ಕೃಷಿ ಲೇಖನಗಳು

ಮನುಜನ ಆಹಾರ ಗೋವಿಗೆ ಬೇಡ…!!

ಮನುಷ್ಯ ತಿನ್ನುವ ಅಕ್ಕಿ, ಅನ್ನ, ಪಾಯಸ, ಸಕ್ಕರೆ ಪಾಕ, ಹಲಸಿನ ಹಣ್ಣು ಇವುಗಳನ್ನು ಅಧಿಕ ಪ್ರಮಾಣದಲ್ಲಿ ಗೋವಿಗೆ ನೀಡಿದರೆ ನೀವೇ ಕೈಯಾರೆ ಅದಕ್ಕೆ ಮರಣ ತಂದಂತೆ. ಅನ್ನ, ಹಿಟ್ಟು, ಸಿಹಿ ಪದಾರ್ಥಗಳಂತಹ ಬೇಗನೆ ಜೀರ್ಣವಾಗುವ ಆಹಾರವನ್ನು ಹೆಚ್ಚಾಗಿ ಗೋವಿಗೆ ತಿನ್ನಿಸದಿರಿ, ಜೋಕೆ!!. ಗೋಮರಣಕ್ಕೆ ನೀವೇ ಕಾರಣರಾಗುತ್ತೀರಿ. ಎಚ್ಚರವಿರಲಿ!!

ಜನರು ತಿನ್ನುವ ಅಹಾರವನ್ನು ಜನರೇ ತಿನ್ನ ಬೇಕು. ಗೋವು ತಿನ್ನುವುದನ್ನು ಗೋವುಗಳಿಗೇ ಬಿಡಬೇಕು. ನಮ್ಮ ಆಹಾರವನ್ನು ಗೋವುಗಳು ತಿನ್ನಲು ಪ್ರಾರಂಭಿಸಿದರೆ ಅನೇಕರು ಗೋವಿನ ಸಾಕಣೆಯನ್ನು ಬಿಟ್ಟು ಬಿಡುತ್ತಿದ್ದರೇನೋ?

ಗೋವಿಗೆ ಹೊಟ್ಟೆ ತುಂಬಾ ಹುಲ್ಲು, ಒಂದಿಷ್ಟು ಹಿಂಡಿ, ಸಾಕಷ್ಟು ನೀರು ನೀಡಿ, ಇರಲು ಒಂದು ಸೂರು, ಹುಶಾರು ತಪ್ಪಿದರೆ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಇಷ್ಟು ಸಾಕು. ಮನುಜನ ಆಹಾರ ಹಾಕಿದಲ್ಲಿ ಗೋಮಾತೆಯ ಉದರದ ಆಮ್ಲೀಯತೆ, ಹುಳಿ ಪ್ರಮಾಣ ಅಧಿಕವಾಗಿ ಸೂಕ್ಷ್ಮಾಣುಗಳು ಸತ್ತೇ ಹೋಗುವುದು ಸಹಜ.

ಗೋವಿನ ಜೀರ್ಣಕ್ರಿಯೆ ವಿಧಾನವೇ ಬೇರೆ. ಮನುಷ್ಯನದೇ ಬೇರೆ. ಮನುಷ್ಯ ತಿನ್ನುವ ವಸ್ತು ಜಾನುವಾರಿನ ಉದರಕ್ಕೆ ಶೂಲೆಯಾದೀತು. ಗೋವು ಮನುಷ್ಯನಿಗೆ ಒಂದಿಷ್ಟೂ ಉಪಯೋಗವಿಲ್ಲದ ತೆನೆಕೊಯ್ದ ಮೇಲೆ ಬಿಸಾಕಬೇಕಾದ ಜೋಳದ ಸಿಪ್ಪೆ, ಭತ್ತದ ಕಟಾವು ಆದ ನಂತರ ಸಿಗುವ ಒಣಹುಲ್ಲು, ಅಡಿಕೆಯ ಹಾಳೆ, ಅಕ್ಕಿ ಹೊಟ್ಟು, ಶೇಂಗಾ ಹೊಟ್ಟು, ರಾಗಿ ಹೊಟ್ಟು, ಅಡಿಕೆ ಹಾಳೆ ಇತ್ಯಾದಿಗಳನ್ನು ತಿಂದು ಜೀರ್ಣಿಸಿಕೊಂಡು ಅತ್ಯಂತ ಪೌಷ್ಟಿಕಾಂಶ ಹೊಂದಿದ ರುಚಿಕಟ್ಟಾದ ಅಮೃತದಂತ ಹಾಲನ್ನು ನೀಡುವಂತ ಪ್ರಪಂಚದ ಏಕೈಕ ಪ್ರಾಣಿ ನಮ್ಮ ಗೋಮಾತೆ.

ತಮ್ಮ ಹೊಟ್ಟೆಯಲ್ಲಿರುವ ಮೆಲುಕು ಚೀಲವೆಂಬ ಅದ್ಭುತ ರಚನೆಯ ಮೂಲಕ ಗೋವು ಮಾನವನ ಮಟ್ಟಿಗೆ ನಿಸ್ಸಾರವಾದ ಆಹಾರವನ್ನು ಕೂಡ ಜೀರ್ಣಿಸಿಕೊಂಡು ಉತ್ಕೃಷ್ಟವಾದ ಹಾಲನ್ನು ಉತ್ಪಾದಿಸುತ್ತದೆ. ಅದೆಂತ ಅದ್ಭುತ ಉದರವನ್ನು ಹೊಂದಿದೆಯೆAದರೆ ಮನುಷ್ಯನಿಗೆ ಏನೇನೂ ಪ್ರಯೋಜನ ಬಾರದ ಅನುಪಯುಕ್ತ ವಸ್ತುಗಳನ್ನು ತಿಂದು ರುಚಿಕಟ್ಟಾದ ಹಾಲನ್ನಾಗಿ ಪರಿವರ್ತಿಸುವ ಅದ್ಭುತ ಗುಣ ಹೊಂದಿದೆ. ಅದಕ್ಕೆ ಅದರ ಹೆಸರು “ಗೋಮಾತೆ” “ಕಾಮಧೇನು” ಎಂದಿರಬಹುದು.

ಗೋವುಗಳು ಒರಟಾದ ಮತ್ತು ಕಡಿಮೆ ಗುಣಮಟ್ಟದ ಮೇವನ್ನು ತಿಂದು ಜೀರ್ಣಿಸಿಕೊಳ್ಳಲು ವಿಶಿಷ್ಟವಾದ ಜೀರ್ಣಾಂಗ ವ್ಯೂಹವನ್ನು ಹೊಂದಿವೆ. ಇದರ ರಚನೆ ಮತ್ತು ಕಾರ್ಯವಿಧಾನಗಳು ನಿಜಕ್ಕೂ ಅದ್ಭುತ ಮತ್ತು ಕುತೂಹಲಕರ. ಗೋವುಗಳಿಗೆ ನಾಲ್ಕು ಹೊಟ್ಟೆಗಳಿರುತ್ತವೆ!. ಪ್ರತಿಯೊಂದು ಹೊಟ್ಟೆಯ ರಚನೆ ಮತ್ತು ಕಾರ್ಯಗಳು ಸಂಪೂರ್ಣವಾಗಿ ಭಿನ್ನವಾಗಿದೆ. ಗೋವಿನ ಹೊಟ್ಟೆಯಲ್ಲಿ ನಿರುಪದ್ರವಿ ಆದರೆ ಉಪಕಾರಿಯಾದ ಕೋಟ್ಯಾನುಕೋಟಿ ಸೂಕ್ಷ್ಮಾಣು ಜೀವಿಗಳಿವೆ. ಈ ಸೂಕ್ಷ್ಮಾಣುಗಳಿಗೆ ಗೋವು ಒರಟಾದ ಸೆಲ್ಯುಲೋಸ್ ಅಂಶ ಹೊಂದಿದ ಹುಲ್ಲು, ದರಕು, ಒಣ ಎಲೆ ಇತ್ಯಾದಿಗಳನ್ನು ಪೂರೈಸುತ್ತದೆ. ಸೂಕ್ಷ್ಮಾಣುಗಳು ಇವನ್ನೆಲ್ಲಾ ಬಕಾಸುರನಂತೆ ಮೆಂದು ಅಂತಿಮವಾಗಿ ಗ್ಲುಕೋಸ್ ತಯಾರಿಸಲು ಬೇಕಾದ ಮೂಲವಸ್ತುಗಳನ್ನು ಉತ್ಪಾದಿಸಿ ಗೋವಿಗೆ ನೀಡುತ್ತವೆ. ಒಂದರ್ಥದಲ್ಲಿ ಇದೊಂದು ಕೂಡು ಜೀವನ. ಬೇರೆ ಯಾವುದೇ ಪ್ರಾಣಿ ಪಕ್ಷಿಗಳಲ್ಲಿ ಈ ರೀತಿಯ ಜೀರ್ಣಕ್ರಿಯೆ ಇಲ್ಲ.

ಗೋವಿನ 150 ಲೀಟರ್ ಗಾತ್ರದ ಉದರ ಬಾಂಡದಲ್ಲಿರುವ ಅಸಂಖ್ಯ ಸೂಕ್ಷ್ಮಾಣು ಜೀವಿಗಳು ಅವುಗಳ ಆಯುಸ್ಸು ತೀರಿದ ನಂತರ ಹೊಟ್ಟೆಯಲ್ಲಿಯೇ ಸತ್ತುಹೋಗುತ್ತವೆ. ಹಾಗೆಯೇ ಅವುಗಳಲ್ಲಿರುವ ಪೌಷ್ಟಿಕಾಂಶಗಳೂ ಕೂಡ ಪ್ರಾಣಿಯ ದೇಹಕ್ಕೆ ಸಿಗುತ್ತವೆ. ಆಹಾರ ಜೀರ್ಣವಾಗುವಾಗ ಲ್ಯಾಕ್ಟಿಕ್ ಆಮ್ಲ, ಅಮೋನಿಯ, ಕಾರ್ಬನ್ ಡಯಾಕ್ಸೈಡ್ ಸೇರಿದಂತೆ ಅನೇಕಾನೇಕ ವಸ್ತುಗಳು, ಉಪ ಉತ್ಪನ್ನಗಳು ಸಹಜವಾಗಿಯೇ ಬಿಡುಗಡೆಯಾಗುವುವು. ತಿನ್ನುವ ಆಹಾರದ ವಿಧ ಹಾಗೂ ಪ್ರಮಾಣವನ್ನು ಅವಲಂಬಿಸಿ ಹೊಟ್ಟೆಯಲ್ಲಿ ಉಪಯುಕ್ತ ಸೂಕ್ಷ್ಮಾಣು ಜೀವಿಗಳಿಗೆ ಬೆಳೆಯಲಿಕ್ಕೆ, ಕೆಲಸ ಮಾಡುವ ವಾತಾವರಣ ನಿರ್ಮಾಣವಾಗುತ್ತದೆ. ಆಹಾರ ಒಮ್ಮೆಲೇ ಬದಲಾದರೆ ಆ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಏರುಪೇರಾಗಿ ಅಯೋಮಯವುಂಟಾಗಿ ಅನಾರೋಗ್ಯ ಉಂಟಾದೀತು. ಜೀವಕ್ಕೆ ಅಪಾಯವಾದೀತು. ಸೂಕ್ಷ್ಮಾಣುಗಳು ಸರಿ ಇರಬೇಕಾದರೆ ಅವುಗಳಿಗೆ ಅಂದರೆ ಗೋವಿಗೆ ಪೂರೈಕೆಯಾಗುವ ಆಹಾರ ಸರಿ ಇರಬೇಕು.

ಮದುವೆ-ಮುಂಜಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಉಳಿಯುವ ಅನ್ನ, ಪಾಯಸ, ಪಾನಕ, ಬಿರಿಯಾನಿ ಇತ್ಯಾದಿ ಆಹಾರ ಪದಾರ್ಥಗಳನ್ನಾಗಲಿ ಅಥವಾ ಮಾವಿನಹಣ್ಣುನ್ನು ಗೊಬ್ಬರ ಗುಂಡಿಗೆ ಹಾಕುವ ಬದಲು ಗೋವುಗಳಿಗೆ ನೀಡುವ ಪರಿಪಾಠ ಉಂಟು. ಗೋವಿನ ಸಂಕೀರ್ಣ ಉದರ ಬಾಂಡದಲ್ಲಿರುವ ಅಸಂಖ್ಯ ಸೂಕ್ಷ್ಮಾಣುಗಳ ವೃದ್ಧಿಗೆ ಅಲ್ಪ ಪ್ರಮಾಣದಲ್ಲಿ ಆಮ್ಲೀಯತೆ ಬೇಕು. ಅದು ಹಠಾತ್ತನೆ ಬದಲಾವಣೆಯಾದರೆ ಗೋವಿನ ಆರೋಗ್ಯಕ್ಕೆ ತೊಂದರೆ. ಮದುವೆ ಮನೆಯಲ್ಲಿ ಉಳಿದು ಹೋದ ಅನ್ನ, ರಸಂ, ಜಿಲೇಬಿ ಪಾಕ, ಪಾಯಸ ಇವುಗಳನ್ನು ಬಿಸಾಕಿದಾಗ ಇವುಗಳನ್ನು ತಿಂದು ಗೋವುಗಳು ಅವುಗಳ ಕುಟುಂಬ ಸಮೇತ ಯಮಪುರಿ ಸೇರುವುದು ಬಹಳ ಸಾಮಾನ್ಯ.

ಸುಲಭದಲ್ಲಿ ಜೀರ್ಣವಾಗುವ ಶರ್ಕರ ಪಿಷ್ಟವನ್ನೇ ಜಾಸ್ತಿ ಹೊಂದಿರುವ ಈ ಮೇಲಿನ ಪದಾರ್ಥಗಳು ಒಮ್ಮೆಲೇ ಜಾಸ್ತಿ ಸಿಕ್ಕಾಗ ಹೊಟ್ಟೆಯಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಅಸಂಖ್ಯಾತವಾಗಿ ಸ್ಪೋಟಗೊಂಡು ವಿಪರೀತವಾಗಿ ಲ್ಯಾಕ್ಟಿಕ್ ಆಮ್ಲ ಉತ್ಪಾದನೆ ಆಗುತ್ತದೆ. ಆಮ್ಲವು ಹೊಟ್ಟೆಯ ಒಳಪದರವನ್ನು ಕೊರೆದು ರಕ್ತವನ್ನು ಸೇರಿ ಅಲ್ಲಿಯೂ ಆಮ್ಲೀಯತೆ ಜಾಸ್ತಿ ಆಗಿ ಹೊಟ್ಟೆಯ ಚಲನೆಯೇ ನಿಂತು ಹೋಗುತ್ತದೆ. ಇದನ್ನೇ ಜಾನುವಾರಿನ”ಆಸಿಡಿಟಿ ಎಂದು ಕರೆಯಬಹುದು. ಇದರಿಂದ ಹೊಟ್ಟೆಯ ಒಳಪದರದ ಭಯಂಕರ ಉರಿಯೂತ ಶುರುವಾಗಿ ಬಿಡುತ್ತದೆ.

ಅಷ್ಟರಲ್ಲಿ ಥಯಮಿನೇಸ್ ಎಂಬ ಕಿಣ್ವಗಳು ಉತ್ಪಾದನೆ ಆಗಿ ಮೆದುಳಿಗೆ ವಿಟಮಿನ್ ಬಿ೧ ಕೊರತೆಯಾಗುತ್ತದೆ. ಪಿತ್ತಜನಕಾಂಗಕ್ಕೆ ಸರಿಯಾದ ಪೋಷಕಾಂಶ ದೊರಕದೇ ಅದರ ಕಾರ್ಯ ಕುಂಠಿತವಾಗುತ್ತದೆ. ಮೆದುಳಿಗೆ ಸರಬರಾಜಾಗುವ ರಕ್ತದಲ್ಲಿ ವಿಷವಸ್ತುಗಳು ಸೇರಿಕೊಂಡು ಗೋವು ಮಂಕಾಗಿ ಮಲಗಿ ಬಿಡುತ್ತದೆ.

ಈ ರೀತಿಯ ಸರ್ಕಸ್ ಉದರದಲ್ಲಿ ನಡೆಯುವಾಗ ಆಗುವಾಗ ಗೋವಿಗೆ ಸುಮ್ಮನಿರಲಾಗುತ್ತದೆಯೇ? ಪಾಪ! ಅದಕ್ಕೆ ಕಣ್ಣು ಕಾಣದಾಗಿ, ಮೂರ್ಛೆ ಹೋಗಿ, ತಲೆ ಅಡ್ಡಹಾಕಿ ಮಲಗಿ, ಮೈ ತಣ್ಣಗೆ ಆಗಿಬಿಡುತ್ತದೆ. ಈ ಆಹಾರಗಳನ್ನು ತಿಂದ ಸಮಯಕ್ಕೂ ಚಿಕಿತ್ಸಾ ಸಮಯಕ್ಕೂ ಅಂತರ ಹೆಚ್ಚಿದಂತೆ ಅಸಂಖ್ಯಾತ ಪ್ರಮಾಣದಲ್ಲಿ ಲ್ಯಾಕ್ಟಿಕ್ ಆಮ್ಲದ ಉತ್ಪತ್ತಿ ಜಾಸ್ತಿಯಾಗಿ ದಿನಗಳ ಚಿಕಿತ್ಸೆಯೇ ಬೇಕಾದೀತು. ಬಹುತೇಕ ಸಮಯ ಗೋವು ಬದುಕಿ ಉಳಿದರೆ ಅದೊಂದು ಮರುಜೀವ ಪಡೆದಂತೆಯೇ ಸರಿ.

ಮನೆಯ ಹತ್ತಿರ ಗೋವು ಬಂದಾಗ ಅದಕ್ಕೆ ತಿನಿಸು ನೀಡಿ ಕುಂಕುಮ ಇಡುವುದು ಅದರ ಮೇಲಿನ ಮಮತೆಯಿಂದ. ಇದೇ ಮಮತೆ ಅದರ ಜೀವಕ್ಕೆ ಮುಳುವಾದೀತು, ಎಚ್ಚರ!. ಮನುಷ್ಯನ ಆಹಾರವಾದ ಅನ್ನ, ಅಕ್ಕಿ, ಪಾಯಸ, ಸಕ್ಕರೆ ಪಾಕ, ಹಲಸಿನ ಹಣ್ಣು ಇವುಗಳಲ್ಲಿ ಯಾವುದನ್ನೇ ಆಗಲಿ ಕಿಲೋಗಟ್ಟಲೆ ನೀಡಿದರೆ ಗೋಜೀವಕ್ಕೇ ಕುತ್ತು ಬಂದೀತು.
ಗೋವು ಕರುವಿಗೆ ಜನ್ಮ ನೀಡಿದ ತಕ್ಷಣ ಬುಟ್ಟಿ ಗಟ್ಟಲೇ ಅನ್ನ, ಭತ್ತ ಇತ್ಯಾದಿ ಬೇಯಿಸಿ “ಮಡ್ಡಿ” ಮಾಡಿ ತಿನ್ನಿಸುವುದು ಅನೇಕರ ವಾಡಿಕೆ. ಇದಕ್ಕೆ ಹೊಂದಿಕೊಳ್ಳಬಹುದ ಜಾನುವಾರುಗಳ ಹೊಟ್ಟೆಯಲ್ಲಿನ ಸೂಕ್ಷ್ಮಾಣುಗಳು ಲ್ಯಾಕ್ಟಿಕ್ ಆಮ್ಲದ ಹೊಡೆತ ತಡೆದುಕೊಳ್ಳಲಾರದೇ ಸಾವನ್ನಪ್ಪಿದ ಅನೇಕ ಘಟನೆಗಳು ನಮ್ಮ ಮುಂದಿವೆ. ಆಗ ತಾನೇ ಕರು ಹಾಕಿದ ದನಕ್ಕೆ ಥಂಡಿ (ಶೀತ), ನಂಜು ಆಗುತ್ತದೆ ಎಂದು ಸಮಯ, ಸೌದೆ ವ್ಯಯ ಮಾಡಿ ಕೆಜಿ ಗಟ್ಟಲೆ ಮಡ್ಡಿ ಅಕ್ಕಿ ಅನ್ನದ ಗಂಜಿ ಬೇಯಿಸಿ ಕೊಡುವ ಪದ್ದತಿ ಸುಮಾರು ಅನೇಕರ ಮನೆಯಲ್ಲಿ ಈಗಲೂ ಇದೆ. ಇದು ಸಲ್ಲ.

ಇದಕ್ಕೆ ಪರಿಹಾರವಿದೆಯೇ ಎಂಬುದು ಹಲವರ ಪ್ರಶ್ನೆ. ಇದ್ದೇ ಇದೆ. ಗೋವಿಗೆ ಈ ರೀತಿಯ ಮನುಜರ ಆಹಾರ ಅಪ್ಪಿ ತಪ್ಪಿಯೂ ನೀಡಲೇ ಬಾರದು. ಜಾಸ್ತಿ ಪ್ರಮಾಣದಲ್ಲಿ ಅದು ತಿಂದಿದೆ ಎಂದು ಗೊತ್ತಾದ ಕೂಡಲೇ ತಜ್ಞ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲೇ ಬೇಕು. ತುರ್ತು ಸಂದರ್ಭದಲ್ಲಿ 30-50 ಗ್ರಾಂ ಅಡಿಗೆ ಸೋಡಾ ದ್ರಾವಣವನ್ನು ನಿಧಾನವಾಗಿ ತೆರೆಗೆ ಸಿಕ್ಕದಂತೆ ಎಚ್ಚರದಿಂದ ಕುಡಿಸಬೇಕು.

ಗೋಮಾತೆಗೆ ಸೊಗಸಾದ ಹುಲ್ಲು, ಒಂದಿಷ್ಟು ಹಿಂಡಿ, ಬೂಸಾ ನೀಡಿ. ಗೋವಿಗೆ ಪಶು ಆಹಾರ, ಹಿಂಡಿ, ತಣ್ಣೀರು, ಹಸಿ ಹುಲ್ಲು, ಒಣ ಹುಲ್ಲು ಇತ್ಯಾದಿ ಸಹಜ ಆಹಾರವನ್ನು ನೀಡಿದರೆ ಅವು ಸೊಂಪಾಗಿ ಇರುತ್ತವೆ. ಪ್ರಕೃತಿಯು ನೀಡಿದ ಕಸವನ್ನು ಹಾಲಾಗಿ ಪರಿವರ್ತಿಸುವ ವರದಾನವನ್ನು ಸದುಪಯೋಗಿಸಿಕೊಂಡು ಪೌಷ್ಟಿಕ ಆಹಾರವನ್ನು ಜನರಿಗೆ ಒದಗಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ಮತ್ತು ಜಾನುವಾರು ಸಂವರ್ಧನೆಗೆ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಾನುವಾರುಗಳಿಗೆ “ರುಚಿ” ಯಾದ ಅಹಾರಕ್ಕಿಂತ ಸಮತೋಲನ ಆಹಾರ ಬಹಳ ಮುಖ್ಯ. ಈ ವಿಚಾರ ಸರಿಯಾಗಿ ತಿಳಿದಿದ್ದರೆ ಗೋಮಾತೆಯ ಜೀವನ ಮನುಜನ ಜೊತೆ ಹಾಲಿನ ಸಮೃದ್ಧಿಯ ಜೊತೆ ಸರಳವೂ ಸುಂದರವೂ ಶ್ರೀಮಂತವೂ ಆಗಿರುತ್ತದೆ.

-ಡಾ:ಎನ್.ಬಿ. ಶ್ರೀಧರ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಕ್ತದಾನಿಗಳು ಪಾಲಿಸಬೇಕಾದ ವಿಚಾರಗಳು ಮತ್ತು ನಿಯಮಗಳು

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (19-09-2020)

Upayuktha

ಗಣಾನಾಂ ತ್ವಾ ಗಣಪತಿಗ್‌ಂ ಹವಾಮಹೇ…: ಸಾರ್ವಕಾಲಿಕ ಆದಿಪೂಜಿತ ಗಣಪತಿ

Upayuktha

Leave a Comment