್ತರ ಅವಿರತ ಪ್ರಯತ್ನದಿಂದ ಸೋಂಕಿನ ವೇಗ ಕಡಿಮೆಯಾಯಿತು. ಆದರೆ ಇದರಿಂದ ಕೈಗಾರಿಕೆ, ಹೋಟೆಲ್ ಉದ್ಯಮ, ವ್ಯಾಪಾರ ವಹಿವಾಟು, ಸಾರಿಗೆ ಕ್ಷೇತ್ರಗಳು ಅಪಾರ ನಷ್ಟವನ್ನು ಅನುಭವಿಸಬೇಕಾಗಿ ಬಂದು ದೇಶದ ಆರ್ಥಿಕತೆಗೆ ದೊಡ್ಡ ಆಘಾತವಾಯಿತು. ಆದರೆ ಹಳ್ಳಿಗಳಲ್ಲಿ ಬಿತ್ತನೆ, ಕೃಷಿಗೆ ಪ್ರೋತ್ಸಾಹ ಕೊಡಲಾಯಿತು. ಇತ್ತೀಚೆಗೆ ಕೇಂದ್ರ ಸರಕಾರವು ಲಾಕ್ ಡೌನ್ ತೆರವುಗೊಳಿಸಿದೆ. ಸೋಂಕು ಹರಡದಂತೆ ಅನೇಕ ನಿಯಮಗಳನ್ನು ಜ್ಯಾರಿಗೆ ತರಲಾಯಿತು.ಕಡ್ಡಾಯ ಮಾಸ್ಕ್ ಧರಿಸುವುದು, ಗುಂಪು ಸೇರದಿರುವಂತೆ ಜಾತ್ರೆ, ಸಂತೆಗಳಲ್ಲಿ ಎಚ್ಚರಿಸುವುದು, ಮದುವೆಯಂತಹ ಸಮಾರಂಭಗಳಲ್ಲಿ 50-100 ರಷ್ಟು ಮಾತ್ರ ಜನ ಸೇರಬಹುದು ಎಂದು ಕಡ್ಡಾಯ ಮಾಡಿರುವುದು ಪರಿಣಾಮಕಾರಿ ಕ್ರಮಗಳಾಗಿವೆ

ಭಾರತದ ನಗರಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆ ಸಣ್ಣ ಪುಟ್ಟ ಉದ್ಯೋಗಿಗಳು ತಮ್ಮ ಹಳ್ಳಿಯ ಕಡೆಗೆ ವಲಸೆ ಹೋದರು.ತಮ್ಮ ಹಡಿಲು ಬಿದ್ದ ಆಸ್ತಿಯಲ್ಲಿ ಕೃಷಿಯನ್ನು ಆರಂಭಿಸಿದರು.ಈ ಕಾರಣದಿಂದ ಈ ವರ್ಷ ಬಂಪರ್ ಬೆಳೆ ಬರುವ ಸಾಧ್ಯತೆ ತುಂಬಾ ಇದೆ. ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು ಕೃಷಿ ಉತ್ಪನ್ನಗಳು ಅನೇಕ ಕೈಗಾರಿಕೆಗಳಿಗೆ ಕಚ್ಛಾ ವಸ್ತುಗಳನ್ನು ಒದಗಿಸುತ್ತವೆ. ಕೊರೊನಾ ಸೋಂಕಿನ ಈ ವಿಷಮ ಪರಿಸ್ಥಿತಿಯಲ್ಲಿಯೂ ಕೃಷಿ ಚೆನ್ನಾಗಿರುವುದು ಒಂದು ಒಳ್ಳೆಯ ಬೆಳವಣಿಗೆ.

ಕೊರೊನಾ ಸೋಂಕಿನಿಂದ ದಿನಾ ವಿಶ್ವದಾದ್ಯಂತ ಜನರು ನರಳಿ ಸಾಯುವ ಸುದ್ದಿಯನ್ನು ಕೆಲವು ದೂರದರ್ಶನ ವಾಹಿನಿಗಳು ಪ್ರಸಾರ ಮಾಡುವ, ರೀತಿ ಭಯಾನಕವಾಗಿದೆ. ಈ ಸೋಂಕಿನಿಂದ ಸಾಯುವವರ ಪ್ರಮಾಣ 2%ಕ್ಕಿಂತ ಕಡಿಮೆ.ಈ ಸೋಂಕು ಹೆಚ್ಚಾಗಿ ರೋಗ ನಿರೋಧ ಶಕ್ತಿ ಕಡಿಮೆಯಾಗಿರುವವರನ್ನು, 60 ಪ್ರಾಯ ಮೀರಿದ ವೃದ್ಧರನ್ನು, ಹಾಗೂ ಇತರ ಗಂಭೀರ ಕಾಯಿಲೆ ಇರುವವರನ್ನು ಬಾಧಿಸಿ ಮರಣಾoತಿಕವಾಗಿದೆ ಎಂದು ನಾವು ತಿಳಿದುಕೊಳ್ಳಬೇಕು. ಕೊರೋನಾ ಸೂಕ್ಷ್ಮಾಣು ದುರ್ಬಲವಾದ ಕಾರಣ ಅಶಕ್ತರನ್ನೇ ಹೆಚ್ಚಾಗಿ ಪೀಡಿಸುತ್ತದೆ. ಹಾಗೆಂದು ಈ ಸೋಂಕನ್ನು ಅಲಕ್ಷಿಸಬಾರದು. ಸರಿಯಾದ ಚಿಕಿತ್ಸೆಯನ್ನು ಪರಿಣತ ವೈದ್ಯರಿಂದ ಪಡೆಯಬೇಕು. ಪೌಷ್ಟಿಕ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದೇ ಲೇಸು’, ಎಂಬ ಮಾತಿನಂತೆ ಸೋಂಕು ತಗಲದಂತೆ ಕಟ್ಟೆಚ್ಚರ ವಹಿಸಲೇ ಬೇಕು. ಪೇಟೆಗೆ ಅತ್ಯಗತ್ಯವಾಗಿ ಕಂಡು ಬಂದರೆ ಹೋಗಬೇಕು.ಮಾಸ್ಕ್ ಧರಿಸಲೇಬೇಕು. ಜನರಿಂದ ಅಂತರ ಕಾಯಬೇಕು. ಮನೆಗೆ ಬಂದ ಕೂಡಲೇ ಉಡುಪುಗಳನ್ನು ಹೊರಗಿರಿಸಿ, ಚೆನ್ನಾಗಿ ಸಾಬೂನಿನಿಂದ ಕೈ ಕಾಲು ಮುಖಗಳನ್ನು ತೊಳೆಯಬೇಕು.ದಿನಕ್ಕೆ ಎರಡು ಬಾರಿ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಪ್ರಾಣಾಯಾಮ, ಧ್ಯಾನ, ಸತ್ಚಿoತನೆಗಳಿಂದ ಮನೋಬಲ, ಆತ್ಮವಿಶ್ವಾಸಗಳನ್ನು ಬೆಳೆಸಬೇಕು. ಕೊರೋನಾ ಸೋಂಕು ಬಹಳ ವೇಗದಿಂದ ಹರಡುವುದನ್ನು ತಡೆಯಲು ಸಾಧ್ಯವಾದಷ್ಟು ಜನ ಸಮೂಹದೊಂದಿಗೆ ಬೆರೆಯುವುದನ್ನು ನಿಲ್ಲಿಸಬೇಕು.ಈ ಸೋಂಕು ಹೀಗೇ ಹಲವು ತಿಂಗಳುಗಳ ಕಾಲ ಹರಡುವ ಸಾಧ್ಯತೆ ಇದೆ.ಇದಕ್ಕೆ ಸೂಕ್ತ ಔಷಧಿ ಕೆಲವು ತಿಂಗಳ ನಂತರ ಬರಬಹುದು, ಅಷ್ಟರವರೆಗೆ ಜಾಗರೂಕರಾಗಿರಿ ಎಂದು ಇತ್ತೀಚೆಗೆ ನಮ್ಮ ಪ್ರಧಾನಿಯವರು ಹೇಳಿದ್ದಾರೆ.

ಸಾವು, ನೋವು, ಕಷ್ಟ ಸಂಕಟ , ದುರಂತಗಳ ಸರಣಿಯನ್ನು ಕೊರೋನಾ ತಂದರೂ ಇದರಿಂದ ಕೆಲವು ಒಳ್ಳೆಯ ಬದಲಾವಣೆಗಳಾಗಿರುವುದನ್ನು ನಾವು ತಿಳಿದುಕೊಳ್ಳಬೇಕು. ಸೋಂಕಿನ ಭಯದಿಂದ ಜನರ ಓಡಾಟ ಕಡಿಮೆಯಾಗಿ ವಾಹನಗಳ ಕರ್ಕಶ ಸದ್ದು ಕಡಿಮೆಯಾಗಿದೆ! ಗಾಳಿ, ನೀರು ಪರಿಶುದ್ಧವಾಗುತ್ತಿದೆ! ಕಾಡಿನಲ್ಲಿ ವನ್ಯ ಮೃಗಗಳು ಆರಾಮವಾಗಿವೆ!ಕಾರಣ ಈಗ ಕಳ್ಳ ಬೇಟೆ, ಅಭಯಾರಣ್ಯಗಳ ನಡುವೆ ಹಾದು ಹೋಗುವ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ.ತೀರ್ಥ ಕ್ಷೇತ್ರ, ದೇವಾಲಯಗಳಲ್ಲಿ ಈಗ ಜನ ಸ್ತೋಮ ಇಲ್ಲ.

ಕೊರೋನಾಸುರನಿಗೆ ಹೆದರದಿರಿ
ಆರೋಗ್ಯವನ್ನು ಕಾಪಾಡಿ ಉಲ್ಲಾಸದಿಂದಿರಿ
ಏನೇ ಬಂದರೂ ಸಹಿಸಿ ಎದುರಿಸಿರಿ
ಗೆಲುವೊಂದೇ ನಿಮ್ಮ ಪಾಲಿಗೆ ತಿಳಿಯಿರಿ

ಬರಹ : *ಗುಣಾಜೆ ರಾಮಚಂದ್ರ ಭಟ್*

Related posts

ದಂತ ಚಿಕಿತ್ಸೆಯಲ್ಲಿ ಲೇಸರ್ ಬಳಕೆ: ನೋವಿಲ್ಲದ ಸುಲಭ ಚಿಕಿತ್ಸೆ

Upayuktha

ಲಾಕ್‌ಡೌನ್ ಪಾಲಿಸಿ, ಮನೆಯಲ್ಲೇ ಇದ್ದು ನೀವೂ ಉಳಿಯಿರಿ, ನಿಮ್ಮವರನ್ನೂ ಉಳಿಸಿ

Upayuktha

ಯಕ್ಷಗಾನ ಕಾಯ್ದುಕೊಂಡು ಬಂದ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ

Upayuktha

Leave a Comment