ಆರೋಗ್ಯ ಪ್ರಮುಖ ಪ್ರಶ್ನೆ- ಉತ್ತರಗಳು (FAQs)

ಕೊರೊನಾ ವೈರಸ್‌ ಕುರಿತ ಸಂದೇಹ- ಸಮಾಧಾನ (FAQs): ಆತಂಕ ಬೇಡ, ಕಾಳಜಿ ಇರಲಿ

ಜಗತ್ತಿನಾದ್ಯಂತ ಸೋಂಕಿಗಿಂತಲೂ ಹೆಚ್ಚಾಗಿ ಭೀತಿ ಹುಟ್ಟಿಸಿರುವ, ಪರಿಣಾಮವಾಗಿ ದೇಶ-ದೇಶಗಳ ಅರ್ಥವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ದೈನಂದಿನ ಜೀವನವನ್ನು ಗಾಢವಾಗಿ ಅಸ್ತವ್ಯಸ್ತಗೊಳಿಸಿರುವ ಕೊರೊನಾ ವೈರಸ್‌ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಪುತ್ತೂರಿನ ಪ್ರಸಾದ್ ಆಯುರ್ವೇದ ಹೆಲ್ತ್‌ ಸೆಂಟರ್‌ನ ಆಯುರ್ವೇದ  ತಜ್ಞರಾದ ಡಾ. ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ ಅವರು ಪ್ರಶ್ನೋತ್ತರ ರೂಪದಲ್ಲಿ  ಮಾಹಿತಿ ನೀಡಿದ್ದಾರೆ. ಅದನ್ನು ಉಪಯುಕ್ತ ನ್ಯೂಸ್‌ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ.

1. ಕೊರೋನ ವೈರಸ್ ಕಾಯಿಲೆ ಎಂದರೆ ಏನು?
ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ. ಕೊರೋನ ವೈರಸ್ ಇದಕ್ಕೆ ಕಾರಣವಾಗುವ ಸೂಕ್ಷ್ಮ ರೋಗಾಣು. ವೈರಸ್ ಎಂದರೆ. ದೇಹದ ಹೊರಗೆ ನಿರ್ಜೀವಿ ಯಾಗಿದ್ದು, ದೇಹದ ಒಳಗೆ ಪ್ರವೇಶಿಸಿದ ನಂತರ ಜೈವಿಕ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.

2. ದೇಹದ ಯಾವ ಭಾಗದ ಮೇಲೆ ಇದು ಪರಿಣಾಮ ಬೀರುತ್ತದೆ?
ಮೂಗು, ಗಂಟಲು, ಶ್ವಾಸನಾಳಗಳು ಮತ್ತು ಶ್ವಾಸಕೋಶಗಳನ್ನು ಈ ವೈರಸ್ ಗಳು ನೆಲೆಗಳನ್ನಾಗಿ ಮಾಡಿಕೊಳ್ಳುತ್ತವೆ.

3. ಇದು ಎಷ್ಟರಮಟ್ಟಿಗೆ ಮಾರಣಾಂತಿಕ?
ಅಧಿಕ ಸಾಂಕ್ರಾಮಿಕತೆ, ಕನಿಷ್ಠ ಮಾರಣಾಂತಿಕತೆ ಹೊಂದಿದೆ. ಕೊರೋನದಲ್ಲಿ 2-3%, MERS ವೈರಸ್ ಕಾಯಿಲೆಯಲ್ಲಿ 35% , SARS ನಲ್ಲಿ 10% ಮರಣ ಪ್ರಮಾಣ ಇದೆ.

4. ಯಾರಲ್ಲಿ ಇದು ಹೆಚ್ಚು ಅಪಾಯಕಾರಿ?
60 ವರ್ಷ ಕಳೆದ ವೃದ್ಧರಲ್ಲಿ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅಸ್ತಮಾ, ಈಗಾಗಲೇ ಸಕ್ಕರೆ ಕಾಯಿಲೆ ಇದ್ದವರಲ್ಲಿ ಹೆಚ್ಚು ಅಪಾಯಕಾರಿ.

5. ಇದು ತಗುಲಿದರೆ ಸಾವು ನಿಶ್ಚಿತವೇ?
ಖಂಡಿತ ಇಲ್ಲ. ಸೋಂಕು ತಗುಲಿದ 80 ಶೇಕಡ ಜನರಲ್ಲಿ, ಅತ್ಯಂತ ಮೃದು ಲಕ್ಷಣಗಳೊಂದಿಗೆ, ಎರಡು ವಾರಗಳಲ್ಲಿ ಗುಣ ಹೊಂದುತ್ತಾರೆ.

6. ಚಿಕಿತ್ಸೆಯ ಸ್ವರೂಪವೇನು?
-ಜ್ವರ ಇತ್ಯಾದಿ ಲಕ್ಷಣಗಳ ಚಿಕಿತ್ಸೆ, ದ್ರವ ಪೂರಣ,
– ಉಸಿರಾಟ ವೈಫಲ್ಯವಿದ್ದಲ್ಲಿ ಉಸಿರಾಟದ ವ್ಯವಸ್ಥೆ ಬೇಕಾಗಬಹುದು.

7. ಹೇಗೆ ಹರಡುತ್ತದೆ?
– ಕಣ್ಣು ,ಮೂಗು ,ಬಾಯಿಯ ಸ್ರಾವ ಗಳಿಂದ ಹರಡುತ್ತದೆ. ಕೆಮ್ಮುವಾಗ ಹಾಗು ಸೀನುವಾಗ ಈ ಸ್ರಾವದ ಸಣ್ಣ ಹನಿಗಳು ಗಾಳಿಯಲ್ಲಿ ಸೇರಿ ಹತ್ತಿರ ಇರುವ ಇನ್ನೊಬ್ಬ ವ್ಯಕ್ತಿಯನ್ನು ಸೇರುತ್ತದೆ.
– ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದುವುದರಿಂದ.
– ರೋಗಾಣುಗಳು ಗಾಳಿಯಲ್ಲಿ ತಂಗುವುದಿಲ್ಲ. ನೆಲ ಹಾಗೂ ಜಡ ವಸ್ತುಗಳ ಮೇಲೆ ನೆಲೆಗೊಂಡು, ಅವುಗಳನ್ನು ಮುಟ್ಟಿದ ವ್ಯಕ್ತಿಯ ಕೈಯನ್ನು ಸೇರುತ್ತದೆ. ಆ ವ್ಯಕ್ತಿ ಕಣ್ಣು, ಮೂಗು, ಬಾಯಿಯನ್ನು ಸ್ಪರ್ಶಿಸಿದರೆ ಆತನ ದೇಹದೊಳಕ್ಕೆ ಪ್ರವೇಶ ಪಡೆಯುತ್ತದೆ.

8. ಲಕ್ಷಣಗಳು ಯಾವುವು?
ಜ್ವರ, ಗಂಟಲು ಕೆರೆತ, ಕೆಮ್ಮು, ಉಸಿರಾಟದಲ್ಲಿ ಕಷ್ಟವಾಗುವುದು, ಮೈಕೈ ನೋವು, ಸುಸ್ತು. ಪ್ರಯಾಣದ ಹಿನ್ನೆಲೆ ಇರುವವರಲ್ಲಿ ಸೋಂಕಿನ ಸಾಧ್ಯತೆ ಸಂಶಯಿಸುವುದು ಸೂಕ್ತ.

9. ತಡೆಗಟ್ಟುವ ವಿಧಾನಗಳು ಏನು?
-ಸಾಬೂನು ಹಾಗು ನೀರಿನಿಂದ 20 ಸೆಕುಂಡುಗಳ ಕಾಲ ಕೈ ತೊಳೆಯುವುದು.
-ಕೈಗಳನ್ನು ತೊಳೆಯದೆ ಕಣ್ಣು ಮೂಗು ಬಾಯಿಗಳನ್ನು ಮುಟ್ಟಿ ಕೊಳ್ಳಬೇಡಿ.
-ಕೆಮ್ಮು ಸೀನು ಇರುವವರಿಂದ 1 ಮೀಟರ್ ಅಂತರ ಕಾಯ್ದುಕೊಳ್ಳಿ.
-ಕೈ ಕುಲುಕುವುದರ ಬದಲಿಗೆ , ಕೈಜೋಡಿಸಿ ನಮಸ್ಕರಿಸುವ ವಿಧಾನ ಒಳ್ಳೆಯದು.
– ಹಸ್ತಗಳನ್ನು ಅಡ್ಡಹಿಡಿದು ಕೆಮ್ಮುವುದು ಸೀನುವುದು ಮಾಡಬೇಡಿ. ಕರವಸ್ತ್ರವನ್ನು ಬಳಸಿ. ಕರವಸ್ತ್ರ ಇಲ್ಲದೆ ಇದ್ದಲ್ಲಿ ಹೊರಗೆ ಹೋಗಿ ,ಯಾರು ಇಲ್ಲದ ಜಾಗದಲ್ಲಿ ಕೆಮ್ಮುವುದು ಸೀನುವುದನ್ನು ಮಾಡಿ. ಅಥವಾ ಮೊಣಗಂಟನ್ನು ಮೂಗಿಗೆ ಅಡ್ಡಲಾಗಿ ಹಿಡಿಯಿರಿ.
– ಜನ ಸೇರಿದ ಜಾಗದಲ್ಲಿ ಕೆಮ್ಮುವುದು ಸೀನುವುದನ್ನು ಮಾಡಬೇಡಿ.
-ಅನಾರೋಗ್ಯವಿದ್ದಲ್ಲಿ ಪ್ರಯಾಣ ಮಾಡಬೇಡಿ. ಜನಜಂಗುಳಿ ಇರುವ ಜಾಗಕ್ಕೆ ಭೇಟಿ ನೀಡಬೇಡಿ.
– ಲಕ್ಷಣಗಳನ್ನು ವೈದ್ಯರನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.
– ವೈದ್ಯರ ಮೂಲಕ ಸಿಗುವ ಅಧಿಕೃತ ಮಾಹಿತಿಯನ್ನು ಮಾತ್ರ ಜಾಲತಾಣಗಳ ಮೂಲಕ ಹಂಚಿಕೊಳ್ಳಿ. ಅನುಸರಿಸಿ. ಗಾಳಿಸುದ್ದಿ ಹಬ್ಬಿಸಬೇಡಿ.

10. ಯಾರು ಕೊರೋನ ವೈರಸ್ ತಪಾಸಣೆಗೆ ಒಳಪಡಬೇಕು?
ವೈದ್ಯರು ಶಂಕಿತ ಕೋರೋನ ರೋಗಿ ಎಂದು ಪರಿಗಣಿಸಿದಲ್ಲಿ ತಪಾಸಣೆಗೆ ಸೂಚಿಸುತ್ತಾರೆ. ಬಯೋ ಸೇಫ್ಟಿ ಲೆವೆಲ್ -4 ರೀತಿಯಲ್ಲಿ ಸುರಕ್ಷಾ ವ್ಯವಸ್ಥೆ ಹೊಂದಿರುವ ಪ್ರಯೋಗಾಲಯಗಳು ಮಾತ್ರ ಈ ತಪಾಸಣೆಗೆ ಅಂಗೀಕೃತ ವಾಗಿರುತ್ತದೆ.

11. ಕೊರೋನಕ್ಕೆ ಔಷಧಗಳು ಬಂದಿವೆಯೇ?
ಈ ವೈರಸ್ಸನ್ನು ದೇಹದ ಒಳಗೆ ಸೇವಿಸಿ ನಾಶಗೊಳಿಸುವ ಔಷಧ ಅಥವಾ ತಡೆಗಟ್ಟುವ ಲಸಿಕೆಗಳು ಇನ್ನೂ ಬಂದಿಲ್ಲ.

12. ಕೊರೋನ ವೈರಸ್ ಎಷ್ಟು ಸಮಯ ಹೊರಗಿನ ಪರಿಸರದ ವಸ್ತುಗಳಲ್ಲಿ ಉಳಿದುಕೊಳ್ಳುತ್ತವೆ?
ಸಾಮಾನ್ಯವಾಗಿ ಎಂಟರಿಂದ ಹತ್ತು ಗಂಟೆಗಳ ಕಾಲ. ಆದರೆ ಗಾಜು ,ಪ್ಲಾಸ್ಟಿಕ್ ,ಲೋಹ, ಮರದ ಉಪಕರಣಗಳ ಮೇಲೆ ಸ್ವಲ್ಪ ಹೆಚ್ಚು ಸಮಯ ನಿಲ್ಲಬಹುದು.

13. ಯಾವ ರೀತಿಯ ಮುಖಗವಸು( ಮಾಸ್ಕ್) ಗಳ ಬಳಕೆ ಮಾಡಬೇಕು?
3 ಪದರದ ಸರ್ಜಿಕಲ್ ಮಾಸ್ಕ್ ಧರಿಸಬಹುದು. ಆದರೆ ದೃಢೀಕೃತ ವಾದ ನಂತರ, ನಿಕಟ ಸಂಪರ್ಕದ ಸಂದರ್ಭಗಳಿರುವ ಆರೋಗ್ಯ ಕ್ಷೇತ್ರದಲ್ಲಿರುವವರು N-95 ಮಾಸ್ಕ್ ಧರಿಸಬೇಕು. ಆದರೆ ಸಾಂಕ್ರಾಮಿಕತೆ ಹಾಗೂ ಲಕ್ಷಣಗಳು ಇಲ್ಲದ ಸಂದರ್ಭದಲ್ಲಿ ಮಾಸ್ಕ್ ಧರಿಸಿಕೊಂಡು ಹೋಗುವ ಅಗತ್ಯವಿಲ್ಲ.

14. ನಮ್ಮೆಲ್ಲರ ಗುರಿ ಏನು?
ನಿಮ್ಮನ್ನು ರಕ್ಷಿಸಿಕೊಳ್ಳಿ.
ಕುಟುಂಬ, ಬಂಧು, ಆತ್ಮೀಯರನ್ನು ರಕ್ಷಿಸಿ.
ಇಡೀ ಸಮಾಜವನ್ನು ರಕ್ಷಿಸಿ.

15. ಶಂಕಿತ ಕೊರೋನವನ್ನು ದೃಢೀಕರಣ ಗೊಳಿಸುವ ಪರೀಕ್ಷೆ ಯಾವುದು?
ಶಂಕಿತ ರೋಗಿಯ ಶ್ವಾಸ ಮಾರ್ಗದಲ್ಲಿನ ಸ್ರಾವ ಅಥವಾ ರಕ್ತದ ಮಾದರಿಯನ್ನು ಆರೋಗ್ಯ ಕೇಂದ್ರದವರು ಪ್ರಯೋಗ ಶಾಲೆಗೆ ಕಳುಹಿಸಬೇಕು. ಅಲ್ಲಿ RT-PCR (ರಿವರ್ಸ್ ಟ್ರಾನ್ಸ್ ಕ್ರಿಪ್ಟೇಸ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆಯನ್ನು ನಡೆಸುತ್ತಾರೆ. ಇದಕ್ಕೆ ಸಾಧಾರಣ ಎರಡು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಸದ್ಯಕ್ಕೆ ಕರ್ನಾಟಕದಲ್ಲಿ ಇದು ‘ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್’ ನಲ್ಲಿ ಇದೆ. ಮತ್ತು ಈಗ ಹೊಸದಾಗಿ ಶಿವಮೊಗ್ಗ, ಹಾಸನ, ಮೈಸೂರು ವೈದ್ಯಕೀಯ ಸಂಸ್ಥೆಗಳಲ್ಲಿ ಈ ಪರೀಕ್ಷಾ ವ್ಯವಸ್ಥೆ ಇದೆ.

16. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
ವಿಟಮಿನ್ ಸಿ ಇರುವ ನೆಲ್ಲಿಕಾಯಿ ,ದಾಳಿಂಬೆ, ನಿಂಬೆರಸ ಇತ್ಯಾದಿಗಳನ್ನು ಹೆಚ್ಚು ಸೇವಿಸಿ. ಕುದಿಸಿ ತಣಿಸಿದ ನೀರನ್ನು ಆಗಾಗ ಕುಡಿಯುತ್ತಿರಬೇಕು. ಐಸ್ ಕ್ರೀಮ್ ಹಾಗೂ ತಣ್ಣನೆಯ ಪದಾರ್ಥಗಳಿಂದ ದೂರವಿರಿ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಉರಿ ಮತ್ತು ಖಾರ ಇರುವಂತಹ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ತಲೆಯನ್ನು ತಣ್ಣಗೆ ಇಟ್ಟುಕೊಳ್ಳಲು ಪ್ರಾರ್ಥನೆ, ಯೋಗ ಸಹಾಯಕ. ನಿಯಮಿತ ವ್ಯಾಯಾಮ ಇರಲಿ. ಸಾಕಷ್ಟು ಬಾರಿ ನೀರು ಕುಡಿಯುತ್ತಿರಬೇಕು.

ಆಯುರ್ವೇದದಲ್ಲಿ ರಸಾಯನ ಗುಣಗಳ ಉಲ್ಲೇಖವಿರುವ ಅರಸಿನ, ಶುಂಠಿ, ಬೆಳ್ಳುಳ್ಳಿ, ತುಳಸಿ- ಇವುಗಳನ್ನು ದಿನನಿತ್ಯ ಸೇವಿಸಿ. ಹಾಲು, ಹಣ್ಣು ಮಜ್ಜಿಗೆ, ಬೇಳೆಕಾಳು, ಧಾನ್ಯ – ಎಲ್ಲವನ್ನು ಒಳಗೊಂಡ ಸಮತೋಲಿತ ಆಹಾರವಿರಲಿ. ಅಮೃತಬಳ್ಳಿಯ ಕಷಾಯ ಅತ್ಯುತ್ತಮ.

ನಮ್ಮ ಶರೀರದಲ್ಲಿ ಅಡಕವಾದ ರೋಗನಿರೋಧಕ ಶಕ್ತಿ ಅಥವಾ ಇಮ್ಯೂನಿಟಿ ಎಂಬುದು ಪ್ರಕೃತಿಯ ಕರುಣೆ. ಕೊನೆಗೂ ಮಾರಣಾಂತಿಕವಾದ ರಾಬಿಸ್ ನಂತಹ ಕೆಲವೊಂದು ವೈರಾಣು ಕಾಯಿಲೆಗಳನ್ನು ಬಿಟ್ಟರೆ ಉಳಿದ ಕೋರೋನದಂತ ವೈರಸ್‌ಗಳನ್ನು ಮಟ್ಟ ಹಾಕುವುದು ರೋಗನಿರೋಧಕ ಶಕ್ತಿ. ಅಂದರೆ ನಮ್ಮ ದೇಶದ ಗಡಿ ರಕ್ಷಣಾ ಪಡೆ. ರಾಬಿಸ್, ಸಿಡುಬು, ಪೋಲಿಯೋದಂತಹ ವೈರಾಣು ಕಾಯಿಲೆಗಳಿಗೆ ಲಸಿಕೆಗಳು ಲಭ್ಯವಿದ್ದು, ಕೋರೋನಕ್ಕೆ ಬಂದಿಲ್ಲ.

ಕೋರೋನ ವೈರಾಣುಗಳನ್ನು ಸಾಯಿಸುವ ಔಷಧ ಯಾವುದೇ ಪದ್ಧತಿಯಲ್ಲಿ ಆಗಲಿ, ಇದೆಯೆಂದು ಹೇಳಿದರೆ ದಾರಿ ತಪ್ಪಿಸುವ ಉತ್ಪ್ರೇಕ್ಷಿತ ಸಂಗತಿಯಾಗುತ್ತದೆ. ಹಾಗೆ ಇದ್ದರೆ ಅದುವೇ ಚಿಕಿತ್ಸಾ ಮಾರ್ಗ ಆಗುತ್ತಿತ್ತು. ಆದರೆ ದೇಹದಲ್ಲಿನ ರೋಗನಿರೋಧಕತೆಯನ್ನು ಹೆಚ್ಚಿಸುವುದರ ಮೂಲಕ ವೈರಸ್‌ಗಳನ್ನು ಮಟ್ಟಹಾಕುವಂತೆ ದೇಹದಲ್ಲಿ ಸಮಸ್ಥಿತಿಯನ್ನು ಚಿತಾವಣೆ ಗೊಳಿಸುವುದೇ ಆಯುರ್ವೇದದ ವೈಶಿಷ್ಟ್ಯ.

– ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
B. A. M. S., D. Pharm., M. S. (Ayu)
ಆಯುರ್ವೇದ ತಜ್ಞ ವೈದ್ಯರು,
ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ, ಪುತ್ತೂರು. &
ಅಸಿಸ್ಟೆಂಟ್ ಪ್ರೊಫೆಸರ್,
ಕೆ. ವಿ .ಜಿ . ಆಯುರ್ವೇದ ಮೆಡಿಕಲ್ ಕಾಲೇಜು
ಸುಳ್ಯ. ದ.ಕ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೋವಿಡ್ 19 ಅಪ್‌ಡೇಟ್ಸ್: ರಾಜ್ಯದಲ್ಲಿ 196 ಕೊರೊನಾ ಪ್ರಕರಣ

Upayuktha

ಆ.27ಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಪದಗ್ರಹಣ

Upayuktha

ಜ. 6 ರಿಂದ ಮತದಾರರ ಮಿಂಚಿನ ನೋಂದಣಿ, ಸ್ಮಾರ್ಟ್‌ ವೋಟರ್ ಐಡಿ ಕಾರ್ಡ್ ವಿತರಣೆ: ಉಡುಪಿ ಡಿಸಿ

Upayuktha