ಆರೋಗ್ಯ ಪ್ರಮುಖ ಲೇಖನಗಳು

ಕೋವಿಡ್-19 ಮತ್ತು ಮುಖಕವಚ (ಮಾಸ್ಕ್‌)

ನಾವು ಉಸಿರಾಡುವಾಗ ಮೂಗಿನ ಹೊಳ್ಳೆಗಳ ಮುಖಾಂತರ ಒಳಗೆ ಎಳೆದುಕೊಳ್ಳುವ ಗಾಳಿಯ ಜೊತೆಗೆ ಇತರ ರೋಗಾಣುಗಳು ದೇಹದ ಒಳಗೆ ಸೇರದಂತೆ ತಡೆಯುವ ರಕ್ಷಣಾ ವ್ಯವಸ್ಥೆಯನ್ನು ಮುಖಕವಚ ಅಥವಾ ಮುಖ ಗುರಾಣಿ ಎನ್ನುತ್ತಾರೆ. ಇದರಲ್ಲಿ ಹಲವಾರು ಬಗೆಯ ಮುಖಕವಚಗಳಿದ್ದು, ಯಾವುದರಲ್ಲೂ ಪರಿಪೂರ್ಣ ರಕ್ಷಣೆ ದೊರಕುವುದಿಲ್ಲ ಎಂದು ತಿಳಿದು ಬಂದಿದೆ. ಅತ್ಯಂತ ಸುರಕ್ಷಿತವಾದ ಓ-95 ಮುಖಕವಚ ಅಥವಾ ರೆಸ್ಪಿರೇಟರ್ ಎನ್ನುವುದು ಮಾತ್ರ ಬಳಸಲು ಯೋಗ್ಯ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ವೈದ್ಯರು ಬಳಸುವ ಮುಖಕವಚವನ್ನು 3 ಪದರ ಸರ್ಜಿಕಲ್ ಮಾಸ್ಕ್ ಎನ್ನಲಾಗುತ್ತದೆ. ಇದರಿಂದ ವೈರಾಣುಗಳ ವಿರುದ್ಧ ಪರಿಪೂರ್ಣ ರಕ್ಷಣೆ ಸಿಗುವುದಿಲ್ಲ. ಜನಸಾಮಾನ್ಯರು ಕೂಡಾ ಇದೇ ರೀತಿಯ ಮುಖಕವಚ ಬಳಸುತ್ತಿದ್ದಾರೆ. ತಮಗೆ ರಕ್ಷಣೆ ಸಿಗುತ್ತಿದೆ ಎಂಬ ಭಾವನೆಯಿಂದ ಅವರು ಬದುಕುತ್ತಿದ್ದಾರೆ.

ರೋಗಿಗಳು ಮುಖಕವಚ ಯಾಕಾಗಿ ಧರಿಸಬೇಕು?
ಒಬ್ಬ ವ್ಯಕ್ತಿ ಒಮ್ಮೆ ಸೀನಿದಾಗ ಅಥವಾ ಕೆಮ್ಮಿದಾಗ ಏನಿಲ್ಲವೆಂದರೂ ಸುಮಾರು 3000ಕ್ಕಿಂತಲೂ ಹೆಚ್ಚು ಕಿರು ಹನಿಗಳು ಸೃಷ್ಟಿಯಾಗುತ್ತದೆ. ಹೀಗೆ ಸೀನುವಾಗ ಅಥವಾ ಕೆಮ್ಮಿದಾಗ ಮುಖಕವಚ ಬಳಸಿಲ್ಲವಾದರೆ ಅಥವಾ ಕೈಯನ್ನು ಅಡ್ಡಲಾಗಿ ಹಿಡಿದಿಲ್ಲವಾದರೆ ಈ ಎಲ್ಲಾ ಕಿರುಹನಿಗಳು ಗಾಳಿಯಲ್ಲಿ ವ್ಯಕ್ತಿಯ ಸುತ್ತಲೂ ಸೇರಿಕೊಳ್ಳುತ್ತದೆ. ಈ ಕಿರುಹನಿಗಳು ಸುಮಾರು 5 ರಿಂದ 8 ಮೀಟರ್‌ಗಳಷ್ಟು ದೂರ ಚಲಿಸಬಲ್ಲದು ಮತ್ತು ಈ ಕಿರು ಹನಿಗಳಲ್ಲಿ ಲಕ್ಷಾಂತರ ವೈರಾಣು ಮತ್ತು ಬ್ಯಾಕ್ಟೀರಿಯಾ ಇರುತ್ತದೆ. ಈ ಕಿರುಹನಿಗಳು ನೆಲಕ್ಕೆ ಬಂದು ಸೇರಿಕೊಳ್ಳಲು ಏನಿಲ್ಲವೆಂದರೂ 5ರಿಂದ 6 ನಿಮಿಷಗಳು ತಗಲಬಹುದು ಒಬ್ಬ ವ್ಯಕ್ತಿ ಸೀನಿದಾಗ ಅವನ ಪಕ್ಕದಲ್ಲಿರುವ ಇತರ ವ್ಯಕ್ತಿಗಳಿಗೆ ಬಹಳ ಸುಲಭವಾಗಿ ವೈರಾಣು ಹರಡುವ ಸಾಧ್ಯತೆ ಇರುತ್ತದೆ. ಆದರೆ ಆ ವ್ಯಕ್ತಿ ಸಾಮಾನ್ಯ ಮುಖಕವಚ ಧರಿಸಿದ್ದರೆ ನೇರವಾಗಿ ಆತ ವೈರಾಣುಗಳನ್ನು ತನ್ನ ದೇಹದೊಳಗೆ ಉಸಿರಿನ ಮುಖಾಂತರ ಎಳೆದುಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಕಾರಣದಿಂದಲೇ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲರೂ ಮುಖಕವಚ ಧರಿಸುವುದು ಸೂಕ್ತ ಎನ್ನಲಾಗಿದೆ.

ಇನ್ನು ನಾವು ಮುಖಕವಚ ಧರಿಸಿರುವಾಗ ನೇರವಾಗಿ ನಮ್ಮ ಬಾಯಿ ಮತ್ತು ಮೂಗನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಎಲ್ಲಾ ಸೋಂಕಿತ ವ್ಯಕ್ತಿಗಳು ಕಡ್ಡಾಯವಾಗಿ ಮುಖಕವಚ ಧರಿಸಲೇ ಬೇಕು. ಇಲ್ಲವಾದಲ್ಲಿ ಸೋಂಕಿತ ವ್ಯಕ್ತಿಗಳು ಮುಖ, ಮೂಗು, ಬಾಯಿ ಸ್ಪರ್ಶಿಸಿ ಎಲ್ಲೆಂದರಲ್ಲಿ ಮುಟ್ಟಿದಾಗ ಅವರು ಎಲ್ಲಾ ಕಡೆಗೆ ವೈರಾಣುವನ್ನು ತಮಗರಿವಿಲ್ಲದಂತೆ ಪಸರಿಸುತ್ತಾರೆ. ಈ ಕಾರಣದಿಂದ ಎಲ್ಲಾ ಸೋಂಕಿತ ವ್ಯಕ್ತಿಗಳು ಮುಖಕವಚ ಧರಿಸುವುದು ಕಡ್ಡಾಯ ಎಂದು ಸಾಂಕ್ರಾಮಿಕ ತಜ್ಞರು ಒಮ್ಮತದಿಂದ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯವಂತ ವ್ಯಕ್ತಿಗಳು ಮುಖಕವಚ ಯಾಕೆ ಧರಿಸಬೇಕು?
ಆರೋಗ್ಯವಂತ ವ್ಯಕ್ತಿಗಳು ಮುಖಕವಚ ಧರಿಸುವುದರಿಂದ ಸೋಂಕಿತ ವ್ಯಕ್ತಿಗಳಿಂದ ಕಿರುಹನಿಗಳು ನೇರವಾಗಿ ಅವರ ದೇಹದ ಒಳಗೆ ಸೇರುವುದನ್ನು ತಪ್ಪಿಸಬಹುದು. ಇದರಿಂದ 100 ಶೇಕಡಾ ರಕ್ಷಣೆ ದೊರೆಯದು. ಯಾಕೆಂದರೆ ಜನಸಾಮಾನ್ಯರು ಧರಿಸುವ ಮುಖಕವಚ ಪರಿಪೂರ್ಣವಾಗಿ ಬಾಯಿ, ಮೂಗು ಮತ್ತು ಮುಖವನ್ನು ಮುಚ್ಚುವುದಿಲ್ಲ. ಅವುಗಳ ನಡುವಿನ ಸಂದಿನಿಂದ ವೈರಾಣು ಒಳಹೋಗುವ ಸಾಧ್ಯತೆಯೂ ಇದೆ ಮತ್ತು 3 ಕವಚಗಳ ಸಾಮಾನ್ಯ ಮುಖಕವಚ ಮುಖಾಂತರ ವೈರಾಣು ಹಾದು ಹೋಗುವ ಎಲ್ಲಾ ಸಾಧÀ್ಯತೆ ಇದೆ. ಆದರೆ ಅದರ ಪ್ರಮಾಣ ಬಹಳ ಕಡಿಮೆ ಇರುತ್ತದೆ.

ಮುಖಕವಚ ಹೇಗೆ ಧರಿಸಬೇಕು?
1) ಮುಖಕವಚ ಧರಿಸುವ ಮೊದಲು ನಿಮ್ಮ ಕೈಯನ್ನು ಆಲ್ಕೋಹಾಲ್ ದ್ರಾವಣ ಅಥವಾ ಸೋಪಿನ ದ್ರಾವಣದಿಂದ ಚೆನ್ನಾಗಿ ತೊಳೆಯಿರಿ.
2) ನೀವು ಮುಖಕವಚ ಧರಿಸಿದಾಗ ಅದು ನಿಮ್ಮ ಮೂಗಿನ ಅರ್ಧಭಾಗ ಮತ್ತು ಬಾಯಿ ಮತ್ತು ಕೆಳದವಡೆಯ ಮುಂಭಾಗವನ್ನು ಪೂರ್ತಿಯಾಗಿ ಮುಚ್ಚಿರಬೇಕು. ಮುಖಕವಚ ಮತ್ತು ಮುಖದ ನಡುವೆ ಯಾವುದೇ ಅಂತರ ಇರಬಾರದು. ಗಾಳಿ ಹೋದಲ್ಲಿ, ಗಾಳಿಯ ಜೊತೆಗೆ ವೈರಾಣು ಒಳ ಸೇರುವ ಸಾಧ್ಯತೆ ಇರುತ್ತದೆ. ಬಿಗಿಯಾಗಿ ಮುಖಕವಚ ಧರಿಸಬೇಕು. ಸಡಿಲವಾದ ಮುಖಕವಚ ಧರಿಸಿದಲ್ಲಿ ಅಪೇಕ್ಷಿಸಿದ ರಕ್ಷಣೆ ಸಿಗಲಾರದು.
3) ನೀವು ಧರಿಸಿದ ಮುಖಕವಚ ಒದ್ದೆಯಾದಲ್ಲಿ ತಕ್ಷಣವೇ ಬದಲಿಸಿ. ಒಮ್ಮೆ ಬಳಸುವ ಮುಖಕವಚವನ್ನು ಮಗದೊಮ್ಮೆ ಬಳಸಲೇಬಾರದು.
4) ಮುಖಕವಚ ತೆಗೆಯುವಾಗ ಮುಂಭಾಗದ ಭಾಗವನ್ನು ಸ್ಪರ್ಶಿಸಲೇಬಾರದು. ಹಿಂಭಾಗದ ಎಲಾಸ್ಟಿಕ್ ಬಳಸಿ ಮುಖಕವಚ ತೆಗೆದು ನೇರವಾಗಿ ಮುಚ್ಚಿದ ಡಸ್ಟ್‌ಬಿನ್‍ಗೆ ಒಳಗೆ ವಿಸರ್ಜಿಸಬೇಕು. ಮುಖಕವಚ ತೆಗೆದ ಬಳಿಕವೂ ಕೈಯನ್ನು ಸೋಪಿನ ದ್ರಾವಣದಿಂದ ತೊಳೆಯತಕ್ಕದ್ದು.
5) ಮುಖಕವಚ ಬಳಸುವವರಿಗೆಲ್ಲ, ಮುಖಕವಚ ಧರಿಸುವ ಮತ್ತು ವಿಸರ್ಜಿಸುವ ಬಗ್ಗೆ ಜ್ಞಾನ ಹೊಂದಿರಬೇಕು. ಮುಖಕವಚವನ್ನು ಮಾತನಾಡುವಾಗ ಪದೇಪದೇ ಕುತ್ತಿಗೆಯ ಭಾಗಕ್ಕೆ ಸರಿಸುವುದು ಅತ್ಯಂತ ಅಪಾಯಕಾರಿ. ಮುಖಕವಚವನ್ನು ಯಾವುದೇ ಕಾರಣಕ್ಕೂ ಕುತ್ತಿಗೆಯ ಭಾಗಕ್ಕೆ ಸರಿಸಲೇ ಬಾರದು. ಕೆಮ್ಮು ಅಥವಾ ಅಕ್ಷಿ ಬರುತ್ತದೆ ಎಂದು ಮುಖಕವಚ ತೆಗೆದು ಸೀನುವುದು ಅಥವಾ ಕೆಮ್ಮುವುದು ಮೂರ್ಖತನದ ಪರಮಾವಧಿ. ಮಉಖಕವಚ ಧರಿಸಿರುವಾಗ ಪ್ರತಿಗಂಟೆಗೊಮ್ಮೆ ಕೈಗಳನ್ನು ಸೋಪಿನ ದ್ರಾವಣದಿಂದ ತೊಳೆಯುವುದು ಕೂಡಾ ಅತೀ ಅಗತ್ಯವಾಗಿರುತ್ತದೆ.

ಮುಖಕವಚ ಧರಿಸಿದಾಗ ಹೇಗೆ ವರ್ತಿಸಬೇಕು?
1) ಒಮ್ಮೆ ಧರಿಸಿದ ಮುಖಕವಚವನ್ನು ಪದೇಪದೇ ತೆಗೆಯುವುದು ಮತ್ತು ಹಾಕುವುದು ಮಾಡಬಾರದು.
2) ಒಮ್ಮೆ ಧರಿಸಿದ ಮುಖಕವಚದ ಹೊರಭಾಗವನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಬಾರದು. ಹೀಗೆ ಮಾಡಿದಲ್ಲಿ ಕೈಗಳಿಗೆ ವೈರಾಣು ಸೇರಿಕೊಂಡು ಇತರರಿಗೆ ಹರಡಬಹುದಾಗಿದೆ.
3) ಮುಖಕವಚ ಬಣ್ಣ ಬದಲಾಗಿದೆ ಅಥವಾ ಕೊಳೆಯಾಗಿದೆ ಎಂದು ಉಲ್ಟಾ ಮಾಡಿ ಧರಿಸುವುದು ಅತ್ಯಂತ ಅಪಾಯಕಾರಿ. ಹೆಚ್ಚಿನ ಎಲ್ಲಾ ಮುಖಕವಚಗಳು ಒಮ್ಮೆ ಮಾತ್ರ ಬಳಸಿ ಎಸೆಯುವ ಮುಖಕವಚಗಳಾಗಿರುತ್ತದೆ. ಬಟ್ಟೆಯಿಂದ ಮಾಡಿದ ಮುಖಕವಚವಾಗಿದ್ದಲ್ಲಿ ಒಮ್ಮೆ ಬಳಸಿದ ಬಳಿಕ ಚೆನ್ನಾಗಿ ಸೋಪಿನ ದ್ರಾವಣದಲ್ಲಿ ತೊಳೆದು ಒಣಗಿಸಿ, ಇಸ್ತ್ರಿ ಮಾಡಿ ಮತ್ತೆ ಬಳಸಬಹುದಾಗಿದೆ. ಆದರೆ ಇತರ ಸಾಮಾನ್ಯ 3 ಕವಚದ ಮುಖಕವಚನ್ನು ಒಮ್ಮೆ ಬಳಸಿದ ಬಳಿಕ ಎಸೆಯುವುದೇ ಸೂಕ್ತ.
4) ಓ-95 ಅಥವಾ ರೆಸ್ಪಿರೇಟರ್ ಎನ್ನುವುದು ಅತ್ಯಂತ ಸುರಕ್ಷಿತವಾದ ಮುಖಕವಚವಾಗಿರುತ್ತದೆ. ದುಬಾರಿಯಾದರೂ ವೈರಾಣುಗಳಿಂದ ರಕ್ಷಣೆ ಸಿಗುತ್ತದೆ. ಒಮ್ಮೆ ಧರಿಸಿದರೆ 6 ರಿಂದ 8 ಗಂಟೆಗಳ ಕಾಲ ಧರಿಸಬಹುದು. ಮಗದೊಮ್ಮೆ ಬಳಸುವುದು ಸೂಕ್ತವಲ್ಲ. ಓ-95 ರೆಸ್ಪಿರೇಟರ್ ಲಭ್ಯತೆಯ ಕೊರತೆ ಇರುವುದರಿಂದ ಶುಚಿಗೊಳಿಸಿ ಒಂದೆರಡು ಬಾರಿ ಬಳಸಲಾಗುತ್ತಿದೆ. ಈ ಮುಖಕವಚದಿಂದ ಪರಿಪೂರ್ಣವಾದ ಸುರಕ್ಷತೆ ಸಿಗುತ್ತದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಈ ಮುಖಕವಚವನ್ನು ಸೋಂಕಿತ ರೋಗಿಗಳನ್ನು ಚಿಕಿತ್ಸೆ ನೀಡುವ ವೈದ್ಯರು ಮತ್ತು ದಾದಿಯರು ಬಳಸುತ್ತಾರೆ. ಶೇಕಡಾ 95 ರಷ್ಟು ವೈರಾಣುವನ್ನು ಇದು ಸೂಸುವ ಕಾರಣದಿಂದ ಓ-95 ಎಂಬ ಅನ್ವರ್ಥನಾಮ ಇದಕ್ಕೆ ಬಂದಿದೆ.
5) ಮುಖಕವಚ ಧರಿಸುವುದು ಫ್ಯಾಷನ್‍ಗೆ ಅಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು. ಒಮ್ಮೆ ಧರಿಸಿದ ಮುಖಕವಚವನ್ನು ಎಲ್ಲೆಂದರಲ್ಲಿ ನೇತು ಹಾಕಿ ಮಗದೊಮ್ಮೆ ಬಳಸುವುದರಿಂದ ರೋಗವನ್ನು ಎಲ್ಲೆಡೆ ಹರಡಿದಂತಾಗುತ್ತದೆ. ಇದರ ಬದಲಾಗಿ ಮುಖಕವಚ ಧರಿಸದಿರುವುದೇ ಉತ್ತಮ.

ಕೊನೆಮಾತು:
ಸಾಂಕ್ರಾಮಿಕ ರೋಗ ಸಮುದಾಯದಲ್ಲಿ ಹರಡುತ್ತಿರುವಾಗ ಪ್ರತಿಯೊಬ್ಬರೂ ಸಾಮಾನ್ಯ ಮುಖಕವಚ ಧರಿಸುವುದು ಸೂಕ್ತ ಎಂಬುದು ಸಾಂಕ್ರಾಮಿಕ ರೋಗ ತಜ್ಞರ ಒಕ್ಕೊರಲಿನ ಅಭಿಮತವಾಗಿರುತ್ತದೆ. ಇದು ಕಿರುಹನಿಗಳ ಮುಖಾಂತರ ಹಲವಾರು ವೈರಾಣು ಮತ್ತು ಬ್ಯಾಕ್ಟೀರಿಯಾ ಸೋಂಕು ತಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ರೋಗ ಹರಡುವುದಕ್ಕಿಂತಲೂ ತಮ್ಮ ರಕ್ಷಣೆ ಕೂಡಾ ಮಾಡಬೇಕಿರುವುದರಿಂದ ಹೆಚ್ಚು ಸುರಕ್ಷಿತವಾದ ಓ-95 ರೆಸ್ಪಿರೇಟರ್ ಬಳಸುವುದು ಸೂಕ್ತ ಎನ್ನಲಾಗಿದೆ. ಜನಸಾಮಾನ್ಯರು ಓ-95 ಮಾಸ್ಕ್ ಲಭ್ಯವಿದ್ದರೆ ಬಳಸಬಹುದು. ಆದರೆ ವೈದ್ಯರಿಗೆ ಮತ್ತು ದಾದಿಯರಿಗೆ ಮೊದಲ ಆದ್ಯತೆ ನೀಡುವುದು ಸೂಕ್ತ ಎನ್ನಲಾಗಿದೆ. ಇನ್ನು ಮುಖಕವಚ ಧರಿಸಿದವರಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ಹುಚ್ಚು ಕಲ್ಪನೆಯಿಂದ ಮುಖಕವಚ ಧರಿಸಿ ಎಲ್ಲೆಂದರಲ್ಲಿ ತಿರುಗಾಡುವುದು ಮತ್ತು ಯುದ್ಧಕ್ಕೆ ಹೋಗುವ ಯೋಧರಂತೆ ಪೋಸು ಕೊಡುವುದು ಅತ್ಯಂತ ಅಪಾಯಕಾರಿ.

ಮುಖಕವಚ ಧರಿಸುವುದಕ್ಕಿಂತ ಧರಿಸಿದ ಬಳಿಕ ಹೇಗೆ ಸಭ್ಯರಂತೆ ವರ್ತಿಸಿದ್ದೇವೆ ಮತ್ತು ಪಾಲಿಸಬೇಕಾದ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದೇವೆ ಎಂಬುದರ ಮೇಲೆ ನಿಮ್ಮ ಸುರಕ್ಷತೆ ಅವಲಂಬಿಸಿದೆ. ಮುಖಕವಚ ಧರಿಸಿದ ಎಲ್ಲರಿಗೆ ರೋಗ ಬರಬಾರದೆಂದಿಲ್ಲ. ಅದೇ ರೀತಿ ಮುಖಕವಚ ಧರಿಸದ ಎಲ್ಲರಿಗೂ ರೋಗ ಬರುತ್ತದೆ ಎಂಬುದು ಕೂಡಾ ಸತ್ಯಕ್ಕೆ ದೂರವಾದ ಮಾತು. ಒಟ್ಟಿನಲ್ಲಿ ನಮ್ಮ ರಕ್ಷಣೆಗೆ ನಮ್ಮವರ ರಕ್ಷಣೆಗೆ, ಹಾಗೂ ಸಮುದಾಯದ ರಕ್ಷಣೆಗೆ ಬೇಕಾಗಿ ಸಾಂಕ್ರಾಮಿಕ ರೋಗ ತೀವ್ರವಾಗಿ ಹರಡುವ ಸಂದರ್ಭಗಳಲ್ಲಿ ಮುಖಕವಚ ಧರಿಸುವುದು ಸೂಕ್ತ ಎಂಬುದು ಸಾಂಕ್ರಾಮಿಕ ರೋಗ ತಜ್ಞರ ಅಭಿಮತವಾಗಿದೆ.

– ಡಾ|| ಮುರಲೀ ಮೋಹನ ಚೂಂತಾರು

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೋವಿಡ್‌ 19 ಅಪ್ಡೇಟ್ಸ್‌: ರಾಜ್ಯದಲ್ಲಿಂದು 149 ಹೊಸ ಕೊರೊನಾ ಕೇಸ್

Upayuktha

ಪೌರತ್ವ ಕಾಯ್ದೆ ವಿರುದ್ಧ ಹಿಂಸೆಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳ ಬಂಧನ, ಬಿಡುಗಡೆ

Upayuktha

ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ವ್ಯಾಪಕ ವ್ಯವಸ್ಥೆ: ಖಗೋಳಾಸಕ್ತರಿಗೆ ಅಪೂರ್ವ ಅವಕಾಶ

Upayuktha