ಲೇಖನಗಳು ವಾಣಿಜ್ಯ

ಕೊರೊನಾ ನಂತರದ ಆರ್ಥಿಕತೆ: ವಲಸೆ ಕಾರ್ಮಿಕರ ಪುನಶ್ಚೇತನಕ್ಕೆ ಕಾಯಕಲ್ಪ ಆಗಬೇಕು

ಕೋವಿಡ್ 19 ಹೊಡೆತದ ಅತಂತ್ರತೆ ನಿವಾರಣೆ ಹೇಗೆ…?

(ಚಿತ್ರ ಕೃಪೆ: ಸ್ವರ್ಣ ಗೃಹ)

ಪ್ರಸ್ತಾವನೆ
ಕೋವಿಡ್-19ರ ಲಾಕ್ ಡೌನ್ ಪರಿಣಾವಾಗಿ ಘಟಿಸಿದ ಮಹಾ ಮರುವಲಸೆ ಆತಂಕ, ಅಭದ್ರತೆಗಳಿಗೆ ನಾಂದಿಯಾಗಿ ಗ್ರಾಮೀಣ ಆರ್ಥಿಕತೆಯಲ್ಲಿ ಬಂಡವಾಳ ಸಂಚಯನದ ಕೊರತೆ, ನಗರಗಳಲ್ಲಿ ಶ್ರಮದ ಕೊರತೆಯಿಂದಾಗಿ ಬೆಳವಣಿಗೆಗೆ ಹೊಡೆತ ಬೀಳಲಿದ್ದು, ನಗರ-ಹಳ್ಳಿಗಳ ಆರ್ಥಿಕ ಅಸಮಾನತೆ ಹೆಚ್ಚಲಿದೆ. ಕಾರ್ಮಿಕರು ಸಂಪತ್ತಿನ ಹಾಗೂ ಅಭಿವೃದ್ಧಿಯ ಮೂಲ ಎನ್ನುವ ತತ್ವವನ್ನು ಅರ್ಥಮಾಡಿಕೊಂಡು ಅವರಿಗೆ ಗೌರವದ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹ್ಯ ಅಭಿವೃದ್ಧಿಯನ್ನು ಸಾಧಿಸಬಹುದು.

ಹಸಿವಿನ ತೂಗುಗತ್ತಿ
ವಿಶ್ವದ 10 ಕೋಟಿಗಿಂತಲೂ ಹೆಚ್ಚು ಜನ ಹಸಿವಿನಿಂದ ಬಳಲುತ್ತಿದ್ದರು. ಈಗ ಕೊರೋನಾ ಸಂಕಷ್ಟದಿಂದ ಜಾಗತಿಕ ಹಸಿವಿನ ಪ್ರಮಾಣ ಈ ವರ್ಷ ಹೆಚ್ಚುವರಿಯಾಗಿ 17 ಕೋಟಿಗೆ ಏರುವ ಆಪಾಯ ಇದೆ. ನಿತ್ಯ ದುಡಿಮೆಯ ಮೂಲಗಳೇ ಬತ್ತಿ ಹೋಗಿರುವುದರಿಂದ ಜಾಗತಿಕವಾಗಿ 27 ಕೋಟಿ ಜನ ತೀವೃ ಪ್ರಮಾಣದ ಹಸಿವಿನಿಂದ ಬಳಲಿದ್ದಾರೆ ಎಂದು ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇದರಲ್ಲಿ ಹೆಚ್ಚಿನವರು ಸಾಮಾಜಿಕ ಭದ್ರತೆಯಿಲ್ಲದ ದಿನಗೂಲಿ ಹಾಗೂ ವಲಸೆ ಕಾರ್ಮಿಕರು ಎನ್ನುವುದು ಇನ್ನೂ ಆಘಾತಕಾರಿ ಅಂಶ.

ಹಿನ್ನೆಲೆ
ಗ್ರಾಮೀಣ-ನಗರ ಮತ್ತು ಅಂತರಾಜ್ಯ ಅಭಿವೃದ್ಧಿ ಅಂತರವು ಹೆಚ್ಚು ಜನಸಂಖ್ಯೆಯ ರಾಜ್ಯ/ ಪ್ರದೇಶಗಳಿಂದ ಜನರನ್ನು ನಗರ ಪ್ರದೇಶಗಳಿಗೆ, ಹೆಚ್ಚು ಕೈಗಾರಿಕೀಕರಣಗೊಂಡ, ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವಂತೆ ಪ್ರೇರೇಪಿಸಿತು. ಹೇಗೆ ವಸ್ತುಗಳು ಕಡಿಮೆ ಬೆಲೆ ಇರುವಲ್ಲಿಂದ ಹೆಚ್ಚು ಬೆಲೆ ಇರುವಲ್ಲಿಗೆ ಚಲಿಸಿ ಬೆಲೆಗಳಲ್ಲಿ ಸ್ಮತೆಯನ್ನು ತರುತ್ತದೆಯೋ ಅಂತೆಯೇ ಕೆಲಸಗಾರರು ಕಡಿಮೆ ಕೂಲಿ ಇರುವ ಪ್ರದೇಶಗಳಿಂದ ಹೆಚ್ಚು ಕೂಲಿ ಇರುವ ಪ್ರದೇಶಗಳಿಗೆ ಸಹಜವಾಗಿ ವಲಸೆ ಹೋಗುತ್ತಾರೆ. ಹಳ್ಳಿಗಳಿಂದ ಹೆಚ್ಚುವರಿ ಕೆಲಸಗಾರರ ವಲಸೆಯಿಂದಾಗಿ, ಕೂಲಿಕಾರ ಸಂಖ್ಯೆ ಕಡಿಮೆಯಾಗಿ ಸಹಜವಾಗಿ ಕಡಿಮೆ ಕೂಲಿ ಇರುವಲ್ಲಿ ಕೂಲಿ ದರ ಹೆಚ್ಚಿ, ಕೂಲಿದಾರರು ಕೊರತೆಯಿರುವಲ್ಲಿ ವಲಸೆ ಕಾರ್ಮಿಕರ ಆಗಮನದಿಂದಾಗಿ ಕೂಲಿ ದರ ಕಡಿಮೆಯಾಗಿ ಕೂಲಿ ದರದಲ್ಲಿಯೂ ಸಮಾನತೆ ಬರುತ್ತದೆ. ಇದರಿಂದಾಗಿ ದುಡಿಮೆದಾರರಿಗೆ ಹಾಗೂ ದುಡಿಸುವವರಿಗೆ ಲಾಭವಾಗುತ್ತದೆ. ಹಾಗಾಗಿ ಅರ್ಥಶಾಸ್ತ್ರದಲ್ಲಿ ವಸ್ತುಗಳ ಹಾಗೂ ಸೇವೆಗಳ ಚಲನೆಯನ್ನು ಧನಾತ್ಮಕ ಮೊತ್ತದ ಆಟ ಎಂದು ಪರಿಗಣಿಸಲಾಗುತ್ತದೆ.

ಬಾಣಲೆಯಿಂದ ಬೆಂಕಿಗೆ
ಕೋವಿಡ್-19 ದೇಶೀಯ ಹಾಗೂ ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೆ ಸುನಾಮಿ ರೀತಿಯ ಬಿಕ್ಕಟ್ಟುಗಳನ್ನು ಉಂಟುಮಾಡಿದೆ. ನಗರಗಳಿಗೆ ವಲಸೆ ಬಂದು, ನಗರಗಳ ಬೆಳವಣಿಗೆಯಲ್ಲಿ ಪಾಲುದಾರರಾಗಿ, ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ಗ್ರಾಮೀಣ ಜನರು ಈಗ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರ ದುಡಿಮೆಯ ಅವಕಾಶವನ್ನು ಕಿತ್ತುಕೊಂಡು ಅಸಹಾಯಕರನ್ನಾಗಿಸಿದೆ. ಕಟ್ಟಡ ಕಾರ್ಮಿಕರು, ಹೊಟೇಲ್ ಉದ್ಯೋಗಿಗಳು, ಗಾರ್ಮೆಂಟ್ ಮತ್ತಿತರ ಕಿರು ಉದ್ಯಮಗಳ ದಿನಗೂಲಿ ನೌಕರರು ಕೊರೋನಾ ಆತಂಕದಿಂದಾಗಿ ತಮ್ಮ ದಿನನಿತ್ಯದ ಕಾಯಕದ ಅವಕಾಶವನ್ನು ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ವಾಪಾಸಾಗುತ್ತಿದ್ದಾರೆ. ಕೈಯಲ್ಲಿ ಕೆಲಸ ಮತ್ತು ಕಾಸು ಎರಡೂ ಇಲ್ಲದೆ ಹೈರಾಣವಾದ ಈ ಕಾರ್ಮಿಕರು ಅರ್ಥಾತ್ ದುಡಿಯುವ ವರ್ಗ ಮುಂದೇನು ಅನ್ನುವ ಅನಿಶ್ಚಿತತೆಯಲ್ಲಿ ಮುಳುಗಿದ್ದಾರೆ.

ಮೇ 2ರಿಂದ ಮೇ 7 ರವರೆಗೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಒಟ್ಟು 3647 ಬಸುಗಳಲ್ಲಿ ರಾಜ್ಯದ 1.09 ಲಕ್ಷ ವಲಸೆ ಕಾರ್ಮಿಕರು ತಮ್ಮ ಊರು ತಲುಪಿದ್ದಾರೆ. ಇನ್ನೊಂದೆಡೆ ಬಿಹಾರ, ಒಡಿಶಾ, ಜಾರ್ಖಾಂಡ್, ರಾಜಸ್ತಾನ, ಉತ್ತರ ಪ್ರದೇಶದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ. ಶ್ರಮ ಆದಾಯದ ಮೂಲ
ಆರ್ಥಿಕತೆಗೆ ಬೆನ್ನೆಲುಬಾಗಿದ್ದ ಕಾರ್ಮಿಕರ ಬದುಕು ಬೀದಿಗೆ ಬಿದ್ದ ಪರಿಣಾಮವಾಗಿ ಆತಂಕಗೊಂಡು ನಲುಗಿ ತಮ್ಮ ಸ್ವಂತ ಊರುಗಳಿಗೆ ಮುಖಮಾಡಿದ್ದಾರೆ. ಪರಿಣಾಮ ಕಾರ್ಮಿಕರ ಅಲಭ್ಯತೆ ಎದುರಾಗಿ ನಗರಗಳ ಆರ್ಥಿಕತೆಗೆ ಬಹು ದೊಡ್ಡ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಪಟ್ಟಣಗಳ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ ನಗರಗಳಿಗೆ ಬಂದು ಸಣ್ಣ ಶೆಡ್ಡುಗಳಲ್ಲಿ, ಟೆಂಟುಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು ಅತ್ತ ಹಳ್ಳಿ ಚಟುವಟಿಕೆಗಳಿಗೆ ಒಗ್ಗಿಕೊಳ್ಳಲಾಗದೆ ಇತ್ತ ಪಟ್ಟಣಗಳಿಗೆ ತೆರಳಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ವಲಸೆ ಕಾರ್ಮಿಕರ ನಿರ್ಗಮನ ಪ್ರಮುಖ ನಗರಗಳ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ, ಕೈಗಾರಿಕೆ ಹಾಗೂ ಇತರ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲು ಆರಂಭಿಸಿದೆ. ಖ್ಯಾತ ರೇಟಿಂಗ್ ಎಜೆನ್ಸಿ ಕ್ರಿಸಿಲ್ ಪ್ರಕಾರ ವಲಸೆ ಕಾರ್ಮಿಕರು ನಗರಗಳಿಗೆ ವಿಮುಖರಾಗಿರುವುದರಿಂದ ದೇಶದ ಜಿಡಿಪಿ ಗೆ ಶೇಕಡಾ 5 ರಷ್ಟು ಹೊಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದೆ. ಹೌದು, ವಲಸೆ ಕಾರ್ಮಿಕರು ಮತ್ತೆ ನಗರಗಳತ್ತ ಮುಖ ಮಾಡದಿದ್ದರೆ ಅತೀ ದೊಡ್ಡ ಹೊಡೆತ ಬೀಳುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತು ಮೂಲ ಸೌಕರ್ಯ ಕ್ಷೇತ್ರಕ್ಕೆ. ಒಟ್ಟಾರೆ ವಲಸೆ ಕಾರ್ಮಿಕರಲ್ಲಿ ಶೇಕಡಾ 30ರಷ್ಟು ಕಟ್ಟಡ ಕಾರ್ಮಿಕರು.. ನೆನಪಿರಲಿ-ವಲಸೆ ಕಾರ್ಮಿಕರಿಗೆ ಕೆಲಸ ಎಷ್ಟು ಅನಿವಾರ್ಯವೋ, ದುಡಿಸಿಕೊಳ್ಳುವವರಿಗೆ ವಲಸೆ ಕಾರ್ಮಿಕರೂ ಅಷ್ಟೇ ಅನಿವಾರ್ಯ.

ಮುಂದೇನು?
ಕೋವಿಡ್ ಏಳು ದಶಕಗಳ ಕಾಲದ ಸಂಚಿತ ವಲಸೆಯ ಹಠಾತ್ ಹಿಮ್ಮುಖ ವಲಸೆಗೆ ಪ್ರೇರಣೆಯಾದುದು ಖೇದಕರ. ಇದರ ಪರಿಣಾಮವಾಗಿ ಉಂಟಾಗಿರುವ ಚಿಂತನೆ ಮಂಥನೆಯು ಭಾರತೀಯ ಸಾಮಾಜಿಕ ಆರ್ಥಿಕ ಪುನರುಜ್ಜೀವನಕ್ಕೆ ಒಂದು ಅವಕಾಶವಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಮುನ್ನೆಲೆಗೆ ಬಂದ ವಲಸೆ ಕಾರ್ಮಿಕರ ಅಸಹಾಯಕ ಪರಿಸ್ಥಿತಿ ಹಲವಾರು ಚರ್ಚೆಗಳಿಗೆ ಗ್ರಾಸವಾಗಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ವಲಸೆ ಹೋಗುವ ಮೂಲಕ ಪರೋಕ್ಷವಾಗಿ ಹಳ್ಳಿಗಳ ಅಭಿವೃದ್ಧಿಗೆ ಹಾಗೂ ತಮ್ಮ ದುಡಿಮೆಯ ಮೂಲಕ ಪಟ್ಟಣದ ಆರ್ಥಿಕ ಚಟುವಟಿಕೆಗಳಿಗೆ ಪ್ರತ್ಯಕ್ಷವಾಗಿ ಕೊಡುಗೆ ನೀಡುತ್ತಿರುವ ವಲಸೆ ಕಾರ್ಮಿಕರಿಗೆ ಅಗತ್ಯ ಅವಕಾಶ ಹಾಗೂ ಸಾಮಾಜಿಕ ಭದ್ರತೆಯನ್ನು ನಿರಾಕರಿಸಿರುವುದು ನಮ್ಮ ಆರ್ಥಿಕ ಚೌಕಟ್ಟಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರ ಬಡತನ, ಅಸಹಾಯಕತೆ ಮತ್ತು ಅಸಮಾನತೆಯನ್ನು ತುರ್ತಾಗಿ ಪರಿಹರಿಸಿ ಅವರ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡಬೇಕಾಗಿದೆ.

ಭಾರತವು ಇದೀಗ ಜನಸಂಖ್ಯಾ ಲಾಭವನ್ನು ಪಡೆಯಲು ಸನ್ನದ್ಧವಾಗಿದೆ. ನಮ್ಮ ದೇಶದಲ್ಲಿ ಫಲವತ್ತತೆ ದರಗಳು ಇಳಿಯುತ್ತಿದೆ. ಜಗತ್ತಿನ ಇತರ ದೇಶಗಳು ವೃದ್ಧರ ದೇಶವಾಗಿ ಪರಿವರ್ತನೆ ಹೊಂದುತ್ತಿದ್ದರೆ, ಭಾರತವು ಯುವಕರ ದೇಶವಾಗಿ ಕಂಗೊಳಿಸುತ್ತಿದೆ. ಜನರು, ತಂತ್ರಜ್ಞಾನ ಮತ್ತು ಬಂಡವಾಳಗಳಲ್ಲಿ ಹೂಡಿಕೆ ಮಾಡಲು ಸಂಪನ್ಮೂಲಗಳನ್ನು ಮುಕ್ತಗೊಳಿಸುವ ಅವಲಂಬಿತ ಜನಸಂಖ್ಯೆಗಿಂತ ಯುವ ಮತ್ತು ಕೌಶಲ್ಯಪೂರ್ಣ ಕಾರ್ಮಿಕ ಬಲವು ವೇಗವಾಗಿ ಬೆಳೆಯುತ್ತಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ 65% ಜನಸಂಖ್ಯೆಯೊಂದಿಗೆ ವಿಶ್ವದ ಅತ್ಯುತ್ತಮ ಜನಸಂಖ್ಯಾ ವಿವರವನ್ನು ಪ್ರತಿಬಿಂಬಿಸುವ ಭಾರತ್ದಲ್ಲಿ ಯುವ ಜನರನ್ನು ಅದರಲ್ಲೂ ವಲಸೆ ಕಾರ್ಮಿಕರ ಶ್ರಮ ವ್ಯರ್ಥವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ನಮ್ಮ ದೇಶದ ವಲಸೆ ಕಾರ್ಮಿಕರು ಬಹು-ವಲಯ, ನವೀಕರಿಸಬಹುದಾದ ಮತ್ತು ಅಮೂಲ್ಯವಾದ ಕೌಶಲ್ಯದ ಗುಂಪನ್ನು ಪ್ರತಿನಿಧಿಸುತ್ತದೆ. ಅವರು ಚಲನಾಶೀಲರು, ಆಕಾಂಕ್ಷೆ ಉಳ್ಳವರು, ತಾಂತ್ರಿಕತೆಯನ್ನು ಅರಗಿಸಿಕೊಳ್ಳಬಲ್ಲ ಉದ್ಯಮಶೀಲತಾ ಗುಣಗಳುಲ್ಲ ವರ್ಗ-ಆತ್ಮ ನಿರ್ಭರ ಭಾರತದ ಪರಿಕಲ್ಪನೆಯನ್ನು ಶಕ್ತಗೊಳಿಸಲು ಸೂಕ್ತವಾದ ಸಂಪನ್ಮೂಲ.

ಭಾರತದಲ್ಲಿ ಕೋವಿಡ್-19 ತಂದ ಸಮುದ್ರ ಮಥನ ಆರ್ಥಿಕ ಹಾಗೂ ಮಾನವ ಅಭಿವೃದ್ಧಿಯಲ್ಲಿ ಬಹು ದೊಡ್ಡ ಅಪಾಯವನ್ನೇ ತಂದಿಟ್ಟಿದೆ. ನಮ್ಮ ಆರ್ಥಿಕತೆಗೆ ಎದುರಾದ ವಲಸೆ ಕಾರ್ಮಿಕರ ಸವಾಲನ್ನು ಅವಕಾಶವಾಗಿ ಪರಿವರ್ತನೆ ಮಾಡುವಂತಾದರೆ ಭಾರತ ಆರ್ಥಿಕ ಪುನಶ್ಚೇತನದತ್ತ ದೃಡವಾದ ಹೆಜ್ಜೆಯನ್ನಿಡಬಹುದು.

ಜರ್ಜರಿತರಾದ ವಲಸೆ ಕಾರ್ಮಿಕರಿಗೆ ನಗದು ವರ್ಗಾವಣೆ, ಅಗತ್ಯ ರೇಶನ್ ವಿತರಣೆ ಮೊದಲಾದುವುಗಳು ಗಾಯಕ್ಕೆ ಮುಲಾಮು ಹಚ್ಚಬಹುದು. ಅವರಿಗೆ ಬದುಕು ಕಟ್ಟಿಕೊಡಲು ಸಹಾಯಕವಾಗುವ ದೂರಗಾಮಿ ಚಿಂತನೆಯುಳ್ಳ ಯೋಜನೆಗಳನ್ನು ರೂಪಿಸಬೇಕಾದುದು ಇಂದಿನ ಅಗತ್ಯತೆ. ಹಸಿದವನಿಗೆ ಮೀನು ನೀಡಿದರೆ ಅವನ ಒಂದು ಹೊತ್ತಿನ ಹಸಿವನ್ನು ನೀಗಿಸಬಹುದು. ಅದರ ಬದಲು ಅವನಿಗೆ ಮೀನು ಹಿಡಿಯುವ ಕಲೆ ಕಲಿಸಿದರೆ ಮತ್ತು ಅಗತ್ಯ ಅವಕಾಶ ಕಲ್ಪಿಸಿಕೊಟ್ಟರೆ ಅವನ ಜೀವಮಾನದ ಹಸಿವನ್ನು ಹೋಗಲಾಡಿಸಬಹುದು ಎಂಬ ನಾಣ್ಣುಡಿ ನಮ್ಮ ಯೋಚನೆ ಯೋಜನೆಗಳಿಗೆ ಮಾರ್ಗದರ್ಶಿಯಾಗಬೇಕು. ಈ ನಿಟ್ಟಿನಲ್ಲಿ ವಲಸೆ ಕಾರ್ಮಿಕರಲ್ಲಿ ವಿಶ್ವಾಸ ಹಾಗೂ ಸಾಮರ್ಥ್ಯ ತುಂಬಿಸುವ ಪ್ರಯತ್ನ ನಡೆಯಬೇಕು. ಇದರೊಂದಿಗೆ ಅವರಿಗೆ ನ್ಯಾಯಯುತವಾದ ಅವಕಾಶ ಹಾಗೂ ಭದ್ರತೆಯನ್ನು ಒದಗಿಸುವತ್ತ ದಿಟ್ಟ ನೀತಿ ಚೌಕಟ್ಟನ್ನು ರೂಪಿಸುವ ಮೂಲಕ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು.

ಡಾ. ಎ. ಜಯಕುಮಾರ್ ಶೆಟ್ಟಿ

– ಡಾ. ಜಯಕುಮಾರ್ ಶೆಟ್ಟಿ,
MA, PGDPM,MBA,PhD
SDM COLLEGE (AUTONOMOUS)
UJIRE-574240

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ?

Upayuktha

ಕ್ಯಾಂಪ್ಕೋ ಖರೀದಿ ಕೇಂದ್ರ: ವಾರಕ್ಕೊಮ್ಮೆ ಅಡಿಕೆ, ಕೊಕ್ಕೊ ಮಾರಾಟಕ್ಕೆ ಅವಕಾಶ

Upayuktha

ಮನೋಬಲವೇ ಮಹಾ ಬಲ: ವಿಶ್ವ ಮಾನಸಿಕ ಆರೋಗ್ಯ ದಿನ ಅಕ್ಟೋಬರ್ 10

Upayuktha