ಆರೋಗ್ಯ ಪ್ರಮುಖ ಲೇಖನಗಳು

ಕೊರೋನಾ ವೈರಸ್!! ಯಾಕಿಷ್ಟು ಭಯ? ಸರಕಾರ ಅತಿ ಕಾಳಜಿ ತೋರಿಸುತ್ತಿದೆಯೇ?

ಚೀನಾದಲ್ಲಿ ಹುಟ್ಟಿ ಬೇರೆ ಬೇರೆ ದೇಶಗಳಿಗೆ ವ್ಯಾಪಿಸಿರುವ ಕೊರೊನಾ ವೈರಸ್ ಹಾವಳಿ ಕುರಿತು ಮಾಧ್ಯಮಗಳು ಅನಗತ್ಯ ಮತ್ತು ಅತಿರಂಜಿತ ವರದಿಗಳ ಮೂಲಕ, ಅನಗತ್ಯ ವ್ಯಾಖ್ಯಾನಗಳ ಮೂಲಕ ಭೀತಿ ಹುಟ್ಟಿಸುತ್ತಿವೆ. ಅಂತಹ ಮಾಧ್ಯಮಗಳ ಉತ್ಪ್ರೇಕ್ಷೆಯಿಂದಾಗಿ ಸರಕಾರಗಳೂ ಒತ್ತಡಕ್ಕೆ ಸಿಲುಕಿ ಅಗತ್ಯಕ್ಕಿಂತ ಹೆಚ್ಚಾಗಿಯೇ ಸ್ಪಂದಿಸುತ್ತಿವೆಯೇನೋ ಎಂಬ ಭಾವನೆ ಮೂಡಿಸುತ್ತಿವೆ. ಕೊರೊನಾ ವೈರಸ್‌ ಹಾವಳಿಗಿಂತಲೂ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳ ವೈರಸ್ಸೇ ವ್ಯಾಪಕವಾಗಿ ಹಬ್ಬಿ ಸಮಾಜದಲ್ಲಿ ಭಯ ಮೂಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞ ಆಯುರ್ವೇದ ವೈದ್ಯರಾದ ಡಾ. ಜಯಗೋವಿಂದ ಉಕ್ಕಿನಡ್ಕ ಅವರು ಅನಗತ್ಯ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ಷಕಿರಣ ಬೀರಿದ್ದಾರೆ.

ಕೊರೋನಾ ವೈರಸ್ಗೆ ಈ ಕಾರಣಕ್ಕೆ ಭಯ ಪಡಿ
1. ಅತ್ಯಂತ ಶೀಘ್ರದಲ್ಲಿ ಜನರಿಂದ ಜನರಿಗೆ ಸೀನು ಕೆಮ್ಮಿನ ಕಣಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು
2. ಕೆಮ್ಮು ಸೀನಿನಿಂದ ಹೊರಬಂದ ವೈರಸ್ ಸಾರ್ವಜನಿಕ ಜಾಗಗಳಲ್ಲಿ ಒಂಬತ್ತು ಗಂಟೆಗೂ ಹೆಚ್ಚು ಕಾಲ ಜೀವಂತವಿರಲು ಸಾಧ್ಯ
3.  ರೋಗಿಯ ಬಾಯಿ, ಮೂಗುನ ಸ್ರಾವ ಮತ್ತೊಬ್ಬನ ಬಾಯಿ, ಮೂಗು ಕಣ್ಣಿನ ಮೂಲಕ ಹರಡಲು ಸಾಧ್ಯ
4. ಪ್ರತಿಶತ ಇಪ್ಪತ್ತು ಶೇಕಡಾ ರೋಗಿಗಳು ತೀವ್ರ ತರದ ಶ್ವಾಸ ಸಂಬಂಧೀ ಸಮಸ್ಯೆಯಿಂದ ಬಳಲಲು ಸಾಧ್ಯ.

5. ಒಮ್ಮೆಲೇ ಸಾವಿರಾರು ಜನ ನ್ಯುಮೋನಿಯಾದಂತಹ ತೊಂದರೆಯಿಂದ ಒಂದೇ ಜಾಗದಲ್ಲಿ ಬಳಲಿದರೆ ಎಲ್ಲರಿಗೂ ತುರ್ತು ಚಿಕಿತ್ಸೆ ಕೊಡುವುದು ಕಷ್ಟವಾಗುವ ಸಾಧ್ಯತೆ, ಅತ್ಯಂತ ಹೆಚ್ಚು ಜನಸಂಖ್ಯಾ ಸಾಂದ್ರತೆಯಿರುವ, ಕಡಿಮೆ ತುರ್ತು ಚಿಕಿತ್ಸಾ ಸೌಕರ್ಯವಿರುವ (ಮುಖ್ಯವಾಗಿ ವೆಂಟಿಲೇಟರ್ ವ್ಯವಸ್ಥೆ) ಭಾರತದಲ್ಲಿ ಎಪಿಡೆಮಿಕ್ ಔಟ್ ಬ್ರೇಕ್ ಆದಲ್ಲಿ ಅತ್ಯಂತ ಹೆಚ್ಚು ಹಾನಿಯಾಗುವ ಸಂಭವವೇ ಜಾಸ್ತಿ.

6. ವಯಸ್ಕರಲ್ಲಿ, ಈಗಾಗಲೇ ಶ್ವಾಸ ಸಂಬಂಧೀ ಸಮಸ್ಯೆಗಳಿರುವವರಲ್ಲಿ, ಉಬ್ಬಸ ಸಮಸ್ಯೆ ಇರುವವರಲ್ಲಿ, ಶ್ವಾಸ ತಡೆ ಖಾಯಿಲೆ (ಸಿಒಪಿಡಿ) ಇರುವವರಲ್ಲಿ, ಲಿವರ್ ಸಂಬಂಧೀ, ಕಿಡ್ನಿ ವೈಫಲ್ಯ ಸಂಬಂಧೀ ರೋಗ ಇರುವವರಲ್ಲಿ, ದೀರ್ಘ ಸಮಯದಿಂದ ಸ್ಟಿರೋಯಿಡ್ ನಂತಹ, ಇಮ್ಯುನೋಸಪ್ರೆಸಿವ್ ಔಷಧಿಗಳನ್ನು ಸೇವಿಸುವವರಲ್ಲಿ, ಅರುವತ್ತು ವಯಸ್ಸು ದಾಟಿದವರಲ್ಲಿ, ರೋಗದಿಂದ ಕೃಶರಾದವರಲ್ಲಿ ಈ ರೋಗದ ತೀವ್ರತೆ ಅತಿಯಾಗಿ ಕಂಡಿದ್ದು ಹೆಚ್ಚಿನ ಪ್ರಾಣ ಕಳಕೊಂಡವರು ಈ ಗುಂಪಿಗೆ ಸೇರಿದವರಾಗಿರುತ್ತಾರೆ.

7. ಚೈನಾದಿಂದ ಬಂದ ಮಾಹಿತಿಯ ಪ್ರಕಾರ, 3 ಶೇಕಡಾ ಸಾವು ಸಂಭವಿಸಿದರೂ ಗುಣಮುಖರಾದ ಅನೇಕರಲ್ಲಿ ಲಂಗ್ ಫ಼ೈಬ್ರೋಸಿಸ್ ಅನ್ನುವಂತಹ ಶ್ವಾಸಕೋಶದ ಕೋಶಗಳ ದಡ್ಡುಕಟ್ಟುವಿಕೆಯ ಸಮಸ್ಯೆ ಅನೇಕರಲ್ಲಿ ಕಂಡಿದೆ. ಇದರ ದುಷ್ಪರಿಣಾಮ ಗೊತ್ತಾಗಲು ಇನ್ನೂ ಕೆಲವು ತಿಂಗಳುಗಳು ಬೇಕು. ಅನೇಕರಲ್ಲಿ ಅದು ಪುನಃ ಮೊದಲಿನ ಸ್ಥಿತಿಗೆ ಬರದೇ ಇರುವ ಸಾಧ್ಯತೆಯೇ ಜಾಸ್ತಿ. ಅಂತಹ ರೋಗಿಗಳು ಪದೇ ಪದೇ ಶ್ವಾಸ ಕೋಶದ ಸೋಂಕಿನಿಂದ ಬಳಲುವ ಸಾಧ್ಯತೆ ಜಾಸ್ತಿ ಹಾಗೂ ಅಂತಹವರ ಜೀವನ ಮಟ್ಟದ ಸ್ಥಿರತೆಯನ್ನು ಕಡಿಮೆ ಮಾಡಿ ಮುಂದಿನ ಜೀವನವನ್ನು ಕಷ್ಟಗೊಳಿಸಬಹುದು.

ಯಾಕೆ ಕೊರೋನ ವೈರಸ್ ಗೆ ಹೆದರುವ ಅಗತ್ಯವಿಲ್ಲ?
1. ಒಟ್ಟು ಸೋಂಕಿಗೊಳಗಾದ ಶೇಕಡಾ 3 ಜನರು ಮಾತ್ರವೇ ಇದುವರೆಗೆ ಸಾವನ್ನಪ್ಪಿದ್ದಾರೆ.
2. ಶೇಕಡಾ 80 ರಷ್ಟು ಜನರಲ್ಲಿ ಯಾವುದೇ ರೀತಿಯ ತೀವ್ರ ತೊಂದರೆ ಕೊಡದೆ ಸಾಮಾನ್ಯ ಶೀತ ಜ್ವರದಂತೆ 5ರಿಂದ 10 ದಿನಗೊಳಗಾಗಿ ಗುಣಮುಖರಾಗಿದ್ದಾರೆ.
3. ಚೈನಾದಲ್ಲಿ ಪೂರ್ಣ ಜಾಗ್ರತೆ ವಹಿಸುವುದರ ಮೂಲಕ (ಅಂದರೆ ಸಂಪೂರ್ಣ ಷಟ್ ಡೌನ್ ಮೂಲಕ) ಮತ್ತೂ ಹೆಚ್ಚಿನ ಪಸರಿಸುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
4. ಉತ್ತಮ ಆರೋಗ್ಯವಿರುವ ವ್ಯಕ್ತಿಗಳಲ್ಲಿ ಅನೇಕರಲ್ಲಿ ತೀವ್ರತರದ ಲಕ್ಷಣ ಕಂಡುಬಂದಿದ್ದರೂ, ಆರೋಗ್ಯವಂತರಲ್ಲಿ ಕೊರೋನಾ ಜ್ವರದಿಂದ ಸಾವು ಸಂಭವಿಸಿದುದು ವಿರಳ.

ಹಾಗಿದ್ದಲ್ಲಿ ಸರಕಾರ ಅತಿಯಾದ ಕಾಳಜಿ ವಹಿಸುತ್ತಿದೆಯೇ?
ಖಂಡಿತ ಇಲ್ಲ
 ಇಂದಿನವರೆಗೆ ಭಾರತೀಯರೊಳಗೆ ಈ ಸೋಂಕು ಜನರಿಂದ ಜನರಿಗೆ ಹರಡಲು ಪ್ರಾರಂಭವಾಗಿಲ್ಲ. ಹರಡುವ ರೋಗಗಳ ಎರಡನೇ ಹಂತದಲ್ಲಿ ಈಗ ಇದೆ. ಅಂದರೆ ಹೊರದೇಶದಿಂದ ಬಂದವರಲ್ಲಿ ಪಾಸಿಟಿವ್ ಬಂದು ಅವರ ಆತ್ಮೀಯರನೇಕ ಭಾರತೀಯರಿಗೆ ಈ ರೋಗ ಹರಡಿದೆ. ಮೂರನೇ ಹಂತವೆಂದರೆ ಸೀಮಿತ ಪ್ರದೇಶದ ಹಲವರಿಗೆ ಹರಡುವುದು. ಈ ಹಂತಕ್ಕೆ ಭಾರತ ಇನ್ನೂ ತಲಪಿಲ್ಲ. ಈಗ ಸರಕಾರ ಇಷ್ಟೆಲ್ಲಾ ಪ್ರಯತ್ನ ಪಡುತ್ತಿರುವುದು ಮೂರನೇ ಹಂತದ ಹರಡುವಿಕೆ ಆಗದಂತೆ. ಬಹುಶಃ ನಮ್ಮ ಜನರ ಸಹಕಾರ ನೋಡಿದಲ್ಲಿ ಅದು ಕಷ್ಟ ಸಾಧ್ಯವೇ ಸರಿ. ಆದರೂ ಈ ರೀತಿಯ ಕಠಿಣ ಕ್ರಮಗಳು ಮೂರನೇ ಹಂತಕ್ಕೆ ಹೋಗುವ ಸಮಯವನ್ನು ಮುಂದೂಡಬಹುದು ಹಾಗೂ ಸರಕಾರಕ್ಕೆ ಮುಂದೆ ಬರುವ ಅನಾಹುತಕ್ಕೆ ತಯಾರಾಗಲು ಬೇಕಾಗುವಷ್ಟು ಸಮಯವನ್ನು ನೀಡಬಹುದು.

ಜನರ ಸಂಪೂರ್ಣ ಸಹಕಾರ ಸಿಕ್ಕಿದಲ್ಲಿ ಮೂರನೇ ಹಂತಕ್ಕೆ ಸಾಗುವುದನ್ನು ತಡೆಗಟ್ಟುವುದು ಅಸಂಭವವಲ್ಲ. ಆದರೆ ಅನೇಕ ವೈದ್ಯರೇ ಜನರನ್ನು ದಾರಿ ತಪ್ಪಿಸಲು ಹೊರಟಿರುವುದು ನಮ್ಮ ದುರಂತವೆಂದೇ ತಿಳಿಯಬಹುದು. ಮಾಧ್ಯಮಗಳೂ ಕೂಡ ಕೇವಲ ಭಯ ಸೃಷ್ಟಿಸುವ ಕಾಯಕವನ್ನು ಮಾಡದೇ ಸರಕಾರದ ಕಾರ್ಯಕ್ರಮದ ಆಶಯಗಳನ್ನು ಜನರಿಗೆ ತಲಪಿಸುವಲ್ಲಿ ಪದೇ ಪದೇ ಸರಕಾರಿ ವೈದ್ಯಕೀಯ ಅಧಿಕಾರಿಗಳ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಅಧಿಕೃತರನ್ನು ಹೊರತುಪಡಿಸಿ ಸರಕಾರಿ ಕಾರ್ಯಕ್ರಮಗಳನ್ನು ಕೇವಲ ಟೀಕಿಸುವ ಚಟವಿರುವ ವೈದ್ಯರ ಅಭಿಪ್ರಾಯವನ್ನು ಬಿತ್ತರಿಸುವ ಗೋಜಿಗೆ ಹೋಗಬಾರದು.

 ಒಂದೊಮ್ಮೆ ಮೂರನೇ ಹಂತದ ಹರಡುವಿಕೆಯನ್ನು ತಡೆಯುವಲ್ಲಿ ವಿಫಲರಾದಲ್ಲಿ ನಾಲ್ಕನೇ ಹಂತಕ್ಕೆ ಅಂದರೆ ದೊಡ್ಡ ಪ್ರದೇಶದ ಅನೇಕರಿಗೆ, ಸಮೀಪದ ಊರುಗಳಿಗೆ ಹರಡುವುದನ್ನು ತಡೆಯುವುದು ಅತ್ಯಂತ ಕಠಿಣ ಕೆಲಸವೇ ಸರಿ, ಅಷ್ಟೇ ಅಲ್ಲ ಅಷ್ಟರೊಳಗಾಗಿ ಹಲವು ತುರ್ತು ಸಂದರ್ಭಗಳು ಸಾವು ನೋವುಗಳು ಸಂಭವಿಸಿಯಾಗಿರುತ್ತದೆ.

ಆದ್ದರಿಂದ ಈಗಿನ ಬುದ್ದಿವಂತಿಕೆಯೆಂದರೆ ಸರಕಾರ ಹೇಳಿದಂತೆ ನಡೆದುಕೊಳ್ಳುವುದು, ಸರಕಾರದೊಂದಿಗೆ ಸಂಪೂರ್ಣ ಸಹಕರಿಸುವುದು. ಹಾಗೂ ಮೂರನೇ ಹಂತದ ರೋಗ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆಯನ್ನು ನೀಡುವುದು.

– ಡಾ| ಜಯಗೋವಿಂದ ಉಕ್ಕಿನಡ್ಕ
ಉಕ್ಕಿನಡ್ಕಾಸ್ ಆಯುರ್ವೇದ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ವಿಶ್ವ ಅಂಗಾಂಗ ದಾನಿಗಳ ದಿನ- ಆಗಸ್ಟ್ 13

Upayuktha

ಪರೀಕ್ಷಾ ಕಾಲ: ಓದಿದ್ದು ಮರೆಯದೆ, ನೆನಪಿಟ್ಟುಕೊಳ್ಳೋದು ಹೇಗೆ..?

Upayuktha

ಉಪ್ರ ಗಲಭೆ ಹಿನ್ನೆಲೆ: ದಾಂಧಲೆಕೋರರ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗೆ ಚಾಲನೆ

Upayuktha