ಲೇಖನಗಳು ಹಬ್ಬಗಳು-ಉತ್ಸವಗಳು

ದೀಪಾವಳಿ: ಸೊಡರ ಹಬ್ಬದ ವೈಭವ “ನಿಸರ್ಗಕ್ಕೆ ನೀರಾಜನ‌”

ವಿಶ್ವವ್ಯಾಪಿ “ಅನಂತ ಚೈತನ್ಯ”ಕ್ಕೆ‌ ಜ್ಯೋತಿ ಬೆಳಗಿ ಜ್ಯೋತಿರ್ಮಯವಾಗಿಸಿ‌ ಜ್ಯೋತಿರ್ಲತೆಗಳಿಂದ ಅಲಂಕರಿಸಿ ಜಗನ್ನಿಯಾಮಕ ಶಕ್ತಿಯ ದಿವ್ಯಮಂಗಳ ಸ್ವರೂಪವನ್ನು ದೀಪ ಪ್ರಕಾಶದಿಂದ ದರ್ಶಿಸುವ ಪರ್ವಕಾಲವೇ ಕಾರ್ತಿಕ ಮಾಸ, ಈ ಸಡಗರ ಆರಂಭಗೊಳ್ಳುವುದು ಸೋಡರಹಬ್ಬ ದೀಪಾವಳಿಯಿಂದ.

ಅಮಾವಾಸ್ಯೆಯ ಕತ್ತಲು, ಆದರೂ ಬೆಳಕಿನ ವಿಜೃಂಭಣೆ. ಹೊಲ- ಗದ್ದೆಗಳಲಿ ಸೊಡರ ಸೊಂಪು. ಧಾನ್ಯದ ರಾಶಿಗೆ ಮನದುಂಬಿದ ಮಂಗಳಾರತಿ. ಹಟ್ಟಿ- ಕೊಟ್ಟಿಗೆಗಳೆಲ್ಲ ದೀಪಮಯ. ದೈವ- ದೇವರ ಸನ್ನಿಧಿಗಳಲ್ಲಿ ದೀಪಾರಾಧನೆ. ಬಯಲು ಬೆಳ್ಳಂಬೆಳಕಾಗಿದೆ, ಮನೆಗಳಲ್ಲಿ ಆನಂದ ತುಂಬಿದೆ. ಭೂರಮೆಗೆ ಕೃತಜ್ಞತಾರ್ಪಣೆ‌. ಬಲೀಂದ್ರನಿಗೆ ಬಲಿ ಸಮರ್ಪಣೆ.’ಪೊಲಿ’ ಎಂಬ ಆಶಯದ ಸಮೃದ್ಧಿಯನ್ನು ಬೇಡುತ್ತಾ ನೆರವೇರುವ ಆಚರಣೆ; ದೀಪಾವಳಿ. ಬಳಿಕ ಒಂದು ತಿಂಗಳಕಾಲ- ಕಾರ್ತಿಕ ಮಾಸದಲ್ಲಿ ನಿತ್ಯ ದೀಪಾರಾಧನೆ.

ಎಲ್ಲ ಹಬ್ಬಗಳಿಗಿಂತಲೂ ಹೆಚ್ಚಿನ ಸಡಗರದಿಂದ ಅಷ್ಟೇ ಶ್ರದ್ಧೆಯಿಂದ ನಡೆಸಲ್ಪಡುವ ಈ ಪರ್ವ ನಿಜ ಅರ್ಥದ ‘ಹಬ್ಬ’. ಆದುದರಿಂದಲೇ ನಮಗಿದು ‘ಪರ್ಬ’.

ಮನೆ ತುಂಬಿರುತ್ತದೆ. ಕೃಷಿಯ ಶ್ರಮದ ಪ್ರತಿಫಲವಾದ ಧಾನ್ಯ ರಾಶಿ ಬಿದ್ದಿದೆ. ಕೃಷಿ ಆಧರಿತ ಸಂಸ್ಕೃತಿಯಲ್ಲಿ ಭೂಮಿ- ಕೃಷಿ ಉತ್ಪನ್ನಗಳೇ ಪ್ರಧಾನ. ಆದುದರಿಂದ ಧಾನ್ಯ‌ದೇವತೆಗೆ ಆರಾಧನೆ. ‘ನಿಸರ್ಗ ನೀರೆ’ಗೆ ನೀರಾಜನ. ಈ ನಡುವೆ ತನ್ನ ಅಧಿಕಾರವ್ಯಾಪ್ತಿಯಲ್ಲಿ ಪ್ರತಿದಿನವೂ ಹಬ್ಬದ ಸಮೃದ್ಧಿಯನ್ನು ನೆಲೆಗೊಳಿಸಿ ಪ್ರಜೆಗಳನ್ನು ಪರಿಪಾಲಿಸಿದ್ದ ಪುರಾತನ ಭೂನಾಥ ಬಲಿಯೇಂದ್ರನನ್ನು‌ ಕೃತಜ್ಞತಾಭಾವದಿಂದ ಸ್ಮರಿಸುವುದು, ಆತನಿಂದಲೇ ಪೊಲಿ (ಹೊಲಿ) ಎಂಬ ಅತಿಶಯ ಸೌಭಾಗ್ಯವನ್ನು ಬೇಡುವುದು ಶತಮಾನಗಳಿಂದ ನಡೆದು ಬಂದ ಪದ್ಧತಿ. ಪುರಾತನ ಈ ಆಚರಣೆ ಇಂದಿಗೂ ಪ್ರಸ್ತುತ. ಬಲಗುಂದದೆ ಮೌಲ್ಯ ಕಳೆದುಕೊಳ್ಳದೆ ಆಚರಿಸಲ್ಪಡುತ್ತಿದೆ.

ಪರಮ ಧಾರ್ಮಿಕರು, ಆದರ್ಶ ಪುರುಷರು, ಜನತೆಯಲ್ಲಿ- ಪ್ರಜಾವರ್ಗದಲ್ಲಿ ಜನಾರ್ದನನ್ನು ಕಂಡ ಪುಣ್ಯಾತ್ಮರು ಇಲ್ಲಿ ರಾಜ್ಯವಾಳಿದ ಬಗ್ಗೆ ಪುರಾಣಗಳು ಹೇಳುತ್ತವೆ, ಇತಿಹಾಸ ವಿವರಿಸುತ್ತದೆ. ಆದರೆ ಪುರಾತನನಾದ ಬಲಿಚಕ್ರವರ್ತಿಯ ಅಸ್ತಿತ್ವ ಮಾತ್ರ ಸ್ಮರಣೀಯವಾಗುತ್ತದೆ. ಇದು ಬಲಿಯೇಂದ್ರನ ಪ್ರಜಾವತ್ಸಲ ಮನೋಧರ್ಮ. ನಡೆ- ನುಡಿ ಆಚಾರ- ವಿಚಾರಗಳು, ಕೊಟ್ಟ ಮಾತಿಗೆ ತಪ್ಪದೆ ತನ್ನ ಸರ್ವಸ್ವವನ್ನೂ ದಾನಕೊಟ್ಟ ವಿಚಲಿತ ಮನಃಸ್ಥಿತಿಗಳು ಕಾರಣವಾಗಿ ಸ್ಥಾಯಿಯಾದ ಪುಣ್ಯ ಕೀರ್ತಿ ಇರಬೇಕು.

ವಾಮನನಿಂದ ಪಾತಾಳಕ್ಕೆ ಮೆಟ್ಟಲ್ಪಡುವ ಸಂದರ್ಭದಲ್ಲೂ ತನ್ನ ಪ್ರಜಾವರ್ಗ, ಜನರ ಸಂಭ್ರಮ, ತನ್ನಾಳ್ವಿಕೆಯ ಭೂಮಿಯನ್ನು ವರ್ಷಕ್ಕೊಮ್ಮೆಯಾದರೂ ನೋಡುವ ಅವಕಾಶವನ್ನು ಕೇಳುವ ಬಲೀಂದ್ರ ಭೂಮಿಪುತ್ರನಾಗಿ ಗುರುತಿಸಲ್ಪಡುತ್ತಾನೆ. ಮಣ್ಣಿನ – ಮಣ್ಣಿನ‌ ಮಕ್ಕಳ ಹಾಗೂ ತನ್ನ ನಡುವಿನ ಪೂರ್ವದ ಅವಿನಾಭಾವ ಸಂಬಂಧವನ್ನು ಮರೆಯಲಾರದಷ್ಟು ಗಾಢವಾಗಿ ಒಪ್ಪಿರುವ ಈ ಮಹನೀಯ ಇದೀಗ ಈ ವರ್ಷ ಮತ್ತೆ ಬರುತ್ತಿದ್ದಾನೆ…. ದೀಪ ಹಚ್ಚೋಣ, ಪೊಲಿ ಯಾಚಿಸೋಣ.

ಎಣ್ಣೆ ಸ್ನಾನ, ಮನೆ- ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುವುದು ,ಜಾನುವಾರುಗಳ ಮೈ ತೊಳೆದು ಅಲಂಕರಿಸುವುದು. ಕೃಷಿ ಉಪಕರಣಗಳನ್ನು ಶುಚಿಗೊಳಿಸುವುದು.

ಧಾನ್ಯದ ರಾಶಿಗೆ ಪೂಜೆಸಲ್ಲಿಸಲು ಸಿದ್ಧತೆಗಳನ್ನು ಮಾಡುವುದು, ಸೊಡರು (ತುಡಾರ್) ಹಚ್ಚಲು ದೀಪದ ಕಂಬ- ಬಲಿಗೆ ಬಲಿಸೊಪ್ಪು, ಕಾಡಹೂವುಗಳನ್ನು ಸಂಗ್ರಹಿಸುವುದು, ಹೊಸ ಬಟ್ಟೆ ತೊಟ್ಟು ಅಮಾವಾಸ್ಯೆಯ ಕತ್ತಲು ಆವರಿಸುವ ಸಮಯ ನಿರೀಕ್ಷಿಸುತ್ತಾ ದಿನ ಕಳೆಯುವ ದಿನ “ದೀಪಾವಳಿ”. ಮನೆ ಒಳಗೆ “ದೀಪಾವಳಿಯ ಗಟ್ಟಿ” -‘ಪರ್ಬದ ಗಟ್ಟಿ’ ಬೇಯುತ್ತಿರುತ್ತದೆ, ಅದರ ಪರಿಮಳದ್ದೂ ಒಂದು ರೋಚಕ .

ಬಲೀಂದ್ರನನ್ನು ಕರೆಯಲು, ದೀಪ ಹಚ್ಚಲು, ಬಲಿ ಸಮರ್ಪಿಸಲು ಸಿದ್ಧತೆಗಳಾಗಿವೆ. ಆದರೆ ಸೂರ್ಯಾಸ್ಥವಾಗಿಲ್ಲ ಕೊಂಚ ಸಮಯಾವಕಾಶವಿದೆ… ಈಗ ಯೋಚಿಸೋಣ, ಪ್ರಕೃತಿಯ ಮಡಿಲಲ್ಲಿ, ಪ್ರಕೃತಿಯನ್ನು ನಂಬಿ ಬದುಕುಕಟ್ಟಿದ ಮಾನವ ಲಕ್ಷಾಂತರ ವರ್ಷಗಳಿಂದ ಮುಂದುವರಿದು ಬರುತ್ತಲೇ ಇದ್ದಾನೆ. ಕಾಲ ಬದಲಾಗಿದೆ, ಆಧುನಿಕತೆ ನಮ್ಮನ್ನು ಆವರಿಸಿದೆ. ಅಭಿವೃದ್ದಿಯ ಅನಿವಾರ್ಯತೆ ನಮಗೆ ಸವಾಲಾಗಿದೆ. ಈ ಎಲ್ಲವೂ ಹಿಂದೆಯೂ ನಡೆದಿದೆ. ಅಭಿವೃದ್ಧಿ ಸಾಧಿಸಲ್ಪಟ್ಟಿದೆ; ನಾವು ಸುಸಂಸ್ಕೃತರಾಗಿ ಬದುಕು ಬಾಳಿದ್ದೇವೆ. ಎಲ್ಲವೂ ಸರಿಯಾಗಿತ್ತು ‌ಏಕೆಂದರೆ ಅಂದು ಸಮತೋಲನವಿತ್ತು. ಕಾಡು- ನಾಡು- ನಗರ- ಹಳ್ಳಿಗಳ ಪ್ರಮಾಣ ಮನುಕುಲವನ್ನು ನಿಯಂತ್ರಿಸುತ್ತಿತ್ತು. ಪರಿಸರ ಪರಿಶುದ್ಧವಾಗಿತ್ತು ಜೀವನಾಧಾರ ನದಿಗಳು ಸ್ವೇಚ್ಛೆಯಿಂದ ಹರಿಯುತ್ತಿದ್ದುವು. ನದಿ ದಡಗಳಲ್ಲಿ ನಾಗರಿಕತೆ ಬೆಳೆಯಿತು- ಸಂಸ್ಕೃತಿ ಸಂಪನ್ನಗೊಂಡಿತು‌.

ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ಆತಂಕ ಉಂಟುಮಾಡುತ್ತಿವೆ. ಪರಿಸರ ನಾಶ- ಮಾಲಿನ್ಯ ನಮ್ಮ ಮುಂದಿರುವ ಬಗೆಹರಿಯಲಾರದ ಸಮಸ್ಯೆ. ಶುದ್ಧ ಪರಿಸರ ಬೇಕೆನ್ನುವ ಹಕ್ಕು ಹೊರತು ಅಭಿವೃದ್ಧಿ ವಿರೋಧವಲ್ಲ. ಪ್ರಾಕೃತಿಕ ಸ್ವರೂಪ ಬದಲಾವಣೆ ಬೇಡ. ಏಕೆಂದರೆ ನೈಜತೆ ಬೇಕು ಎಂಬ ಪ್ರೀತಿ. ಒಟ್ಟಿನಲ್ಲಿ ಈ ಕಾಳಜಿ ಮುಂದಿನ ತಲೆಮಾರಿಗೆ ಶುದ್ಧ ಪ್ರಕೃತಿಯನ್ನು ಹಸ್ತಾಂತರಿಸಬೇಕೆಂಬ ಮಹದಾಸೆ.

ಪ್ರಕೃತಿ- ಕೃಷಿ- ಸಂಸ್ಕೃತಿ ಈ ಮೂರನ್ನೂ ಆರಾಧಿಸುವ, ವಿವಿಧ ಪರಿಕಲ್ಪನೆಗಳೊಂದಿಗೆ ಸ್ವೀಕರಿಸುವ ನಾವು ನಿಸರ್ಗದ ಮಡಿಲಲ್ಲಿ ನಿಸರ್ಗ ಸಹಜ ವಸ್ತುಗಳನ್ನು ಪಡೆಯುತ್ತಾ ಪೂಜೆ, ಆಚರಣೆಗಳನ್ನು ನಡೆಸುತ್ತೇವೆ. ಬಲೀಂದ್ರನ ಕಾಲದಲ್ಲಿ ಕೃಷಿ ಕಾಯಕ ಸಾರ್ವತ್ರಿಕವಾಗಿತ್ತು. ಸಮೃದ್ಧಿ ಇತ್ತು. ಆದರೆ ಇಂದು ಕೃಷಿಭೂಮಿ ಪರಿವರ್ತನೆಗೊಂಡಿವೆ‌. ಉದ್ಯಮಗಳು ಬೆಳೆದಿವೆ. ಕೃಷಿ ಭೂಮಿ‌ ಕೃಶವಾಗಿವೆ. ಏನಿದ್ದರೂ ಕೃಷಿಯೊಂದಿಗೆ ಕೃಷಿ‌ ಸಂಸ್ಕೃತಿಯೂ ಕೃಶವಾಗುತ್ತಿದೆ ಎಂಬುದು ಸತ್ಯ ತಾನೆ? ಆದರೆ ಉದ್ಯಮಗಳ ಕಾಲ, ಅದೂ ಇರಲಿ, ದೀಪಬೆಳಗೋಣ. ಆದರೆ ಅತಿಯಾಗದಿರಲಿ.

ಹಾಗಿದ್ದರೆ ಇನ್ನೆಷ್ಟು ವರ್ಷ ಬಲೀಂದ್ರನ ಆಗಮನಕ್ಕೆ ಸಿದ್ಧರಾಗಬಹುದು, ಬಲೀಂದ್ರನಿಗೆ ಆತನು ಆಳಿದ ಸಮೃದ್ಧ ಭೂಮಿಯನ್ನು ತೋರಿಸಬಹುದು‌. ದೀಪ ಹಚ್ಚಲು ಕೃಷಿಭೂಮಿ ಬರಡು ನೆಲವಾಗುತ್ತಿದೆ. ಸೊಡರು ಹಚ್ಚಲು ಹಟ್ಟಿ- ಕೊಟ್ಟಿಗೆ ಇಲ್ಲವಾಗಬಹುದು. ‘ತುಡಾರ್’ (ಸೊಡರು) ಎಂಬ ಮಂಗಳಾರತಿ ಎತ್ತಲು ಭತ್ತದ ರಾಶಿಯೇ ಇಲ್ಲ. ಇಂತಹ ಸ್ಥಿತಿ ಸನ್ನಿಹಿತವಾಗುವ ದಿನ ಬರುತ್ತಿದೆ.

ಬರಡು ನೆಲಕ್ಕೆ, ಧಾನ್ಯದ ರಾಶಿಯ ಸಮೃದ್ಧಿಇಲ್ಲದ ಮನೆಗೆ, ದನಕರು- ಕೋಣ ಎತ್ತುಗಳ ಸಾಕಣೆಯೇ ಇಲ್ಲದ ವಾಸ್ಯವ್ಯಕ್ಕೆ ಬಲೀಂದ್ರನನ್ನು ಹೇಗೆ ಕರೆಯೋಣ. ಕಾಲ ಕಾರಣವಾಗಿ ಉಳಿದುಕೊಂಡಿರುವ ವ್ಯವಸ್ಥೆಗೆ ನಾವೇನೋ ಕರೆಯಬಹುದು. ಆದರೆ ನಮ್ಮ ಮುಂದಿನ ತಲೆಮಾರು ಬಲೀಂದ್ರನನ್ನು‌ ಕರೆಯುವ ಕ್ರಮವನ್ನೇ ಮಾಡದಿರಬಹುದೋ ಏನೋ.

ಸಮೃದ್ಧಿಯನ್ನು ಹೊತ್ತುತರುವ (“ಪೊಲಿ” ತರುವ) ಪುಣ್ಯಾತ್ಮ, ಮಳೆ ದೇವತೆ, ಬಂದುಹೋಗುವ ದೇವರು ಎಂದೇ ನಂಬಿ ವರ್ಷಕ್ಕೊಮ್ಮೆ ಕರೆದು ದೀಪ ತೋರಿಸಿ ಗೌರವಾರ್ಪಣೆ‌ಗೆ ಪಾತ್ರನಾಗುವ ಬಲಿ ಚಕ್ರವರ್ತಿಗೆ ಪ್ರಸ್ತುತದ ವ್ಯವಸ್ಥೆಯ ಮೂಲಕ‌ ವಂಚಿಸಿದಂತಾಗದೆ … ..ಕ್ಷಮಿಸು ಬಲಿಯೇಂದ್ರ.

ಮಕ್ಕಳು ಸಿಡಿಸಿದ ಹಸುರು ಪಟಾಕಿ ಆಲೋಚನಾ ಪರನಾಗಿದ್ದ ನನ್ನನ್ನು‌ ಎಚ್ಚರಿಸಿದೆ. ವಾಸ್ತವದಲ್ಲಿ‌ ದೀಪಬೆಳಗುತ್ತಿದೆ. ಬಲೀಂದ್ರನನ್ನು ಕರೆಯುತ್ತಾ ಜನ ಬಯಲಲ್ಲಿ ಬೆಳೆ ಬೆಳೆದ ಗದ್ದೆಗಳಲ್ಲಿ ದೀಪವಿರಿಸಿ, ಬಲಿ ಸಮರ್ಪಿಸಿ, ಅಮಾವಾಸ್ಯೆಯ ಗಾಢಾಂಧಕಾರದಲ್ಲಿ ದೀಪಾರಾಧನೆ ನಿರತರಾಗಿದ್ದಾರೆ. ಪೂರ್ವದ ಸೊಗಡು, ಸಂಭ್ರಮ ಇಲ್ಲವಾಗಿದೆ.

ಓ ಬಲಿಯೇಂದ್ರ.. ಎಂಬ ಕರೆಯೇ ಕ್ಷೀಣವಾಗುತ್ತಿದೆ. ಇದರೊಂದಿಗೆ ಕೃಷಿಯಾಧರಿಸಿ ಪ್ರಕೃತಿಯ ಮಡಿಲಲ್ಲಿ ರೂಪುಗೊಂಡ ಒಂದು ಸಮೃದ್ಧ ಸಂಸ್ಕೃತಿ ತನ್ನ ನೈಜ ಸೊಬಗನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

ಬುದ್ಧಿವಂತ ಮೊಮ್ಮಗ ಕೇಳುತ್ತಿದ್ದಾನೆ… ಅಜ್ಜಾ… ಅಮಾವಾಸ್ಯೆಯ ಕತ್ತಲಲ್ಲಿ ಬೆಳಗುವ ಎಣ್ಣೆ ದೀಪದ ಬೆಳಕಲ್ಲಿ‌ ಬಲಿಯೇಂದ್ರನಿಗೆ‌ ಯಾವುದೂ ನಿಚ್ಚಳವಾಗಿ ಕಾಣದು ಅಲ್ಲವೆ?
ಓ..ಬಲಿಯೇಂದ್ರ.. ಬಲಿಗೆತೊಂದು ಪೊಲಿಕೊರ್ಲ…

-ಕೆ.ಎಲ್.ಕುಂಡಂತಾಯ

(ಬಲಿ= ವೀಳ್ಯದೆಲೆ, ಅಡಿಕೆ, ಅವಲಕ್ಕಿ, ತೆಂಗಿನ ಹೋಳು, ಕೇಪುಳ ಹೂ, ಬಲಿಸೊಪ್ಪು ಮುಂತಾದ ವಸ್ತುಗಳು. ಇದರಲ್ಲಿ ಪ್ರಾದೇಶಿಕವಾಗಿ ಬದಲಾವಣೆಗಳಿವೆ.)
(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಯಕ್ಷಗಾನದ ಹಾಡುಗಾರಿಕೆಯಲ್ಲಿ ರಾಗಗಳ ಬಳಕೆ

Upayuktha

ಬದುಕಿನ ಪಾಠ ಕಲಿಸಿದ 2020!

Upayuktha

ಸ್ಕಿಜೋಫ್ರೇನಿಯಾ: ಗಂಭೀರ ಮನೋವ್ಯಾಧಿಗೆ ಕಾರಣಗಳೇನು?

Upayuktha