ಪ್ರಮುಖ ಫ್ಯಾಷನ್ ಲೇಖನಗಳು ಲೈಫ್‌ ಸ್ಟೈಲ್- ಆರೋಗ್ಯ

ಹಲ್ಲಿಗೂ ಬಂತು ಹಚ್ಚೆ: ಫ್ಯಾಷನ್ನಿನ ಹೊಸ ರೂಪ

ಮೈಮೇಲೆ ಹಚ್ಚೆ ಹಾಕಿಸಿ ಕೊಳ್ಳುವುದು ಇಂದು ನಿನ್ನೆಯ ಸಂಪ್ರದಾಯವಲ್ಲ. ಹಲವಾರು ಶತಮಾನಗಳಿಂದ ಗ್ರಾಮೀಣ ಪ್ರದೇಶದ ಹೆಂಗಳೆಯ ಹಸ್ತಗಳಲ್ಲಿ ಮಾತ್ರ ಕಾಣುತ್ತಿದ್ದ ಮೆಹಂದಿ ಇಂದು ಯುವಜನರ ಮೈ ಮೇಲೆಲ್ಲಾ ಹಚ್ಚೆಯ ರೂಪದಲ್ಲಿ ರಾಜಾಜಿಸುತ್ತಿದೆ. ತೋಳು, ಹೊಟ್ಟೆ, ಕಿಬ್ಬೊಟ್ಟೆ, ಬೆನ್ನು ಹೇಗೆ ದೇಹದ ಎಲ್ಲಾ ಭಾಗಗಳಲ್ಲಿಯೂ ಹಚ್ಚೆಯದ್ದೇ ಕಾರುಬಾರು. ಹೀಗೆ ಕೈಯಿಂದ ಕಾಲು, ತಲೆ, ಮುಖ ಹೇಗೆ ಎಲ್ಲೆಂದರಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ ಹಚ್ಚೆ, ಈಗ ‘ಹಲ್ಲಿ’ಗೂ ವಕ್ಕರಿಸಿದೆ. ಹಿಂದಿನ ಕಾಲದಲ್ಲಿ ಮನೆ-ಮನೆಗಳಲ್ಲಿ ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿದ್ದ ‘ಮೆಹಂದಿ’, ನಿಧಾನವಾಗಿ ಹೊಸ ರೂಪದಲ್ಲಿ ಯುವಜನರ ದೈನಂದಿನ ಜೀವನದ ಫ್ಯಾಷನ್ನಿನ ಭಾಗವಾಗಿ ‘ಟ್ಯಾಟೂ’ ಆಗಿ ಮಾರ್ಪಟ್ಟಿದೆ. ಕಾಣಬಾರದ ಜಾಗಗಳಲ್ಲಿ ಅರ್ಧಂಬರ್ಧ ಕಾಣುತ್ತಾ ನೋಡುಗರ ಆಸಕ್ತಿಯನ್ನು ಕೆರಳಿಸುವ ರೀತಿಯಲ್ಲಿ ಚೇಳು, ಸಿಂಹ, ಗರುಡ, ತ್ರಿಶೂಲ ಹೀಗೆ ಹತ್ತು ಹಲವು ಆಕಾರದಲ್ಲಿ ರಾರಾಜಿಸಲು ತೊಡಗಿದವು. ಮೊದಲೆಲ್ಲಾ ಅಂಟಿಸುವ ಸ್ಟಿಕ್ಕರ್ ರೀತಿಯಲ್ಲಿದ್ದ ಟ್ಯಾಟೂ ರೂಪಾಂತರ ಹೊಂದಿ, ಸೂಜಿಗಳಿಂದ ಚುಚ್ಚಿಸಿಕೊಡು ಶಾಶ್ವತವಾಗಿ ದೇಹದಲ್ಲಿ ನೆಲೆಯಿರುವ ರೀತಿಯಲ್ಲಿ ಮಾರ್ಪಾಡಾಯಿತು.

ಕೆಲವೊಮ್ಮೆ ಪ್ರೀತಿಯ ಸಂಕೇತವಾಗಿ, ಇನ್ನೊಮ್ಮೆ ದ್ವೇಷದ ಕುರುಹಾಗಿ, ಮಗದೊಮ್ಮೆ ಇನ್ನಾರಿಗೂ ನೀಡುವ ಸಂದೇಶವಾಗಿ ‘ಟ್ಯಾಟೂ’ ರಾಯಭಾರಿ ಕೆಲಸವನ್ನು ಚೆನ್ನಾಗಿಯೇ ನಿಭಾಯಿಸಿತು. ಕ್ರಮೇಣ ದೇಹದಲ್ಲಿ ಆಕರ್ಷಕವಾದ ಚಿನ್ನಾಭರಣ ಮತ್ತು ವಜ್ರಗಳನ್ನು ಚುಚ್ಚಿಸಿಕೊಂಡು ಪ್ರದರ್ಶಿಸುವ ಪ್ರವೃತ್ತಿ ಜಾಸ್ತಿಯಾಯಿತು. ಹೊಕ್ಕುಳು, ನಾಲಗೆ, ತುಟಿಸಂದಿಗಳಲ್ಲಿ ಹುಬ್ಬಿನ ಎಡೆಯಲ್ಲಿ ಹೀಗೆ ಸಿಕ್ಕಿಸಿಕ್ಕಿದಲ್ಲಿ ಚುಚ್ಚಿಸಿಕೊಂಡು ಫ್ಯಾಷನ್ ಜಗತ್ತಿನ ಹೊಸದೊಂದು ರೂಪದಲ್ಲಿ ಜನ್ಮಿಸಿತು. ಕೇವಲ ಕಿವಿ, ಮೂಗು, ಕೊರಳಿಗೆ ಸೀಮಿತವಾಗಿದ್ದ ಚಿನ್ನ ವಜ್ರಗಳು ಎಲ್ಲೆಂದರಲ್ಲಿ ನೇತಾಡುವ, ರಾರಾಜಿಸುವ ಕಾಲ ತಲುಪಿತು.

ಇದೀಗ ಫ್ಯಾಷನ್ ದಂತ ಆಭರಣಗಳು (Dental Jewelleries) ಹಲ್ಲಿಗೂ ವಿಸ್ತರಿಸಿದೆ. ಚಿಕ್ಕದಾದ ಹೊಳೆಯುವ ಮುಂದಿನ ಹಲ್ಲುಗಳಿಗೆ ಡೈಮಂಡ್ (ವಜ್ರ)ನ ತುಂಡೊಂದನ್ನು ಆಕರ್ಷವಾಗಿ ಜೋಡಿಸಲಾಗುತ್ತದೆ. ಹಲ್ಲಿಗೆ ಯಾವುದೇ ರೀತಿಯ ತೊಂದರೆ ಇಲ್ಲದೆ ಗಾಯ ಮಾಡದೆ ಕೇವಲ ಸಿಮೆಂಟ್‍ಗಳ ಮುಖಾಂತರ ವಜ್ರಭರಣಗಳನ್ನು ಜೋಡಿಲಾಗುತ್ತದೆ. ಸುಮಾರು ನಾಲ್ಕೈದು ವರ್ಷಗಳ ಕಾಲ ಈ ‘ಆಭರಣ’ ಬಾಳಿಕೆ ಬರುತ್ತದೆ. ಬೋರಾದಗಲೆಲ್ಲಾ ದಂತ ವೈದ್ಯರ ಬಳಿ ಹೋದಲ್ಲಿ ಕ್ಷಣಾರ್ಧದಲ್ಲಿ ತೆಗೆಯಲೂಬಹುದು. ಆದರೆ ತೆಗೆದ ಡೈಮಂಡನ್ನು ದಂತ ವೈದ್ಯರ ಬಳಿ ಹಿಂದೆ ಪಡೆದುಕೊಳ್ಳಲು ಮರೆಯದರಿ. ಹೃದಯಾಕಾರದ, ಗಿಟಾರ್ ಆಕೃತಿಯ ಹಾಗೂ ಇನ್ನಾವುದೇ ವೇಷದಲ್ಲಿ ಅಥವಾ ರೂಪದಲ್ಲಿ ಈ ದಂತಾಭರಣಗಳನ್ನು ನಿರ್ಮಿಸಿ ಹಲ್ಲಿಗೆ ಜೋಡಿಸಬಹುದು. ಹಲವಾರು ಆಕೃತಿಯ ಮತ್ತು ಗಾತ್ರದ ಬೇರೆ ಬೇರೆ ಬಣ್ಣದ ದಂತಾಭರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಅಭಿರುಚಿ, ವಯಸ್ಸು ಮನೋಧರ್ಮ, ಲಿಂಗ ಮತ್ತು ಜೀವನ ಶೈಲಿಗೆ ಪೂರಕವಾಗುವ ಆಭರಣವನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ನಿಮ್ಮದಾಗಿರುತ್ತದೆ.

ಈಗ ಹೆಚ್ಚು ಜನಪ್ರಿಯವಾಗಿರುವ ಹಲ್ಲಿನ ಟ್ಯಾಟೂ (ಹಚ್ಚೆ) ಕೂಡಾ ಮೆಟ್ರೊ ನಗರಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ದೇಹಕ್ಕೆ ಹಚ್ಚೆ ಹಾಕಲು ಸೂಜಿ ಮತ್ತು ಇಂಕ್ (ಶಾಯಿ)ಯನ್ನೂ ಬಳಸುತ್ತಾರೆ ಮತ್ತು ಬಹಳ ನೋವಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಕೆಲವೊಮ್ಮೆ ಸಾಂಕ್ರಾಮಿಕ ರೋಗ ತಗಲಬಹುದು. ಮತ್ತು ಅಲರ್ಜಿ ತುರಿಕೆ, ನೋವು, ಕೀವು ಬರುವ ಸಾಧ್ಯತೆ ಇದೆ. ಅದರ ಜೊತೆಗೆ ದೇಹದ ಹಚ್ಚೆಗೆ ತಗಲುವ ವೆಚ್ಚವೂ ಬಹಳ ದುಬಾರಿ. ದೇಹದಲ್ಲಿ ಹಚ್ಚೆ ಹಾಕಲು 10-20 ಸಾವಿರ ತಗಲುತ್ತದೆ ಮತ್ತು ಅದನ್ನು ತೆಗೆಸಲೂ ಪುನಃ ಹತ್ತಿಪ್ಪತ್ತು ಸಾವಿರ ಖರ್ಚು ಮಾಡುವ ಅನಿವಾರ್ಯತೆಯೂ ಇದೆ. ಅಷ್ಟಾದರೂ ಪೂರ್ತಿ ಹೋಗುತ್ತದೆ ಎಂಬ ಧೈರ್ಯವೂ ಇಲ್ಲ.

ಆದರೆ ಹಲ್ಲಿಗೆ ಬಳಸುವ ಟ್ಯಾಟೂಗೆ ಇದರ ಆತಂಕವಿಲ್ಲ. ಹಲ್ಲಿನ ಹಚ್ಚೆಗೆ ಕೇವಲ ಸಿಲ್ವರ್ (ಬೆಳ್ಳಿ) ಬಣ್ಣ ಮತ್ತು ಹಲ್ಲಿನ ಬಣ್ಣ ಬಳಸಲಾಗುತ್ತದೆ. ತಗಲುವ ವೆಚ್ಚವೂ ನಾಲ್ಕೈದು ಸಾವಿರದ ಒಳಗೆ ಖರ್ಚಾಗುತ್ತದೆ. ನಾಯಿ, ಬೆಕ್ಕು, ಚೇಳು, ಚಿಟ್ಟೆ ಹೀಗೆ ನಿಮ್ಮ ಅಭಿರುಚಿಗೆ ತಕ್ಕಂತೆ ಹಚ್ಚೆ ಹಾಕಲಾಗುತ್ತದೆ. ಒಟ್ಟಿನಲ್ಲಿ ದೇಹಕ್ಕೆ ಹಚ್ಚೆ ಹಾಕಿಸಿಕೊಳ್ಳುವುದರ ಬದಲು ಹಲ್ಲಿಗೆ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವುದು ಖಂಡಿತವಾಗಿಯೂ ಆರೋಗ್ಯದ ದೃಷ್ಟಿಯಲ್ಲಿ ಮತ್ತು ವೆಚ್ಚದ ದೃಷ್ಟಿಯಲ್ಲಿ ಒಳ್ಳೆಯದು. ಆಯ್ಕೆ ನಿಮ್ಮದು. ಮನೆಯಲ್ಲಿನ ಬರ್ತ್‍ಡೇ ಪಾರ್ಟಿ, ವಿಶೇಷ ಕಾರ್ಯಕ್ರಮ, ವಾರಾಂತ್ಯದ ಪಾರ್ಟಿಗಳಿಗೆ ಚೆನ್ನಾಗಿ ಕಾಣುವ ದೃಷ್ಟಿಯಿಂದ ಅಥವಾ ಎಲ್ಲರ ಗಮನ ಸೆಳೆಯುವ ದೃಷ್ಟಿಯಿಂದಲೂ ಹಲ್ಲಿನ ಹಚ್ಚೆ ಇದೀಗ ಜನಪ್ರಿಯವಾಗ ತೊಡಗಿದೆ.

ಒಟ್ಟಿನಲ್ಲಿ ಹಿಂದೆಲ್ಲಾ ಹೇಳುತ್ತಿದ್ದ ಮಿಲಿಯನ್ ಡಾಲರ್ ಇದೀಗ ನಿಜವಾಗುವ ಕಾಲ ಸನ್ನಿಹಿತವಾಗಿದೆ. ಇತ್ತೀಚೆಗೆ ಹಾಲಿವುಡಿನ ಹೆಸರಾಂತ ನಟಿಯೊಬ್ಬಳು ಬೆಲೆಬಾಳುವ ವಜ್ರವೊಂದನ್ನು ಹಲ್ಲಿಗೆ ಅಂಟಿಸಿಕೊಂಡು ಪಾರ್ಟಿಗಳಲ್ಲಿ ಮಿಲಿಯನ್ ಡಾಲರ್ ಸ್ಲೈಲ್ ನೀಡಿದ್ದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ತೋರಿಸಿ ಟಿಪಿಆರ್ ಏರಿಸಿದ್ದು ಮಾತ್ರ ಸತ್ಯವಾದ ಮತು. ಒಟ್ಟಿನಲ್ಲಿ ಹಲ್ಲಿಗೆ ಡೈಮಂಡ್ ಆಭರಣಗಳನ್ನು ಅಂಟಿಸಿಕೊಂಡು ವಜ್ರ ಪ್ರದರ್ಶನದ ನೆಪದಲ್ಲಿಯಾದರೂ ಸೆಲೆಬ್ರೆಟಿಗಳು ಮತ್ತು ಜನಸಾಮಾನ್ಯರು ನಕ್ಕಲ್ಲಿ, ಆರೋಗ್ಯ ವೃದ್ಧಿಸುವುದೂ ಸತ್ಯ. ಇನ್ನಾದರೂ ಪಾರ್ಟಿಗಳಲ್ಲಿ ಸಭೆ ಸಮಾರಂಭಗಳಲ್ಲಿ ಯಾರಾದರೂ ಕಾರಣವಿಲ್ಲದೆ ಹಲ್ಲುಗಿಂಜುತ್ತಾ ಪದೇ ಪದೇ ಹಲ್ಲು ತೋರಿಸಿದಲ್ಲಿ ಅದರ ಹಿಂದಿನ ವಜ್ರದ ಮರ್ಮವನ್ನು ಅರಿಯಿರಿ. ಅದನ್ನೇ ಇರಲಿ ವಜ್ರದ ನೆಪದಲ್ಲಿಯಾದರೂ ಜಗವೆಲ್ಲಾ ನಕ್ಕಲ್ಲಿ, ಆರೋಗ್ಯವಂಥರಾದಲ್ಲಿ ಸಮಾಜದ ಸ್ವಾಸ್ಥ ವೃದ್ಧಿಸುವುದಂತೂ ಖಂಡಿತ. ‘ಹುಚ್ಚುಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತೆ ಹಚ್ಚೆಯ ನೆಪದಲ್ಲಿಯಾದರೂ ದಂತ ವಜ್ರಾಭರಣ ಪ್ರದರ್ಶಿಸುವ ಸೋಗಿನಲ್ಲಿ ಜನ ಹಲ್ಲುಗಿಂಜಿದಲ್ಲಿ, ಜೊತೆಗೆ ನಕ್ಕವನೂ ಆರೋಗ್ಯವಂತನಾಗಬಹುದು ಎಂಬ ‘ಜಾಣತನ’ದ ಮಾತನ್ನು ಜನ ಅರಿತಲ್ಲಿ ಎಲ್ಲರ ಆರೋಗ್ಯ ವೃದ್ಧಿಸುವುದಂತೂ ಗ್ಯಾರಂಟಿ.

– ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮೂಲಭೂತ ಅವಶ್ಯತೆ ಈಡೇರಿಕೆಗೆ ಒತ್ತಾಯಿಸಿ ಗುತ್ತಿಗಾರು ಗ್ರಾಮ ಪಂಚಾಯತ್‌ ಮುಂದೆ ಧರಣಿ

Upayuktha

ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸುಭಾಷಿಣಿ ಜನಾರ್ಧನ ಗೌಡ ಕಳಿಯ ಆಯ್ಕೆ

Sushmitha Jain

ದೀಪಾವಳಿ: ಸೊಡರ ಹಬ್ಬದ ವೈಭವ “ನಿಸರ್ಗಕ್ಕೆ ನೀರಾಜನ‌”

Upayuktha