ನಗರ ಪ್ರಮುಖ ವಾಣಿಜ್ಯ ಸ್ಥಳೀಯ

ಕಾರ್ಪೋರೇಶನ್ ಬ್ಯಾಂಕ್ ವಿಲೀನದ ವಿರುದ್ಧ ನಾಳೆ ಧರಣಿ ಮುಷ್ಕರ

ಪ್ರಾತಿನಿಧಿಕ ಚಿತ್ರ

ಮಂಗಳೂರು: ಬ್ಯಾಂಕುಗಳ ವಿಲೀನೀಕರಣದ ವಿರುದ್ಧ ಕಾರ್ಪೊರೇಶನ್ ಬ್ಯಾಂಕಿನ ಎಲ್ಲ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಮಂಗಳೂರಿನಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿ ಎದುರು ಶನಿವಾರ (ಡಿ.7) ಧರಣಿ ಮುಷ್ಕರ ನಡೆಲಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕ್‌ ನೌಕರು ಮತ್ತು ಅಧಿಕಾರಿಗಳ ಸಂಘಟನೆಗಳ (ಯುಎಫ್‌ಸಿಬಿಯು) ಪದಾಧಿಕಾರಿಗಳು ವಿಲೀನೀಕರಣ ಪ್ರಸ್ತಾವದ ವಿರುದ್ಧ ಧರಣಿ ಮುಷ್ಕರ ನಡೆಸುವ ನಿರ್ಧಾರ ಪ್ರಕಟಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಐದು ಬ್ಯಾಂಕುಗಳಿಗೆ ಜನ್ಮ ನೀಡಿ, ಬ್ಯಾಂಕುಗಳ ತೊಟ್ಟಿಲು ಎಂಬ ಪ್ರಖ್ಯಾತಿ ಪಡೆದಿದೆ. ಆ ಐದು ಬ್ಯಾಂಕುಗಳಲ್ಲಿ ನಾಲ್ಕು ಬ್ಯಾಂಕುಗಳು ಸಾರ್ವಜನಿಕ ರಂಗದ ಅಗ್ರಗಣ್ಯ ಬ್ಯಾಂಕುಗಳಾಗಿವೆ. ಕೇಂದ್ರ ಸರಕಾರ ಹಿಂದಿನ ವರ್ಷ ವಿಜಯ ಬ್ಯಾಂಕನ್ನು ಬ್ಯಾಂಕ್ ಆರ್ಫ ಬರೋಡಾದೊಂದಿಗೆ ವಿಲೀನಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಒಂದು ಬ್ಯಾಂಕಿನ ನಾಮಾವಶೇಷ ಮಾಡಿತು. ಈಗ ಪುನಃ ಅಂತಹುದೇ ಹುನ್ನಾರಕ್ಕೆ ಕೇಂದ್ರ ಸರಕಾರ ಕೈ ಹಾಕಿದೆ. ಈ ಬಾರಿ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಮತ್ತು ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಈ ಎರಡು ಬ್ಯಾಂಕುಗಳು ಸದ್ಯದಲ್ಲೇ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಬ್ಯಾಂಕ್‌ ನೌಕರರ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು.

ಅನೇಕ ಪ್ರಯತ್ನಗಳ ಹೊರತಾಗಿಯೂ ಇಲ್ಲಿಯೇ ತನ್ನ ಕೇಂದ್ರ ಕಛೇರಿ ಇಟ್ಟುಕೊಂಡಿರುವ ಕಾರ್ಪೋರೇಶನ ಬ್ಯಾಂಕು ಇಲ್ಲಿನ ಅನೇಕ ನಿವಾಸಿಗಳಿಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸಿದೆ. ವಿಲೀನದ ನಂತರ ಅಂತಹ ಅವಕಾಶಗಳು ಮುಚ್ಚಿ ಉದ್ಯೋಗ ನಷ್ಟ ಉಂಟಾಗಲಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಆಗುವ ಒಂದು ದೊಡ್ಡ ನಷ್ಟ. ಬ್ಯಾಂಕ್ ವಿಲೀನೀಕರಣದಿಂದ ಭವಿಷ್ಯದ ಉದ್ಯೋಗದ ಅವಕಾಶಗಳು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿವೆ. ಬ್ಯಾಂಕಿಂಗ್ ಕ್ಷೇತ್ರವು ತುಂಬಾ ಉದ್ಯೋಗಾವಕಾಶ ಈ ಹಿಂದೆ ನೀಡುತ್ತಿತ್ತು. ಬ್ಯಾಂಕ್ ಶಾಖೆಗಳ ಮುಚ್ಚುಗಡೆ ಮತ್ತು ವಿಲೀನೀಕರಣ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಕ್ಕೆ ಮಾರಕವಾಗಲಿದೆ. ಈಗಾಗಲೇ ನಿರುದ್ಯೋಗದ ಬೇಗೆಯಿಂದ ಬಳಲುವ ಯುವಪೀಳಿಗೆಗೆ ಬ್ಯಾಂಕ್ ವಿಲೀನೀಕರಣ ಗಾಯದ ಮೇಲೆ ಎಳೆಯುವ ಬರೆಯಂತೆ ಎಂದು ಪದಾಧಿಕಾರಿಗಳು ಹೇಳಿದರು.

ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ನಷ್ಟದ ಆತಂಕ:
ಕಾರ್ಪೋರೇಶನ್ ಬ್ಯಾಂಕ್ ಕೇಂದ್ರ ಕಛೇರಿಯಿಂದಾಗಿ ಮಂಗಳೂರಿನ ಅನೇಕ ಸ್ವ-ಉದ್ಯಮಗಳು ಮತ್ತು ಅವುಗಳನ್ನು ನಂಬಿರುವ ಕೆಲಸಗಾರರು ಕೆಲಸ ಕಳೆದುಕೊಳ್ಳಲಿದ್ದಾರೆ. ಉದಾ: ಇಲ್ಲಿನ ದಿನಸಿ ಅಂಗಡಿಗಳು, ಹೂಗುಚ್ಚದ ಅಂಗಡಿ, ಪ್ರಿಂಟಿಂಗ್ ಪ್ರೆಸ್, ಅಧಿಕಾರಿಗಳ ಮನೆ ಕೆಲಸದವರು, ಅಧಿಕಾರಿಗಳ ಕಾರು ಚಾಲಕರು ಹೀಗೆ ಅನೇಕರು. ಅದಲ್ಲದೇ ಈಗಾಗಲೇ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗದಲ್ಲಿರುವ ಇಲ್ಲಿನ ಯುವ ಜನರು ಉದ್ಯೋಗ ವಂಚಿತರಾಗಲಿದ್ದಾರೆ. ಬ್ಯಾಂಕ ವಿಲೀನೀಕರಣದ ನಂತರ ಇಲ್ಲಿನ ಕೇಂದ್ರ ಕಚೇರಿ ಮುಚ್ಚಿ, ನೂರಾರು ಅಧಿಕಾರಿಗಳು ಸ್ಥಳಾಂತರವಾಗುವದರಿಂದ ಮಂಗಳೂರಿನ ಆದಾಯಕ್ಕೂ ಧಕ್ಕೆ ಆಗುವದು ನಿಶ್ಚಿತ ಎಂದು ಸಂಘಟನೆಗಳ ಪ್ರಮುಖರು ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನೀಕರಣದಿಂದ ಅನೇಕ ಬ್ಯಾಂಕ್ ಶಾಖೆಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಹವರ್ತಿ ಬ್ಯಾಂಕುಗಳ (ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹಿತ) ವಿಲೀನ ಪ್ರಕ್ರಿಯೆಯಲ್ಲಿ ದೇಶದ 6950 ಶಾಖೆಗಳನ್ನು ವಿಲೀನಗೊಳಿಸಿದೆ. ಗ್ರಾಹಕರು ತಮ್ಮ ಖಾತೆ ನಿರ್ವಹಣೆಗಾಗಿ ದೂರ ಪ್ರದೇಶದ ಶಾಖೆಗಳಿಗೆ ಹೋಗುವಂತಾಗಿದೆ. ನಿವೃತ್ತಿ ವೇತನ ಖಾತೆ ಹೊಂದಿರುವ ಅನೇಕ ಖಾತೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಂತರದ ಬ್ಯಾಂಕ್ ಆಪ್ ಬರೋಡದಲ್ಲಿ ವಿಲೀನ ಪ್ರಕ್ರಿಯೆಯಲ್ಲಿ 800 ರಿಂದ 900 ಬ್ಯಾಂಕ್ ಶಾಖೆಗಳ ಮುಚ್ಚುವಿಕೆಗೆ ಅಂದಾಜು ಮಾಡಲಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಆಯಾ ಪ್ರದೇಶದ ಅನುಕೂಲತೆಗಳಿಗಾಗಿ, ಅಲ್ಲಿನ ಪರಿಸರಕ್ಕೆ ತಕ್ಕಂತೆ ಈ ಬ್ಯಾಂಕುಗಳು ತಮ್ಮ ಸೇವೆಯನ್ನು ನೀಡಿ ಜನ ಮನ್ನಣೆಗೆ ಪಾತ್ರವಾಗಿವೆ. ರಾಷ್ಟ್ರೀಕರಣಕ್ಕೆ ಮೊದಲು ಕೇವಲ 8262 ಇದ್ದ ಬ್ಯಾಂಕ್ ಶಾಖೆಗಳು ರಾಷ್ಟ್ರೀಕರಣದ ಕೇವಲ 10 ವರ್ಷಗಳಲ್ಲಿ 30,303 ಆಗಿ ದೇಶದ ಉದ್ದಗಲಕ್ಕೂ ಹರಡಿವೆ. ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳ ಲಕ್ಷಕ್ಕೂ ಹೆಚ್ಚು ಶಾಖೆಗಳು ದೇಶದ ಮೂಲೆ ಮೂಲೆಗಳಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕಿಂಗ್ ಸೇವೆ ಸಿಗುವಂತೆ ಮಾಡಿವೆ.

ಸರಕಾರ ತನ್ನ ಜನ್ ಧನ್ ಯೋಜನೆ, ಪ್ರಧಾನಮಂತ್ರಿ ವಿಮಾ ಯೋಜನೆ, ಕೃಷಿಕರ ವಿಮಾ ಯೋಜನೆಯಂತಹ ಜನಪ್ರಿಯ ಯೋಜನೆಗಳ ಅನುಷ್ಠಾನಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳನ್ನು ಅವಲಂಬಿಸಿತ್ತು. ಸರ್ಕಾರಕ್ಕೆ ಆಶ್ಚರ್ಯವೆನಿಸುವಂತೆ 35.50 ಕೋಟಿ ಜನ್ ಧನ್ ಖಾತೆಗಳನ್ನು (ಅದರಲ್ಲಿ 21 ಕೋಟಿ ಸಣ್ಣ ನಗರ ಮತ್ತು ಹಳ್ಳಿಯ ಶಾಖೆಗಳಲ್ಲಿ) ತೆರೆಯಿತು. ಪ್ರಧಾನಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನದ ಕೆಂಪುಕೋಟೆಯ ಮೇಲಿನಿಂದ ಮಾಡಿದ ಭಾಷಣದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮುಕ್ತಕಂಠದಿಂದ ಹೊಗಳಿದರು. ತನ್ನಲ್ಲಿ ಖಾತೆ ಹೊಂದಿರದ ರೈತರಿಗೂ ಕೃಷಿ ವಿಮೆ ಪಡೆಯಲು ಸಹಾಯ ಮಾಡಿದ್ದು ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು. ಇವೆಲ್ಲ ಸಾಧ್ಯವಾಗಿದ್ದು ಸಾರ್ವಜನಿಕ ರಂಗದ ಬ್ಯಾಂಕುಗಳು ದೇಶದ ಮೂಲೆ ಮೂಲೆಗಳಲ್ಲೂ ಶಾಖೆಗಳನ್ನು ಹೊಂದಿರುವುದರಿಂದ. ವಿಲೀನದ ನಂತರ ಶಾಖೆಗಳು ಮುಚ್ಚಿದರೆ, ಭವಿಷ್ಯದ ಇಂತಹ ಯೋಜನೆಗಳು ಜನಸಾಮಾನ್ಯರಿಗೆ ತಲುಪುವದು ಕಷ್ಟ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಕರಾವಳಿ ಜಿಲ್ಲೆಯ ಹೆಮ್ಮೆಯ ಕಾರ್ಪೋರೇಶನ್ ಬ್ಯಾಂಕು ದೇಶದ ಆರ್ಥಿಕ ಸುಧೃಡತೆಗೆ ತನ್ನ ಕೊಡುಗೆ ನೀಡಿದೆ. ಅಂತಹ ಬ್ಯಾಂಕನ್ನು ವಿಲೀನೀಕರಣಗೊಳಿಸಿ ಇನ್ನಿಲ್ಲದಂತೆ ಮಾಡಹೊರಟಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಪ್ರಬಲ ಜನಾಂದೋಲನದ ಅಗತ್ಯವಿದೆ. ಇದಕ್ಕೆ ಕರಾವಳಿಯ ಎಲ್ಲ ಜನರೂ ಒಂದಾಗಿ ನಮ್ಮ ಹಿರಿಯರು ತಮ್ಮ ಶ್ರಮದಿಂದ ಹುಟ್ಟುಹಾಕಿ ಬೆಳೆಸಿದ ತುಳು ನಾಡಿನ ಈ ಬ್ಯಾಂಕನ್ನು ಉಳಿಸಲು ಒಂದಾಗಬೇಕಿದೆ ಎಂದು ಪದಾಧಿಕಾರಿಗಳು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಯುನೈಟೆಡ್ ಫೋರಂ ಆಫ್ ಕಾರ್ಪೊರೇಶನ್ ಬ್ಯಾಂಕ್ ಯೂನಿಯನ್ಸ್‌ (ಯುಎಫ್‌ಸಿಬಿಯು) ಸಂಚಾಲಕರಾದ ವಿನ್ಸೆಂಟ್ ಡಿ’ಸೋಜ, ಮತ್ತು ಇತರ ಪದಾಧಿಕಾರಿಗಳಾದ ಸತೀಶ ಶೆಟ್ಟಿ, ಸುಧೀಂದ್ರ, ಕೆ.ಬಿ. ಪ್ರಸಾದ, ಬಿ ಶ್ರೀಧರ, ರಘುರಾಮ ಬಲ್ಲಾಳ ಮತ್ತು ಸತೀಶ ಅಗ್ಗಿತಾಯ ಹಾಜರಿದ್ದರು.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಶ್ರೀ ಸೋದೆ ವಾದಿರಾಜ ಮಠದಲ್ಲಿ ಭೂವರಾಹ ಜಯಂತೀ

Upayuktha

ಮಂಗಳೂರು ನಗರದಲ್ಲಿ ಇಂದು ನೀರು ವಿತರಣೆ ಸಂಪೂರ್ಣ ಸ್ಥಗಿತ

Upayuktha

ಕೊರೊನಾ ಹಾವಳಿ ಹಿನ್ನೆಲೆ: ಗೃಹ ರಕ್ಷಕ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ

Upayuktha